Search By Date & Category

CrimeNEWSಆರೋಗ್ಯನಮ್ಮಜಿಲ್ಲೆ

ಮಂಗಳೂರು: ಕಲುಷಿತ ಆಹಾರ ಸೇವನೆ : ಆಸ್ಪತ್ರೆ ಸೇರಿದ ವಿದ್ಯಾರ್ಥಿನಿಯರ ಸಂಖ್ಯೆ 173ಕ್ಕೆ ಏರಿಕೆ

ವಿಜಯಪಥ ಸಮಗ್ರ ಸುದ್ದಿ

ಮಂಗಳೂರು: ಕಲುಷಿತ ಆಹಾರ ಸೇವನೆ ಮಾಡಿದ ಕಾಲೇಜು ವಿದ್ಯಾರ್ಥಿನಿಯರಲ್ಲಿ 173 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮಂಗಳೂರು ನರ್ಸಿಂಗ್ ಕಾಲೇಜು ವಿದ್ಯಾರ್ಥಿನಿಯರು ಸೋಮವಾರ ಹಾಸ್ಟೆಲ್‌ನಲ್ಲಿ ಆಹಾರ ಸೇವಿಸಿದ್ದಾರೆ. ಬಳಿಕ ಹೊಟ್ಟೆನೋವು ಕಾಣಿಸಿಕೊಂಡಿದ್ದು, ಮಧ್ಯಾಹ್ನದ ವೇಳೆ ಕೆಲ ವಿದ್ಯಾರ್ಥಿಗಳು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆ ಬಳಿಕ ಒಬ್ಬೊಬ್ಬರಾಗಿ ಆಸ್ಪತ್ರೆಗೆ ದಾಖಲಾಗಿದ್ದು ಈಗ ಅವರ ಸಂಖ್ಯೆ 173ಕ್ಕೆ ಏರಿಕೆಯಾಗಿದೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಮಂಗಳೂರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ (ಪ್ರಭಾರ) ಡಾ. ರಾಜೇಶ್ ಅವರು ಮಾಹಿತಿ ನೀಡಿದ್ದು, ಕಲುಷಿತ ಆಹಾರ ಸೇವನೆಯಿಂದ ನಗರದ ನರ್ಸಿಂಗ್ ಕಾಲೇಜಿನ 173 ಮಂದಿ ವಿದ್ಯಾರ್ಥಿನಿಯರು ಸೋಮವಾರ ಅಸ್ವಸ್ಥಗೊಂಡಿದ್ದು, ಅವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ ಎಂದು ಹೇಳಿದ್ದಾರೆ.

ಅಂತೆಯೇ ವಿದ್ಯಾರ್ಥಿನಿಯರು ಸೇವಿಸಿದ್ದ ಆಹಾರ ಪದಾರ್ಥಗಳ ಮಾದರಿಗಳನ್ನು ಪರೀಕ್ಷೆಗಾಗಿ ಮೈಸೂರಿನ ಆಹಾರ ಸುರಕ್ಷತಾ ಸಂಸ್ಥೆಯ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಹಾಸ್ಟೆಲ್‌ನ ನೀರಿನ ಮಾದರಿಗಳನ್ನು ಕೂಡ ಸಂಗ್ರಹಿಸಲಾಗಿದ್ದು, ಅದರ ಪರೀಕ್ಷೆಯನ್ನು ನಡೆಸಲಾಗುವುದು. ಆಹಾರ ಕಲುಷಿತಗೊಳ್ಳಲು ಕಾರಣ ಏನೆಂಬುದು ಪರೀಕ್ಷೆಯ ವರದಿ ಕೈಸೇರಿದ ಬಳಿಕವಷ್ಟೇ ತಿಳಿದು ಬರಲಿದೆ ಎಂದು ತಿಳಿಸಿದ್ದಾರೆ.

ಘಟನೆ? ಮಂಗಳೂರು ನಗರದ ಶಕ್ತಿನಗರದಲ್ಲಿ ಹಾಸ್ಟೆಲ್‌ನಲ್ಲಿ ವಾಸವಿದ್ದ ಸಿಟಿ ಕಾಲೇಜ್ ಆಫ್‌ ನರ್ಸಿಂಗ್ ಸಂಸ್ಥೆಯ ವಿದ್ಯಾರ್ಥಿನಿಯರು ಸೋಮವಾರ ಆಹಾರ ಸೇವಿಸಿದ ಬಳಿಕ ಅಸ್ವಸ್ಥಗೊಂಡಿದ್ದರು. ಹಾಸ್ಟೆಲ್‌ನ ಬಹುತೇಕ ವಿದ್ಯಾರ್ಥಿಗಳಲ್ಲಿ ಸೋಮವಾರ ಮಧ್ಯಾಹ್ನದ ಬಳಿಕ ಹೊಟ್ಟೆ ನೋವು ವಾಂತಿ ಭೇದಿ ಸಮಸ್ಯೆ ಕಾಣಿಸಿಕೊಳ್ಳಲು ಶುರುವಾಗಿತ್ತು.

ಹೀಗಾಗಿ ನಗರದ ಬೇರೆ ಬೇರೆ ಆಸ್ಪತ್ರೆಗಳಿಗೆ ಅವರನ್ನು ದಾಖಲಿಸಿ ಚಿಕಿತ್ಸೆ ಕೊಡಲಾಗಿತ್ತು. ಅನೇಕ ವಿದ್ಯಾರ್ಥಿನಿಯರು ಚಿಕಿತ್ಸೆ ಪಡೆದು ಹಾಸ್ಟೆಲ್‌ಗೆ ಮರಳಿದ್ದಾರೆ. ಈಗಲೂ ಕೆಲ ವಿದ್ಯಾರ್ಥಿನಿಯರು ಆಸ್ಪತ್ರೆಯಲ್ಲಿ ಇದ್ದಾರೆ. ಅವರ ಆರೋಗ್ಯದ ಮೇಲೆ ನಿಗಾ ಇಡಲಾಗಿದೆ. ಸಂಜೆ ಅಥವಾ ನಾಳೆ ಬಹುತೇಕ ಎಲ್ಲ ವಿದ್ಯಾರ್ಥಿನಿಯರೂ ಆಸ್ಪತ್ರೆಯಿಂದ ಬಿಡುಗಡೆ ಹೊಂದಲಿದ್ದಾರೆ ಎಂದು ಡಾ.ರಾಜೇಶ್ ತಿಳಿಸಿದ್ದಾರೆ.

Leave a Reply

error: Content is protected !!