Please assign a menu to the primary menu location under menu

NEWSನಮ್ಮಜಿಲ್ಲೆನಮ್ಮರಾಜ್ಯ

ಮಾಜಿ ಸಿಎಂ ಎಸ್.ಎಂ.ಕೃಷ್ಣ ನಿಧನಕ್ಕೆ ಸಿಎಂ, ಮಾಜಿ ಸಿಎಂಗಳು ಸೇರಿ ಅನೇಕ ಗಣ್ಯರ ಸಂತಾಪ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕರ್ನಾಟಕ ಕಂಡ ಧೀಮಂತ ರಾಜಕಾರಣಿ, ಮಾಜಿ ಮುಖ್ಯಮಂತ್ರಿ, ಮಾಜಿ ಕೇಂದ್ರ ಸಚಿವ ಎಸ್​​.ಎಂ. ಕೃಷ್ಣ ಅವರು ನಿಧನರಾಗಿದ್ದಾರೆ. ಅವರ ನಿಧನಕ್ಕೆ ಗಣ್ಯರು ಸಂತಾಪ ಸೂಚಿಸಿದ್ದಾರೆ.

ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಸಾವಿನಿಂದ ಆಘಾತಕ್ಕೀಡಾಗಿದ್ದೇನೆ. ರಾಜ್ಯ ಮತ್ತು ಕೇಂದ್ರ ಸಚಿವರಾಗಿ ಹಾಗೂ ಮುಖ್ಯಮಂತ್ರಿಯಾಗಿ ಕೃಷ್ಣ ಅವರು ಸಲ್ಲಿಸಿರುವ ಸೇವೆ ಅನುಪಮವಾದುದು. ವಿಶೇಷವಾಗಿ ಮುಖ್ಯಮಂತ್ರಿಯಾಗಿ ಐಟಿ-ಬಿಟಿ ಕ್ಷೇತ್ರದ ಬೆಳವಣಿಗೆಗೆ ಅವರು ನೀಡಿರುವ ಕೊಡುಗೆಗಾಗಿ ಕರ್ನಾಟಕ ಸದಾ ಋಣಿಯಾಗಿರುತ್ತದೆ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ.

ಮುತ್ಸದ್ದಿ ರಾಜಕಾರಣಿಯಾಗಿದ್ದ ಕೃಷ್ಣ ಅವರು ಅಜಾತಶತ್ರುಗಳಾಗಿದ್ದರು. ನಾನು ಕಾಂಗ್ರೆಸ್ ಪಕ್ಷಕ್ಕೆ ಸೇರಿದ ಪ್ರಾರಂಭದ ದಿನಗಳಲ್ಲಿ‌ ನನಗೆ ಮಾರ್ಗದರ್ಶಕರಾಗಿದ್ದ ಕೃಷ್ಣ ಅವರು ಸದಾ ನನ್ನ ಹಿತೈಷಿಗಳಾಗಿದ್ದರು. ಕೃಷ್ಣ ಅವರ ದೂರದರ್ಶಿತ್ವ, ಶಿಸ್ತುಬದ್ಧ ಜೀವನ, ಸಜ್ಜನಿಕೆಯ ನಡವಳಿಕೆ ಮತ್ತು ಅಧ್ಯಯನಶೀಲ ಪ್ರವೃತ್ತಿ ಉದಯೋನ್ಮುಖ ರಾಜಕಾರಣಿಗಳಿಗೆ ಮಾದರಿಯಾಗಿದೆ. ಅವರ ಅಗಲಿಕೆಯಿಂದ ನೊಂದಿರುವ ಅವರ ಕುಟುಂಬವರ್ಗ ಮತ್ತು ಅಭಿಮಾನಿಗಳ ದು:ಖದಲ್ಲಿ‌ ನಾನೂ ಭಾಗಿಯಾಗಿದ್ದೇನೆ.‌ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಭಗವಂತನಲ್ಲಿ ಕೋರುತ್ತೇನೆ ಎಂದು X​ ಮಾಡಿದ್ದಾರೆ.

ಸಭಾಪತಿ ಯುಟಿ ಖಾದರ್ ಸಂತಾಪ: ಎಸ್​.ಎಂ.ಕೃಷ್ಣ ನಿಧನದ ವಿಚಾರ ತಿಳಿದು ತುಂಬಾ ದುಃಖವಾಗಿದೆ. ಎಸ್​.ಎಂ.ಕೃಷ್ಣ ನಿಧನದಿಂದ ರಾಜ್ಯ ರಾಜಕಾರಣಕ್ಕೆ ತುಂಬಲಾರದ ನಷ್ಟವಾಗಿದೆ. ಎಸ್​.ಎಂ.ಕೃಷ್ಣ ಅಜಾತಶತ್ರು, ಉತ್ತಮ ರಾಜಕಾರಣಿ ಆಗಿದ್ದರು. ಸಿಎಂ ಆಗಿ, ಕೇಂದ್ರ ಸಚಿವರಾಗಿ ಸಾಕಷ್ಟು ಉತ್ತಮ ಕೆಲಸ ಮಾಡಿದ್ದರು. ಬೆಂಗಳೂರು ಅಭಿವೃದ್ಧಿಗೆ ಶ್ರಮಿಸಿದ್ದರು, ಹಲವು ಯೋಜನೆ ಜಾರಿಗೆ ತಂದಿದ್ದಾರೆ. ಎಸ್​.ಎಂ.ಕೃಷ್ಣ ಅವರು ರಾಜಕಾರಣದಲ್ಲಿ ಸುಧೀರ್ಘ ಸೇವೆ ಸಲ್ಲಿಸಿದ್ದರು. ನಾನು ವಿದ್ಯಾರ್ಥಿಯಾಗಿದ್ದಾಗಲೇ ಎಸ್​.ಎಂ.ಕೃಷ್ಣ ಜೊತೆ ಸಂಪರ್ಕ ಇತ್ತು ಎಂದು ಸಂತಾಪ ಸೂಚಿಸಿದ್ದಾರೆ.

ಸಚಿವ ಡಾ.ಜಿ.ಪರಮೇಶ್ವರ್ ಸಂತಾಪ: ಎಸ್​.ಎಂ.ಕೃಷ್ಣ ನಿಧನ ವಿಚಾರ ಕೇಳಿ ತುಂಬಾ ನೋವಾಗಿದೆ. ಉತ್ತಮ ರಾಜಕಾರಣಿಯನ್ನು ನಾವು ಕಳೆದುಕೊಂಡಿದ್ದೇವೆ. ಸಿಎಂ ಆಗಿ, ಕೇಂದ್ರ ಸಚಿವರಾಗಿ ಉತ್ತಮ ಕೆಲಸ ಮಾಡಿದ್ದರು. ಬೆಂಗಳೂರು ನಗರದಲ್ಲಿ ಐಟಿ-ಬಿಟಿ ಸ್ಥಾಪನೆಗೆ ಕಾರಣರಾಗಿದ್ದರು. ಅವರಿಂದ ಬೆಂಗಳೂರು ಸಿಲಿಕಾನ್ ಸಿಟಿಯಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿ ಪಡೆದಿದೆ.

ಹಲವು ಯೋಜನೆಗಳ ಜತೆ ಹಲವು ಸವಾಲುಗಳನ್ನು ಎದುರಿಸಿದ್ದರು. ರಾಜ್​ಕುಮಾರ್ ಅಪಹರಣ ಸಮಯದಲ್ಲಿ ಸಮರ್ಥವಾಗಿ ನಿಭಾಯಿಸಿದ್ದರು. ಕಾವೇರಿ ನದಿ ನೀರು ವಿಚಾರದಲ್ಲೂ ಸಮರ್ಥವಾಗಿ ಕೆಲಸ ಮಾಡಿದ್ದರು. ಎಸ್​​​ಎಂಕೆ ಅವರ ಸಾಧನೆ ಯುವ ರಾಜಕಾರಣಿಗಳಿಗೆ ಮಾದರಿಯಾಗಿದೆ. ಎಸ್​.ಎಂ.ಕೃಷ್ಣ ಅವರ ಜತೆ ಉತ್ತಮ ಒಡನಾಡ ಇತ್ತು ಕುಟುಂಬಕ್ಕೆ ದುಃಖ ಸಹಿಸುವ ಶಕ್ತಿ ದೇವರು ನೀಡಲಿ. ಎಸ್​​.ಎಂ.ಕೃಷ್ಣ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ದೇವರಲ್ಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಗೃಹ ಸಚಿವ ಜಿ ಪರಮೇಶ್ವರ್​ ಸಂತಾಪ ಸೂಚಿಸಿದ್ದಾರೆ.

ಎಸ್ಎಂ ಕೃಷ್ಣ ಅವರು ನಮ್ಮನ್ನು ಅಗಲಿದ್ದಾರೆ, ಇದು ಬಹಳ ನೋವಿನ ಸಂಗತಿ. ರಾಜ್ಯಕ್ಕೆ ಎಸ್​​.ಎಂ.ಕೃಷ್ಣ ಅವರ ಕೊಡುಗೆ ಅಪಾರವಾಗಿದೆ. ಸಿಎಂ, ವಿತ್ತ ಸಚಿವರಾಗಿ ಉತ್ತರ ಕರ್ನಾಟಕಕ್ಕೆ ಅವರ ಕೊಡುಗೆ ಅಪಾರವಾಗಿದೆ. ಹಲವು ಬಾರಿ ಎಸ್​.ಎಂ.ಕೃಷ್ಣ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದಿದ್ದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಕಂಬನಿ ಮಿಡಿದಿದ್ದಾರೆ.

ಮಾಜಿ ಸಭಾಪತಿ ಬಿ.ಎಲ್​.ಶಂಕರ್ ಸಂತಾಪ: ಎಸ್​.ಎಂ.ಕೃಷ್ಣ ನಿಧನದ ವಿಚಾರ ತಿಳಿದು ತುಂಬಾ ನೋವುಂಟಾಗಿದೆ. ಎಸ್​​.ಎಂ.ಕೃಷ್ಣ ಅವರು ಸುಧೀರ್ಘ ಕಾಲ ರಾಜಕಾರಣದಲ್ಲಿ ಇದ್ದರು. ಉತ್ತಮ ಸುಸಂಸ್ಕೃತ ರಾಜಕಾರಣಿಯೊಬ್ಬರನ್ನು ಕಳೆದುಕೊಂಡಿದ್ದೇವೆ. ಎಸ್​.ಎಂ.ಕೃಷ್ಣ ಅವರು ಬೆಂಗಳೂರು ನಗರ ಅಭಿವೃದ್ಧಿಗೆ ಶ್ರಮಿಸಿದ್ದರು. ಬೆಂಗಳೂರನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತೆ ಮಾಡಿದ್ದರು” ಎಂದು ಮಾಜಿ ಸಭಾಪತಿ ಬಿಎಲ್​ ಶಂಕರ್ ಸಂತಾಪ ಸೂಚಿಸಿದ್ದಾರೆ.

ಎಂಎಲ್​ಸಿ ಎಚ್​​.ವಿಶ್ವನಾಥ್​​ ಸಂತಾಪ: ಎಸ್​.ಎಂ.ಕೃಷ್ಣ ನಿಧನ ವಿಚಾರ ತಿಳಿದು ತುಂಬಾ ನೋವುಂಟಾಗಿದೆ. ಎಸ್​​.ಎಂ.ಕೃಷ್ಣ ಸಿಎಂ ಆಗಿ ಹಲವು ಮಹತ್ವದ ಯೋಜನೆಗಳು ಜಾರಿ ತಂದಿದ್ದರು. ರಾಜ್​​ಕುಮಾರ್ ಅಪಹರಣ ಸಂದರ್ಭದಲ್ಲಿ ಸಮರ್ಥವಾಗಿ ನಿಭಾಯಿಸಿದ್ದರು. ಐಟಿ-ಬಿಟಿ, ಮೆಟ್ರೋ ರೈಲು, ಕೆಂಪೇಗೌಡ ಏರ್​ಪೋರ್ಟ್​ ಸ್ಥಾಪನೆ ಮಾಡಿದ್ದಾರೆ.

ಬಿಸಿಯೂಟ ಯೋಜನೆ, ಮಹಿಳಾ ಸ್ವಸಹಾಯ ಸಂಘಟನೆಗೆ ನೆರವು ನೀಡಿದ್ದರು. ಕೇಂದ್ರದಲ್ಲೂ ಹಲವು ಜವಾಬ್ದಾರಿಗಳನ್ನು ಸಮರ್ಥವಾಗಿ ನಿರ್ವಹಿಸಿದ್ದರು. ಎಸ್​.ಎಂ.ಕೃಷ್ಣ ಅವರು ನನಗೂ ಸೇರಿ ಎಲ್ಲರಿಗೂ ಸ್ಫೂರ್ತಿಯಾಗಿದ್ದಾರೆ. ಎಸ್​​ಎಂ ಕೃಷ್ಣ ಅವರ ಕೆಲಸಗಳು ಯುವ ರಾಜಕಾರಣಿಗಳಿಗೆ ಸ್ಫೂರ್ತಿಯಾಗಿದೆ. ಎಸ್​​.ಎಂ.ಕೃಷ್ಣ ಅವರ ಆತ್ಮಕ್ಕೆ ಶಾಂತಿ ಸಿಗಲಿ, ಕುಟುಂಬಕ್ಕೆ ದುಃಖ ಸಹಿಸುವ ಶಕ್ತಿ ದೇವರು ನೀಡಲಿ” ಎಂದು ಪ್ರಾರ್ಥನೆ ಸಲ್ಲಿಸುತ್ತೇನೆ ಎಂದು ಕಂಬಿನಿ ಮಿಡಿದಿದ್ದಾರೆ.

ಯಡಿಯೂರಪ್ಪ ಸಂತಾಪ: “ಧೀಮಂತ ಮುತ್ಸದ್ಧಿ ರಾಜಕಾರಣಿ, ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳು, ಮಾಜಿ ಕೇಂದ್ರ ವಿದೇಶಾಂಗ ಸಚಿವರು, ಪಕ್ಷದ ಹಿರಿಯ ನಾಯಕ, ಪದ್ಮವಿಭೂಷಣ ಎಸ್.ಎಂ.ಕೃಷ್ಣ ಅವರು ನಮ್ಮನ್ನು ಬಿಟ್ಟು ಅಗಲಿದ ಸುದ್ದಿ ತಿಳಿದು ಅತೀವ ಆಘಾವಾಗಿದೆ.

ರಾಷ್ಟ್ರ, ರಾಜ್ಯದ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದ್ದ ಶ್ರೀ ಎಸ್.ಎಂ.ಕೃಷ್ಣ ಅವರ ನಿಧನದಿಂದ ನಾಡು ಒಬ್ಬ ಶ್ರೇಷ್ಠ ನಾಯಕನನ್ನು ಕಳೆದುಕೊಂಡಿದೆ. ಅವರ ಅಗಲಿಕೆಯಿಂದ ವೈಯಕ್ತಿಕವಾಗಿ ಒಬ್ಬ ಹಿರಿಯಣ್ಣನನ್ನು ಕಳೆದುಕೊಂಡ ನೋವು ನನಗಾಗಿದೆ” ಎಂದು ಮಾಜಿ ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ಕಂಬನಿ ಮಿಡಿದರು.

ಎಸ್.ಎಂ.ಕೃಷ್ಣ ಅವರಿಗೆ ಅಶ್ರುಪೂರ್ಣ ಶ್ರದ್ಧಾಂಜಲಿ ಸಲ್ಲಿಸುತ್ತಾ, ಅಗಲಿದ ಆ ಹಿರಿಯ ಚೇತನಕ್ಕೆ ದೇವರು ಉತ್ತಮ ಸದ್ಗತಿಯನ್ನು ದಯಪಾಲಿಸಲಿ ಎಂದು ಪ್ರಾರ್ಥಿಸುತ್ತೇನೆ. ಅವರ ಕುಟುಂಬದ ಸದಸ್ಯರು, ಅಪಾರ ಅಭಿಮಾನಿಗಳಿಗೆ ಈ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದು ಕೋರುತ್ತೇನೆ. ಓಂ ಶಾಂತಿ” ಎಂದು ಸಂತಾಪ ಸೂಚಿಸಿದ್ದಾರೆ.

ಬೊಮ್ಮಾಯಿ ಸಂತಾಪ: ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರದ ಮಾಜಿ ಸಚಿವರಾದ ಎಸ್. ಎಂ. ಕೃಷ್ಣ ಅವರು ನಿಧನರಾಗಿರುವ ಸುದ್ದಿ ಕೇಳಿ ಅತ್ಯಂತ ದುಃಖವಾಗಿದೆ. ಮಿತ ಭಾಷಿ, ಸೌಮ್ಯ ಸ್ವಭಾವದ ಎಸ್. ಎಂ. ಕೃಷ್ಣ ಅವರು ಸುಮಾರು ಆರು ದಶಕಗಳ ಕಾಲ ರಾಜ್ಯ ಮತ್ತು ರಾಷ್ಟ್ರ ರಾಜ್ಯಕಾರಣದಲ್ಲಿ ತಮ್ಮದೇ ಆದ ಛಾಪು ಮೂಡಿಸಿ ಇಂದಿನ ರಾಜಕಾರಣಿಗಳಿಗೆ ಮಾದರಿಯಾಗಿದ್ದಾರೆ” ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಸಂತಾಪ ಸೂಚಿಸಿದ್ದಾರೆ.

ಬೆಂಗಳೂರಿಗೆ ಐಟಿ ಬಿಟಿ ಕಂಪನಿಗಳನ್ನು ತರುವ ಮೂಲಕ ಬೆಂಗಳೂರಿಗೆ ವಿಶ್ವ ಮಾನ್ಯತೆ ತಂದು ಕೊಟ್ಟಿದ್ದರು. ಅವರ ಅಗಲಿಕೆ ರಾಜ್ಯ, ರಾಷ್ಟ್ರ ರಾಜಕಾರಣದಲ್ಲಿ ಒಬ್ಬ ಮಾರ್ಗದರ್ಶಕರನ್ನು ಕಳೆದುಕೊಂಡಂತಾಗಿದೆ. ಅವರ ನಿಧನವು ನನಗೆ ವೈಯಕ್ತಿಕವಾಗಿ ಅತ್ಯಂತ ನೋವು ತಂದಿದ್ದು, ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬ ಹಾಗೂ ಅವರ ಅಪಾರ ಅಭಿಮಾನಿಗಳಿಗೆ ಆ ಭಗವಂತ ಕರುಣಿಸಲಿ, ಅವರ ಆತ್ಮಕ್ಕೆ ಶಾಂತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು X​​ ಮಾಡಿದ್ದಾರೆ.

Leave a Reply

error: Content is protected !!
LATEST
ಹಾವೇರಿ: ಸರ್ಕಾರಿ ಬಸ್ ಹತ್ತಲು ಹೋದ ವೃದ್ಧೆ ಕಾಲುಗಳ ಮೇಲೆ ಹಿಂಬದಿ ಚಕ್ರ ಹರಿದು ಕಾಲುಗಳು ಕಟ್‌ KSRTC ಮಡಿಕೇರಿ: ಸಹೋದ್ಯೋಗಿ ಕಂಡಕ್ಟರ್‌ ಕೊಲ್ಲುವ ಬೆದರಿಕೆ ಹಾಕಿ ಗಾಳಿಯಲ್ಲಿ ಗುಂಡ್ಹಾರಿಸಿದ ಡ್ರೈವರ್‌ ಬಂಧನ KKRTC ರಾಯಚೂರು: ಲಿಂಗಸುಗೂರು ಘಟಕ ವ್ಯವಸ್ಥಾಪಕ, ಡಿಸಿ ಅಮಾನತಿಗೆ ಕರವೇ ಆಗ್ರಹ ಮೈಸೂರು: ಸಾಲದ ಸುಳಿಗೆ ಸಿಲುಕಿದ KSRTC ಕಂಡಕ್ಟ‌ರ್: ನಾಲೆಗೆ ಹಾರಿ ಆತ್ಮಹತ್ಯೆ ಎಸ್‌.ಎಂ.ಕೃಷ್ಣ ಇನ್ನಿಲ್ಲ- ಪ್ರೇಮ ಕೃಷ್ಣಗೆ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ದ್ರೌಪದಿ ಮುರ್ಮುಶೋಕ ಸಂದೇಶ ಮಾಜಿ ಸಿಎಂ ಎಸ್.ಎಂ.ಕೃಷ್ಣ ನಿಧನಕ್ಕೆ ಸಿಎಂ, ಮಾಜಿ ಸಿಎಂಗಳು ಸೇರಿ ಅನೇಕ ಗಣ್ಯರ ಸಂತಾಪ ಮಾಜಿ ಸಿಎಂ SMK ನಿಧನ: ನಾಳೆ ಶಾಲಾ- ಕಾಲೇಜು, ಕಚೇರಿಗಳಿಗೆ ರಜೆ ಘೋಷಣೆ ಅಕ್ರಮ ಪಡಿತರ ವಿರುದ್ಧ ವಿಶೇಷ ಕಾರ್ಯಾಚರಣೆ: ಆಹಾರ ಸಚಿವ ಮುನಿಯಪ್ಪ KSRTC ನಿವೃತ್ತ ನೌಕರರಿಗೆ ಫ್ರೀ ಪಾಸ್‌ ಕೊಡಿ: ಹಣ ಕಟ್ಟಿದ ಮೇಲೆ ಪಾಸ್‌ ನೀಡುವುದು ಸಲ್ಲ BMTC- ಅನ್ಯ ಭಾಷೆ ಆಧಾರ್‌ಕಾರ್ಡ್‌ ವಿಳಾಸ ಕರ್ನಾಟಕದಾಗಿದ್ದಲ್ಲಿ ಮಾನ್ಯ ಮಾಡಿ: ಸಿಟಿಎಂ ಆದೇಶ