Search By Date & Category

NEWSಆರೋಗ್ಯದೇಶ-ವಿದೇಶ

2030 ರೊಳಗೆ ಕುಷ್ಠರೋಗ ಮುಕ್ತ ದೇಶವಾಗಿಸಲು ಎಲ್ಲರೂ ಪಣತೊಡಬೇಕು: ಡಾ. ವಿಜೇಂದ್ರ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು ಗ್ರಾಮಾಂತ: ಭಾರತ ದೇಶವನ್ನು 2030 ರೊಳಗೆ ಕುಷ್ಠರೋಗ ಮುಕ್ತ ದೇಶವನ್ನಾಗಿಸಲು ಎಲ್ಲರೂ ಪಣತೊಡಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಬಿ.ಕೆ.ವಿಜೇಂದ್ರ ತಿಳಿಸಿದರು.

ಜಿಲ್ಲೆಯಲ್ಲಿ 2023 ರ ಜನವರಿ 30 ರಿಂದ ಫೆಬ್ರವರಿ 13 ರವರೆಗೆ ಹಮ್ಮಿಕೊಳ್ಳಲಾಗುತ್ತಿರುವ “ಸ್ಪರ್ಶ್ ಕುಷ್ಠರೋಗ ಜಾಗೃತಿ ಅಭಿಯಾನ” ಕಾರ್ಯಕ್ರಮದ ಹಿನ್ನಲೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಚೇರಿಯಲ್ಲಿಂದು ಭಿತ್ತಿಪತ್ರಗಳು, ಕರಪತ್ರಗಳು ಹಾಗೂ ಬ್ಯಾನರ್‌ಗಳನ್ನು ಬಿಡುಗಡೆಗೊಳಿಸಿ ಮಾತನಾಡಿದರು.

ಕುಷ್ಠರೋಗದ ವಿರುದ್ಧ ಹೋರಾಡೋಣ ಮತ್ತು ಕುಷ್ಠರೋಗವನ್ನು ಇತಿಹಾಸವಾಗಿಸೋಣ ಎಂಬ ಘೋಷಣೆಯೊಂದಿಗೆ ಜಿಲ್ಲೆಯಲ್ಲಿ 2023ರ ಜನವರಿ 30 ರಿಂದ ಫೆಬ್ರವರಿ 13ರವರೆಗೆ ಸ್ಪರ್ಶ್ ಕುಷ್ಠರೋಗ ಜಾಗೃತಿ ಅಭಿಯಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಕುಷ್ಠರೋಗವು ಸಾಂಕ್ರಾಮಿಕ ರೋಗವಾಗಿದ್ದು, ಸಾರ್ವಜನಿಕರು ಇದಕ್ಕೆ ಭಯಪಡುವ ಅಗತ್ಯವಿಲ್ಲ. ಈ ಜಾಗೃತಿ ಅಭಿಯಾನದ ಸಂದರ್ಭದಲ್ಲಿ ಶಾಲಾ ಮಕ್ಕಳ ತಪಾಸಣೆ, ಉಪಕೇಂದ್ರ ಮೂಲಕ ಗ್ರಾಮದಲ್ಲಿ ಜಾಗೃತಿ ಜಾಥಾ ಆಯೋಜಿಸುವುದಲ್ಲದೇ ಕುಷ್ಠ ರೋಗ ನಿರ್ಮೂಲನೆಯ ಕುರಿತು ಎಲ್ಲರಿಗೂ ಪ್ರತಿಜ್ಞಾವಿಧಿ ಬೋಧಿಸಲಾಗುವುದು ಎಂದರು.

ಪಾದಗಳು, ಬೆರಳುಗಳ ದೌರ್ಬಲ್ಯ, ಕಣ್ಣು ಮುಚ್ಚುವಲ್ಲಿ ತೊಂದರೆ, ವ್ಯಕ್ತಿಯ ದೇಹದ ಮೇಲೆ ಸ್ವರ್ಶಜ್ಞಾನ ವಿಲ್ಲದ ಮಚ್ಚೆಗಳು, ತ್ವಚೇಯ ಮೇಲೆ ಕೆಂಪಾದ ಬಾವು. ನೋವಿನಿಂದ ಕೂಡಿದ ಊದಿಕೊಂಡ ನರಗಳು, ವ್ಯಕ್ತಿಯ ದೇಹದ ಯಾವುದೇ ಭಾಗದಲ್ಲಿ ತಿಳಿ ಬಿಳಿ ಅಥವಾ ತಾಮ್ರ ವರ್ಣದ ಸ್ವರ್ಶಜ್ಞಾನವಿಲ್ಲದ ಮಚ್ಚೆಗಳು ಕಂಡುಬಂದಲ್ಲಿ ಸಮೀಪದ ಸರ್ಕಾರಿ ಆರೋಗ್ಯ ಕೇಂದ್ರಕ್ಕೆ ತೆರಳಿ ಪರೀಕ್ಷಿಸಿಕೊಳ್ಳಬೇಕು ಎಂದು ತಿಳಿಸಿದರು.

ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ. ಶಾಂತಲಾ ಬಿ.ಎನ್.  ಮಾತನಾಡಿ, ಜಿಲ್ಲೆಯಲ್ಲಿ 2022-23ರ ಸಾಲಿನಲ್ಲಿ ಪ್ರಸ್ತುತ 19 ಕುಷ್ಠರೋಗ ಪ್ರಕರಣಗಳು ಕಂಡು ಬಂದಿದ್ದು, 10 ಕುಷ್ಠರೋಗ ಪ್ರಕರಣಗಳು ಚಿಕಿತ್ಸೆಯಿಂದ ಗುಣಹೊಂದಿರುತ್ತವೆ. ಒಟ್ಟು 24 ಕುಷ್ಠರೋಗ ಪ್ರಕರಣಗಳು ಚಿಕಿತ್ಸೆಯಲ್ಲಿ ಇರುತ್ತವೆ ಎಂದು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ. ಸೀಮಾ ರುದ್ರಪ್ಪ ಮಾಬಳೆ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳು ಮತ್ತು ಆರೋಗ್ಯ ಸಿಬ್ಬಂದಿ ಉಪಸ್ಥಿತರಿದ್ದರು.

Leave a Reply

error: Content is protected !!