ಬೆಂಗಳೂರು: ಮಿಸ್ ಇಂಡಿಯಾ 2021ರಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದ ಚಿತ್ರನಟಿ ಹಾಗೂ ಸಮಾಜ ಸೇವಕಿ ಡಾ. ಪೂಜಾ ರಮೇಶ್ ಅವರು ಆಮ್ ಆದ್ಮಿ ಪಾರ್ಟಿಗೆ ಸೇರ್ಪಡೆಯಾದರು.
ಪಕ್ಷದ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ, ಪ್ರಚಾರ ಹಾಗೂ ಜನಸಂಪರ್ಕ ಸಮಿತಿ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಮತ್ತು ಪಕ್ಷದ ರಾಜ್ಯ ಕಾರ್ಯದರ್ಶಿ ಕುಶಲಸ್ವಾಮಿಯವರು ಪೂಜಾ ಅವರನ್ನು ಪಕ್ಷದ ಶಾಲು ಹೊದಿಸುವ ಮೂಲಕ ಬರಮಾಡಿಕೊಂಡರು.
ಆಮ್ ಆದ್ಮಿ ಪಾರ್ಟಿಯ ರಾಜ್ಯ ಕಚೇರಿಯಲ್ಲಿ ನಡೆದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಪೃಥ್ವಿ ರೆಡ್ಡಿ, ಆಮ್ ಆದ್ಮಿ ಪಾರ್ಟಿಯು ಜನಾನುರಾಗಿ ಹಾಗೂ ಪ್ರಾಮಾಣಿಕ ಮನಸ್ಸುಗಳನ್ನು ಆಕರ್ಷಿಸುವುದರಲ್ಲಿ ಯಶಸ್ವಿಯಾಗುತ್ತಿದೆ. ಸಮಾಜದಲ್ಲಿ ಉತ್ತಮ ಬದಲಾವಣೆ ತರಬೇಕೆಂಬ ಇಚ್ಛೆ ಹೊಂದಿರುವ ಎಲ್ಲರಿಗೂ ಆಮ್ ಆದ್ಮಿ ಪಾರ್ಟಿಯು ಒಂದು ವೇದಿಕೆಯಾಗಿದ್ದು, ಅಂತಹವರು ಈ ಅವಕಾಶವನ್ನು ಹೆಚ್ಚಿನ ಸಂಖ್ಯೆಯಲ್ಲಿ ಸದುಪಯೋಗ ಪಡಿಸಿಕೊಳ್ಳಬೇಕು. ಸಮಾಜದ ಬಗ್ಗೆ ಅಪಾರ ಕಾಳಜಿಯುಳ್ಳ ಪೂಜಾ ರಮೇಶ್ರವರ ಪಕ್ಷ ಸೇರ್ಪಡೆಯು ನಮ್ಮೆಲ್ಲರ ಉತ್ಸಾಹ ಹೆಚ್ಚಿಸಿದೆ ಎಂದು ಹೇಳಿದರು.
ಮುಖ್ಯಮಂತ್ರಿ ಚಂದ್ರು ಮಾತನಾಡಿ, “ಬೇರೆ ಪಕ್ಷಗಳು ಮಹಿಳಾ ಸಬಲೀಕರಣದ ಬಗ್ಗೆ ಕೇವಲ ಆಶ್ವಾಸನೆ ನೀಡುತ್ತಿದ್ದರೆ, ಆಮ್ ಆದ್ಮಿ ಪಾರ್ಟಿಯು ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರನ್ನು ಕಣಕ್ಕಿಳಿಸುವ ಮೂಲಕ ಅದನ್ನು ಸಾಕಾರಗೊಳಿಸುತ್ತಿದೆ. ಬೇರೆ ಪಕ್ಷಗಳಲ್ಲಿ ಮಹಿಳೆಯರನ್ನು ನಾಮಕಾವಸ್ಥೆಗೆ ಅಧಿಕಾರದಲ್ಲಿ ಕೂರಿಸಿ, ಅವರ ಹೆಸರಿನಲ್ಲಿ ಬೇರೆಯವರು ಅಧಿಕಾರ ನಡೆಸುವುದು ಸಾಮಾನ್ಯವಾಗಿದೆ. ಆದರೆ ಆಮ್ ಆದ್ಮಿ ಪಾರ್ಟಿಯು ಅದಕ್ಕೆ ಅವಕಾಶ ನೀಡದೇ, ಡಾ. ಪೂಜಾ ರಮೇಶ್ರಂತಹ ಪ್ರಜ್ಞಾವಂತ ಮಹಿಳೆಯರಿಗೆ ಅವಕಾಶ ನೀಡಿ ರಾಜಕೀಯದಲ್ಲಿ ಮುನ್ನೆಲೆಗೆ ತರಲಾಗುತ್ತಿದೆ” ಎಂದು ಹೇಳಿದರು.
ಆಮ್ ಆದ್ಮಿ ಪಾರ್ಟಿ ಸೇರಿ ಮಾತನಾಡಿದ ಡಾ. ಪೂಜಾ ರಮೇಶ್, “ನಾನು ರಾಯಚೂರು ನಗರ ವಿಧಾನಸಭಾ ಕ್ಷೇತ್ರದಿಂದ ಎಎಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಜಯಗಳಿಸಿ ಕ್ಷೇತ್ರದ ಜನರ ಸೇವೆ ಮಾಡಲು ಬಯಸಿದ್ದೇನೆ. ನಾನು ಸರ್ಕಾರಿ ಶಾಲೆಗಳ ಉಳಿಯಬೇಕು ಹಾಗೂ ಬೆಳೆಯಬೇಕು ಎಂಬ ವಿಚಾರಕ್ಕೆ ಬದ್ಧಳಾಗಿದ್ದು, ಆಮ್ ಆದ್ಮಿ ಪಾರ್ಟಿ ಕೂಡ ಇದೇ ಸಿದ್ಧಾಂತವನ್ನು ದೆಹಲಿ ಹಾಗೂ ಪಂಜಾಬ್ನಲ್ಲಿ ಜಾರಿಗೆ ತಂದಿದೆ.
ದೇಶದ ರಾಜಕೀಯದಲ್ಲಿ ಆಮ್ ಆದ್ಮಿ ಪಾರ್ಟಿಯು ಆಶಾಭಾವನೆ ಸೃಷ್ಟಿಸಿದೆ. ಬೇರೆಬೇರೆ ಪಕ್ಷಗಳ ನಿಷ್ಕ್ರಿಯತೆ ಹಾಗೂ ಭ್ರಷ್ಟಾಚಾರದಿಂದ ಬೇಸರಗೊಂಡು ರಾಜಕೀಯದಿಂದ ದೂರವಿದ್ದ ಜನರು ಆಮ್ ಆದ್ಮಿ ಪಾರ್ಟಿಯಿಂದಾಗಿ ಈಗ ರಾಜಕೀಯವನ್ನು ನಿರೀಕ್ಷೆಯ ಕಣ್ಣುಗಳಿಂದ ನೋಡುತ್ತಿದ್ದಾರೆ” ಎಂದು ಹೇಳಿದರು.
ಡಾ. ಪೂಜಾ ರಮೇಶ್ರವರನ್ನು ಪರಿಚಯಿಸಿದ ಕುಶಲಸ್ವಾಮಿ, ಪೂಜಾ ರಮೇಶ್ರವರು ಕನ್ನಡ ಶಾಲೆಗಳ ಉಳಿವಿಗಾಗಿ ಉಡುಪಿ ಜಿಲ್ಲೆಯ ಹೆಬ್ರಿಯಿಂದ ರಾಜ್ಯಮಟ್ಟದ ಅಭಿಯಾನ ಆರಂಭಿಸಿದ್ದಾರೆ. ರಾಯಚೂರು ಜಿಲ್ಲೆಯಲ್ಲಿ ಅಪೌಷ್ಟಿಕತೆಯಿಂದ ಬಳಲುತ್ತಿರುವ ಗರ್ಭಿಣಿಯರಿಗೆ ಹಾಗೂ ಮಕ್ಕಳಿಗೆ ಆಹಾರ ಪೂರೈಸಲು ಶ್ರಮಿಸಿದ್ದಾರೆ. ರಾಯಚೂರು ನಗರದಲ್ಲಿ ಚಿಂದಿ ಆಯುವ 200ಕ್ಕೂ ಹೆಚ್ಚು ಮಕ್ಕಳ ಕಲಾಪ್ರದರ್ಶನಕ್ಕೆ ವೇದಿಕೆ ಕಲ್ಪಿಸಿಕೊಟ್ಟಿದ್ದರು.
ಕೊರೊನಾ ಮಾಹಾಮಾರಿ ಮತ್ತು ಲಾಕ್ಡೌನ್ ಸಂದರ್ಭದಲ್ಲಿ ಚಿತ್ರರಂಗದ 300ಕ್ಕೂ ಹೆಚ್ಚು ಪೋಷಕ ಕಲಾವಿದರಿಗೆ ಆಹಾರ ಕಿಟ್ಗಳನ್ನು ವಿತರಿಸಿದ್ದರು. ಇವರಿಗೆ ಬೆಂಗಳೂರಿನಲ್ಲಿ ಮಹಿಳಾ ಸಾಧಕಿ ಪ್ರಶಸ್ತಿ, ವಾಸ್ಕೊದಲ್ಲಿ ಬಸವ ಪುರಸ್ಕಾರ, ರಾಯಚೂರಿನಲ್ಲಿ ಮದರ್ ಥೆರೆಸಾ ಪ್ರಶಸ್ತಿ, ಪಣಜಿಯಲ್ಲಿ ಭಾರತ ಗೌರವ ಪ್ರಶಸ್ತಿ, ತಮಿಳುನಾಡಿನಲ್ಲಿ ಗೌರವ ಡಾಕ್ಟರೇಟ್, ಕೊಡಗಿನಲ್ಲಿ ಕಾವೇರಿ ರತ್ನ, ಧಾರವಾಡದಲ್ಲಿ ಸನ್ಶೈನ್ ಪ್ರಶಸ್ತಿ ದೊರೆತಿದೆ ಎಂದು ತಿಳಿಸಿದರು.