ಬನ್ನೂರು: ಪ್ರತಿ ವರ್ಷ ಏಕಕಾಲಕ್ಕೆ ನಡೆಯುವ ಏಳೂರಿನ ಮಾರಮ್ಮ ದೇವತೆಗಳ ಹಬ್ಬ ಮಂಗಳವಾರ (ಫೆ.27) ಮತ್ತು ಬುಧವಾರ (ಫೆ.28) ಆಯಾಯ ಗ್ರಾಮಗಳಲ್ಲಿ ವಿಜೃಂಭಣೆಯಿಂದ ನಡೆಯುತ್ತಿದೆ.
ಬೀಡನಹಳ್ಳಿ, ಮಾಕನಹಳ್ಳಿ, ಬಸವನಹಳ್ಳಿ, ಬನ್ನೂರು, ಬೆಟ್ಟಹಳ್ಳಿ, ಚಾಮನಹಳ್ಳಿ ಮತ್ತು ಅತ್ತಹಳ್ಳಿಯ ಗ್ರಾಮಗಳಲ್ಲಿ ತಲಾತಲಾಂತರದಿಂದಲೂ ಏಕಕಾಲಕ್ಕೆ ಹಬ್ಬ ಆಚರಣೆ ಮಾಡಿಕೊಂಡು ಬರಲಾಗುತ್ತಿದೆ. ಅದರಂತೆ ಈ ವರ್ಷ ಫೆ. 27 ಮತ್ತು 28ರಂದು ಹಬ್ಬ ಆಚರಣೆ ಮಾಡಲಾಗುತ್ತಿದೆ.
ಹಬ್ಬದ ಅಂಗವಾಗಿ ಮಂಗಳವಾರ ಆಯಾಯ ಗ್ರಾಮ ದೇವತೆ ಮಾರಮ್ಮನಿಗೆ ವಿಶೇಷ ಮೊದಲ ಪೂಜೆ (ತಂಪು ಸೇವೆ) ಕಾರ್ಯಕ್ರಮ ನೆರವೇರಿಸಲಾಯಿತು. ಈ ಹಿನ್ನೆಲೆಯಲ್ಲಿ ಇಂದು ಗ್ರಾಮದ ಹೆಂಗಳೆಯರು ಬಿಂದಿಗೆಯಲ್ಲಿ ನೀರು ತುಂಬಿಸಿ (ಮೀಸಲು ನೀರು) ಗಂಗೆ ಪೂಜೆ ನೆರವೇರಿಸಿ ಮನೆಗೆ ತೆಗೆದುಕೊಂಡು ಹೋಗುವ ಸಂಭ್ರಮ ಮನೆ ಮಾಡಿತು.
ಬುಧವಾರ (ನಾಳೆ) ಮುಂಜಾನೆ ಮಡೆ ಊಯುವರು: ಬೀಡನಹಳ್ಳಿಯಲ್ಲಿ ಉತ್ತನಹಳ್ಳಿ ಮಾರಮ್ಮನಿಗೆ ಗ್ರಾಮದ ಪ್ರತಿ ಮನೆಯಿಂದ ಒಬ್ಬರಂತೆ ಮುಂಜಾನೆ 4.30ರಲ್ಲಿ ಒಂದೆಡೆ ಸೇರಿ ಮಡೆ ಊಯ್ಯುವರು. (ಹೊಸ ಮಡಿಕೆ, ತಂದು ಅದರಲ್ಲಿ ಅಕ್ಕಿ, ಬೇಳೆ, ಉಪ್ಪು ಅದಕ್ಕೆ ತಕ್ಕಷ್ಟು ನೀರು ಹಾಕಿ ಅನ್ನಮಾಡುವುದು) ನಂತರ ಅನ್ನ ಮಾಡಿದ ಮಡಿಕೆಯ ಬಾಯಿಯನ್ನು ಅಡಕೆಯ ಎಲೆ( ಒಡಾಳೆ)ಯಿಂದ ಮುಚ್ಚಿ ಅದನ್ನು ಒಡಾಳೆ ದಾರದಿಂದಲೇ ಕಟ್ಟುತ್ತಾರೆ. ಈ ವೇಳೆ ಜವನ ಬೇವಿನ ಸೊಪ್ಪು ಕಟ್ಟುವ ಮೂಲಕ ಅಲಂಕರಿಸಿ ತಾವು ಮಡೆ ಊಯ್ಯಿದಿರುವ ಮಡಿಕೆಯನ್ನು ಗುರುತು ಹಾಕಿಕೊಂಡು ಬರುತ್ತಾರೆ.
ಮತ್ತೆ ಮಧ್ಯಾಹ್ನನದ ನಂತರ ಗ್ರಾಮದ ಹೆಂಗಳೆಯರು ತಂಬಿಟ್ಟಿನಾರತಿ ಜತೆಗೆ ಹಣ್ಣು ಕಾಯಿ ಭೂಪ ಸಮೇತ ಮಾರಮ್ಮ ಮತ್ತು ಮುತ್ತತ್ತಿರಾಯನ ಪೂಜೆ ಹೊತ್ತು ಬೀಡನಹಳ್ಳಿ ಗ್ರಾಮದ ರಾಜ ಬೀದಿಗಳ ಮೂಲಕ ಮೆರವಣಿಗೆ ಹೊರಟು ಮಡೆ ಊಯ್ಯಿದಿರುವ ಸ್ಥಳ ತಲುಪುತ್ತಾರೆ.
ಈ ಸ್ಥಳದಲ್ಲಿ ತಮ್ಮ ಮುಂಜಾನೆ ಮಡೆ ಊಯ್ಯಿದಿರುವ ಮಡಿಕೆಯ ಬಳಿ ತಾವು ಮೆರವಣಿಗೆ ಮೂಲಕ ಹೊತ್ತು ತಂದ ತಂಬಿಟ್ಟಿನಾರತಿ ಇಟ್ಟು ಹಣ್ಣು ಮುರಿದು, ಕಾಯಿ ಒಡೆದು ಗಂಧದಕಡ್ಡಿ ಹಚ್ಚಿ ಹೆಂಗಳೆಯರು ಭಕ್ತಿಭಾವದಿಂದ ಪೂಜೆ ನೆರವೇರಿಸುತ್ತಾರೆ.
ಇದಕ್ಕೂ ಮುನ್ನಾ ಗ್ರಾಮದ ರಾಜ ಬೀದಿಯಲ್ಲಿ ಮೆರವಣಿಗೆ ಹೊರಟ ಪೂಜೆಗಳನ್ನು ಬನ್ನೂರು ಹೆಗ್ಗೆರೆಗೆ ತಂದು ಮತ್ತೆ ಹೂ ಹೊಂಬಾಳೆ ಮಾಡಿದ ಬಳಿಕ ಬೀಡನಹಳ್ಳಿ ಮಾರಮ್ಮ ಮತ್ತು ಮುತ್ತತ್ತಿರಾಯನ ಪೂಜೆಗಳನ್ನು ಹೊತ್ತ ದೇವರ ಗುಡ್ಡಪ್ಪಂದಿರು ಮಡೆ ಊಯ್ಯಿದಿರುವ ಸ್ಥಳಕ್ಕೆ ತಲುಪಿ ಅಲ್ಲಿ ಮೂರು ಸುತ್ತು ಪ್ರದಕ್ಷಿಣೆ ಹಾಕುವರು.
ಬಳಿಕ ಮಡೆಗಳ ಮೇಲೆ ತೀರ್ಥ ಪ್ರೊಷಕ್ಷಣೆ ಮಾಡುವರು. ಆ ನಂತರ ಮಡೆ ಊಯ್ಯಿದಿರುವ ಮಡಿಕೆಗಳನ್ನು ಹೊತ್ತು ಮನೆಗಳಿಗಳತ್ತ ಗ್ರಾಮದ ಯುವಕರು ತೆರಳುವರು. ಇನ್ನು ಮನೆ ಬಾಗಿಲ ಬಳಿ ಮಡೆ ಹೊತ್ತವರ ಪಾದಪೂಜೆಯನ್ನು ಅಂದರೆ ಗಂಗೆಯನ್ನೆರೆಯುವ ಮೂಲಕ ದೇವರ ಸ್ವರೂಪಿ ಎಂದು ಮಡೆಯನ್ನು ಮನೆಗೆ ಬರಮಾಡಿಕೊಳ್ಳುವರು. ಆ ಮಡೆ ಪ್ರಸಾದವನ್ನು ಮನೆಯ ಪ್ರತಿ ಸದಸ್ಯರು ಸ್ವೀಕರಿಸುವರು. ಈ ಮೂಲಕ ಮಡೆ ಪ್ರಸಾದ ಪೂರ್ಣಗೊಳ್ಳುವುದು.