ಪಿರಿಯಾಪಟ್ಟಣ: ಭಾರತದ ಸಂವಿಧಾನ ಪ್ರಜಾಪ್ರಭುತ್ವದ ತಾಯಿಬೇರು ಮತ್ತು ವಿಶ್ವಕ್ಕೆ ಮಾದರಿಯಾದ ಸಂವಿಧಾನವಾಗಿದೆ ಎಂದು ತಹಸೀಲ್ದಾರ್ ಕುಂಞಿ ಅಹಮದ್ ತಿಳಿಸಿದರು.
ತಾಲೂಕಿನ ಹಿಟ್ನೆಹೆಬ್ಬಾಗಿಲು ಗ್ರಾಮ ಪಂಚಾಯಿತಿ ಆವರಣದಲ್ಲಿ ಬುಧವಾರ ನಡೆದ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಡಾ.ಬಿ.ಆರ್.ಅಂಬೇಡ್ಕರ್ ಅವರು ಕೋಟ್ಯಂತರ ಭಾರತೀಯರನ್ನು ಒಂದು ವ್ಯವಸ್ಥೆಯಲ್ಲಿ ತರುವ ಮೂಲಕ ಅತ್ಯುತ್ತಮ ಪ್ರಜಾತಂತ್ರ ರೂಪಿಸಲು ಈ ಸಂವಿಧಾನವನ್ನು ಕಾಣಿಕೆಯಾಗಿ ನೀಡಿದ್ದಾರೆ. ನಮ್ಮ ಸಂವಿಧಾನದಲ್ಲಿ ಜಾತಿ, ಧರ್ಮ, ಭಾಷೆ, ಸಂಸ್ಕೃತಿ ಹಾಗೂ ಆರ್ಥಿಕ, ಸಾಮಾಜಿಕ, ರಾಜಕೀಯವನ್ನು ಗೌರವಿಸುವ ಜತೆಗೆ ಅನ್ಯರಿಗೆ ನೋವಾಗದಂತೆ ಸರ್ವರಿಗೂ ಧರ್ಮ, ಜಾತಿ ಆಚಾರ ವಿಚಾರಗಳನ್ನು ಆಚರಣೆ ಮಾಡಲು ಭಾರತದ ಸಾರ್ವಭೌತ್ವವನ್ನು ಎತ್ತಿ ಹಿಡಿದಿದೆ ಎಂದರು.
ಇನ್ನು ಮುಂದಿನ ಯುವ ಜನರು ದೇಶದ ಭವಿಷ್ಯದ ಭವ್ಯ ನಾಗರೀಕರಾಗಿದ್ದಾರೆ. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹಿರಿಯರು ತನು, ಮನ, ಧನವನ್ನು ಲೆಕ್ಕಿಸದೇ ತ್ಯಾಗ ಮಾಡಿ ಹುತಾತ್ಮರಾಗಿದ್ದು ಅವರಂತೆ ಪ್ರತಿಯೊಬ್ಬರೂ ಸ್ವಾತಂತ್ರ್ಯ ಪ್ರೇಮಿಯಾಗಿ ದೇಶಾಭಿಮಾನ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು
ಪ್ರಧಾನ ಭಾಷಣಕಾರ ಪುಟ್ಟಮಾದಯ್ಯ, ಸಂವಿಧಾನವನ್ನು ಹತ್ತಿಕುವ ದುಷ್ಟ ಶಕ್ತಿಗಳು ದೇಶದಲ್ಲಿ ತಲೆ ಎತ್ತುತ್ತಿವೆ ಆದ್ದರಿಂದ ಸಂವಿಧಾನದ ಬಗ್ಗೆ ಜಾಗೃತಿ ಅಗತ್ಯವಿದೆ. ದೇಶದಲ್ಲಿ ಮೇಲು ಕೇಳಿರಿಮೆ ಇಲ್ಲದ ಹಾಗೆ ಒಂದೇ ವೇದಿಕೆಯಲ್ಲಿ ಕೋರುವ ಸಮಾನತೆ ನೀಡಿರುವುದು ಅಂಬೇಡ್ಕರ್. ಅಂದು ಕೆಲವೇ ವರ್ಗಕ್ಕೆ ಸೀಮಿತವಾಗಿದ್ದ ಮತದಾನದ ಹಕ್ಕನ್ನು 18 ವರ್ಷ ತುಂಬಿದ ಪ್ರತಿ ಪ್ರಜೆಗೂ ಇಂದು ನೀಡಿದ್ದಾರೆ ಎಂದರು.
ಗ್ರಾಪಂ ಅಧ್ಯಕ್ಷ ಎಚ್.ಎನ್. ಕಾಮರಾಜ್ ಮಾತನಾಡಿ, ಪ್ರತಿ ಹಂತದಲ್ಲೂ ಮನುಷ್ಯನ ಹುಟ್ಟಿನಿಂದ ಅಂತ್ಯವಾಗುವವರೆಗೂ ಸಂವಿಧಾನ ಎಷ್ಟು ಮುಖ್ಯ ಎಂಬುದರ ಬಗ್ಗೆ ತಿಳಿದುಕೊಳ್ಳಬೇಕು ಅದರಲ್ಲೂ ಶಾಲಾ ವಿದ್ಯಾರ್ಥಿಗಳು ಹಾಗೂ ಯುವ ಪೀಳಿಗೆ ಸಂವಿಧಾನ ಓದಿ ತಮ್ಮ ಅರಿವನ್ನು ಹೆಚ್ಚಿಸಿಕೊಂಡಾಗ ಜೀವನ ಸಾರ್ಥಕವಾಗುತ್ತದೆ ಎಂದರು.
ಗ್ರಾಪಂ ಮಾಜಿ ಅಧ್ಯಕ್ಷ ಕೆಪಿಸಿಸಿ ಸದಸ್ಯ ಎಚ್.ಪಿ.ಅನಿಲ್ ಕುಮಾರ್, ಸದಸ್ಯರಾದ ಸೀಗೂರು ವಿಜಯ್ ಕುಮಾರ್, ಯಶೋದಮ್ಮ, ಅಭಿವೃದ್ಧಿ ಅಧಿಕಾರಿ ರಾಜೇಂದ್ರ, ಕಾರ್ಯದರ್ಶಿ ದಮಯಂತಿ ಮುಖಂಡರಾದ ಜಯಶಂಕರ್, ಟಿ.ಈರಯ್ಯ, ಅಣ್ಣಯ್ಯ, ಪಿ.ಪಿ.ಪುಟ್ಟಯ್ಯ, ಶಂಕರ್, ಭೂತಹಳ್ಳಿ ಶಿವಣ್ಣ, ಎಚ್.ಡಿ ರಮೇಶ್, ಸಹಾಯಕ ಇಂಜಿನಿಯರ್ ಎಚ್ ಕೆ ದಿನೇಶ್, ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಚಂದ್ರಶೇಖರ್, ನೋಡಲು ಅಧಿಕಾರಿ ಸೋಮಶೇಖರ್, ಮುಖ್ಯ ಶಿಕ್ಷಕರಾದ ಮೋಹನ್, ವಿವಿಧ ಇಲಾಖೆಯ ಅಧಿಕಾರಿಗಳು ಪಾಲ್ಗೊಂಡಿದ್ದರು.