Search By Date & Category

NEWSನಮ್ಮಜಿಲ್ಲೆಸಂಸ್ಕೃತಿ

ಹಬ್ಬಗಳು ನಮ್ಮ ಸಂಸ್ಕೃತಿಯ ದೀಪ ಮಾಲೆಗಳು: ಸಾಹಿತಿ ಬನ್ನೂರು ರಾಜು

ವಿಜಯಪಥ ಸಮಗ್ರ ಸುದ್ದಿ

ಮೈಸೂರು: ನಮ್ಮದು ಸಂಸ್ಕೃತಿ ಸಂಪನ್ನವಾದ ಹಬ್ಬಗಳ ದೇಶವಾಗಿದ್ದು ವರ್ಷಪೂರ್ತಿ ಒಂದಿಲ್ಲೊಂದು ಹಬ್ಬಗಳು, ಹರಿದಿನಗಳು, ಜಯಂತಿಗಳು, ದಿನಾಚರಣೆಗಳು ನಮ್ಮಲ್ಲಿ ಆಚರಣೆಯಲ್ಲಿದ್ದು ಇವೆಲ್ಲವೂ ನಮ್ಮ ಭಾರತೀಯ ಪರಂಪರೆ ಹಾಗೂ ಸಂಸ್ಕೃತಿಯ ದೀಪ ಮಾಲೆಗಳೆಂದು ಸಾಹಿತಿ ಬನ್ನೂರು ಕೆ.ರಾಜು ಹೇಳಿದರು.

ನಗರದ ಅಗ್ರಹಾರದ ಶಂಕರ ಮಠ ಬಡಾವಣೆಯಲ್ಲಿರುವ ಶ್ರೀಕಾಂತ ಬಾಲಿಕಾ ಪ್ರೌಢ ಶಾಲೆಯಲ್ಲಿ ಹಿರಣ್ಮಯಿ ಪ್ರತಿಷ್ಠಾನ ಮತ್ತು ಕಾವೇರಿ ಬಳಗದ ಸಂಯುಕ್ತ ಆಶ್ರಯದಲ್ಲಿ ಸಂಕ್ರಾಂತಿ ಹಬ್ಬದ ಧ್ಯೋತಕವಾಗಿ ಏರ್ಪಡಿಸಿದ್ದ ರಂಗೋಲಿ ಸ್ಪರ್ಧೆ ಮತ್ತು ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಾಮಾನ್ಯವಾಗಿ ಪ್ರತಿಯೊಬ್ಬ ವಿದ್ಯಾರ್ಥಿಯೂ ಪ್ರತಿಭಾವಂತರೇ ಆಗಿದ್ದು ಅವರೊಳಗೆ ಅನೇಕ ಬಗೆಯ ಕಲೆಗಳಿದ್ದು ಅವುಗಳಲ್ಲಿ ನಮ್ಮ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿರುವ ರಂಗೋಲಿ ಕಲೆಗೆ ಬಹು ಮಹತ್ವದ ಸ್ಥಾನವುಂಟೆಂದರು.

ಭಾರತೀಯ ಸಂಸ್ಕೃತಿಯ ಪ್ರಕಾರ ಯುಗಾದಿ ಹಬ್ಬವು ಹೊಸ ವರ್ಷವಾದರೂ ಸಹ ಕ್ಯಾಲೆಂಡರ್ ಅನುಸರಣೆಯ ಪ್ರಕಾರ ಜನವರಿ ತಿಂಗಳ ಹೊಸ ವರ್ಷದ ಮೊದಲ ಹಬ್ಬವಾಗಿ ಬರುವ ಸಂಕ್ರಾಂತಿ ಹಬ್ಬಕ್ಕೆ ನಮ್ಮಲ್ಲಿ ಬಹಳ ವೈಶಿಷ್ಟತೆ ಇದೆ. ಸಂತಸ, ಉಲ್ಲಾಸ, ಸಡಗರ, ಸಂಭ್ರಮಗಳ ಸಂಕೇತವಾದ ಸಂಕ್ರಾಂತಿ ಹಬ್ಬವೆಂದರೆ ಅದು ವಿಶೇಷವಾಗಿ ರೈತರ ಬಾಳಿನ ಸುಗ್ಗಿ ಹಬ್ಬ.

ಕೃಷಿಕರಿಗೆ ಇದು ಹಿಗ್ಗಿನ ಹಬ್ಬ. ಹೊಲ-ಗದ್ದೆಗಳ ಬೆಳೆ ಫಸಲಾಗಿ ದವಸ-ಧಾನ್ಯ ಗಳು ರೈತರ ಮನೆ ಸೇರಿ ಅನ್ನದಾತನ ಮುಖೇನ ಇಡೀ ದೇಶಕ್ಕೆ ಹಂಚಲ್ಪಟ್ಟು ನಾಡಿಗೆ ನಾಡೇ ಸಡಗರದಿಂದ ಹರ್ಶೋಲ್ಲಾಸಗೊಂಡು ಗರಿಗೆದರಿ ನಲಿವಿನಿಂದ ಸಂಭ್ರಮಿಸುವ ಕಾಲವಿದು. ಸಂಕ್ರಾಂತಿಯಲ್ಲಿ ಗೋಪೂಜೆಗೆ ವಿಶೇಷ ಆದ್ಯತೆ. ಹಾಗೆಯೇ ಎಳ್ಳು ಬೆಲ್ಲ ಮಹತ್ವದ ಸ್ಥಾನ ಪಡೆದಿದ್ದು, ಎಳ್ಳು ಬೆಲ್ಲ ತಿಂದು ಒಳ್ಳೆ ಮಾತನಾಡಿ ಎಂಬ ನಾಣ್ಣುಡಿಯಂತೆ ಸಂಕ್ರಾಂತಿಗೆ ಎಳ್ಳು ಬೀರುವ ಸಂಪ್ರದಾಯವಿದೆ.

ಅಷ್ಟೇ ಅಲ್ಲ, ಸಂಕ್ರಾಂತಿಯಂದು ಏನೇ ಸಂಕಲ್ಪ ಮಾಡಿಕೊಂಡರೂ ಅದು ನೆರವೇರುತ್ತದೆಂಬ ನಂಬಿಕೆಯುಂಟು.ಆದ್ದರಿಂದ ಬೆಳಕಿನ ಸಂಕೇತವಾದ ಸೂರ್ಯಾರಾಧನೆಯ ಮಹತ್ವದ ದಿನವೂ ಆಗಿರುವ ಸಂಕ್ರಾಂತಿ ಹಬ್ಬದಂದು ವಿದ್ಯಾರ್ಥಿಗಳು ಒಳ್ಳೆಯ ಗುರಿ ಇಟ್ಟುಕೊಂಡು ಚೆನ್ನಾಗಿ ಓದಿ ಗುರಿ ಸಾಧಿಸುವ ಸಂಕಲ್ಪ ಮಾಡಿಕೊಳ್ಳಬೇಕೆಂದು ಸಲಹೆ ನೀಡಿದ ಅವರು, ಸಂಕ್ರಾಂತಿ ಹಬ್ಬದ ವಿಶೇಷತೆ ಬಗ್ಗೆ ಸಂಕ್ಷಿಪ್ತವಾಗಿ ತಿಳಿಸಿಕೊಟ್ಟರು.

ವಿವಿಧ ವಿಭಾಗಗಳಲ್ಲಿ ನಡೆದ ರಂಗೋಲಿ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿನಿಯರಾದ ಪಲ್ಲವಿ (ಪ್ರಥಮ), ಐಶ್ವರ್ಯ (ದ್ವಿತೀಯ), ಹರ್ಷಿತಾ (ತೃತೀಯ), ಎಸ್.ಧನಲಕ್ಷ್ಮಿ (ಸಮಾಧಾನಕರ) ಮತ್ತು ಮೇಘನಾ (ಪ್ರಥಮ), ಕೆ.ನಂದಿನಿ (ದ್ವಿತೀಯ), ಎನ್.ನವ್ಯಾ (ತೃತೀಯ), ಎಸ್.ರೋಜಾ (ಸಮಾಧಾನಕರ) ಅವರಿಗೆ ಹಿರಣ್ಮಯಿ ಪ್ರತಿಷ್ಠಾನದ ಅಧ್ಯಕ್ಷ ಎ.ಸಂಗಪ್ಪ ಮತ್ತು ಕಾವೇರಿ ಬಳಗದ ಅಧ್ಯಕ್ಷೆ ಎನ್.ಕೆ.ಕಾವೇರಿಯಮ್ಮ ಬಹುಮಾನ ವಿತರಿಸಿ ಅಭಿನಂದಿಸಿದರು. ಖ್ಯಾತ ಒರೀಗಾಮಿ ತಜ್ಞರೂ ಆದ ವಿಶ್ರಾಂತ ಶಿಕ್ಷಕ ಹೆಚ್.ವಿ. ಮುರಳೀಧರ್, ಶಿಕ್ಷಕಿಯರಾದ ಜಿ.ಸುಮಾ, ಜಿ.ಗಾಯತ್ರಿ, ಕೋಕಿಲಾ, ಬಿ.ಕೆ.ಸುನಿತಾ, ಶಿಕ್ಷಕರಾದ ಟಿ.ಸತೀಶ್, ವಿ.ನಾರಾಯಣರಾವ್ ಇದ್ದರು.

Leave a Reply

error: Content is protected !!