ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥಯ ನಾಲ್ಕೂ ನಿಗಮಗಳಲ್ಲಿ ಇದೇ ಜೂನ್ 11ರ ಮಧ್ಯಾಹ್ನ 1ಗಂಟೆಯಿಂದ ರಾಜ್ಯದ ಎಲ್ಲ ಮಹಿಳೆಯರಿಗೂ ಉಚಿತ ಪ್ರಯಾಣ ಆರಂಭವಾಗಲಿದೆ.
ಇನ್ನು ಈ ಸಂಬಂಧ ಈಗಾಗಲೇ ಸಾರಿಗೆ ಇಲಾಖೆ ಉಚಿತ ಪ್ರಯಾಣ ಮಾಡುವ ಸಂಬಂಧ ವಿಧಾನನೌಧದಲ್ಲಿ ಆಯೋಜಿಸಿರುವ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅಂದು ಬೆಳಗ್ಗೆ 11ಗಂಟೆಗೆ ಚಾಲನೆ ನೀಡಲಿದ್ದಾರೆ.
ಸಿಎಂ ವಿಧಾನಸೌಧದಲ್ಲಿ ಲೋಕಾರ್ಪಣೆ ಮಾಡಿದ ಬಳಿಕ ರಾಜ್ಯದ ಎಲ್ಲ ಜಿಲ್ಲಾ, ತಾಲೂಕು ಕೇಂದ್ರಗಳ ಬಸ್ ನಿಲ್ದಾಣಗಳಲ್ಲಿ ಮಧ್ಯಾಹ್ನ 12.30ಕ್ಕೆ ಕಾರ್ಯಕ್ರಮ ಆಯೋಜಿಸಬೇಕು ಎಂದು ತಿಳಿಸಲಾಗಿದೆ.
ಇನ್ನು ಜಿಲ್ಲಾ ಮತ್ತು ತಾಲೂಕು ಕೇಂದ್ರಗಳ ಬಸ್ ನಿಲ್ದಾಣಗಳಲ್ಲಿ ಸ್ಥಳೀಯ ಸಚಿವರು ಮತ್ತು ಶಾಸಕರು, ಜಿಲ್ಲಾಧಿಕಾರಿಗಳ ಉಪಸ್ಥಿತಿಯಲ್ಲಿ ಅವಶ್ಯ ಪ್ರೋಟೋಕಾಲ್ ಪಾಲಿಸುವ ಮೂಲಕ ಲೋಕಾರ್ಪಣೆಗೊಳಿಸಬೇಕು ಎಂದು ಸಾರಿಗೆ ಸಂಸ್ಥೆಗಳ ಅಧ್ಯಕ್ಷರೂ ಆದ ಸಚಿವ ರಾಮಲಿಂಗಾರೆಡ್ಡಿ ಅವರ ಆದೇಶ ಮೇರೆಗೆ ಮುಖ್ಯ ಸಂಚಾರಿ ವ್ಯವಸ್ಥಾಪಕರು ಸೂಚನೆ ನೀಡಿದ್ದಾರೆ.
ಜಿಲ್ಲಾ ಕೇಂದ್ರ ಬಸ್ ನಿಲ್ದಾಣಗಳಲ್ಲಿ ತಲಾ 2 ಬಸ್ಗಳು ಹಾಗೂ ತಾಲೂಕು ಕೇಂದ್ರ ಬಸ್ ನಿಲ್ದಾಣಗಳಲ್ಲಿ ತಲಾ ಒಂದು ಬಸ್ ಸಿಂಗರಿಸಿ ಚಾಲನೆ ನೀಡಬೇಕು. ಈ ವೇಳೆ ಮಹಿಳೆಯರಿಗೆ ಗುಲಾಬಿ ಹೂ ಕೂಡ ನೀಡಿ ಸ್ವಾಗತಿಸಬೇಕು ಎಂದು ತಿಳಿಸಿದ್ದಾರೆ.
ಇನ್ನು ಈ ಕಾರ್ಯಕ್ರಮಕ್ಕೆ ಜಿಲ್ಲಾ ಕೇಂದ್ರಗಳಲ್ಲಿ 1 ಲಕ್ಷ ರೂಪಾಯಿ ಹಾಗೂ ತಾಲೂಕು ಕೇಂದ್ರ ಬಸ್ನಿಲ್ದಾಣಗಳಲ್ಲಿ ತಲಾ 25 ಸಾವಿರ ರೂಪಾಯಿ ವೆಚ್ಚ ಮಾಡುವುದಕ್ಕೂ ಅನುಮೋದನೆ ನೀಡಲಾಗಿದೆ.
ಇನ್ನು ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 12.30ರವರೆಗೆ ಕಾರ್ಯಕ್ರಮ ಆಯೋಜನೆ ಮಾಡಿ ಮಧ್ಯಾಹ್ನ 1 ಗಂಟೆ ಬಳಿಕ ಎಲ್ಲ ಮಹಿಳಾ ಪ್ರಯಾಣಿಕರಿಗೂ ಉಚಿತ ಪ್ರಯಾಣಕ್ಕೆ ಎಲ್ಲ ಬಸ್ಗಳಲ್ಲೂ ಯಾವುದೇ ಸಮಸ್ಯೆ ಇಲ್ಲದಂತೆ ಅನುಕೂಲ ಕಲ್ಪಿಸಿಕೊಡಬೇಕು ಎಂದು ತಿಳಿಸಿದ್ದಾರೆ.
ಉದ್ಘಾಟನೆ ಕಾರ್ಯಕ್ರಮ ಪತ್ರ- Shakti yojana Inauguration letter