Search By Date & Category

NEWSನಮ್ಮಜಿಲ್ಲೆನಮ್ಮರಾಜ್ಯ

ಚಿಕ್ಕಬಳ್ಳಾಪುರ ಬಸ್‌ನಿಲ್ದಾಣ: ರಾತ್ರಿವೇಳೆ ಉಚ್ಚೆ, ಕಸ, ಕೊಳಚೆ ನಡುವೆ ಮಲಗಿರುವ ಸಾರಿಗೆ ನೌಕರರು

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಅಲ್ಲ ಸ್ವಾಮಿ, ಈ ರಾಜಕೀಯದವರಿಗೆ ಚುನಾವಣಾ ಪ್ರಚಾರಕ್ಕೆ ಸಾರಿಗೆ ನಿಗಮದ ಬಸ್‌ಗಳು ಮತ್ತು ಸಾರಿಗೆ ನೌಕರರು ಬೇಕು. ಆದರೆ, ಅವರ ವೇತನ ಮತ್ತು ಸಮಸ್ಯೆಗಳು ಇವರಿಗೆ ಬೇಡ. ಎಂತಹ ವಿಪರ್ಯಾಸ ನೋಡಿ ಎಂದು ಸಾಮಾಜಿಕ ಜಾಲತಾಣ ಟ್ವಿಟ್ಟರ್‌ನಲ್ಲಿ ಪ್ರಜ್ಞಾವಂತ ನಾಗರಿಕರು ಕಿಡಿಕಾರುತ್ತಿದ್ದಾರೆ.

ದೂರದ ಸ್ಥಳಗಳಿಗೆ ಪ್ರಯಾಣಿಕರನ್ನು ತಲುಪಿಸುವ ಕಾರ್ಯದಲ್ಲಿ ನಿರತವಾಗುತ್ತಿರುವ ಸಾರಿಗೆ ಚಾಲನಾ ಸಿಬ್ಬಂದಿಗೆ ರಾತ್ರಿ ವೇಳೆ ಮಲಗುವುದಕ್ಕೂ ಕನಿಷ್ಠ ಸೌಲಭ್ಯ ಕಲ್ಪಿಸದಿರುವುದು ಸರ್ಕಾರ ಮತ್ತು ನಿಗಮಗಳ ಲಜ್ಜೆಗೇಡಿತನಕ್ಕೆ ಹಿಡಿದ ಕನ್ನಡಿಯಾಗಿದೆ.

ಅದರಲ್ಲೂ ಬಿಜೆಪಿ ಸರ್ಕಾರ ರಾಜ್ಯದಲ್ಲಿ ಆಡಳಿತದ ಚುಕ್ಕಾಣಿ ಹಿಡಿದ ಮೇಲಂತು ಸಾರಿಗೆ ನೌಕರರು ಸೇರಿ ಬಹುತೇಕ ಎಲ್ಲ ಇಲಾಖೆಗಳ ನೌಕರರಿಗೆ ಮೂಗಿಗೆ ತುಪ್ಪಸವರುವ ನಾಟಕವಾಡುತ್ತಿರುವುದು ಬಿಟ್ಟು ಬೇರೇನು ಮಾಡುತ್ತಿಲ್ಲ.

ಇನ್ನು ಸಾರಿಗೆ ನೌಕರರ ವಿಷಯಕ್ಕೆ ಬಂದರೆ ಇತ್ತೀಚೆಗೆ ಚಿಕ್ಕಬಳ್ಳಾಪುರದ ಬಸ್‌ ನಿಲ್ದಾಣದ ಉಚ್ಚೆ ಉಯ್ಯುವ ಸ್ಥಳದಲ್ಲಿ ಮಲಗುತ್ತಿದ್ದಾರೆ. ಕನಿಷ್ಠಪಕ್ಷ ನಿಗಮಗಳ ಅಧಿಕಾರಿಗಳಿಗಾದರೂ ತಮ್ಮ ನೌಕರರ ಬಗ್ಗೆ ಕಾಳಜಿ ಬೇಡವೇ. ಮನೆಯ ಯಜಮಾನನಂತೆ ತಿಂಗಳು ಪೂರ್ತಿ ದುಡಿದರೂ ಇವರ ದುಡಿಮೆಯಿಂದಲೇ ವೇತನ ಪಡೆಯುತ್ತಿರುವ ಅಧಿಕಾರಿಗಳ ಮುಂದೆ ಆಳಾಗಿಯೇ ನಿಲ್ಲುವ ಈ ನೌಕರರು ತಾವು ದುಡಿದು ಈ ಅಧಿಕಾರಿಗಳನ್ನು ಸಾಕುತ್ತಿದ್ದಾರೆ.

ಅಂದರೆ, ದುಡಿಯುವ ಕೈಗಳಿಗೆ ಮೂರು ಕಾಸು, ಕಾಲುಮೇಲೆ ಕಾಲುಹಾಕಿ ಕುಳಿತುಕೊಂಡು ಮನೆಗೆ ಹೋಗುವ ಅಧಿಕಾರಿಗಳಿಗೆ ಜೇಬುತುಂಬಾ ಕಾಸು. ಇದೇ ನಮ್ಮ ವ್ಯವಸ್ಥೆಯ ಅವ್ಯವಸ್ಥೆ. ದುಡಿಯುವವರು ದುಡಿದೇ ಸಾಯಬೇಕು. ಕೂತು ತಿನ್ನುತ್ತಿರುವವರು ಇವರ ದುಡಿಮೆಯಿಂದಲೇ ಎಂಜಾಯ್‌ ಮಾಡಬೇಕು…

ನೋಡಿ ಚಿಕ್ಕಬಳ್ಳಾಪುರ ಬಸ್‌ನಿಲ್ದಾಣದಲ್ಲಿ ಅನಾಥರ ರೀತಿ ಉಚ್ಚೆ, ಕಸ, ಕೊಳಚೆ ನೀರಿನ ನಡುವೆ ರಾತ್ರಿ ಕಳೆಯುತ್ತಿರುವ ಸಾರಿಗೆ ನೌಕರರ ಪಾಡನ್ನು. ಇದು ಇಲ್ಲಿ ಮಲಗಿರುವ ನೌಕರರ ಪಾಡಷ್ಟೇ ಅಲ್ಲ. ಬಹುತೇಕ ದೂರದ ಸುದೀರ್ಘ ಪ್ರವಾಸ (long trip) ಮಾಡುವ ಡ್ರೈವರ್, ಕಂಡಕ್ಟರ್‌ಗಳ ನಿತ್ಯದ ಸಮಸ್ಯೆ ಮತ್ತು ರೋದನೆ.

ಕೋಟ್ಯಂತರ ರೂಪಾಯಿ ಆದಾಯವಿರುವ KSRTC ಸಂಸ್ಥೆಯಲ್ಲಿ ಡ್ರೈವರ್, ಕಂಡಕ್ಟರ್‌ಗಳು ಮಲಗಿಕೊಳ್ಳಲು ಸರಿಯಾದ ವ್ಯವಸ್ಥೆ ಇಲ್ಲ, ವಿಶ್ರಾಂತಿ ಕೊಠಡಿಗಳು ಇದ್ದರು ಇವರಿಗೆ ಮಾತ್ರ ಮರೀಚಿಕೆಯಾಗಿಯೇ ಇವೆ. ಅಲ್ಲದೆ ವಿಶ್ರಾಂತಿ ಕೊಠಡಿಗಳಲ್ಲಿ ಬಹುತೇಕ ಶುಚಿತ್ವದ ಕೊರತೆ ಇದೆ. ನಿಜಕ್ಕೂ ಇದು ದೊಡ್ಡ ದುರಂತ…

ಇಡೀ‌ ದಿನ‌ ದೂರದ ಊರುಗಳಿಂದ ಬಸ್ ಓಡಿಸಿಕೊಂಡು ಬಂದ ಡ್ರೈವರ್ ಮತ್ತು ಕಂಡಕ್ಟರ್‌ಗಳು, ಉಗುಳು, ಗುಟ್ಖಾಚಿತ್ತಾರ, ಕಸ, ಉಚ್ಚೆ ಮತ್ತು ಕೊಳಚೆ ನೀರಿನ‌ ಮಧ್ಯೆ ಹೀಗೆ ಮಲಗಿ ರಾತ್ರಿ ಕಳೆಯುತ್ತಾರೆ. ಬೆಳ್ಳಂಬೆಳಗ್ಗೆ ಮತ್ತೆ ಮರು ಪ್ರವಾಸ ಆರಂಭ.. “ನಿಮ್ಮ‌ ಪ್ರಯಾಣ ಸುಖಕರವಾಗಿರಲಿ..” ಬೋರ್ಡ್ ಬೇರೆ..

ಈಗ ಭಯಂಕರ ಚಳಿ ಹೊದ್ದಿಕೊಳ್ಳಲು ಸರಿಯಾದ ರಗ್ಗಿಲ್ಲ ಮತ್ತು ಬೇಸಿಗೆಯಲ್ಲಿ ಸೆಕೆ, ಸೊಳ್ಳೆಗಳ ಕಾಟ, ನೊಣ, ಟವೆಲ್ ಬೀಸುತ್ತ, ಸೊಳ್ಳೆ ಓಡಿಸುವ ಬತ್ತಿ‌ ಹಚ್ಚಿಟ್ಟುಕೊಂಡು ಮಧ್ಯರಾತ್ರಿಯಲ್ಲಿ ಸೊಳ್ಳೆ ಪರದೆಯಲ್ಲಿ‌ ಕುಳಿತು, ಮನೆಯಿಂದ ತಂದ ಆರಿದ ಬುತ್ತಿ‌ ಬಿಚ್ಚಿ ಉಣ್ಣುವುದನ್ನು ನೋಡಿದರೆ ನಿಜವಾಗಿಯೂ ಮನಸ್ಸಿಗೆ ನೋವಾಗುತ್ತದೆ.

ಈ ರೀತಿ ದುಡಿದರೂ ಇವರಿಗೆ ಮಾತ್ರ ಮಜ್ಜಿಗೆಯನ್ನು ತರುವುದಕ್ಕೂ ಸಾಲದ ಸಂಬಳ ನೀಡಲಾಗುತ್ತಿದೆ. ಅದನ್ನು ಪ್ರಶ್ನಿಸಿದ್ದಕ್ಕೆ ವಜಾ ಎಂಬ ಅಸ್ತ್ರಬೇರೆ ಪ್ರಯೋಗಿಸಿ ಇನ್ನು ಕಾಡುತ್ತಲೇ ಇದ್ದಾರೆ ಕೆಲ ಭ್ರಷ್ಟ ಅಧಿಕಾರಿಗಳು ಮತ್ತು ಸರ್ಕಾರ. ಅದರ ಜತೆಗೆ ಲಂಚಬಾಕ ಅಧಿಕಾರಿಗಳ ಹಿಂಡೆ ಹೆಚ್ಚಾಗಿದ್ದು ಈಗಲೂ ನೌಕರರನ್ನು ಕಾಡುತ್ತಿರುವುದು ತಪ್ಪಿಲ್ಲ.

ತಿಂಗಳಿನಿಂದ ತಿಂಗಳಿಗೆ ನೌಕರರು ತುರ್ತು ಸಂದರ್ಭದಲ್ಲಿ ತೆಗೆದುಕೊಳ್ಳುವ ರಜೆಗಳನ್ನು ಕೊಡದೆ ಲಂಚಕ್ಕಾಗಿ ಮೋರೆಯಂತೆ ಬಾಯಿ ಬಿಟ್ಟುಕೊಂಡು ನಿಂತಿರುತ್ತಾರೆ ಕೆಲ ಅಧಿಕಾರಿಗಳು. ಇದನ್ನು ನೋಡಿದರೆ ಅಸಹ್ಯವಾಗುತ್ತದೆ. ಈ ರೀತಿ ನಿತ್ಯ ನೌಕರರನ್ನು ಕಾಡುತ್ತಿರುವುದು ಒಂದು ಮತ್ತೊಂದುಕಡೆ ಭಿಕ್ಷುಕರಿಗಿಂತ ಕಡೆಯಾಗಿ ರಾತ್ರಿ ಕಳೆಯುವುದು. ಬೆಳಗ್ಗೆದ್ದರೆ ಅರೆಬರೆ ನಿದ್ರೆಗಣ್ಣಲ್ಲೇ ಬಸ್‌ ಓಡಿಸಬೇಕು. ಈ ವ್ಯವಸ್ಥೆ ಯಾವಾಗ ಬದಲಾಗುತ್ತದೋ ಥೋ..

Leave a Reply

error: Content is protected !!