Search By Date & Category

NEWSಕೃಷಿನಮ್ಮರಾಜ್ಯ

ಅನ್ನದಾತರಿಗೆ ಭರವಸೆ ಬೇಡ ಬೇಡಿಕೆ ಈಡೇರಿಸಿ ಬನ್ನಿ ಧರಣಿ ಕೈ ಬಿಡುತ್ತೇವೆ : ಸಿಎಂ ಸಭೆಯಲ್ಲಿ ರೈತ ಮುಖಂಡರ ಎಚ್ಚರಿಕೆ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: 23 ದಿನದಿಂದ ಆಹೋ ರಾತ್ರಿ ಧರಣಿ ನಿರತ ಕಬ್ಬು ಬೆಳೆಗಾರ ಮುಖಂಡರ ಜತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಚರ್ಚೆ ನಡೆಸಿ ಕಬ್ಬಿನ ದರ ಏರಿಕೆ ಮಾಡುವ ಭರವಸೆ ನೀಡಿ ಧರಣಿ ಕೈಬಿಡುವಂತೆ ಮನವಿ ಮಾಡಿದರು. ಆದರೆ ನಮಗೆ ಭರವಸೆ ಬೇಡ ನಿಮ್ಮ ಹೇಳಿಕೆಯನ್ನು ಕಾರ್ಯರೂಪಕ್ಕೆ ತನ್ನಿ ಎಂದು ಪಟ್ಟು ಹಿಡಿದಿರುವ ರೈತರು ಧರಣಿಯನ್ನು ಮುಂದುವರಿಸಿದ್ದಾರೆ.

ಇಂದು ರಾಜ್ಯ ಕಬ್ಬು ಬೆಳೆಗಾರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್‌ ಸೇರಿದಂತೆ ರೈತ ಮುಖಂಡರೊಂದಿಗೆ ಆಯೋಜಸಿದ್ದ ಸಿಎಂ ಸಭೆಯಲ್ಲಿ ರೈತರ ಸಮಸ್ಯೆಗಳು ಅನಾವರಣಗೊಂಡವು. ಈ ವೇಳೆ ಸಿಎಂ ಬೊಮ್ಮಾಯಿ ಮಾತನಾಡಿ, ಕಬ್ಬಿನ ಉತ್ಪನ್ನಗಳ ಲಾಭ ಹೆಚ್ಚುವರಿ 50 ರೂ. ಮಾಡಿರುವುದನ್ನು ಸರ್ಕಾರ ಸದ್ಯದಲ್ಲೇ ಪುನರ್ ಪರಿಶೀಲನೆ ನಡೆಸಿ ಹೆಚ್ಚಳ ಮಾಡಲಾಗುವುದು. ಇನ್ನು ಕಬ್ಬು ಕಟಾವು ಸಾಗಾಣಿಕೆ ವೆಚ್ಚ ಏರಿಕೆಯಾಗಿರುವ ಬಗ್ಗೆ ವರದಿ ಪಡೆದು ಅದನ್ನು ಕಡಿಮೆ ಮಾಡಿ ರೈತರಿಗೆ ಹೆಚ್ಚು ಬೆಲೆ ಸಿಗುವಂತಾ ತೀರ್ಮಾನವನ್ನು ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಅದಷ್ಟೇ ಅಲ್ಲದೆ ಕಬ್ಬುದರ ಏರಿಕೆಗೆ ಸಮ್ಮತಿ ಸೂಚಿಸಿದರು. ಅಲ್ಲದೆ ಕಾರ್ಖಾನೆಗಳಲ್ಲಿ ನಡೆಯುತ್ತಿರುವ ತೂಕದಲ್ಲಿ ಮೋಸ ತಡೆಗಟ್ಟಲು ಎಲ್ಲ ಸಕ್ಕರೆ ಕಾರ್ಖಾನೆಗಳ ಮುಂದೆ ಸರ್ಕಾರದ ವತಿಯಿಂದ ಎಪಿಎಂಸಿಗಳ ಮೂಲಕ ತೂಕದ ಯಂತ್ರ ಸ್ಥಾಪಿಸಲಾಗುವುದು. ಈ ಎಲ್ಲವನ್ನು ಅತೀ ಶೀಘ್ರದಲ್ಲೇ ಕಾರ್ಯರೂಪಕ್ಕೆ ತರುತ್ತೇವೆ. ಆದಕಾರಣ ತಾವು ಅಹೋರಾತ್ರಿ ಧರಣಿಯನ್ನು ಕೈ ಬಿಡಬೇಕು ಎಂದು ಮನವಿ ಮಾಡಿದರು.

ಆದರೆ ಮುಖ್ಯಮಂತ್ರಿಗಳ ಮನವಿಯನ್ನು ನಯವಾಗಿಯೆ ತಿರಸ್ಕರಿಸಿದ ರೈತ ಮುಖಂಡರು ಮೊದಲು ನೀವು ಭರವಸೆ ಕೊಡುವುದನ್ನು ನಿಲ್ಲಿಸಿ, ರೈತರಿಗೆ ಸರಿಯಾಗಿ ಬರಬೇಕಿರುವುದಕ್ಕೆ ಆದ್ಯತೆ ನೀಡಿ, ಈಗ ಈ ಸಭೆಯಲ್ಲಿ ತಿಳಿಸಿರುವಂತೆ ಎಲ್ಲವನ್ನು ಕಾರ್ಯರೂಪಕ್ಕೆ ತನ್ನಿ ನಾವು ಧರಣಿ ನಿಲ್ಲಿಸುತ್ತೇವೆ. ಅಲ್ಲಿಯವರೆಗೂ ನಾವು ಧರಣಿ ಕೈಬಿಡುವುದಿಲ್ಲ ಎಂದು ಪಟ್ಟು ಹಿಡಿದು ಧರಣಿಯನ್ನು ಮುಂದುವರಿಸುತ್ತಿದ್ದಾರೆ.

ಇನ್ನು ಸಭೆಯಲ್ಲಿ ಆರಂಭವಾದ ಚರ್ಚೆ ವೇಳೆ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಮಾತನಾಡಿ, ಕಬ್ಬು ಬೆಳೆಗಾರರು ನಿರಂತರವಾಗಿ 23 ದಿನದಿಂದ ಧರಣಿ ನಡೆಸುತ್ತಿದ್ದರೂ ಸರ್ಕಾರದಿಂದ ಗಂಭೀರ ಚಿಂತನೆ ನಡೆಯುತ್ತಿಲ್ಲ, ಈಗಿನ ಕಬ್ಬಿನ ಎಫ್ಆರ್ ಪಿ ದರ ಪ್ರಕಾರ ರೈತರಿಗೆ ಉತ್ಪಾದನ ವೆಚ್ಚವು ಬರುತ್ತಿಲ್ಲ ಎಂದು ವಿವರಿಸಿದರು.

ಇನ್ನು ಮುಂದುವರಿದು ಮಾತನಾಡಿದ ಅವರು, ಕಬ್ಬು ಕಟಾವು ಕೂಲಿ ಸಾಗಾಣಿಕೆ ವೆಚ್ಚವನ್ನು ಕಾರ್ಖಾನೆಗಳು ಮನಬಂದಂತೆ ಏರಿಕೆ ಮಾಡಿವೆ. ಅದಕ್ಕೆ ಕಡಿವಾಣ ಹಾಕಿದರೆ ರೈತರಿಗೆ ಟನ್‌ಗೆ 150 ರೂ. ಹೆಚ್ಚುವರಿ ಉಳಿಯುತ್ತದೆ. ಕಾರ್ಖಾನೆಗಳಿಂದ ಕೊಡಿಸಲು ಸಾಧ್ಯವಾಗದಿದ್ದರೆ ಸರ್ಕಾರವೇ ಹೆಚ್ಚುವರಿ ದರ ನೀಡಿ ರೈತರ ರಕ್ಷಣೆ ಮಾಡಿ. ನಾವು ರಾಜಕಾರಣ ಮಾಡಲು ಹೋರಾಟ ಮಾಡುತ್ತಿಲ್ಲ, ಶಾಸಕರು, ಸಂಸದರಾಗುವ ಸರ್ಕಸ್ ಮಾಡುತ್ತಿಲ್ಲ, ರೈತರ ಬದುಕಿನ ಬಗ್ಗೆ ಸರ್ಕಾರದ ಗಮನ ಸೆಳೆಯಲು ಚಳವಳಿ ಮಾಡಲಾಗುತಿದೆ ಎಂದು ಮನವರಿಕೆ ಮಾಡಿದರು.

ಇನ್ನು ರಾಜ್ಯದ 50 ರಷ್ಟು ಕಬ್ಬು ಬೆಳೆಯುವ ಜಿಲ್ಲೆಗಳಾದ ಬೆಳಗಾವಿ, ಬಾಗಲಕೋಟೆ ಸೇರಿದಂತೆ ರಾಜ್ಯದ ಕಬ್ಬು ಬೆಳೆಗಾರರ ಸಮಸ್ಯೆ ಬಗೆಹರಿಸಲು ಗಂಭೀರ ಚಿಂತನೆ ನಡೆಸಿ ಅದನ್ನು ಕಾರ್ಯರೂಪಕ್ಕೆ ತನ್ನಿ ನಾವು ಧರಣಿ ಕೈ ಬಿಡುತ್ತೇವೆ ಅದನ್ನು ಬಿಟ್ಟು ಭರವಸೆಗಳನ್ನು ಕೊಟ್ಟು ಸುಮ್ಮನಾಗುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ಸಿಎಂ ಅವರಿಗೆ ಖಡಕ್‌ ಆಗಿಯೇ ಎಚ್ಚರಿಕೆ ನೀಡಿದರು.

ಈ ವೇಳೆ ಮತ್ತೆ ಮಾತನಾಡಿದ ಮುಖ್ಯಮಂತ್ರಿಗಳು ಸಕ್ಕರೆ ಕಾರ್ಖಾನೆಗಳು ಸರ್ಕಾರದ ಸವಲತ್ತುಗಳನ್ನು ಪಡೆಯುತ್ತಿವೆ. ಅದಕ್ಕಾಗಿ ಸರ್ಕಾರದ ಆದೇಶಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ನಿಮ್ಮ ಬೇಡಿಕೆಗೆ ಸರ್ಕಾರ ಸ್ಪಂದಿಸುತ್ತದೆ ಎಂದು ಮತ್ತದೆ ಭರವಸೆ ನೀಡಿದರು.

ಸಿಎಂ ಆವರ ಭರವಸೆಗೆ ಸೊಪ್ಪುಹಾಕದ ರೈತ ಮುಖಂಡರು ಯಾವುದೇ ಕಾರಣಕ್ಕೂ ಅಹೋರಾತ್ರಿ ಧರಣಿ ನಿಲ್ಲಿಸುವುದಿಲ್ಲ ಈ ರೀತಿ ರೈತರ ಬಗ್ಗೆ ಸರ್ಕಾರ ತಾರತಮ್ಯ ಧೋರಣೆ ಅನುಸರಿಸುವುದನ್ನು ಕೈ ಬಿಟ್ಟು ಆಗಬೇಕಿರುವ ಕೆಲಸವನ್ನು ಮಾಡಿ ಎಂದು ಹೇಳಿ ಸಭೆಯಿಂದ ಹೊರನಡೆದರು.

ಸಭೆಯಲ್ಲಿ ಆರೋಗ್ಯ ಸಚಿವ ಸುಧಾಕರ್, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್, ಡಿಸಿಪಿ ಲಕ್ಷ್ಮಣ್ ನಿಂಬರಗಿ ರೈತ ಮುಖಂಡರಾದ ವೀರನಗೌಡ ಪಾಟೀಲ್, ಕುಮಾರ್ ಬುಬಾಟಿ, ಅಂಜನಪ್ಪ ಪೂಜಾರ, ಗುರುಸಿದ್ದಪ್ಪ ಕೋಟಗಿ ಅತ್ತಹಳ್ಳಿ ದೇವರಾಜ್ ಇದ್ದರು.

Leave a Reply

error: Content is protected !!