ಮೈಸೂರು: ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದ ಸಂಸದ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ಫೋಟೋ ಹಾಗೂ ವಿಡಿಯೋಗಳ ಬಗ್ಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅನುಮಾನ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೆನ್ ಡ್ರೈವ್ ಒಳಗೆ ಇರುವ ವಿಡಿಯೋ ಹಾಗೂ ಫೋಟೋಗಳು ಅಸಲಿಯಾ? ನಕಲಿಯಾ? ಅನ್ನೋದು ಗೊತ್ತಾಗಬೇಕಿದೆ. ಚುನಾವಣೆಗಾಗಿ ಈ ಪೆನ್ ಡ್ರೈವ್ ಹಂಚಿಕೆ ಮಾಡಲಾಗಿದೆ. ಅದರಲ್ಲಿ ಇರುವವರು ಅವರೇನಾ ಅಥವಾ ಬೇರೆ ಅವರ ಫೋಟೋ ಅಂಟಿಸಿದ್ದಾರಾ ಎಂದು ಪ್ರಶ್ನಿಸುವ ಮೂಲಕ ಅನುಮಾನ ಹೊರಹಾಕಿದ್ದಾರೆ.
ಸಮಾಜಿಕ ಜಾಲತಾಣಗಳಿಗೆ ವಿಡಿಯೋ ಹರಿಯಬಿಟ್ಟ ಪುಣ್ಯಾತ್ಮರು ಮಹಿಳೆಯರ ಮುಖ ಬ್ಲರ್ ಮಾಡಬೇಕಿತ್ತು. ಇದರಿಂದ ಆ ಮಹಿಳೆಯರ ಮಾನ ಮರ್ಯಾದೆ ಕುಟುಂಬದ ಮರ್ಯಾದೆ ಉಳಿಯುತಿತ್ತು.
ಈ ಪ್ರಕರಣದಲ್ಲಿ ಎಲ್ಲರನ್ನೂ ತನಿಖೆಗೆ ಒಳಪಡಿಸಬೇಕು. ಈ ಬಗ್ಗೆ ಸಿಎಂ ಡಿಸಿಎಂ ಯಾವ ಅಧಿಕಾರಿಗಳಿಗೆ ಯಾವ ಸೂಚನೆ ಕೊಟ್ಟಿದ್ದಾರೆ?. ಯಾರ ಜೊತೆ ಸಭೆಗಳನ್ನು ಮಾಡಿದ್ದಾರೆ ಎಂದು ಎಚ್‍ಡಿಕೆ ಪ್ರಶ್ನಿಸಿದರು.
ಇನ್ನು ಎಲ್ಲ ಮಾಹಿತಿ ನನ್ನ ಬಳಿ ಇದೆ. ಅವರ ಅಕ್ಕ-ಪಕ್ಕ ಇದ್ದವರೇ ಮಾಹಿತಿ ನೀಡಿದ್ದಾರೆ. ಅವರ ಬಳಿ ನಮ್ಮ ಅಭಿಮಾನಿಗಳಿದ್ದಾರೆ. ಫೋನ್ ಟ್ಯಾಪಿಂಗ್ ಅನುಮಾನ ಅಲ್ಲ ಅದು ಪಕ್ಕಾ ಮಾಹಿತಿ ಎಂದು ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಕದ್ದಾಲಿಕೆ ಆರೋಪಕ್ಕೆ ಡಿಸಿಎಂ ಡಿಕೆಶಿ ಟಾಂಗ್: ಫೋನ್ ಕದ್ದಾಲಿಕೆ ವಿಚಾರವಾಗಿ ಆರೋಪ ಮಾಡಿರುವ ವಿಪಕ್ಷದ ನಾಯಕ ಆರ್.ಅಶೋಕ್ ಮತ್ತು ಮಾಜಿ ಸಿಎಂ ಎಚ್‌ಡಿಕೆಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಬೆಂಗಳೂರಿನಲ್ಲಿ ತಿರುಗೇಟು ನೀಡಿದ್ದು, ನಮ್ಮ ಹೋಮ್ ಮಿನಿಸ್ಟರ್ ಈಗಾಗಲೇ ಹೇಳಿದ್ದಾರೆ. ಫೋನ್ ಕದ್ದಾಲಿಕೆ ಬಗ್ಗೆ ಅಶೋಕ್ ರೈಟಿಂಗ್‌ನಲ್ಲಿ ಕೊಡಲಿ ಎಂದರು.
ಇನ್ನು ಅಶೋಕ್ ಗೃಹ ಸಚಿವರು ಆಗಿದ್ದವರು, ಕೆಲವರು ಸಿಎಂ ಆಗಿದ್ದವರು. ಅವರ ಕಾಲದಲ್ಲಿ ಏನ್ ಆಗಿತ್ತು ಗೊತ್ತಿಲ್ಲವಾ..!? ಅವರ ಕಾಲದಲ್ಲಿ ಏನ್ ರಿಪೋರ್ಟ್ ಬಂದಿತ್ತು ಗೊತ್ತಿಲ್ಲವಾ..!? ಅಂತಾ ಡಿಕೆಶಿ ತಿರುಗೇಟು ನೀಡಿದ್ದಾರೆ.
ಇದೇ ವೇಳೆ ಸಿಎಂ, ಡಿಸಿಎಂ ಸುತ್ತಮುತ್ತ ಇರೋರೇ ಮಾಹಿತಿ ಕೊಡ್ತಿದ್ದಾರೆ ಎಂಬ ಎಚ್‌ಡಿಕೆ ಹೇಳಿಕೆಗೆ ಟಾಂಗ್ ಕೊಟ್ಟ ಡಿಕೆಶಿ, ಬಹಳ ಸಂತೋಷ, ಯಾರ್ಯಾರೋ ಮಾಹಿತಿ ಕೊಟ್ಟಿದ್ದಾರೆ. ಅವರು ಅಫಿಡವಿಟ್ ಫೈಲ್ ಮಾಡಲಿ ಎಂದು ವ್ಯಂಗ್ಯವಾಡಿದರು.