ಬೆಂಗಳೂರು: ಖ್ಯಾತ ಆರೋಗ್ಯ ತಜ್ಞ, ಫೆಟುರಾ ಅಗ್ರಿ ಬ್ಯುಸಿನೆಸ್ ನಿರ್ದೇಶಕ, ಸ್ವಾಭಿಮಾನಿ ಜಿವಿಎಸ್ ಬಳಗದ ಸಂಸ್ಥಾಪಕ ಡಾ. ಮಧು ಸೀತಪ್ಪ ಅವರು ಆಮ್ ಆದ್ಮಿ ಪಾರ್ಟಿಗೆ ಸೇರ್ಪಡೆಯಾದರು.
ಬೆಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಕ್ಷದ ರಾಜ್ಯ ಚುನಾವಣಾ ಉಸ್ತುವಾರಿ ದಿಲೀಪ್ ಪಾಂಡೆ ಹಾಗೂ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿಯವರು ಮಧು ಸೀತಪ್ಪ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡರು.
ಈ ವೇಳೆ ಮಾತನಾಡಿದ ದಿಲೀಪ್ ಪಾಂಡೆ, ಡಾ. ಮಧು ಸೀತಪ್ಪ ಅವರು ಆಮ್ ಆದ್ಮಿ ಪಾರ್ಟಿ ಸೇರುತ್ತಿರುವುದಕ್ಕೆ ಸಂತೋಷವಾಗುತ್ತಿದೆ. ವಿಶೇಷವಾಗಿ ಆರೋಗ್ಯ ವ್ಯವಸ್ಥೆ, ನೀರಾವರಿ ಹಾಗೂ ರೈತರ ಸಮಸ್ಯೆಗಳಿಗೆ ಸಂಬಂಧಿಸಿದ ಇವರ ಅನುಭವವು ಆಮ್ ಆದ್ಮಿ ಪಾರ್ಟಿಗೆ ಆಸ್ತಿಯಾಗಲಿದೆ. ಇವರನ್ನು ಪಕ್ಷಕ್ಕೆ ಸ್ವಾಗತಿಸುತ್ತಾ, ಕರ್ನಾಟಕದ ಜನತೆಗಾಗಿ ಸಕಾರಾತ್ಮಕ ಬದಲಾವಣೆ ತರಲು ನಮ್ಮೊಂದಿಗೆ ಇವರು ಶ್ರಮಿಸುವುದನ್ನು ಕಾಣಲು ಎದುರು ನೋಡುತ್ತಿದ್ದೇವೆ ಎಂದು ಹೇಳಿದರು.
ಮಧು ಸೀತಪ್ಪ ಅವರನ್ನು ಪರಿಚಯಿಸಿದ ಪೃಥ್ವಿ ರೆಡ್ಡಿ, ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಎರಡು ವರ್ಷಗಳ ಕಾಲ ಸೆರೆಮನೆವಾಸ ಅನುಭವಿಸಿದ್ದ ವಿ.ಸೀತಪ್ಪನವರ ಮಗ ಮಧು ಸೀತಪ್ಪ ಅವರಿಗೆ ದೇಶದ ಬಗ್ಗೆ ಕಾಳಜಿಯು ಹುಟ್ಟಿನಿಂದಲೇ ಬಂದಿದೆ.
ಮಧು ಅವರ ತಾಯಿ ಶಾರದಾ ಸೀತಪ್ಪ ಅವರು ಮಹಿಳಾ ಸಮಾಜ ಎಂಬ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯನ್ನು ಆರಂಭಿಸಿ ಕೋಲಾರ ಜಿಲ್ಲೆಯಲ್ಲಿ ಶೈಕ್ಷಣಿಕ ಸೇವೆಯಲ್ಲಿ ತೊಡಗಿಕೊಂಡಿದ್ದಾರೆ. ಬಾಸ್ಕೇಟ್ ಬಾಲ್ ಆಟಗಾರರಾಗಿ ರಾಷ್ಟ್ರಮಟ್ಟದ ಸ್ಪರ್ಧೆಗಳಲ್ಲಿ ಕರ್ನಾಟಕವನ್ನು ಮಧು ಪ್ರತಿನಿಧಿಸಿದ್ದಾರೆ.
ಬರಪೀಡಿತ ಪ್ರದೇಶಗಳಲ್ಲಿ ರೈತರು ಆರ್ಥಿಕ, ವೈದ್ಯಕೀಯ ಹಾಗೂ ಸಾಮಾಜಿಕವಾಗಿ ಎದುರಿಸುವ ಕಷ್ಟಗಳ ಬಗ್ಗೆ ಅನೇಕ ಲೇಖನಗಳನ್ನು ಬರೆದ ಅನುಭವ ಹೊಂದಿದ್ದಾರೆ. ʻಬಯಲು ಸೀಮೆಯ ಬಾಯಾರಿಕೆ ಹಿಂಗಿತ್ತೇ? ಎಂಬ ಪುಸ್ತಕ ಹಾಗೂ ಅನೇಕ ಸಾಕ್ಷ್ಯಚಿತ್ರಗಳು ಮಧು ಅವರಿಂದ ಮೂಡಿಬಂದಿವೆ.
ಎತ್ತಿನಹೊಳೆ, ಕೆಸಿ ವ್ಯಾಲಿ ಹಾಗೂ ಎಚ್‌ಎನ್ ವ್ಯಾಲಿ ಯೋಜನೆಗಳ ಲೋಪದೋಷಗಳ ಬಗ್ಗೆ ವರದಿ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಿದ್ದರು. ಚುನಾವಣಾ ಅಕ್ರಮಗಳು ಹಾಗೂ ಕ್ಷೇತ್ರದ ಸಮಸ್ಯೆಗಳ ವಿರುದ್ಧ ಹೋರಾಟ ಮಾಡಲು 90 ದಿನಗಳ ಜನ ಜಾಗೃತಿ ಜಾಥಾವನ್ನು ಇತ್ತೀಚೆಗಷ್ಟೇ ನಡೆಸಿದ್ದರು ಎಂದು ತಿಳಿಸಿದರು.
ಆಮ್ ಆದ್ಮಿ ಪಾರ್ಟಿ ಸೇರಿ ಮಾತನಾಡಿದ ಡಾ. ಮಧು ಸೀತಪ್ಪ, “ಆಮ್ ಆದ್ಮಿ ಪಾರ್ಟಿ ಕುಟುಂಬದ ಸದಸ್ಯನಾಗುತ್ತಿರುವುದಕ್ಕೆ ಸಂತೋಷವಾಗುತ್ತಿದೆ. ಆಮ್ ಆದ್ಮಿ ಪಾರ್ಟಿಯು ಪ್ರಜಾಪ್ರಭುತ್ವದ ಮೌಲ್ಯಗಳಲ್ಲಿ ನಂಬಿಕೆ ಹೊಂದಿರುವ ಪಕ್ಷವಾಗಿದ್ದು, ಎಲ್ಲ ವರ್ಗಗಳ ಹಾಗೂ ವಿವಿಧ ಸ್ತರಗಳ ಜನರನ್ನು ಇದು ಒಳಗೊಂಡಿದೆ.
ನಾನು ಯಾವಾಗಲೂ ಜನರ ಜೀವನಮಟ್ಟವನ್ನು ಸುಧಾರಿಸಲು ಶ್ರಮಿಸಿದ್ದೇನೆ. ಕೋಮುವಾದಿ ಪಕ್ಷವು ಅಧಿಕಾರಕ್ಕೆ ಬರುವುದು ನನಗೆ ಇಷ್ಟವಿಲ್ಲ. ಸಮಾಜದ ಒಳಿತಿಗಾಗಿ ಪ್ರಜ್ಞಾವಂತ ಜನರು ಹೆಚ್ಚಿನ ಸಂಖ್ಯೆಯಲ್ಲಿ ರಾಜಕೀಯಕ್ಕೆ ಬರಬೇಕು. ಹಲವು ರಾಜ್ಯಗಳು ಭ್ರಷ್ಟಾಚಾರದಲ್ಲಿ ಮುಳುಗಿದ್ದು, ಇದು ಬದಲಾಗಬೇಕಿದೆ. ಆಮ್ ಆದ್ಮಿ ಪಾರ್ಟಿಯು ಈ ಬದಲಾವಣೆ ತರಲಿದೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.