ಮೈಸೂರು: ವಿಶ್ವವಿಖ್ಯಾತ ದಸರಾ ಮಹೋತ್ಸವದ ಜಂಬೂಸವಾರಿ ಮತ್ತು ಪಂಜಿನ ಕವಾಯತು ವೀಕ್ಷಣೆಗೆಂದು ಗೋಲ್ಡ್ ಕಾರ್ಡ್ ಟಿಕೆಟ್‌ಗಳು ಬಿಡುಗಡೆಯಾದ ಒಂದು ಗಂಟೆಯಲ್ಲೇ ಸೋಲ್ಡ್ ಔಟ್ ಆಗಿವೆ.
ಗೋಲ್ಡ್ ಕಾರ್ಡ್ ಮತ್ತು ಟಿಕೆಟ್‌ಗಳನ್ನು ಆನ್‌ಲೈನ್‌ನಲ್ಲಿ 10 ಗಂಟೆಗೆ ಬಿಡುಗಡೆ ಮಾಡಲು ಸಮಯ ನಿಗದಿಯಾಗಿತ್ತು. ಈ ನಡುವೆ 10 ಗಂಟೆ ಬದಲು 11 ಗಂಟೆಗೆ ಗೋಲ್ಡ್ ಕಾರ್ಡ್ ಮತ್ತು ಟಿಕೆಟ್ ಬಿಡುಗಡೆ ಮಾಡಲಾಗಿದ್ದು, ಬಿಡುಗಡೆ ಮಾಡಿದ ಕೇವಲ ಒಂದು ಗಂಟೆಯಲ್ಲೇ ಎಲ್ಲ ಗೋಲ್ಡ್ ಕಾರ್ಡ್ ಮತ್ತು ಟಿಕೆಟ್‌ಗಳು ಖರೀದಿಯಾಗಿವೆ.
ಜಂಬೂಸವಾರಿ ವೀಕ್ಷಣೆಗೆ ಗೋಲ್ಡ್ ಕಾರ್ಡ್‌ಗೆ 6,000 ರೂ, ಅರಮನೆ ಜಂಬೂ ಸವಾರಿ ವೀಕ್ಷಣೆಗೆ 3,000 ರೂ, 2,000 ರೂ, ಪಂಜಿನ ಕವಾಯತು ವೀಕ್ಷಣೆಗೆ 500 ರೂ ನಿಗದಿ ಮಾಡಲಾಗಿತ್ತು. ಹಣ ದುಬಾರಿಯಾದರೂ ಸಹ ಕೇವಲ 20 ನಿಮಿಷದಲ್ಲಿ ಎಲ್ಲಾ ಟಿಕೆಟ್ ಗಳು ಸೋಲ್ಡ್ ಔಟ್ ಆಗಿವೆ. ಹಣ ಎಷ್ಟೇ ದುಬಾರಿಯಾದರೂ ಸಹ ದಸರಾ ಜಂಬೂ ಸವಾರಿ ನೋಡಲು ಜನರಿಗೆ ಸಂಭ್ರಮ, ಕುತೂಹಲವಂತೂ ಕಡಿಮೆಯಾಗಿಲ್ಲ.
ದಸರಾ ವೀಕ್ಷಣೆಗೆ ಲಭ್ಯತೆಗನುಗುಣವಾಗಿ ಬಿಡುಗಡೆ ಮಾಡಲಾಗಿದ್ದ 1000 ಗೋಲ್ಡ್ ಕಾರ್ಡ್, ಜಂಬೂ ಸವಾರಿ ಹಾಗೂ ಪಂಜಿನ ಕವಾಯತು ಪ್ರದರ್ಶನದ ತಲಾ 2000 ಟಿಕೆಟ್‌ಗಳು ಮಾರಾಟವಾಗಿವೆ. ಅರಮನೆ ಆವರಣದಲ್ಲಿ ಜಂಬೂ ಸವಾರಿ ವೀಕ್ಷಣೆಯ 3000 ಮುಖ ಬೆಲೆಯ 400 ಟಿಕೆಟ್, 2000 ಮುಖ ಬೆಲೆಯ 600 ಟಿಕೆಟ್ ಹಾಗೂ ಬನ್ನಿಮಂಟಪದಲ್ಲಿನ ಪಂಜಿನ ಕವಾಯತು ಮೈದಾನದ 500 ರೂ ಮುಖ ಬೆಲೆಯ 1000 ಟಿಕೆಟ್‌ಗಳು ಮಾರಾಟವಾಗಿವೆ.
ಪ್ರತಿವರ್ಷ ದಸರಾ ಜಂಬೂ ಸವಾರಿ ವೀಕ್ಷಣೆಗೆ ರಾಜ್ಯ, ದೇಶದ ಬೇರೆ ಬೇರೆ ಭಾಗಗಳಿಂದಲೂ ಸಹ ಪ್ರವಾಸಿಗರು ದಸರಾ ಜಂಬೂಸವಾರಿ ನೋಡಲು ಆಗಮಿಸುತ್ತಾರೆ. ಜಂಬೂಸವಾರಿಯಲ್ಲಿ ಅಂಬಾರಿ ಹೊತ್ತು ಸಾಗುವ ಕ್ಯಾಪ್ಟನ್ ಅಭಿಮನ್ಯು ಸಾಥ್ ನೀಡುವ ದಸರಾ ಗಜಪಡೆಯ ಆನೆಗಳು, ಸ್ತಬ್ದಚಿತ್ರಗಳು ಕಲಾತಂಡಗಳ ಪ್ರದರ್ಶನ ಎಲ್ಲವನ್ನೂ ಕಣ್ತುಂಬಿಕೊಳ್ಳಲು ಲಕ್ಷಾಂತರ ಮಂದಿ ಆಗಮಿಸುತ್ತಾರೆ.