ಬೆಂಗಳೂರು: ಪ್ರಸ್ತುತ ಇರುವ ಲೋಕಸಭಾ ಚುನಾವಣಾ ನೀತಿ ಸಂಹಿತೆಗೆ ತೆರೆ ಬೀಳುತ್ತಿದ್ದಂತೆ 7ನೇ ರಾಜ್ಯ ವೇತನ ಆಯೋಗದ ಶಿಫಾರಸಿನಂತೆ ರಾಜ್ಯ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ ಸಿಗಲಿದೆ. ಈ ಮೂಲಕ ವೇತನ, ಭತ್ಯೆ ಹಾಗೂ ಸೌಲಭ್ಯಗಳು ಪರಿಷ್ಕರಣೆ ಆಗುವುದು ಖಚಿತವಾಗಿದೆ.
ಈಗಾಗಲೇ ಮಧ್ಯಂತರವಾಗಿ ಶೇ.17ರಷ್ಟು ಮೂಲ ವೇತನ ಹೆಚ್ಚಳ ಮಾಡಿದ್ದು, ಅಂತಿಮವಾಗಿ ಇನ್ನೂ ಶೇ.8 ರಿಂದ ಶೇ.8.5 ರಷ್ಟು ವೇತನ ಹೆಚ್ಚಳ ನಿರೀಕ್ಷಿಸಲಾಗಿದೆ. ಒಟ್ಟಾರೆ ಏರಿಕೆ ಮೂಲವೇತನದ ಶೇ.25 ರಿಂದ ಶೇ.25.5 ತಲುಪುವ ಸಾಧ್ಯತೆಯಿದೆ ಎಂದು ಬಲ್ಲ ಮೂಲಗಳು ಖಚಿತಪಡಿಸಿವೆ.
ಕಳೆದ ಮಾರ್ಚ್ 16 ರಂದು ನೀತಿ ಸಂಹಿತೆ ಘೋಷಣೆಯಾಗುವ ಕೆಲಹೊತ್ತು ಮುನ್ನ ಸಲ್ಲಿಕೆಯಾಗಿದ್ದ 7ನೇ ವೇತನ ಆಯೋಗದ ಶಿಫಾರಸುಗಳನ್ನು ಸ್ವೀಕರಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಕೂಲಂಕಶವಾಗಿ ಅಧ್ಯಯನ ಮಾಡಿ ಸಲಹೆ ನೀಡಲು ಹಣಕಾಸು ಇಲಾಖೆಗೆ ಸೂಚಿಸಿದ್ದರು.
ಅದರಂತೆ ಆಯೋಗದ ಶೇ.27.5ರಷ್ಟು ಹೆಚ್ಚಳಕ್ಕೆ ಶಿಫಾರಸು ಬದಲಿಗೆ ಶೇ.25 ಏರಿಕೆಯ ಲೆಕ್ಕಾಚಾರಕ್ಕೆ ಬರಲಾಗಿದೆ. ಜೂನ್ ಮೊದಲ ವಾರ ನೀತಿ ಸಂಹಿತೆ ಮುಕ್ತಾಯವಾದ ಬಳಿಕ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಈ ಸಂಬಂಧ ಅಂತಿಮ ನಿರ್ಣಯ ಪ್ರಕಟಿಸಲಾಗುತ್ತದೆ ಎಂದು ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ.
ಆಯೋಗದ ಅಂತಿಮ ವರದಿ ನಿರೀಕ್ಷಿಸಿ ಹಿಂದಿನ ಬಿಜೆಪಿ ಸರ್ಕಾರದ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ವಿಧಾನಸಭೆ ಚುನಾವಣೆಗೆ ಮುನ್ನ ಶೇ.17ರಷ್ಟು ಮಧ್ಯಂತರ ವೇತನ ಹೆಚ್ಚಳ ಮಾಡಿತ್ತು ಮತ್ತು 2023ರ ಏಪ್ರಿಲ್ 1 ರಿಂದ ಅನ್ವಯವಾಗುವಂತೆ ಈ ಪರಿಷ್ಕರಣೆ ಜಾರಿಗೆ ಬಂದಿತ್ತು.
ಇನ್ನು ನೌಕರ ಸಮುದಾಯದ ಸಂಘಟಿತ ಒತ್ತಡದಂತೆ ಪ್ರಸ್ತುತ ಕಾಂಗ್ರೆಸ್ ನೇತೃತ್ವದ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ಕೂಡ 2024 -25ನೇ ಸಾಲಿನ ಬಜೆಟ್‌ನಲ್ಲಿ 7ನೇ ವೇತನ ಆಯೋಗದ ನಿರೀಕ್ಷಿತ ಶಿಫಾರಸುಗಳ ಅನುಷ್ಠಾನಕ್ಕಾಗಿ ಒಟ್ಟಾರೆ 15,431 ಕೋಟಿ ರೂ. ಅನುದಾನ ಮೀಸಲಿಟ್ಟಿದೆ.
ಪ್ರಮುಖ ಶಿಫಾರಸುಗಳು: ಕಳೆದ ಮಾರ್ಚ್ 16 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ವೇತನ ಆಯೋಗ ತನ್ನ ವರದಿ ಸಲ್ಲಿಸಿದ್ದು, ಅದರಲ್ಲಿ ಪ್ರಮುಖವಾಗಿ ಶೇ.31ರಷ್ಟು ತುಟ್ಟಿಭತ್ಯೆಯನ್ನು ವಿಲೀನಗೊಳಿಸಿ ಶೇ.27.50 ಫಿಟ್‌ಮೆಂಟ್ ನೀಡುವ ಮೂಲಕ ಕನಿಷ್ಠ ಮೂಲ ವೇತನವನ್ನು ಸದ್ಯದ 17,000 ರೂ.ಗಳಿಂದ 27,000 ರೂ.ಗೆ ಏರಿಕೆ ಮಾಡಲು ಸಲಹೆ ನೀಡಿದೆ.
ಇನ್ನು ಗರಿಷ್ಠ ವೇತನವನ್ನು 2,41,200 ರೂ.ಗೆ ನಿಗದಿಪಡಿಸಬೇಕು ಎಂದು ಶಿಫಾರಸು ಮಾಡಿದೆ. ಆಯೋಗದ 30 ಪ್ರಮುಖ ಶಿಫಾರಸುಗಳಲ್ಲಿ ನೌಕರರಿಗೆ ಹಲವು ಸೌಲಭ್ಯಗಳ ಹೆಚ್ಚಳವೂ ಸೇರಿದ್ದು, ಅದಕ್ಕೆ ಅನುಗುಣವಾಗಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ನೌಕರರಿಗೆ ಬಹುತೇಕ ಸಿಹಿ ಸುದ್ದಿಕೊಡುವ ಎಲ್ಲ ಮುನ್ಸೂಚನೆಗಳು ಕಾಣಿಸುತ್ತಿವೆ.