ಬೆಂಗಳೂರು: ಒಂದು ಕಡೆ ಅಧಿಕ ಪಿಂಚಣಿ ಇಲ್ಲ ಎಂದು ಇಪಿಎಫ್ಒ ಅಧಿಕಾರಿಗಳು ಬಿಎಂಟಿಸಿಗೆ ಹಿಂಬರಹ ನೀಡಿದ್ದರೆ ಮತ್ತೊಂದು ಕಡೆ ಬಜೆಟ್ ಅಧಿವೇಶನದಲ್ಲಿ ಕನಿಷ್ಠ ಪಿಂಚಣಿ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಳ್ಳದಿರುವುದಕ್ಕೆ ಇಪಿಎಸ್ ನಿವೃತ್ತರು ಭಾರಿ ಆಕ್ರೋಶ ಹೊರಹಾಕಿದ್ದಾರೆ.
ಲಾಲ್‌ಬಾಗ್ ಆವರಣದಲ್ಲಿ ಭಾನುವಾರ (ಫೆ.2) ಜರುಗಿದ ಇಪಿಎಸ್ ಪಿಂಚಣಿದಾರರ 85ನೇ ಮಾಸಿಕ ಸಭೆಯಲ್ಲೂ ನಿವೃತ್ತರು ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದು ಅಲ್ಲದೆ, ಈ ಸಂಬಂಧ ತಮ್ಮ ಮುಂದಿನ ಹೋರಾಟಕ್ಕೆ ಮುನ್ನುಡಿ ಬರೆದಿದ್ದಾರೆ.

ಹೌದು! ಅನಿರೀಕ್ಷಿತ ಬೆಳವಣಿಗೆಯಲ್ಲಿ ಇಪಿಎಸ್ ನಿವೃತ್ತರು ತೀವ್ರ ಅಘಾತಕ್ಕೊಳಗಾಗಿದ್ದು, ಒಂದು ಕಡೆ ಅಧಿಕ ಪಿಂಚಣಿ ಇಲ್ಲ ಎಂದು ಇಪಿಎಫ್ಒ ಅಧಿಕಾರಿಗಳು ಬಿಎಂಟಿಸಿ ಸಂಸ್ಥೆಗೆ ಹಿಂಬರಹ ನೀಡಿದ್ದು, ಮತ್ತೊಂದು ಕಡೆ ಬಜೆಟ್ ಅಧಿವೇಶನದಲ್ಲಿ ಕನಿಷ್ಠ ಪಿಂಚಣಿ ಬಗ್ಗೆ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ ಎಂದು ಇಪಿಎಸ್ ನಿವೃತ್ತರು ಆಕ್ರೋಶಗೊಂಡಿದ್ದಾರೆ.
ರಾಷ್ಟ್ರಮಟ್ಟದಲ್ಲಿ ಇಪಿಎಸ್ ನಿವೃತ್ತರ ವಿವಿಧ ಬೇಡಿಕೆಗಳಿಗೆ ಸಂಬಂಧಿಸಿದಂತೆ ಸಮರ್ಥವಾಗಿ ಕಮಾಂಡರ್ ಅಶೋಕ್ ರಾವುತ್ ಹಾಗೂ ಇತರೆ ಮುಖಂಡರು ಪ್ರತಿಪಾದಿಸಿದರೂ ಸಹ ಕೇಂದ್ರ ಸರ್ಕಾರದ ಧೋರಣೆಯಿಂದಾಗಿ ಜಯ ಸಿಗದೇ ಇರುವುದಕ್ಕೆ ಸಂಘದ ಅಧ್ಯಕ್ಷ ನಂಜುಂಡೇಗೌಡ ಸಭೆಯಲ್ಲಿ ತೀವ್ರ ಬೇಸರ ವ್ಯಕ್ತಪಡಿಸಿದರು.
ಅಲ್ಲದೆ ನಮ್ಮ ಹೋರಾಟ ಇಷ್ಟಕ್ಕೆ ನಿಲ್ಲುವುದಿಲ್ಲ, ಕಾನೂನು ಸಮರಕ್ಕೆ ಎಲ್ಲರೂ ಸಿದ್ದರಾಗಬೇಕು. ಈ ನಿಟ್ಟಿನಲ್ಲಿ ನಾವು ಇಂದು ಇಲ್ಲಿ ಸೇರಿರುವ ಸಭೆಯಲ್ಲಿ ಮಹತ್ವದ ತೀರ್ಮಾನವನ್ನು ತೆಗೆದುಕೊಂಡು ನಮ್ಮ ಹೋರಅಟವನ್ನು ಇನ್ನಷ್ಟು ತೀವ್ರಗೊಳಿಸುವ ಮೂಲಕ ನಮ್ಮ ನ್ಯಾಯಯುತ ಬೇಡಿಕೆಯನ್ನು ಈಡೇರಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ನಿವೃತ್ತರು ತಮ್ಮ ಇಳಿವಯಸ್ಸಿನಲ್ಲಿ ಸರಿಯಾದ ನಿರ್ಧಾರ ಕೈಗೊಂಡು ತಮ್ಮ ಬದುಕನ್ನು ರೂಪಿಸಿಕೊಳ್ಳಬೇಕು ಹೀಗಾಗಿ ಅಧಿಕ ಪಿಂಚಣಿ ಆಯ್ಕೆ ಮಾಡುವ ಮೊದಲು ನಿವೃತ್ತರು ಜಾಗೃತರಾಗಿ ಮುಂದಿನ ಹೆಜ್ಜೆ ಇಡಬೇಕು, ಒಮ್ಮೆ ತುಂಬಿದ ದುಡ್ಡು ವಾಪಸ್ ಬರುವುದಿಲ್ಲ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಸುಬ್ಬಣ್ಣ ಸಲಹೆ ನೀಡಿದರು.
ಇಷ್ಟೊಂದು ಸಂಕಷ್ಟದ ನಡುವೆಯು ಅಧಿಕ ಸಂಖ್ಯೆಯಲ್ಲಿ ನಿವೃತ್ತರು ಮಾಸಿಕ ಸಭೆಗೆ ಆಗಮಿಸಿರುವುದಕ್ಕೆ, ಚಿಕ್ಕಬಳ್ಳಾಪುರ ಕೆಎಸ್ಆರ್ಟಿಸಿ ಟ್ರಸ್ಟ್ ಅಧ್ಯಕ್ಷ ಬ್ರಹ್ಮಚಾರಿ ಅವರು ಹರ್ಷ ವ್ಯಕ್ತಪಡಿಸಿ, ನಮ್ಮ ಬೇಡಿಕೆಗಳ ಈಡೇರಿಕೆ ಸಂಬಂಧ ದೆಹಲಿ ಯಾತ್ರೆಗೆ ತಾವೆಲ್ಲರೂ ಸಜ್ಜಾಗಬೇಕು ಎಂದು ಮನವಿ ಮಾಡಿದರು.
ರಾಷ್ಟ್ರೀಯ ಸಂಘರ್ಷ ಸಮಿತಿ, ಖಜಾಂಚಿ ಕುಲಕರ್ಣಿ ಮಾತನಾಡಿ, ಒಗ್ಗಟ್ಟಿನಲ್ಲಿ ಬಲವಿದೆ. ನಾವೆಲ್ಲರೂ ಒಟ್ಟಾಗಿ ಹೋದಲ್ಲಿ ಜಯ ಶತಸಿದ್ಧ ಎಂದರು.
ಸಂಘದ ಪದಾಧಿಕಾರಿಗಳಾದ ನಾಗರಾಜು, ಕೃಷ್ಣಮೂರ್ತಿ ಹಾಗೂ ಚಿಕ್ಕಬಳ್ಳಾಪುರ ಕೆಎಸ್ಆರ್ಟಿಸಿ ಟ್ರಸ್ಟ್ ಖಜಾಂಚಿ ರಮೇಶ್ ಹಾಜರಿದ್ದು, ಸಭೆಯ ನಿರ್ವಹಣೆಯನ್ನು ಯಶಸ್ವಿಯಾಗಿ ನಡೆಸಿಕೊಟ್ಟರು. ಸಭೆಯ ನಿರ್ಣಯಗಳ ಬಗ್ಗೆ ಎಲ್ಲ ಸದಸ್ಯರು ಹರ್ಷ ವ್ಯಕ್ತಪಡಿಸಿರುತ್ತಾರೆ.