Search By Date & Category

NEWSಕೃಷಿನಮ್ಮರಾಜ್ಯ

ಜಮೀನು ಸರ್ವೆ ಪ್ರಕ್ರಿಯೆಗೆ ಇನ್ನಷ್ಟು ಆಧುನೀಕರಣ : ಕಂದಾಯ ಸಚಿವ ಅಶೋಕ್

ವಿಜಯಪಥ ಸಮಗ್ರ ಸುದ್ದಿ

ಬೆಳಗಾವಿ: ಜಮೀನು ಸರ್ವೆ ಪ್ರಕ್ರಿಯೆಯನ್ನು ಇನ್ನಷ್ಟು ಆಧುನೀಕರಣ ಗೊಳಿಸಲಾಗುವುದು ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು.

ಬುಧವಾರ ನಡೆದ ವಿಧಾನಪರಿಷತ್‌ ಕಲಾಪದಲ್ಲಿ ಕಾಂಗ್ರೆಸ್‌ ಶಾಸಕ ಗೋವಿಂದರಾಜು ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಸರ್ವೆ ವಿಚಾರದಲ್ಲಿ ದೂರುಗಳು ಬರದಂತೆ, ಸರಳೀಕರಣಗೊಳಿಸುವ ಭಾಗವಾಗಿ ನಾವು ಈಗಾಗಲೇ ಸ್ವಾವಲಂಬಿ ಆಪ್ ಮಾಡಿದ್ದೇವೆ.

ಭೂ-ಪರಿವರ್ತನೆ ಬಯಸುವವರು ಸ್ಕೆಚ್ ಮಾಡಿಕೊಂಡು ಆಧಾರ್ ನಂಬರ್ ಸಹಿತ ಈ ಸ್ವಾವಲಂಬಿ ಆಪ್‌ಗೆ ಹಾಕಿದಲ್ಲಿ ಅದನ್ನು ಸಬ್ ರಿಜಿಸ್ಟರ್ ಕಚೇರಿಗೆ ಕಳುಹಿಸುತ್ತೇವೆ. ಇಲ್ಲಿ ತಿದ್ದುಪಡಿಗೆ ಅವಕಾಶವಿಲ್ಲ. ಈ ಪ್ರಕ್ರಿಯೆಯನ್ನು ಪ್ರಾಯೋಗಿಕವಾಗಿ ಬಳ್ಳಾರಿ ಜಿಲ್ಲೆಯಲ್ಲಿ ಆರಂಭಿಸಲು ತಿಳಿಸಿದ್ದೇವೆ. ಬಳಿಕ ಇದನ್ನು ರಾಜ್ಯಾದ್ಯಂತ ವಿಸ್ತರಿಸಲಾಗುವುದು ಎಂದು ವಿವರಿಸಿದರು.

ಕಾನೂನು ತೊಡಕು ಸರಿಪಡಿಸ್ತೇವೆ: ಕರಾವಳಿ ಭಾಗದ ದಕ್ಷಿಣಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಅನಾದಿ ಕಾಲದಿಂದ ಅನುಭವಿಸಿಕೊಂಡು ಬರುತ್ತಿರುವ ಕಾನೆ, ಬಾನೆ, ಕುಮ್ಕಿ ಜಮೀನುಗಳನ್ನು ಮಂಜೂರು ಮಾಡುವ ಬಗ್ಗೆ ನೀತಿ ರೂಪಿಸಲು ಸರ್ಕಾರ ಸಕಾರಾತ್ಮಕ ಧೋರಣೆ ಹೊಂದಿದೆ ಎಂದು ಹೇಳಿದರು.

ಈ ಬಗ್ಗೆ ಸದ್ಯದಲ್ಲೆ ಚುನಾಯಿತ ಪ್ರತಿನಿಧಿಗಳ ಸಭೆ ಕರೆದು ಸುದೀರ್ಘವಾಗಿ ಚರ್ಚಿಸಿ ಇರುವ ಕಾನೂನು ತೊಡಕುಗಳನ್ನು ಸರಿಪಡಿಸಲಾಗುವುದು ಎಂದು ಅಶೋಕ್ ಪ್ರತಾಪ್ ಸಿಂಹ್ ನಾಯಕ ಅವರ ಪ್ರಶ್ನೆಗೆ ಉತ್ತರಿಸಿದರು.

Leave a Reply

error: Content is protected !!