ಬೆಂಗಳೂರು: ಕಾಂಗ್ರೆಸ್ ನ 5 ಗ್ಯಾರಂಟಿಗಳ ಷರತ್ತು ಬದ್ಧ ಯೋಜನೆಗಳಿಂದಾಗಿ ಅವರ ನಕಲಿ ಬಣ್ಣ ರಾಜ್ಯದ ಜನತೆಯ ಮುಂದೆ ಬಟಾ ಬಯಲಾಗಿದೆ ಎಂದು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಕಿಡಿಕಾರಿದ್ದಾರೆ.
ರಾಜ್ಯ ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿಗಳ ಷರತ್ತುಗಳ ವಿರುದ್ಧ ಆಮ್ ಆದ್ಮಿ ಪಕ್ಷ ಸ್ವಾತಂತ್ರ್ಯ ಉದ್ಯಾನವನದಲ್ಲಿ ಇಂದು (ಜೂ.9) ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನೆ ವೇಳೆ ಮಾತನಾಡಿದರು.
ಆಮ್ ಆದ್ಮಿ ಪಕ್ಷದ ದೆಹಲಿ ಮತ್ತು ಪಂಜಾಬ್ ಮಾದರಿಯನ್ನು ನಕಲು ಮಾಡಿ ಭರವಸೆಗಳನ್ನು ನೀಡಿ ವಾಮ ಮಾರ್ಗದಿಂದ ಅಧಿಕಾರಕ್ಕೆ ಬಂದಿದೆ. ಜತೆಗೆ ಅಧಿಕಾರ ಬಂದ ಈಗ ಕಾಂಗ್ರೆಸ್ ತಾನು ನೀಡಿದ ಭರವಸೆಗಳನ್ನು ಈಡೇರಿಸಲಾಗದೆ ನಾನಾ ಷರತ್ತುಗಳನ್ನು ವಿಧಿಸುವ ಮೂಲಕ ನುಡಿದಂತೆ ನಡೆದಿದ್ದೇವೆ ಎಂದು ಸುಳ್ಳು ಹೇಳುತ್ತಾ ರಾಜ್ಯದ ಜನತೆಗೆ ಮಹಾ ಮೋಸ ಮಾಡುತ್ತಿದೆ ಆಕ್ರೋಶವನ್ನು ವ್ಯಕ್ತಪಡಿಸಿದರು.
“ಸರ್ಕಾರದ ಗೃಹಜೋತಿ, ಗೃಹಲಕ್ಷ್ಮೀ ಹಾಗೂ ಇನ್ನಿತರ ಗ್ಯಾರಂಟಿಗಳು ಬಡವರನ್ನು ಮತ್ತಷ್ಟು ಬಡವರನ್ನಾಗಿಸುವ ಕಾರ್ಯಕ್ರಮಗಳೇ ಹೊರತು ಮತ್ತೇನು ಅಲ್ಲ. ನಾವು ದೆಹಲಿಯಲ್ಲಿ ಹಾಗೂ ಪಂಜಾಬ್ ರಾಜ್ಯಗಳಲ್ಲಿ ಅತ್ಯಂತ ವೈಜ್ಞಾನಿಕವಾಗಿ ಈ ಎಲ್ಲ ಗ್ಯಾರಂಟಿಗಳನ್ನು ಈಡೇರಿಸುತಿದ್ದೇವೆ.
ನಮ್ಮ ಶಿಕ್ಷಣ ಹಾಗೂ ಆರೋಗ್ಯಕ್ರಾಂತಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾದರಿ ಆಗಿದೆ. ಆದರೆ ಇಲ್ಲಿನ ಕಾಂಗ್ರೆಸ್ ಸರ್ಕಾರ ಸರ್ಕಾರಿ ಶಿಕ್ಷಣ ಹಾಗೂ ಆರೋಗ್ಯ ವ್ಯವಸ್ಥೆಯ ಬಗ್ಗೆ ಮಾತನಾಡುತ್ತಲೇ ಇಲ್ಲ, ಸರ್ಕಾರದ ಮಂತ್ರಿಗಳಿಗೆ ಅವರ ಗ್ಯಾರಂಟಿಗಳ ಬಗ್ಗೆ ಅವರಿಗೆ ಗ್ಯಾರಂಟಿ ಇಲ್ಲ. ಪ್ರತಿಯೊಬ್ಬರೂ ದಿನಕ್ಕೊಂದು ಹೇಳಿಕೆಗಳನ್ನು ನೀಡುತ್ತಾ ಅತ್ಯಂತ ಗೊಂದಲವನ್ನು ಉಂಟು ಮಾಡುತ್ತಿರುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿ ಎಂದು ಪೃಥ್ವಿ ರೆಡ್ಡಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಸಿಟ್ಟು ಹೊರಹಾಕಿದರು.
ಪಕ್ಷದ ಕಾರ್ಯಾಧ್ಯಕ್ಷ ಮೋಹನ್ ದಾಸರಿ ಮಾತನಾಡಿ, ಇಂದು ಕೇವಲ ಸಾಂಕೇತಿಕವಾಗಿ ಪ್ರತಿಭಟನೆಯನ್ನು ಮಾಡಿದ್ದೇವೆ, ಸರ್ಕಾರ ಇದೇ ರೀತಿಯ ಸೋಗಲಾಡಿತನವನ್ನು ಪ್ರದರ್ಶಿಸಿದಲ್ಲಿ ರಾಜ್ಯಾದ್ಯಂತ ತೀವ್ರ ಪ್ರತಿಭಟನೆಗೆ ಇಳಿಯಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಮಾಧ್ಯಮ ಸಂಚಾಲಕ ಜಗದೀಶ್ ವಿ. ಸದಂ, ಉಷಾ ಮೋಹನ್, ಜಗದೀಶ್ ಚಂದ್ರ, ಸೀತಾರಾಮ್ ಗುಂಡಪ್ಪ, ಗೋಪಾಲ್, ರಾಜಶೇಖರ್ ದೊಡ್ಡಣ್ಣ, ಉಮೇಶ್ ಪಿಳ್ಳೆ ಗೌಡ, ಗೋಪಿನಾಥ್, ಶಶಿಕುಮಾರ್ ಆರಾಧ್ಯ, ಮಹಾಲಕ್ಷ್ಮೀ, ಪುಷ್ಪಾ ಕೇಶವ್ ಸೇರಿದಂತೆ ನೂರಾರು ಕಾರ್ಯಕರ್ತರುಗಳು ಭಾಗವಹಿಸಿದ್ದರು.