ನ್ಯೂಡೆಲ್ಲಿ: ದತ್ತಾಂಶ ಅಸಮಾನತೆ ಹೋಗಲಾಡಿಸಲು ತಂತ್ರಜ್ಞಾನದ ಪ್ರಜಾಪ್ರಭುತ್ವೀಕರಣ ಮಾಡಬೇಕಾದ ಅಗತ್ಯವಿದೆ. ಭಾರತದಲ್ಲಿ ಈಗ ಡಿಜಿಟಲೀಕರಣವು ಕ್ರಾಂತಿಕಾರಕ ಬದಲಾವಣೆ ತಂದಿದ್ದು, ಮಿತ್ರರಾಷ್ಟ್ರಗಳೊಂದಿಗೆ ತನ್ನ ಅನುಭವವನ್ನು ಹಂಚಿಕೊಳ್ಳಲು ಸಿದ್ಧವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
ಸೋಮವಾರ ಜಿ20 ಅಭಿವೃದ್ಧಿ ಸಚಿವರನ್ನು ಉದ್ದೇಶಿಸಿ ವರ್ಚುವಲ್ ಭಾಷಣ ಮಾಡಿದ ಅವರು, “ಬಹುಪಕ್ಷೀಯ ಹಣಕಾಸು ಸಂಸ್ಥೆಗಳಲ್ಲಿ ಸುಧಾರಣೆ ತಂದು, ಅಗತ್ಯವಿರುವವರಿಗೆ ಹಣಕಾಸು ನೆರವು ಸಿಗುವಂತೆ ಮಾಡಲು ಅರ್ಹತಾ ಮಾನದಂಡವನ್ನು ವಿಸ್ತರಿಸಬೇಕು ಎಂದರು.
ಸರ್ಕಾರಗಳ ನೀತಿ ನಿರೂಪಣೆ, ಸಂಪನ್ಮೂಲಗಳ ಹಂಚಿಕೆ ಅರ್ಥಪೂರ್ಣವಾಗಬೇಕೆಂದರೆ ಹಾಗೂ ಸಾರ್ವಜನಿಕ ಸೇವೆಗಳ ಅನುಷ್ಠಾನ ಪರಿಣಾಮಕಾರಿಯಾಗಬೇಕೆಂದರೆ ಅತ್ಯುನ್ನತ ಗುಣಮಟ್ಟದ ದತ್ತಾಂಶಗಳು ಮುಖ್ಯ. ಆದರೆ, ದತ್ತಾಂಶಗಳ ಅಸಮಾನತೆಯು ಹೆಚ್ಚುತ್ತಿದ್ದು, ಈ ಅಂತರ ತಗ್ಗಿಸಬೇಕೆಂದರೆ ತಂತ್ರಜ್ಞಾನದ ಪ್ರಜಾಪ್ರಭುತ್ವೀಕರಣ ಆಗಬೇಕು ಎಂದೂ ಅಭಿಪ್ರಾಯಪಟ್ಟರು.