ಮೈಸೂರು: ವಿಧಾನಸಭಾ ಚುನಾವಣೆ ವೇಳೆ ಮತದಾನದ ಕೇಂದ್ರದಲ್ಲಿ ಇವಿಎಂ ಒಡೆದು ಹಾಕಿ ವಿಕೃತಿ ಮೆರೆದಿದ್ದ ವ್ಯಕ್ತಿಯೊಬ್ಬ ಮತ್ತೆ ಸುದ್ದಿಯಾಗಿದ್ದಾನೆ. ಈ ಬಾರಿ ಈತ ಸಿಎಂ ಮನೆಗೆ ಕಲ್ಲು ಹೊಡೆದು ಪೊಲೀಸರ ಅತಿಥಿಯಾಗಿದ್ದಾನೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೈಸೂರಿನ ಟಿ.ಕೆ.ಬಡಾವಣೆಯಲ್ಲಿ ಇರುವ ಮನೆಗೆ ಇದೀಗ ಕಲ್ಲು ಹೊಡೆದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಸಿಎಂ ಮನೆಗೆ ಕಲ್ಲು ಹೊಡೆದವನು ಮೈಸೂರಿನ ಸತ್ಯಮೂರ್ತಿ ಎಂದು ಗುರುತಿಸಲಾಗಿದೆ. ಈತ ಮಂಗಳವಾರ ಬೆಳಗ್ಗೆ 8 ಗಂಟೆಯಲ್ಲಿ ಸಿದ್ದರಾಮಯ್ಯ ಅವರ ಮನೆಯ ಮೇಲೆ ಕಲ್ಲೆಸಿದಿದ್ದಾನೆ. ತಕ್ಷಣವೇ ಆತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಈಗ ಈತ ಮಾನಸಿಕ ಅಸ್ವಸ್ಥನಾ ಎಂಬುದೇ ಪ್ರಶ್ನೆಯಾಗಿದೆ. ಏಕೆಂದರೆ ಈತ ಈ ಹಿಂದೆ ಇವಿಎಂ ಯಂತ್ರ ಒಡೆದು ಹಾಕಿದ್ದ. ಅಷ್ಟೇ ಅಲ್ಲದೆ, ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಅವರ ಫೋಟೋಗೆ ರೌಡಿ ರಾಜೇಂದ್ರ ಎಂದು ಪೋಸ್ಟ್ ಮಾಡಿ ವಿಕೃತಿ ಮೆರೆದಿದ್ದ.
ಇಂದು ಸಿಎಂ ಮನೆಗೆ ಕಲ್ಲು ಹೊಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು ಮುಂದಿನ ಕ್ರಮ ಕೈಗೊಂಡಿದ್ದಾರೆ. ಅಂದಹಾಗೆ ಸಿದ್ದರಾಮಯ್ಯ ಅವರು ಮೈಸೂರಿಗೆ ಬಂದಾಗಲೆಲ್ಲ ಟಿ.ಕೆ.ಬಡಾವಣೆಯಲ್ಲಿ ಇರುವ ಮನೆಯಲ್ಲೇ ವಾಸ್ತವ್ಯ ಹೂಡಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸುತ್ತಾರೆ.