ಬೆಂಗಳೂರು: ಚನ್ನಪಟ್ಟಣ ನನಗೆ ಜೀವ ಕೊಟ್ಟ ತಾಲೂಕು. ಮತದಾರರು ಒಪ್ಪಿದರೆ ಸ್ಪರ್ಧೆ ಖಚಿತ, ವಿಧಿನೇ ಇಲ್ಲ ಎನ್ನುವ ಮೂಲಕ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ತಿಳಿಸಿದ್ದಾರೆ.
ಆದರೆ, ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ರಾಜಾಜಿನಗರದ ಬಿಜೆಪಿ ಶಾಸಕ ಸುರೇಶ್ ಕುಮಾರ್ ಪೋಸ್ಟೊಂದನ್ನು ಹಂಚಿಕೊಂಡಿದ್ದು ಇದು ತುಘಲಕ್ ದರ್ಬಾರ್ ಎಂದು ಕಿಡಿಕಾರಿದ್ದಾರೆ.
ಇತಿಹಾಸದಲ್ಲಿ ಒಬ್ಬ ವ್ಯಕ್ತಿ ರಾಜಧಾನಿಯನ್ನು ಬದಲಾಯಿಸಿದ್ದ. ರಾಜಧಾನಿಯನ್ನು ದೆಹಲಿಯಿಂದ ದೌಲತಾಬಾದ್ಗೆ ಬದಲಾಯಿಸಿದ್ದ. ನಂತರ ದೌಲತಾಬಾದ್ನಿಂದ ಮತ್ತೆ ದೆಹಲಿಗೆ ವಾಸಪ್ ತಂದ. ಇತಿಹಾಸದಲ್ಲಿ ಈ ವಿಲಕ್ಷಣ ವ್ಯಕ್ತಿ ಹೆಸರು ಯಾವಾಗಲೂ ನೆನಪಿರುತ್ತದೆ. ಇದನ್ನೇ ತುಘಲಕ್ ದರ್ಬಾರ್ ಅನ್ನುವುದು.
ಇನ್ನು ಈಗಾಗಲೇ ಡಿ.ಕೆ.ಶಿವಕುಮಾರ್ ಕನಕಪುರದಿಂದ ಆಯ್ಕೆಯಾಗಿ 2028ರವರೆಗೆ ಶಾಸಕರಾಗಿ ಕರ್ತವ್ಯ ನಿರ್ವಹಿಸುವ ಅವಕಾಶವಿದೆ. ಆದರೂ ಚನ್ನಪಟ್ಟಣ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಹೊರಟಿರುವುದು ಅನಗತ್ಯ ಪ್ರಹಸನವಲ್ಲದೇ ಮತ್ತೇನೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು ಇದಕ್ಕೆ ಏನು ಹೇಳಬೇಕು ಎಂದು ಪ್ರಶ್ನಿಸಿರುವ ಅವರು, ಸಾರ್ವಜನಿಕರ ಹಣ, ರಾಷ್ಟ್ರದ ಸಂಪತ್ತು ಹೇಗೆ ವೈಯಕ್ತಿಕ ಪ್ರತಿಷ್ಠೆಗೆ ವೆಚ್ಚವಾಗುತ್ತೆ ಎಂಬುದಕ್ಕೆ ಇದು ಸ್ಪಷ್ಟ ಉದಾಹರಣೆ ಎಂದು ಹೇಳಿದ್ದಾರೆ
ಒಬ್ಬ ಉಪ ಮುಖ್ಯಮಂತ್ರಿಯಾಗಿರುವ ಶಿವಕುಮಾರ್ ಅವರ ಈ ನಡೆ ವಿವೇಚನೆ ಮತ್ತು ವಿವೇಕದಿಂದ ಕೂಡಿದ ಅತಿರೇಕದ ನಡೆ ಎಂದೆನಿಸದು. ರಾಹುಲ್ ಗಾಂಧಿಯವರು ಇದಕ್ಕೆ ಒಪ್ಪುತ್ತಾರೆಯೇ ಎಂದು ಶಾಸಕ ಸುರೇಶ್ ಕುಮಾರ್ ಪ್ರಶ್ನಿಸಿ ಪೋಸ್ಟ್ ಹಂಚಿಕೊಂಡಿದ್ದಾರೆ.