CrimeNEWSನಮ್ಮರಾಜ್ಯ

ಮಹರ್ಷಿ ವಾಲ್ಮೀಕಿ ನಿಗಮದ ಅಧೀಕ್ಷಕ ಚಂದ್ರಶೇಖರನ್ ಆತ್ಮಹತ್ಯೆ ಪ್ರಕರಣದಲ್ಲಿ ನನ್ನ ಪಾತ್ರ ಇಲ್ಲ: ಸಚಿವ ನಾಗೇಂದ್ರ ಸ್ಪಷ್ಟನೆ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧೀಕ್ಷಕ ಪಿ.ಚಂದ್ರಶೇಖರನ್ (52) ಆತ್ಮಹತ್ಯೆ ಪ್ರಕರಣದಲ್ಲಿ ನನ್ನ ಪಾತ್ರ ಇಲ್ಲ ಎಂದು ಪರಿಶಿಷ್ಟ ಪಂಗಡಗಳ ಕಲ್ಯಾಣ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ. ನಾಗೇಂದ್ರ ಸ್ಪಷ್ಟ ಪಡಿಸಿದ್ದಾರೆ.

ವಿಧಾನಸೌಧದಲ್ಲಿ ಮಂಗಳವಾರ ತುರ್ತು ಸುದ್ದಿಗೋಷ್ಠಿ ನಡೆಸಿದ ಅವರು, ಇನ್ನು ಈ ವಿಷಯದ ಬಗ್ಗೆ ನನ್ನ ಪಾತ್ರ ಇದರಲ್ಲಿ ಇಲ್ಲವಾದ್ದರಿಂದ ರಾಜೀನಾಮೆ ಪ್ರಶ್ನೆಯೇ ಬರುವುದಿಲ್ಲ ಎಂದು ತಿಳಿಸಿದ್ದಾರೆ.

ನಮ್ಮ ನಿಗಮದ ಲೆಕ್ಕಾಧಿಕಾರಿ ಸಾವನ್ನಪ್ಪಿದ್ದಾನೆ. ಅವರ ಕುಟುಂಬಕ್ಕೆ ವಿಷಾದ ವ್ಯಕ್ತಪಡಿಸುತ್ತೇನೆ. ಹಣ ದುರುಪಯೋಗ ಆಗಿದೆ ಅಂತ ಮಾಧ್ಯಮಗಳಲ್ಲಿ ಬಂದಿದೆ. ಮಾಧ್ಯಮಗಳಲ್ಲಿ ಬಂದ ಮೇಲೆ ನಾನು ಮಾಹಿತಿ ಪಡೆದುಕೊಂಡೆ. ಹಣ ಯಾವ ರೀತಿ ದುರುಪಯೋಗ ಆಗಿದೆ ಅಂತ ಪರಿಶೀಲನೆ ಮಾಡ್ತಿದ್ದೇವೆ ಎಂದರು.

ಇನ್ನು ಪ್ರಕರಣವನ್ನು ಸಿಐಡಿಗೆ ವಹಿಸಲಾಗಿದೆ. ನಿಗಮದ ಎಂಡಿ ಕೂಡ ದೂರು ನೀಡಿದ್ದಾರೆ. ಒಂದು ಬ್ಯಾಂಕ್‌ನಿಂದ ಇನ್ನೊಂದು ಬ್ಯಾಂಕ್‌ಗೆ ಹಣ ವರ್ಗಾವಣೆ ಮಾಡಿದ್ದಾರೆ. ವರ್ಗಾವಣೆ ಮಾಡಿದ್ದು ಕೂಡ ಎಂಡಿ ಗಮನಕ್ಕೆ ಬಂದಿಲ್ಲ. ಬ್ಯಾಂಕ್ ನವರು ಹಣದ ಮೊತ್ತವನ್ನು ನಮ್ಮ ನಿಗಮದ ಖಾತೆಗೆ ಮರು ವರ್ಗಾವಣೆ ಮಾಡಲು ಪ್ರಕ್ರಿಯೆ ಪ್ರಾರಂಭ ಮಾಡಿದ್ದೇವೆ. ಬ್ಯಾಂಕ್ ಅಧಿಕಾರಿಗಳು ಕೂಡ ನಮ್ಮ ಗಮನಕ್ಕೆ ತಂದಿಲ್ಲ ಅಂತ ಎಂಡಿ ಪದ್ಮನಾಭನ್ ಹೇಳಿದ್ದಾರೆ ಎಂದು ವಿವರಿಸಿದರು.

ಸುಮಾರು 87 ಕೋಟಿ ವರ್ಗಾವಣೆ ಮಾಡಲಾಗಿತ್ತು. ಈಗಾಗಲೇ 23 ಕೋಟಿ ಹಣ ವಾಪಸ್ ಪಡೆದುಕೊಳ್ಳಲಾಗಿದೆ. ಯೂನಿಯನ್ ಬ್ಯಾಂಕ್ ಆಫ್‌ನ ಹಿರಿಯ ಅಧಿಕಾರಿಗಳ ಜತೆಗೆ ಮಾತನಾಡಿದ್ದೇವೆ. ಉಳಿದ 50 ಕೋಟಿ ಕೂಡ ಇಂದು ಸಂಜೆಯ ಒಳಗೆ ವಾಪಸ್ ಪಡೆದುಕೊಳ್ಳುತ್ತೇವೆ ಎಂದರು.

ಸಿಎಂ ಮಾಹಿತಿ ಪಡೆದಿದ್ದಾರೆ: ಬ್ಯಾಂಕ್ ಅಧಿಕಾರಿಗಳು ಕೂಡ ಇದರಲ್ಲಿ ಶಾಮೀಲಾದಂತೆ ಕಾಣುತ್ತಿದೆ. ಆತ್ಮಹತ್ಯೆ ಮಾಡಿಕೊಂಡ ಚಂದ್ರಶೇಖರನ್ ಅಧಿಕಾರಿಗಳ ವಿರುದ್ದ ಆರೋಪ ಮಾಡಿದ್ದಾರೆ. ನಮ್ಮ ಇಲಾಖೆ ಅಧಿಕಾರಿಗಳ ಮೇಲೆ ದೂರು ದಾಖಲಾಗಿದೆ. ಸಿಎಂ‌ ಕೂಡ ಇದರ ಮಾಹಿತಿ ಪಡೆದುಕೊಂಡಿದ್ದಾರೆ ಎಂದು ವಿವರಿಸಿದರು.

ಎಂಡಿಯವರ ಸಹಿ ಎಫ್ಎಸ್‌ಎಲ್‌ಗೆ ಕಳಿಸಿದ್ದೇವೆ. ಅದು ಎಂಡಿ ಸಹಿಯೇ ಅಂತ ಗೊತ್ತಾದರೆ ಅವರನ್ನೂ ಕೂಡ ವಜಾ ಮಾಡುತ್ತೇವೆ. ಇದರಲ್ಲಿ ಯಾರ ಕೈವಾಡ ಇದೆ ಅದನ್ನು ಪತ್ತೆ ಹೆಚ್ಚುತ್ತೇವೆ. ಇಂದು ಬೆಳಗ್ಗೆಯಿಂದಲೇ ಸಿಐಡಿ ತನಿಖೆ ಮಾಡುತ್ತಿದೆ.‌ ಯಾವ ಲೆಕ್ಕಾಧಿಕಾರಿ ಜತೆಗೂ ನಾನು ಮಾತನಾಡಿಲ್ಲ. ಇಂದು ಸಂಜೆಯೊಳಗೆ ಬ್ಯಾಂಕ್ ಅಧಿಕಾರಿಗಳಿಗೆ ಡೆಡ್ ಲೈನ್ ನೀಡಿದ್ದೇವೆ. ಅಷ್ಟೂ ಹಣ ನಿಗಮದ ಖಾತೆಗೆ ವಾಪಸ್ ಬರಬೇಕು ಅಂತ ಗಡುವು ನೀಡಿದ್ದೇವೆ ಎಂದರು.

ಗಡುವು ಮೀರಿದರೆ ಬ್ಯಾಂಕ್‌ನ ಹಿರಿಯ ಅಧಿಕಾರಿಗಳ ಮೇಲೂ ಕೂಡ ಎಫ್ಐಆರ್ ದಾಖಲು ಮಾಡುತ್ತೇವೆ. ಇಷ್ಟು ದೊಡ್ಡ ಜವಾಬ್ದಾರಿ ಸಣ್ಣ ಅಧಿಕಾರಿಗೆ ಹೇಗೆ ನೀಡಲಾಯಿತು? ಯಾರಾದರೂ ಒತ್ತಡ ಇತ್ತಾ ಎಂಬುದರ ತನಿಖೆ ಕೂಡ ನಡೆಯುತ್ತಿದೆ. ನಿಗಮದ ಎಂಡಿ ಬಗ್ಗೆ ಯಾವುದೇ ಸಾಫ್ಟ್ ಕಾರ್ನರ್ ಇಲ್ಲ. ನಿಜವಾಗಿಯೂ ನನಗೆ ಈ ಬಗ್ಗೆ ಮಾಹಿತಿ ಇರಲಿಲ್ಲ ಎಂದು ಸ್ಪಷ್ಟಪಡಿಸಿದರು.

ನೀತಿ ಸಂಹಿತೆ ಇರುವ ಕಾರಣ ಯಾವುದೇ ಮೀಟಿಂಗ್ ಮಾಡಿಲ್ಲ. ಇಷ್ಟು ದೊಡ್ಡ ಮೊತ್ತ ವರ್ಗಾವಣೆ ಆಗಬೇಕಾದರೆ ಬೋರ್ಡ್ ಮೀಟಿಂಗ್ ಮಾಡಬೇಕು. ಯಾವುದೇ ಬೋರ್ಡ್ ಮೀಟಿಂಗ್ ಕೂಡ ನಡೆದಿಲ್ಲ. ಬ್ಯಾಂಕ್ ಅಧಿಕಾರಿಗಳು ಕೂಡ ಸಬ್ ಅಕೌಂಟ್ ಮಾಡಿದ್ದಾರೆ. ಆತ್ಮ ಹತ್ಯೆ ಮಾಡಿಕೊಂಡ ಚಂದ್ರಶೇಖರ ಕೂಡ ಇದನ್ನು ಎಂಡಿ ಗಮನಕ್ಕೆ ತಂದಿಲ್ಲ.

ಎಂಡಿ ಮೊಬೈಲ್‌ಗೂ ಕೂಡ ಹಣ ವರ್ಗಾವಣೆ ಮೆಸೇಜ್ ಬಂದಿಲ್ಲ ಅಂತಿದ್ದಾರೆ. ನಾವು ಇದನ್ನು ಗಂಭೀರವಾಗಿ ತೆಗೆದುಕೊಂಡಿದ್ದೇವೆ. ಸಿಐಡಿ ವರದಿ ಆಧರಿಸಿ ಎಂಡಿ ಸೇರಿದಂತೆ ಎಲ್ಲರ ಮೇಲೆ ಕ್ರಮ ಆಗಲಿದೆ. ಸಿಐಡಿ ರಿಪೋರ್ಟ್ ಬಂದ ತಕ್ಷಣ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದರು.

ಏನಿದು ಘಟನೆ?: ರಾಜ್ಯ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ದಿ ನಿಗಮ ನಿಯಮಿತದ ಅಧೀಕ್ಷಕ ಚಂದ್ರಶೇಖರನ್ ಶಿವಮೊಗ್ಗದ ಕುವೆಂಪು ನಗರದಲ್ಲಿರುವ ತಮ್ಮ ನಿವಾಸದಲ್ಲಿ ಭಾನುವಾರ ರಾತ್ರಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಚಂದ್ರಶೇಖರನ್ ವಾಲ್ಮೀಕಿ ನಿಗಮದಲ್ಲಿ ಅಧೀಕ್ಷಕರಾಗಿ ಕೆಲಸ ಮಾಡುತ್ತಿದ್ದರು. ನಿಗಮದಲ್ಲಿ 85 ಕೋಟಿ ರೂಪಾಯಿ ಅವ್ಯವಹಾರ ನಡೆದಿದೆ ಎಂದು ನಿಗಮದ ಅಧಿಕಾರಿಗಳ ವಿರುದ್ಧ 5 ಪುಟಗಳ ಡೆತ್ ನೋಟ್ ಬರೆದಿಟ್ಟಿದ್ದಾರೆ.

ಯೂನಿಯನ್ ಬ್ಯಾಂಕ್‌ ಮ್ಯಾನೇಜರ್ ಶುಚಿಸ್ಮಿತಾ ರವುಲ್ ಅವರು ಅವ್ಯವಹಾರದಲ್ಲಿ ಭಾಗಿಯಾಗಿದ್ದಾರೆ. ನಿಗಮದ 183.53 ಕೋಟಿ ರೂ ಅನುದಾನವನ್ನು ಬೇರೆ ಬೇರೆ ಖಾತೆಗೆ ವರ್ಗಾವಣೆ ಮಾಡಿದ್ದಾರೆ. ಎಂಡಿ ಅವರು ಅನುದಾನವನ್ನು ಒತ್ತಾಯಪೂರ್ವಕವಾಗಿ ವರ್ಗಾಯಿಸಿದ್ದಾರೆ. ನಮಗೆ ಇದರ ಒಳಸಂಚು ಅರ್ಥವೇ ಆಗಿಲ್ಲ. ನಿಗಮಕ್ಕೆ ಇನ್ನೂ ಬ್ಯಾಂಕ್ ಪಾಸ್ಬುಕ್ ಹಾಗೂ ಚೆಕ್ ಬುಕ್ ನೀಡಿಲ್ಲ. ಈ ಕುರಿತು ಬ್ಯಾಂಕ್ ಮ್ಯಾನೇಜರ್ ಸರಿಯಾದ ಉತ್ತರ ನೀಡಿಲ್ಲ. ನಿಗಮದಲ್ಲಿ 85 ಕೋಟಿ ರೂಪಾಯಿ ಅವ್ಯವಹಾರವಾಗಿದೆ ಎಂದಿದ್ದಾರೆ.

Leave a Reply

error: Content is protected !!
LATEST
KSRTC : ಗಣಪತಿ ಪ್ರತಿಷ್ಠಾಪಿಸಿದ್ದರಿಂದ ಡಿಪೋ ಮುಂದೆ ಚಾಲಕ ರವಿ ಪಾರ್ಥಿವ ಶರೀರ ಇಡಲಾತ್ತು, ಪ್ರಮಾದವಾಗಿಲ್ಲ- ಡಿಎಂ ಸಮ... 10 ವರ್ಷದ ಆಧಾರ್‌ ನವೀಕರಣಕ್ಕೆ ಡೆಡ್‌ಲೈನ್‌ ಫಿಕ್ಸ್‌: ನಾಳೆ ಅಂತಿಮ ಗಡುವು- ಬಳಿಕ ದಂಡ ನಾಗಮಂಗಲ ಕೋಮುಗಲಭೆ ಪ್ರಕರಣ: ಇನ್ಸ್‌ಪೆಕ್ಟರ್ ಅಶೋಕ್ ಕುಮಾರ್ ಅಮಾನತು KSRTC ಸಿಬ್ಬಂದಿಯಿಂದಲೇ ಡಿಸಿಗೆ ಇರಿಯಲು ಯತ್ನ- ಕೈ ಅಡ್ಡಹಾಕಿ ಪ್ರಾಣಾಪಾಯದಿಂದ ಪಾರಾದ ಜಗದೀಶ್ ಕುಮಾರ್‌ "ARM" ಸಿನಿಮಾ ಇಂದು ಪ್ರಪಂಚದಾದ್ಯಂತ ಐದು ಭಾಷೆಗಳಲ್ಲಿ ಬಿಡುಗಡೆ ಸೆ.14ರಂದು ಸಾರಿಗೆ ಸಿಬ್ಬಂದಿಗಳಿಗೆ ಔಷಧೀಯ ಸಸ್ಯಗಳ  ಉಚಿತ ವಿತರಣೆ: ಅಧಿಕಾರಿಗಳು ಭಾಗಿ ಟೊವಿನೋ ಥಾಮಸ್ ಸಿನಿಮಾ ವಿತರಿಸಲಿದೆ ಹೊಂಬಾಳೆ ಫಿಲ್ಮ್! ರೇಣುಕಾಸ್ವಾಮಿ ಕೊಲೆ ಪ್ರಕರಣ: ನಟ ದರ್ಶನ್‌ ಬಂಧನ ಅವಧಿ ಮತ್ತೆ ಒಂದು ದಿನ ವಿಸ್ತರಣೆ KSRTC ಚಿಕ್ಕಮಗಳೂರು: ಘಟಕದ ಗೇಟ್‌ ಬಳಿ ತ್ಯಾಜ್ಯಗಳ ನಡುವೆ ಚಾಲಕನ ಪಾರ್ಥಿವ ಶರೀರವಿಟ್ಟು ಅಂತಿಮ ದರ್ಶನಕ್ಕೆ ವ್ಯವಸ್ಥೆ-... ವಾಲ್ಮೀಕಿ ಹಗರಣ: ಬಳ್ಳಾರಿಯಿಂದ ಬಿಜೆಪಿ ಪಾದಯಾತ್ರೆ - ಛಲವಾದಿ ನಾರಾಯಣಸ್ವಾಮಿ