NEWSನಮ್ಮಜಿಲ್ಲೆನಮ್ಮರಾಜ್ಯ

ಮೇ 27ರಂದು ಕನಿಷ್ಠ ₹7,500 ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಇಪಿಎಸ್‌ ಪಿಂಚಣಿದಾರರ ಪ್ರತಿಭಟನೆ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕನಿಷ್ಠ ₹7,500 ನಿಗದಿ ಪಡಿಸಬೇಕು ಎಂಬುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಇದೇ ಮೇ 27ರಂದು ಬೆಳಗ್ಗೆ 10:30ಕ್ಕೆ “ನಿಧಿ ಆಪ್ಕೆ ನಿಕಟ್” ಇಪಿಎಸ್ ಪಿಂಚಣಿದಾರರು ವಿನೂತನ ಪ್ರತಿಭಟನೆಯನ್ನು ಪ್ರಾದೇಶಿಕ ಭವಿಷ್ಯ ನಿಧಿ ಕಚೇರಿ ಆವರಣದಲ್ಲಿ ಹಮ್ಮಿಕೊಂಡಿದ್ದಾರೆ.

ಈ ಸಂಬಂಧ ಬಿಎಂಟಿಸಿ & ಕೆಎಸ್ಆರ್‌ಟಿಸಿ ನಿವೃತ್ತ ನೌಕರರ ಸಂಘಟನೆಯ ಅಧ್ಯಕ್ಷ ನಂಜುಂಡೇಗೌಡ ಅವರು ಪತ್ರಿಕಾ ಹೇಳಿಕೆ ನೀಡಿದ್ದು, ರಾಷ್ಟ್ರೀಯ ಸಂಘರ್ಷ ಸಮಿತಿ, ಬಿಎಂಟಿಸಿ & ಕೆಎಸ್‌ಆರ್‌ಟಿಸಿ ಹಾಗೂ ಕೆಎಸ್‌ಆರ್‌ಟಿಸಿ ಕ್ಷೇಮಾಭಿವೃದ್ಧಿ ಟ್ರಸ್ಟ್, ಚಿಕ್ಕಬಳ್ಳಾಪುರ ವತಿಯಿಂದ ಇಪಿಎಸ್ ನಿವೃತ್ತರ ಪ್ರತಿಭಟನಾ ಹಾಗೂ ಮನವಿ ಸಲ್ಲಿಸುವ ಕಾರ್ಯಕ್ರಮವನ್ನು ನಗರದ ರಿಚ್ಮಂಡ್ ವೃತ್ತದಲ್ಲಿರುವ ಪ್ರಾದೇಶಿಕ ಭವಿಷ್ಯ ನಿಧಿ ಕಚೇರಿ ಆವರಣದಲ್ಲಿ ಆಯೋಜಿಸಲಾಗಿದೆ.

ನಮ್ಮ ಈ ಪ್ರತಿಭಟನೆ ಕೂಗು ದೆಹಲಿಗೆ ತಲುಪಬೇಕು ಹಾಗಾಗಿ ಕನಿಷ್ಠ ಹೆಚ್ಚುವರಿ ಪಿಂಚಣಿ ಹಾಗೂ ಅಧಿಕ ಪಿಂಚಣಿ ಈ ಎರಡು ಅಂಶಗಳಿಗೆ ಸಂಬಂಧಿಸಿದಂತೆ ಪ್ರತಿಭಟನೆ ನಡೆಸುತ್ತಿದ್ದು, ಎನ್ಎಸಿ ರಾಜ್ಯಾಧ್ಯಕ್ಷ ಜಿಎಸ್ಎಮ್ ಸ್ವಾಮಿ, ಇತರೆ ಮುಖಂಡರು ಹಾಗೂ ನಮ್ಮ ಸಂಘದ ಪದಾಧಿಕಾರಿಗಳು, ಚಿಕ್ಕಬಳ್ಳಾಪುರ ಕೆಎಸ್‌ಆರ್‌ಟಿಸಿ ಕ್ಷೇಮಾಭಿವೃದ್ಧಿ ಟ್ರಸ್ಟ್ ನ ಪದಾಧಿಕಾರಿಗಳು, ಸದಸ್ಯರು, ವಿವಿಧ ಸಂಘಟನೆಗಳ ಎಲ್ಲ ಇಪಿಎಸ್ ನಿವೃತ್ತರು ಭಾಗವಹಿಸಲಿದ್ದಾರೆ.

ಅಲ್ಲದೆ ಮುಖಂಡರು ಪ್ರಚಲಿತ ಸಂಗತಿ ಹಾಗೂ ನಮ್ಮ ಮುಂದಿನ ಹೋರಾಟದ ರೂಪುರೇಷೆ ಬಗ್ಗೆ ಈ ಪ್ರತಿಭಟನೆಯನ್ನುದ್ದೇಶಿ ಮಾತನಾಡುವ ವೇಳೆ ಪ್ರಸ್ತುತಪಡಿಸಲಿದ್ದಾರೆ. ಹೀಗಾಗಿ ಇಪಿಎಸ್ ನಿವೃತ್ತರ ಈ ಎಲ್ಲ ಬೇಡಿಕೆಗಳ ಈಡೇರಿಕೆಗಾಗಿ ಅಂದು ಹಮ್ಮಿಕೊಂಡಿರುವ ಪ್ರತಿಭಟನೆಯಲ್ಲಿ ಎಲ್ಲ ಇಪಿಎಸ್ ನಿವೃತ್ತರು ಭಾಗವಹಿಸಬೇಕೆಂದು ನಂಜುಂಡೇಗೌಡ ಮನವಿ ಮಾಡಿದ್ದಾರೆ.

ನಮ್ಮ ಹೋರಾಟ ನಿಲ್ಲದು: ಇನ್ನು ಇಪಿಎಸ್ ನಿವೃತ್ತರ ಪರ ಹೋರಾಟ ಕನಿಷ್ಠ ಹೆಚ್ಚುವರಿ ಪಿಂಚಣಿ ಹಾಗೂ ಅಧಿಕ ಪಿಂಚಣಿ (ನ್ಯಾಯಾಲಯದ ತೀರ್ಪಿನ ಪ್ರಕಾರ) ಎರಡೂ ಅಂಶಗಳು ಈಡೇರುವವರೆಗೂ ನಮ್ಮ ಹೋರಾಟ ನಿಲ್ಲದು ಎಂದು ನಂಜುಂಡೇಗೌಡ ತಿಳಿಸಿದ್ದಾರೆ.

ಇನ್ನು ಪಾರ್ಲಿಮೆಂಟ್ ಮುಂಗಾರು ಅಧಿವೇಶನ ಜುಲೈ 02, 2025 ರಿಂದ ಪ್ರಾರಂಭವಾಗಲಿದ್ದು, ಈ ದಿಸೆಯಲ್ಲಿ ನಾವೆಲ್ಲರೂ ಸಂಘಟಿತರಾಗಿ ಹೋರಾಟವನ್ನು ತೀವ್ರಗೊಳಿಸುವುದು ಅವಶ್ಯಕವಾಗಿದೆ. ನಮ್ಮ ಹೋರಾಟದ ಸಂದೇಶ ದೆಹಲಿ ತಲುಪಬೇಕು. ಈ ಹೋರಾಟಕ್ಕೆ ಇಂದಲ್ಲ ನಾಳೆ ಜಯ ಶತಸಿದ್ಧ. ಈ ದೃಷ್ಟಿಯಿಂದ, ಅತಿ ಹೆಚ್ಚಿನ ಸಂಖ್ಯೆಯಲ್ಲಿ ಎಲ್ಲ ಇಪಿಎಸ್ ನಿವೃತ್ತರು ಭಾಗವಹಿಸಬೇಕು ಎಂದು ವಿನಂತಿಸಿದ್ದಾರೆ.

ನಮ್ಮ ರಾಜ್ಯದವರೇ ಆದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಪಾರ್ಲಿಮೆಂಟರಿ ಕಮಿಟಿ ಅಧ್ಯಕ್ಷರಾಗಿದ್ದು, ಈ ಕಮಿಟಿಯು ಕೇಂದ್ರ ಸರ್ಕಾರಕ್ಕೆ ಇಪಿಎಸ್ ನಿವೃತ್ತರ ಪರವಾಗಿ ಪ್ರಸ್ತಾವನೆಯನ್ನು ಈಗಾಗಲೇ ಸಲ್ಲಿಸಿದೆ. ಈಗ ನೀಡುತ್ತಿರುವ ಕನಿಷ್ಠ ಪಿಂಚಣಿ ₹1,000 ದಿಂದ ₹7,500ಗೆ ನಿಗದಿಪಡಿಸಿ, ಬೆಲೆ ಏರಿಕೆಗೆ ಅನುಗುಣವಾಗಿ, ಭತ್ಯೆ ಸೇರಿಸಿ, ಪಿಂಚಣಿ ನೀಡಬೇಕೆಂದು ಶಿಫಾರಸು ಮಾಡಿದೆ. ಪ್ರಸ್ತಾವನೆ ಕೇಂದ್ರ ಸರ್ಕಾರದ ಉನ್ನತ ಸಚಿವರ ಕಾರ್ಯಾಲಯದಲ್ಲಿ ಸಕಾರಾತ್ಮಕ ಪರಿಶೀಲನೆಯಲ್ಲಿದೆ.

ಬದುಕಿನ ಹೋರಾಟದಲ್ಲಿ ನಿತ್ರಾಣಗೊಂಡರು ಶ್ರೇಷ್ಠರಿವರು: ದೇಶದ ಲಕ್ಷಾಂತರ ನಿವೃತ್ತರು ವಯೋ ಸಹಜ ಕಾಯಿಲೆ, ತಮ್ಮ ಬದುಕಿನ ಹೋರಾಟದಲ್ಲಿ ನಿತ್ರಾಣಗೊಂಡಿದ್ದು, ಭೌತಿಕವಾಗಿ ಹೋರಾಟದಲ್ಲಿ ಭಾಗವಹಿಸಲು ಸಾಧ್ಯವಾಗದೇ ಇದ್ದು, ನಮ್ಮ ಹೋರಾಟಕ್ಕೆ ಶುಭ ಹಾರೈಸುವ ಇವರು ಶ್ರೇಷ್ಠರು.

ತನ್ನ ಹರಿತವಾದ ಲೇಖನಿಯ ಮೂಲಕ ಪ್ರಧಾನಮಂತ್ರಿಯವರ ಕಾರ್ಯಾಲಯವು ಸೇರಿದಂತೆ, ಕೇಂದ್ರ ಸರ್ಕಾರದ ಮಂತ್ರಿ ಮಹೋದಯರಿಗೆ, ನಿವೃತ್ತರ ಸಂಕಷ್ಟಗಳ ಬಗ್ಗೆ ಪಟ್ಟಿ ಮಾಡಿ, ನೂರಾರು ಮನವಿ ಪತ್ರಗಳನ್ನು ಸಲ್ಲಿಸಿರುವ, ಶಾಮರಾವ್, ಬೀದರ್ ಅವರು ಸಹ ಶ್ರೇಷ್ಠರು. ಎಲೆಮರೆಯ ಕಾಯಿಯಂತಿದ್ದು, ಸರ್ವೋಚ್ಚ ನ್ಯಾಯಾಲಯದ ತೀರ್ಪುಗಳನ್ನು ಅರ್ಥೈಸಿಕೊಂಡು, ವಿಶ್ಲೇಷಿಸಿ, ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ನಮಗೆಲ್ಲರಿಗೂ ಉಣ ಬಡಿಸುತ್ತಿರುವ, ಪ್ರವೀಣ್ ಕೊಹ್ಲಿ ಅವರೂ ಸಹ ಸರ್ವಶ್ರೇಷ್ಠರು.

ಇತ್ತೀಚೆಗೆ ಮತ್ತೊಂದು ಸಂಘಟನೆಯ ಮುಖಂಡರು, ಎಲ್ಲ ಇಪಿಎಸ್ ನಿವೃತ್ತರ ಪರ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳಿಗೆ ಮನವಿ ಪತ್ರ ಉಲ್ಲೇಖಿಸಿದ್ದು, ಸುನಿಲ್ ಕುಮಾರ್ ತೀರ್ಪನ್ನು ಕೂಡಲೇ ಪರಾಮರ್ಶಿಸಿ, ನಮಗೆಲ್ಲರಿಗೂ ನ್ಯಾಯ ಒದಗಿಸಿ ಕೊಡಬೇಕೆಂದು ಮನವಿ ಮಾಡಿದ್ದು, ನಿವೃತ್ತರ ಪರ ನಡೆಸಿರುವ ಇವರ ಹೋರಾಟ ಅನನ್ಯ.

ರಾಷ್ಟ್ರೀಯ ಸಂಘರ್ಷ ಸಮಿತಿಯನ್ನು ಸ್ಥಾಪಿಸಿ, ದೇಶಾದ್ಯಂತ ಸಂಚರಿಸಿ, ಇಪಿಎಸ್ ನಿವೃತ್ತರಲ್ಲಿ ಹರಿವು ಮತ್ತು ಜಾಗೃತಿ ಮೂಡಿಸಿ, ನಮ್ಮ ಬೇಡಿಕೆಗಳ ಬಗ್ಗೆ ರಾಷ್ಟ್ರಮಟ್ಟದಲ್ಲಿ ಪ್ರತಿಪಾದಿಸುತ್ತಿರುವ, ಕಮಾಂಡರ್ ಅಶೋಕ್ ರಾವುತ್ ಅವರೂ ಸರ್ವ ಶ್ರೇಷ್ಠರು. ದೇಶಾದ್ಯಂತ ಇನ್ನು ಹಲವಾರು ಸಮರ್ಪಣಾ ಭಾವದ ಮುಖಂಡರಿದ್ದು, ಬರೆಯುತ್ತಾ ಹೋದರೆ ಪುಟಗಳೇ ಸಾಲುವುದಿಲ್ಲ.

ಹೀಗಾಗಿ ಇವರ ಹೋರಾಟದಲ್ಲಿ ನಾವು ಭಾಗವಹಿಸಿ ನಮ್ಮ ನಿವೃತ್ತರ ಹಕ್ಕನ್ನು ಪಡೆಯುವ ಮೂಲಕ ಈ ಇಳಿವಯಸ್ಸಿನಲ್ಲಿ ನೆಮ್ಮದಿಯ ಜೀವನವನ್ನು ಸಾಧ್ಯವಾದಷ್ಟು ಸಾಗಿಸಲು ಪಣತೊಡೋಣ ಎಂದು ಎಲ್ಲ ಇಪಿಎಸ್‌ ನಿವೃತ್ತರು ಈ ಹೋರಾಟದಲ್ಲಿ ಭಾಗವಹಿಸಬೇಕು ಎಂದು ಕರೆ ನೀಡಿದ್ದಾರೆ.

Megha
the authorMegha

Leave a Reply

error: Content is protected !!