Search By Date & Category

NEWSನಮ್ಮರಾಜ್ಯರಾಜಕೀಯ

ಪ್ರಧಾನಿ ಸಹೋದರನ ಮೇಲಿನ ಕಾಳಜಿ ದಶಪಥ ಸಂತ್ರಸ್ತರ ಮೇಲೆ ಏಕಿಲ್ಲ: ಬ್ರಿಜೇಶ್‌ ಕಾಳಪ್ಪ ಪ್ರಶ್ನೆ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯು ಸಂಪೂರ್ಣ ಅವೈಜ್ಞಾನಿಕವಾಗಿದ್ದು, ಕಳೆದ ಮೂರು ತಿಂಗಳುಗಳಲ್ಲಿ ಇಲ್ಲಿ 65 ಅಪಘಾತಗಳು ಸಂಭವಿಸಿ 36 ಮಂದಿ ಮೃತಪಟ್ಟಿದ್ದರೂ ಸರ್ಕಾರ ನಿರ್ಲಕ್ಷ್ಯ ತೋರುತ್ತಿದೆ ಎಂದು ಆಮ್‌ ಆದ್ಮಿ ಪಾರ್ಟಿ ಮುಖಂಡ ಹಾಗೂ ಸುಪ್ರೀಂಕೋರ್ಟ್‌ ಹಿರಿಯ ವಕೀಲ ಬ್ರಿಜೇಶ್‌ ಕಾಳಪ್ಪ ಹೇಳಿದರು.

ಆಮ್‌ ಆದ್ಮಿ ಪಾರ್ಟಿಯ ರಾಜ್ಯ ಕಚೇರಿಯಲ್ಲಿ ಮಾತನಾಡಿದ ಬ್ರಿಜೇಶ್‌ ಕಾಳಪ್ಪ, “ಮೈಸೂರು-ನಂಜನಗೂಡು ಮಾರ್ಗದಲ್ಲಿ ಅಪಘಾತದಿಂದ ಗಾಯಗೊಂಡ ಪ್ರಧಾನಿ ನರೇಂದ್ರ ಮೋದಿಯವರ ಸಹೋದರ ಪ್ರಹ್ಲಾದ್‌ ಮೋದಿಯವರಿಗೆ ವಿಐಪಿ ಚಿಕಿತ್ಸೆ ಕೊಡಿಸಲಾಗಿದೆ.

ಆದರೆ ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯಲ್ಲಿ ಸಾಲುಸಾಲು ಅಪಘಾತ ಸಂಭವಿಸಿ ಜನಸಾಮಾನ್ಯರ ಸಾವುಗಳು ಸಂಭವಿಸುತ್ತಿದ್ದರೂ ಸರ್ಕಾರ ತಲೆ ಕೆಡಿಸಿಕೊಳ್ಳುತ್ತಿಲ್ಲ. ದಶಪಥ ಹೆದ್ದಾರಿಯ ಪರಿಶೀಲನೆಗೆ ಶೀಘ್ರವೇ ತಜ್ಞರ ಸಮಿತಿ ರಚಿಸಿ, ಅದರ ವರದಿಯನ್ನು ಆಧರಿಸಿ ಲೋಪದೋಷಗಳನ್ನು ಸರಿಪಡಿಸಬೇಕು. ಅಮಾಯಕ ವಾಹನ ಸವಾರರ ಜೀವದ ಜೊತೆ ಸರ್ಕಾರದ ಚೆಲ್ಲಾಟ ಸರಿಯಲ್ಲ” ಎಂದು ಹೇಳಿದರು.

ಸ್ವಲ್ಪ ಜೋರಾಗಿ ಮಳೆ ಬಂದರೂ ದಶಪಥ ರಸ್ತೆಯ ಹಲವೆಡೆ ಮಳೆ ನೀರು ನಿಂತು ನದಿಯಂತಾಗುತ್ತದೆ. ರಸ್ತೆ ಪಕ್ಕದ ಚರಂಡಿ ಹಾಗೂ ಸರ್ವಿಸ್‌ ರಸ್ತೆಯ ವಿನ್ಯಾಸ ಅವೈಜ್ಞಾನಿಕವಾಗಿದೆ. ಡಾಂಬರೀಕರಣ ಕೂಡ ಕಳಪೆಯಾಗಿದೆ. ಉದ್ಘಾಟನೆಯಾದ ಕೆಲವೇ ತಿಂಗಳಲ್ಲಿ ಅಲ್ಲಲ್ಲಿ ಕಿತ್ತು ಹೋಗಿದೆ. ಈ ಎಲ್ಲ ಹುಳುಕುಗಳನ್ನು ಮುಚ್ಚಿ ಹಾಕಲು ಸಂಸದ ಪ್ರತಾಪ್‌ ಸಿಂಹ ದಶಪಥ ರಸ್ತೆಯನ್ನು ಅತಿಯಾಗಿ ಹೊಗಳುತ್ತಿದ್ದಾರೆ ಎಂದು ಕಿಡಿಕಾದರಿದರು.

ಅಮಿತ್‌ ಶಾ ನೇತೃತ್ವದ ಸರ್ವಪಕ್ಷ ಸಭೆಗೆ ಆಗ್ರಹ: ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಡಿಸೆಂಬರ್‌ 29ರಿಂದ ಮೂರು ದಿನಗಳ ರಾಜ್ಯ ಪ್ರವಾಸ ಹಮ್ಮಿಕೊಂಡಿದ್ದಾರೆ. ಈ ವೇಳೆ ಬೆಳಗಾವಿ ಗಡಿ ವಿವಾದದ ಕುರಿತು ಆಮ್‌ ಆದ್ಮಿ ಪಾರ್ಟಿ ಸೇರಿದಂತೆ ಸರ್ವ ಪಕ್ಷಗಳ ಸಭೆ ಕರೆದು ಚರ್ಚಿಸಲಿ. ಕೇಂದ್ರ, ಕರ್ನಾಟಕ ಹಾಗೂ ಮಹಾರಾಷ್ಟ್ರ ಮೂರೂ ಕಡೆ ಬಿಜೆಪಿಯ ತ್ರಿಬಲ್‌ ಇಂಜಿನ್ ಸರ್ಕಾರವಿದ್ದರೂ ಬೆಳಗಾವಿ ಗಡಿ ವಿವಾದ ಬಗ್ಗೆ ಅವರು ಜಾಣಕುರುಡು ತೋರುವುದು ಸರಿಯಲ್ಲ ಎಂದರು.

Leave a Reply

error: Content is protected !!