NEWSಆರೋಗ್ಯನಮ್ಮರಾಜ್ಯ

ಎಫ್‌ಎಸ್‌ಒಗಳು ಆಹಾರ ಸುರಕ್ಷತಾ ಕ್ರಮಗಳ ಗಾಳಿಗೆ ತೂರಿ ಕೋಟಿ ಕೋಟಿ ರೂ. ದಂಧೆಗಿಳಿದಿದ್ದಾರೆ : ಮೋಹನ್ ದಾಸರಿ ಕಿಡಿ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ರಾಜ್ಯಾದ್ಯಂತ ಮುಖ್ಯವಾಗಿ ರಾಜಧಾನಿ ಬೆಂಗಳೂರಿನಲ್ಲಿ ಆಹಾರ ಸುರಕ್ಷತೆ ಪರಿಶೀಲನೆ ನಡೆಸುವ ಫುಡ್ ಸೇಫ್ಟಿ ಆಫೀಸರ್‌ಗಳು ಹಫ್ತಾ ವಸೂಲಿಗೆ ಇಳಿದಿದ್ದಾರೆ. ಇದೊಂದು ಸಾವಿರಾರು ಕೋಟಿ ರೂಪಾಯಿಯ ದಂಧೆಯಾಗಿ ಮಾರ್ಪಟ್ಟಿದೆ ಎಂದು ಆಮ್ ಆದ್ಮಿ ಪಾರ್ಟಿ ರಾಜ್ಯ ಪ್ರಧಾನಕಾರ್ಯದರ್ಶಿ ಮೋಹನ್ ದಾಸರಿ ಆಕ್ರೋಶ ವ್ಯಕ್ತಪಡಿಸಿದರು.

ನಗರದಲ್ಲಿ ಆಹಾರ ಸುರಕ್ಷತೆ ಬಗ್ಗೆ ಬಿಬಿಎಂಪಿ ಹಾಗೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿರುವ ಕುರಿತು ಸುದ್ದಿಗೋಷ್ಠಿ ನಡೆಸಿದ ಮೋಹನ್ ದಾಸರಿ, ಆಹಾರದಲ್ಲಿ ರಾಸಾಯನಿಕಗಳು ಸಂಪೂರ್ಣ ನಿಷೇಧವಾಗಿದ್ದರೂ ಸಹ ಈಗಲೂ ಅನೇಕ ಉಪಾಹಾರ ಗೃಹಗಳಲ್ಲಿ ಕಲರ್ ಬಳಕೆ ಮಾಡುತ್ತಿರುವುದು ಬೆಂಗಳೂರನ್ನು ಒಂದು ಸುತ್ತು ಹೊಡೆದರೆ ಕಾಣಸಿಗುತ್ತದೆ. ಇನ್ನು ಅದರಲ್ಲೂ ಕೆಳ ವರ್ಗಗಳು ವಾಸಿಸುವ ಪ್ರದೇಶಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಇದರಿಂದ ಬಡವರು, ಕೆಳ ಮಧ್ಯಮ ವರ್ಗದವರು ರೋಗಿಗಳಾಗುತ್ತಿದ್ದಾರೆ ಎಂದು ಮೋಹನ್ ದಾಸರಿ ಕಳವಳ ವ್ಯಕ್ತಪಡಿಸಿದರು.

ಬೆಂಗಳೂರಿನ ಬೀದಿ ಬೀದಿಗಳಲ್ಲಿ ಹೆಚ್ಚುತ್ತಿರುವ ಡಾಬಾ, ಹೋಟೆಲ್‌, ಕಬಾಬ್‌ ಅಂಗಡಿ, ಮಸಾಲಪುರಿ, ಬೇಲ್ಪುರಿ ಅಂಗಡಿಗಳು, ಜ್ಯೂಸ್‌ ಅಂಗಡಿಗಳು ಆಹಾರ ಸುರಕ್ಷತೆ ನಿಯಮಗಳನ್ನು ಪಾಲಿಸದೆ ಗ್ರಾಹಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿರುವ ಪ್ರಕರಣಗಳು ಹೆಚ್ಚುತ್ತಿರುವುದು ಕಳವಳಕಾರಿಯಾಗಿದೆ. ಆಹಾರ ಸುರಕ್ಷತೆ ಬಗ್ಗೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕಾದ ಫುಡ್‌ ಸೇಫ್ಟಿ ಆಫೀಸರ್‌ಗಳು ಅಗತ್ಯ ಮಾದರಿಗಳನ್ನೇ ಸಂಗ್ರಹಿಸುತ್ತಿಲ್ಲ ಎಂದು ಕಿಡಿಕಾರಿದರು.

ಇನ್ನು ಮಾದರಿ ಆಹಾರದ ಮೇಲೆ ನಿಯಮಿತವಾಗಿ ಪರೀಕ್ಷೆಗಳು ನಡೆಯುತ್ತಿಲ್ಲ. ಇದನ್ನು ನಿರ್ವಹಿಸಬೇಕಾದ ಬಿಬಿಎಂಪಿ ಸಂಬಂಧವಿಲ್ಲದಂತಿದೆ. ನಗರದಲ್ಲಿ ಅವ್ಯಾಹತವಾಗಿ ಹೆಚ್ಚಿರುವ ಬೀದಿ ಬದಿ ಡಾಬಾ, ಹೋಟೆಲ್‌ಗಳು ಹೇಗೆ ಆಹಾರ ತಯಾರಿಸುತ್ತಿದ್ದಾರೆ, ಸುರಕ್ಷತಾ ಕ್ರಮಗಳನ್ನು ಅನುಸರಿಸುತ್ತಿದ್ದಾರೆಯೇ ಎಂಬುದನ್ನು ಪರೀಕ್ಷಿಸುತ್ತಿಲ್ಲ. ಕೇವಲ ದೊಡ್ಡ ದೊಡ್ಡ ಹೋಟೆಲ್, ರೆಸ್ಟೋರೆಂಟ್‌ಗಳಿಗೆ ಹಫ್ತಾ ವಸೂಲಿಗಷ್ಟೇ ಹೋಗುತ್ತಾರೆ ಎಂದು ದೂರಿದರು.

ಪ್ರತಿಯೊಬ್ಬ ಎಫ್‌ಎಸ್‌ಒ ಪ್ರತಿ ತಿಂಗಳು ಕನಿಷ್ಠ 5 ಮಾದರಿಗಳನ್ನು ಬಿಬಿಎಂಪಿ ಆಹಾರ ಪರೀಕ್ಷಾ ಲ್ಯಾಬೋರೇಟರಿಗೆ ಕಳುಹಿಸಬೇಕು ಎಂಬ ನಿಯಮವಿದೆ. ಬೆಂಗಳೂರಿನಲ್ಲಿ ಸುಮಾರು 20,000 ಲೈಸೆನ್ಸ್‌ ಪಡೆದ ರೆಸ್ಟೋರೆಂಟ್‌ಗಳಿವೆ. ಲೆಕ್ಕವೇ ಸಿಗದಷ್ಟು ಅನಧಿಕೃತ ಹೋಟೆಲ್, ಡಾಬಾಗಳಿವೆ. ಆದರೆ ನಗರದ 198 ವಾರ್ಡ್‌ಗಳಲ್ಲಿ ಆಹಾರ ಸುರಕ್ಷತೆ ನಿರ್ವಹಣೆಗಾಗಿ ಕೇವಲ 19 ಎಫ್ಎಸ್ಒಗಳಿದ್ದಾರೆ. ಪ್ರತಿ 10 ವಾರ್ಡ್‌ಗೆ ಒಬ್ಬರಂತೆ ಎಫ್‌ಎಸ್‌ಒ ಹಾಗೂ ಪ್ರತಿ 50 ವಾರ್ಡ್‌ಗೆ ಓರ್ವ ಡಿಒ (ಡೆಸಿಗ್ನೇಟೆಡ್‌ ಆಫೀಸರ್‌) ಇದ್ದಾರೆ.

ಕಳೆದ 5 ವರ್ಷಗಳಲ್ಲಿ ಮಾದರಿ ಸಂಗ್ರಹ ಪ್ರಮಾಣ ತುಂಬಾ ಕಡಿಮೆಯಾಗಿದೆ. ಎಫ್‌ಎಸ್ಒಗಳ ಮೇಲೆ ಬಿಬಿಎಂಪಿಗೆ ಹಿಡಿತ ಇಲ್ಲದಂತಾಗಿದೆ. ಇದು ಆಹಾರ ಸುರಕ್ಷತೆ ಬಗ್ಗೆ ಬಿಬಿಎಂಪಿಗೆ ಎಷ್ಟು ಕಾಳಜಿಯಿದೆ ಎಂಬುದನ್ನು ತೋರಿಸುತ್ತದೆ. ಆಹಾರ ಸುರಕ್ಷತೆ ದೃಷ್ಟಿಯಿಂದ ತಕ್ಷಣ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಆಹಾರ ಮಾದರಿಗಳನ್ನು ಸಂಗ್ರಹಿಸಿ ಕಲುಷಿತ, ರಾಸಾಯನ ಮಿಶ್ರಿತ, ಕಳಪೆ ಆಹಾರ ಪೂರೈಕೆಯಾಗದಂತೆ ನಿಗಾ ವಹಿಸಬೇಕು ಎಂದು ಮೋಹನ್ ದಾಸರಿ ಆಗ್ರಹಿಸಿದರು.

ಕಳೆದ ಅಕ್ಟೋಬರ್‌ನಲ್ಲಿ ಬೆಂಗಳೂರಿನ ಸುಮಾರು 20 ಅಂಗಡಿಗಳಲ್ಲಿ ಸಂಗ್ರಹಿಸಿದ ಸುಮಾರು 400 ತರಕಾರಿ ಮಾದರಿಗಳನ್ನು ಅಧಿಕಾರಿಗಳು ಸಂಗ್ರಹಿಸಿದ್ದರು. ಈ ಪೈಕಿ ತರಕಾರಿಗಳಲ್ಲಿ ಲೋಹ (ಕಬ್ಬಿಣ, ಕ್ಯಾಡ್ಮಿಯಂ, ನಿಕಲ್‌) ಕಲುಷಿತ ಪ್ರಮಾಣ ಶೇ. 100ಕ್ಕೂ ಹೆಚ್ಚಿರುವುದು ಅಧ್ಯಯನದಲ್ಲಿ ತಿಳಿದುಬಂದಿದೆ. ಇತ್ತೀಚೆಗೆ ತಮಿಳುನಾಡಿನಲ್ಲಿ ಬಾಂಬೆ ಮಿಠಾಯಿ(ಕಾಟನ್‌ ಕ್ಯಾಂಡಿ) ಯಲ್ಲಿ ಮಿತಿ ಮೀರಿದ ರಾಸಾಯನಿಕಯುಕ್ತ ಬಣ್ಣದ ಬಳಕೆ ಬಗ್ಗೆ ವರದಿಗಳಾಗಿದ್ದವು.

ಕ್ಯಾನ್ಸರ್‌ನಂತಹ ರೋಗಗಳಿಗೆ ಕಾರಣವಾಗುವ ಬಗ್ಗೆ ಆರೋಗ್ಯ ಇಲಾಖೆ ಎಚ್ಚರಿಕೆ ಸಂದೇಶವನ್ನು ನೀಡಿತ್ತು. ಬೆನ್ನಲ್ಲೇ ನಮ್ಮ ರಾಜ್ಯದಲ್ಲೂ ಕಾಟನ್‌ ಕ್ಯಾಂಡಿ, ಗೋಬಿಮಂಚೂರಿಗಳಂತಹ ತಿನಿಸುಗಳಲ್ಲಿ ಮಿತಿ ಮೀರಿದ ರಾಸಾಯನಿಕಯುಕ್ತ ಬಣ್ಣದ ಬಳಕೆ ಮಾಡಲಾಗುತ್ತಿರುವ ಬಗ್ಗೆ ಅಧ್ಯಯನಗಳು ದೃಢಪಡಿಸಿದ್ದವು. ಬಳಿಕ ರಾಸಾಯನಿಕ ಬಣ್ಣದ ಬಳಕೆಯನ್ನು ನಿಷೇಧಿಸಲಾಯಿತು.

ಆದರೂ ಕೆಮಿಕಲ್‌ಯುಕ್ತ ಬಣ್ಣಗಳ ಬಳಕೆಗೆ ಕಡಿವಾಣ ಬಿದ್ದಿಲ್ಲ. ನಮ್ಮ ರಾಜ್ಯದಲ್ಲೂ ರಾಸಾಯನಿಕಯುಕ್ತ ಆಹಾರ ಪೂರೈಕೆಯಾಗುತ್ತಿದೆ ಎಂಬುದನ್ನು ನೆರೆ ರಾಜ್ಯದಲ್ಲಾದ ಘಟನೆ ನಂತರ ತಿಳಿದುಕೊಳ್ಳಬೇಕೆ? ಹಾಗಿದ್ದರೆ ಎಫ್ಎಸ್ಒಗಳು ಏನು ಮಾಡುತ್ತಿದ್ದರು? ಎಂದು ಪಕ್ಷದ ರಾಜ್ಯ ಕಾರ್ಯದರ್ಶಿ ಉಷಾ ಮೋಹನ್ ಪ್ರಶ್ನಿಸಿದರು.

ಇತ್ತೀಚೆಗೆ ಮುಂಬೈನ ಟ್ರಾಂಬೆಯಲ್ಲಿ ಚಿಕನ್ ಶವರ್ಮಾ ತಿಂದ 19 ವರ್ಷದ ಯುವಕ ಹೊಟ್ಟೆ ನೋವಿನಿಂದ ಬಳಲಿ ಸಾವನ್ನಪ್ಪಿದ ಘಟನೆ ನಡೆದಿದೆ. ಶವರ್ಮಾ ತಿಂದ ಇತರ ಕೆಲವರೂ ಅಸ್ವಸ್ಥರಾಗಿದ್ದಾರೆ. ಬೀದಿ ಬದಿಯ ಹೋಟೆಲ್, ಡಾಬಾಗಳ ಆಹಾರ ಸುರಕ್ಷತೆ ಬಗ್ಗೆ ನಿಗಾ ವಹಿಸಲು ಬೆಂಗಳೂರಿನಲ್ಲೂ ಅಂತಹ ಘಟನೆಯಾಗಲಿ ಎಂದು ಕಾಯಲಾಗುತ್ತಿದೆಯೇ?

ಬೀದಿ ಬದಿ ವ್ಯಾಪರಕ್ಕೆ ನಮ್ಮ ತಕರಾರಿಲ್ಲ. ಆದರೆ ಸುರಕ್ಷಿತ ಆಹಾರ ಪೂರೈಸಲಾಗುತ್ತಿದೆಯೇ ಎಂಬುದರ ಮೇಲೆ ನಿಗಾ ಇರಿಸಬೇಕು ಎಂಬುದಷ್ಟೇ ನಮ್ಮ ಕಾಳಜಿ. ಎಫ್ಎಸ್ಒಗಳು ತಮ್ಮ ಕರ್ತವ್ಯ ಮರೆತು ಹಫ್ತಾ ವಸೂಲಿಕಾರರಾಗಿರುವುದು ದುರಂತ ಎಂದು ಪಕ್ಷದ ಬೆಂಗಳೂರು ಘಟಕದ ಕಾರ್ಯದರ್ಶಿ ಜಗದೀಶ್ ಬಾಬು ಬೇಸರ ವ್ಯಕ್ತಪಡಿಸಿದರು.

Leave a Reply

error: Content is protected !!
LATEST
KSRTC : ಗಣಪತಿ ಪ್ರತಿಷ್ಠಾಪಿಸಿದ್ದರಿಂದ ಡಿಪೋ ಮುಂದೆ ಚಾಲಕ ರವಿ ಪಾರ್ಥಿವ ಶರೀರ ಇಡಲಾತ್ತು, ಪ್ರಮಾದವಾಗಿಲ್ಲ- ಡಿಎಂ ಸಮ... 10 ವರ್ಷದ ಆಧಾರ್‌ ನವೀಕರಣಕ್ಕೆ ಡೆಡ್‌ಲೈನ್‌ ಫಿಕ್ಸ್‌: ನಾಳೆ ಅಂತಿಮ ಗಡುವು- ಬಳಿಕ ದಂಡ ನಾಗಮಂಗಲ ಕೋಮುಗಲಭೆ ಪ್ರಕರಣ: ಇನ್ಸ್‌ಪೆಕ್ಟರ್ ಅಶೋಕ್ ಕುಮಾರ್ ಅಮಾನತು KSRTC ಸಿಬ್ಬಂದಿಯಿಂದಲೇ ಡಿಸಿಗೆ ಇರಿಯಲು ಯತ್ನ- ಕೈ ಅಡ್ಡಹಾಕಿ ಪ್ರಾಣಾಪಾಯದಿಂದ ಪಾರಾದ ಜಗದೀಶ್ ಕುಮಾರ್‌ "ARM" ಸಿನಿಮಾ ಇಂದು ಪ್ರಪಂಚದಾದ್ಯಂತ ಐದು ಭಾಷೆಗಳಲ್ಲಿ ಬಿಡುಗಡೆ ಸೆ.14ರಂದು ಸಾರಿಗೆ ಸಿಬ್ಬಂದಿಗಳಿಗೆ ಔಷಧೀಯ ಸಸ್ಯಗಳ  ಉಚಿತ ವಿತರಣೆ: ಅಧಿಕಾರಿಗಳು ಭಾಗಿ ಟೊವಿನೋ ಥಾಮಸ್ ಸಿನಿಮಾ ವಿತರಿಸಲಿದೆ ಹೊಂಬಾಳೆ ಫಿಲ್ಮ್! ರೇಣುಕಾಸ್ವಾಮಿ ಕೊಲೆ ಪ್ರಕರಣ: ನಟ ದರ್ಶನ್‌ ಬಂಧನ ಅವಧಿ ಮತ್ತೆ ಒಂದು ದಿನ ವಿಸ್ತರಣೆ KSRTC ಚಿಕ್ಕಮಗಳೂರು: ಘಟಕದ ಗೇಟ್‌ ಬಳಿ ತ್ಯಾಜ್ಯಗಳ ನಡುವೆ ಚಾಲಕನ ಪಾರ್ಥಿವ ಶರೀರವಿಟ್ಟು ಅಂತಿಮ ದರ್ಶನಕ್ಕೆ ವ್ಯವಸ್ಥೆ-... ವಾಲ್ಮೀಕಿ ಹಗರಣ: ಬಳ್ಳಾರಿಯಿಂದ ಬಿಜೆಪಿ ಪಾದಯಾತ್ರೆ - ಛಲವಾದಿ ನಾರಾಯಣಸ್ವಾಮಿ