87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕ್ಷಣಗಣನೆ: ಮಂಡ್ಯಕ್ಕೆ ಆಗಮಿಸಿದ ಸಮ್ಮೇಳನಾಧ್ಯಕ್ಷರಿಗೆ ಸ್ವಾಗತ
ಮಂಡ್ಯ: ಸಕ್ಕರೆ ನಾಡಿನಲ್ಲಿ ಮೂರು ದಿನಗಳ ಕಾಲ ನಡೆಯುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ನಾಳೆ ಅಂದರೆ ಶುಕ್ರವಾರ (ಡಿ.20) ಚಾಲನೆ ಸಿಗಲಿದೆ. ಈ ಹಿನ್ನೆಲೆ ಗುರುವಾರ ಸಮ್ಮೇಳನಾಧ್ಯಕ್ಷರಾದ ಗೊ.ರು.ಚನ್ನಬಸಪ್ಪ ಅವರು ಮಂಡ್ಯಕ್ಕೆ ಆಗಮಿಸಿದ್ದಾರೆ.
ಮಂಡ್ಯಕ್ಕೆ ಆಗಮಿಸುತ್ತಿದ್ದಂತೆ ಸಚಿವ ಎನ್. ಚಲುವರಾಯಸ್ವಾಮಿ, ಶಾಸಕರಾದ ಗಣಿಗ ಪಿ.ರವಿಕುಮಾರ್, ರಮೇಶ್ ಬಂಡಿಸಿದ್ದೇಗೌಡ, ಕಸಾಪ ರಾಜ್ಯಾಧ್ಯಕ್ಷ ಮಹೇಶ್ ಜೋಶಿ, ಡಿಸಿ ಡಾ. ಕುಮಾರ್ ಅವರು ಸಮ್ಮೇಳನಾಧ್ಯಕ್ಷರನ್ನು ಸ್ವಾಗತಿಸಿದರು. ಇದೇ ವೇಳೆ ಜಿಲ್ಲಾಡಳಿತದಿಂದ ಸನ್ಮಾನಿಸಲಾಯಿತು. ಬಳಿಕ ಚನ್ನಬಸಪ್ಪನವರು ಡಿಸಿ ಡಾ.ಕುಮಾರ್ ನಿವಾಸಕ್ಕೆ ತೆರಳಿದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಸಮ್ಮೇಳನಾಧ್ಯಕ್ಷ ಗೊ.ರು ಚನ್ನಬಸಪ್ಪ, ಕನ್ನಡ ತವರು ನೆಲದಲ್ಲಿ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವುದು ಖುಷಿ ತಂದಿದೆ. ಮಂಡ್ಯದಲ್ಲಿ ಕನ್ನಡ ಭಾಷೆ ಅನ್ಯ ಭಾಷೆಯ ಪ್ರಭಾವಕ್ಕೆ ಒಳಗಾಗಿಲ್ಲ. ಆದ್ರೆ ಕನ್ನಡ ಹಲವು ಸಮಸ್ಯೆಗಳನ್ನ ಎದುರಿಸುತ್ತಿದೆ. ಇದರ ಬಗ್ಗೆ ಚಿಂತನೆ ಆಗಬೇಕು. ಆಧುನಿಕತೆಯ ಪ್ರಭಾವ ಕನ್ನಡದ ಮೇಲಿನ ಅಭಿಮಾನ ಕಡಿಮೆಯಾಗಲು ಕಾರಣ ಎಂದರು.
ಮಂಡ್ಯ ಜನರ ಪ್ರೀತಿ ವಿಶ್ವಾಸ ಕಂಡು ಕಣ್ತುಂಬಿಕೊಂಡಿದ್ದೇನೆ. ಎಲ್ಲ ಕಾರ್ಯಕಲಾಪದಲ್ಲಿ ಕನ್ನಡ ಬಂಧುಗಳು ಭಾಗವಹಿಸಬೇಕು. ನನ್ನನ್ನ ಪ್ರೀತಿಯಿಂದ ಆಯ್ಕೆ ಮಾಡಿದ್ದಾರೆ. ಇಂತಹ ಉತ್ಸವದಲ್ಲಿ ಅಧ್ಯಕ್ಷ ಸ್ಥಾನ ಅಲಂಕರಿಸುವುದು ಹೆಮ್ಮೆಯ ವಿಚಾರ, ನಿಜಕ್ಕೂ ತುಂಬಾ ಸಂತೋಷವಾಗಿದೆ. ಈ ಬಾರಿ ಸಮಕಾಲಿನ ಸಮಸ್ಯೆ ಬಗ್ಗೆ ಗೋಷ್ಠಿಗಳು ನಡೆಯಲಿವೆ. ನಾನು ಅಧ್ಯಕ್ಷನಾಗಿ ಮಾಡುವುದು ಏನು ಇಲ್ಲ. ಕಸಾಪ ಅಧ್ಯಕ್ಷರು ಕೇಳಿದರೆ ಸಲಹೆ ಕೊಡಬಹುದು ಎಂದು ನುಡಿದರು.
ನಾಳೆಯಿಂದ ಮಂಡ್ಯದಲ್ಲಿ ನುಡಿ ಜಾತ್ರೆ: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಕ್ಕರೆ ನಾಡು ಮಂಡ್ಯ ಸಜ್ಜಾಗಿದೆ. ಮೂರು ದಶಕಗಳ ಬಳಿಕ ಮಂಡ್ಯದಲ್ಲಿ ನಡೆಯುತ್ತಿರುವ ಸಾಹಿತ್ಯ ಸಮ್ಮೇಳನ ಸಕಲ ಸಿದ್ಧತೆಯಲ್ಲಿ ಮಂಡ್ಯ ಜಿಲ್ಲಾಡಳಿತ ಸಚಿವ ಚಲುವರಾಯಸ್ವಾಮಿ ನೇತೃತ್ವದಲ್ಲಿ ತೊಡಗಿದೆ.
ಮಂಡ್ಯದ ಹೊರ ವಲಯದಲ್ಲಿರುವ ಸ್ಯೋಂಜೋ ಆಸ್ಪತ್ರೆಯ ಹಿಂಭಾದ 130 ಎಕರೆ ಪ್ರದೇಶದಲ್ಲಿ ಸಾಹಿತ್ಯ ಸಮ್ಮೇಳನ ನಡೆಯಲಿದ್ದು, ಇಲ್ಲಿ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಹೀಗಾಗಲೇ 80 ಎಕರೆ ಪ್ರದೇಶದಲ್ಲಿ 3 ವಿವಿಧ ವೇದಿಕೆಗಳ ನಿರ್ಮಾಣ ಮಾಡಲಾಗಿದೆ. ಕೆಆರ್‌ಎಸ್ ಡ್ಯಾಂ ಮಾದರಿಯಲ್ಲಿ ಪ್ರಧಾನ ವೇದಿಕೆಯ ಮುಖ್ಯ ದ್ವಾರ ಸಿದ್ಧಪಡಿಸಿದ್ದು ನೋಡುಗರ ಗಮನ ಸೆಳೆಯುತ್ತಿದೆ.
ಪ್ರಧಾನ ವೇದಿಕೆಗೆ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಹೆಸರು ಇಡಲಾಗಿದೆ. ಇಲ್ಲಿ 50,000ಕ್ಕೂ ಅಧಿಕ ಮಂದಿ ಕೂರಲು ಆಸಗಳ ವ್ಯವಸ್ಥೆ ಮಾಡಲಾಗಿದೆ. ಮಳೆ ಹಾಗೂ ಬಿಸಿಲಿನಿಂದ ರಕ್ಷಣೆಗಾಗಿ ಜರ್ಮನ್ ಟೆಂಟ್ ಹಾಕಲಾಗಿದೆ. ವೇದಿಕೆ ಸೇರಿ ಪ್ರೇಕ್ಷಕರ ಗ್ಯಾಲರಿಯಲ್ಲಿ ಕನ್ನಡ ಬಾವುಟಗಳು ರಾರಾಜಿಸುತ್ತಿವೆ.
ಇನ್ನೂ ಸಾಹಿತ್ಯಾಸಕ್ತರಿಗಾಗಿ 450 ಪುಸ್ತಕ ಮಳಿಗೆಗಳು ನಿರ್ಮಾಣವಾಗಿದ್ದು, 350ಕ್ಕೂ ಹೆಚ್ಚು ವಾಣಿಜ್ಯ ಸ್ಟಾಲ್‌ಗಳು ರೆಡಿಯಾಗಿವೆ. ಸಾಹಿತ್ಯ ಸಮ್ಮೇಳನಕ್ಕೆ ರಂಗು ತರಲು ಮಂಡ್ಯ ನಗರದಲ್ಲಿ ದಸರಾ ಮಾದರಿಯ ದೀಪಾಲಂಕಾರವನ್ನು ಸಹ ಮಾಡಲಾಗಿದೆ. ಶುಕ್ರವಾರ ಬೆಳಗ್ಗೆ ಮಂಡ್ಯದ ವಿಶ್ವೇಶ್ವರಯ್ಯ ಪ್ರತಿಮೆಯಿಂದ ಸಮ್ಮೇಳನದ ಅಧ್ಯಕ್ಷ ಗೋ.ರು.ಚನ್ನಬಸಪ್ಪ ಅವರನ್ನು ಸುಮಾರು 6 ಕಿಮೀ ಜಾನಪದ ಕಲಾತಂಡಗಳ ಮೆರವಣಿಗೆ ಮೂಲಕ ಸಮ್ಮೇಳದ ವೇದಿಕೆಗೆ ಕರೆಯಲಾಗುತ್ತದೆ. ನಂತರ ಸಿಎಂ ಸಿದ್ದರಾಮಯ್ಯ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ ನೀಡಲಿದ್ದಾರೆ.
4,000 ಪೊಲೀಸ್ ಭದ್ರತೆ: ಮೂರು ದಿನಗಳ ಕನ್ನಡ ನುಡಿ ಜಾತ್ರೆ ಉತ್ಸವಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ದಕ್ಷಿಣ ವಲಯ ಡಿಐಜಿ ಡಾ.ಬೋರಲಿಂಗಯ್ಯ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ. 14 ಜಿಲ್ಲೆಗಳಿಂದ ಸುಮಾರು 4,000 ಅಧಿಕಾರಿಗಳು ಹಾಗೂ ಸಿಬ್ಬಂದಿ ಭದ್ರತೆಗೆ ನೇಮಕ ಮಾಡಲಾಗಿದೆ. ಎಸ್ಪಿ 4, ಎಎಸ್ಪಿ 6, ಡಿವೈಎಸ್‌ಪಿ 21, ಪಿಐ 63, ಪಿಎಸ್‌ಐ 190, ಎಎಸ್‌ಐ 215, ಪಿಸಿ 1700, ಮಹಿಳಾ ಪೇದೆ 165, ಗೃಹರಕ್ಷಕ ದಳ 1,000, ಕೆಎಸ್ಆರ್‌ಪಿ 12, ಡಿಎಆರ್ 13 ನಿಯೋಜಿಸಲಾಗಿದೆ.