Please assign a menu to the primary menu location under menu

NEWSನಮ್ಮರಾಜ್ಯನಿಮ್ಮ ಪತ್ರ

ಕನ್ನಡ- ಕನ್ನಡಿಗರ ನಿಂದಿಸಿದರೆ ಕಠಿಣ ಕ್ರಮ: ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಕೆ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡ ಮತ್ತು ಕನ್ನಡಿಗರನ್ನು ಹೀಯಾಳಿಸುವ ಕೆಲಸ ಆಗುತ್ತಿದೆ. ಇನ್ನೂ ಮುಂದೆ ಯಾರಾದರೂ ನಿಂದಿಸಿದ್ದಲ್ಲಿ ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ.

ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ಇಂದು ಆಯೋಜಿಸಿದ್ದ 69ನೇ ಕನ್ನಡ ರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರೆಸಿ ಮಾತನಾಡಿದ ಅವರು, ಎಲ್ಲರಲ್ಲಿಯೂ ಕನ್ನಡ ಅಭಿಮಾನ ಇರಲಿ, ದುರಭಿಮಾನ ಬೇಡ. ಅಭಿಮಾನವಿದ್ದರೆ ಮಾತ್ರ ಕನ್ನಡ ಬೆಳೆಯುತ್ತದೆ. ಕನ್ನಡ ಬಾರದವರ ಜೊತೆಯಲ್ಲಿಯೂ ಕನ್ನಡದಲ್ಲಿಯೇ ಮಾತನಾಡಿ ಎಂದು ಕರೆ ನೀಡಿದರು.

ಇನ್ನು ಕನ್ನಡ ಬಾರದವರಿಗೆ ಕನ್ನಡ ಕಲಿಸಬೇಕು, ಆಗ ಕನ್ನಡದ ವಾತಾವರಣ ನಿರ್ಮಾಣವಾಗುತ್ತದೆ. ಎಲ್ಲರೂ ಈ ಪ್ರತಿಜ್ಞೆಯನ್ನು ತೆಗೆದುಕೊಳ್ಳಬೇಕು. ಇನ್ನೂ ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡ, ಕನ್ನಡಿಗರನ್ನು ಹೀಯಾಳಿಸುವ ಪ್ರವೃತ್ತಿ ಬೆಳೆಯುತ್ತಿದೆ. ಇದು ನಾಡದ್ರೋಹ, ಅಂತಹವರ ವಿರುದ್ಧ ಸರ್ಕಾರ ಮುಲಾಜಿಲ್ಲದೇ ಕಠಿಣ ಕ್ರಮ ತಗೊಳ್ಳುತ್ತದೆ ಎಂದು ಹೇಳಿದರು.

ನಾವು ಕನ್ನಡಿಗರಾಗಿರುತ್ತೇವೆ. ಬೇರೆಯವರನ್ನೂ ಕನ್ನಡಿಗರಾಗಿ ಮಾಡುತ್ತೇವೆ. ವ್ಯವಹಾರದಲ್ಲೂ ಕನ್ನಡ ಬಳಸುತ್ತೇವೆ ಎಂದು ಶಪಥ ಮಾಡೋಣ ಎಂದು ಕರೆ ನೀಡಿದರು.

ಇನ್ನು ಕನ್ನಡದ ಅಭಿಮಾನವಿರಲಿ. ಬೇರೆ ಭಾಷಿಕರಿಗೂ ಕನ್ನಡ ಕಲಿಸುವ ಕೆಲಸ ಮಾಡಬೇಕು. ಯಾವುದೇ ಧರ್ಮ, ಭಾಷೆ, ಪ್ರಾಂತ್ಯದವರು ಇರಲಿ ಕರ್ನಾಟಕದಲ್ಲಿ ಇರುವವರೆಲ್ಲ ಕನ್ನಡಿಗರೇ. ಈ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸ ಇದೆ. ಕನ್ನಡ ಶಾಸ್ತ್ರೀಯ ಭಾಷೆ. ನಾವು ನಮ್ಮ ಭಾಷೆಯನ್ನು ಯಾವುದೇ ಕಾರಣಕ್ಕೂ ಬಲಿ ಕೊಟ್ಟು ಉದಾರಿಗಳಾಗಬಾರದು. ಭಾಷೆ ವ್ಯಾಮೋಹವೂ ಅತಿಯಾಗಿರಬಾರದು. ಆದರೆ, ಕನ್ನಡ ಅಭಿಮಾನ ಬಿಟ್ಟುಕೊಡಬಾರದು. ಬೇರೆ ಭಾಷೆ ಕಲಿಯಿರಿ, ಆದರೆ ಕನ್ನಡ ಮರೆಯಬೇಡಿ ಎಂದು ಹೇಳಿದರು.

ರಾಜ್ಯಗಳ ಏಕೀಕರಣ ಆಗಿ 68 ವರ್ಷಗಳು ತುಂಬಿದ್ದು 69ಕ್ಕೆ ಕಾಲಿಟ್ಟಿದ್ದೀವಿ. 1953ರಲ್ಲಿ ಫಜಲ್ ಅಲಿ ನೇತೃತ್ವದಲ್ಲಿ ರಾಜ್ಯಗಳ ಪುನರ್ವಿಂಗಡಣೆ ಸಮಿತಿ ರಚಿಸಲಾಯಿತು. ಇವರು ಕೊಟ್ಟ ವರದಿ ಆಧಾರದಲ್ಲಿ ಭಾಷಾವಾರು ರಾಜ್ಯಗಳ ವಿಂಗಡಣೆ ಆಯಿತು. ಆ ದಿನವನ್ನು ನಾವೆಲ್ಲರೂ ಇಡೀ ದೇಶದಲ್ಲಿ ರಾಜ್ಯಗಳ ಏಕೀಕರಣ ದಿನವಾಗಿ ಆಚರಿಸುತ್ತಿದ್ದೇವೆ ಎಂದರು.

ಇನ್ನು 1973ರವರೆಗೆ ಕರ್ನಾಟಕ ರಾಜ್ಯ ಆಗಿರಲಿಲ್ಲ, ಮೈಸೂರು ರಾಜ್ಯ ಆಗಿತ್ತು. ನಮ್ಮ ರಾಜ್ಯಕ್ಕೆ ಕರ್ನಾಟಕ ಎಂದು 1973 ನವೆಂಬರ್ 1 ರಂದು ಹೆಸರು ಇಡಲಾಯಿತು. ನಾಮಕರಣ ಆಗಿ 51 ವರ್ಷ ತುಂಬುತ್ತಿದೆ. 50 ವರ್ಷವಾದಾಗ ರಾಜ್ಯದಲ್ಲಿ ಬಿಜೆಪಿ ಸರ್ಕಾರವಿತ್ತು. ಆದರೆ ಅವರು 50ನೇ ವರ್ಷದ ಆಚರಣೆ ಮಾಡಲಿಲ್ಲ. ನಾವು ಬಂದ ಮೇಲೆ ಇಡೀ ವರ್ಷ ಸಂಭ್ರಮದಿಂದ ಆಚರಣೆ ಮಾಡಿದೆವು ಎಂದರು.

57 ಲಕ್ಷ ಶಾಲಾ ಮಕ್ಕಳಿಗೆ ವಾರದ ಆರು ದಿನಗಳೂ ಮೊಟ್ಟೆ: ರಾಜ್ಯದ ಎಲ್ಲ 57 ಲಕ್ಷ ಶಾಲಾ ಮಕ್ಕಳಿಗೆ ವಾರದ ಆರು ದಿನ ಮೊಟ್ಟೆ ಕೊಡುತ್ತಿದ್ದೇವೆ. ಈಗ ಮಕ್ಕಳಿಗೆ ಹಾಲಿನ ಜೊತೆಗೆ ರಾಗಿ ಮಾಲ್ಟ್ ಕೊಡುತ್ತಿದ್ದೇವೆ. ಅಸಮಾನತೆ, ಅಪೌಷ್ಟಿಕತೆಯನ್ನು ಹೊಡೆದೊಡಿಸಲು ಹಾಗೂ ಗುಣಮಟ್ಟದ ಶಿಕ್ಷಣ ಕೊಡುವ ಸಲುವಾಗಿ ಈ ಯೋಜನೆಗಳನ್ನು ಮಾಡುತ್ತಿದ್ದೇವೆ ಎಂದು ತಿಳಿಸಿದರು.

ರಾಜ್ಯಕ್ಕೆ ತೆರಿಗೆ ಅನ್ಯಾಯ: ಕರ್ನಾಟಕಕ್ಕೆ ಇವತ್ತು ದೊಡ್ಡ ಅನ್ಯಾಯ ಆಗುತ್ತಿದೆ. ಮಹಾರಾಷ್ಟ್ರ ಬಿಟ್ಟರೆ ಅತೀ ಹೆಚ್ಚು ತೆರಿಗೆ ಕಟ್ಟುವ ರಾಜ್ಯ ನಮ್ಮದು. ನಾವು 4 ಲಕ್ಷ ಕೋಟಿ ರೂ.ಗಳಿಗೂ ಹೆಚ್ಚು ತೆರಿಗೆ ಕಟ್ಟಿದ್ದರೂ ವಾಪಸ್ ಪಡೆಯುತ್ತಿರುವುದು 50-60 ಸಾವಿರ ರೂ. ಕೋಟಿ ಮಾತ್ರ. 1 ರೂ.ನಲ್ಲಿ 14-15 ಪೈಸೆ ಮಾತ್ರ ನಮಗೆ ವಾಪಸ್ ಕೊಡುತ್ತಿದ್ದಾರೆ. ನಾವು ಮುಂದುವರಿದ ರಾಜ್ಯ ಎಂದು ತೆರಿಗೆ ಪಾಲಿನಲ್ಲಿ ಅನ್ಯಾಯ ಆಗುತ್ತಿದೆ. ಹಸು ಹಾಲು ಕೊಡುತ್ತದೆ ಎಂದು ಕರುವಿಗೆ ಹಾಲು ಕೊಡದಿದ್ದರೆ ಆ ಕರು ದುರ್ಬಲ ಆಗುತ್ತದೆ.

ನಾವು ಕೊಡುವ ತೆರಿಗೆ, ನಮ್ಮ ತೆರಿಗೆ ಪಾಲು ಸರಿಯಾಗಿ ಕೊಡಿ ಎಂದರೆ ಅದಕ್ಕೆ ರಾಜಕೀಯ ಬಣ್ಣ ಹಚ್ಚುತ್ತಾರೆ. ಇದನ್ನು ನಾವೆಲ್ಲ ಕನ್ನಡಿಗರೂ ಅರ್ಥ ಮಾಡಿಕೊಳ್ಳಬೇಕು. ನಮ್ಮ ಹಕ್ಕು ನಾವು ಕೇಳಬೇಕು. ಎಲ್ಲ ಸಂಸದರೂ ಲೋಕಸಭೆಯಲ್ಲಿ ಪ್ರತಿಭಟಿಸಿ, ತಮ್ಮ ದನಿಯನ್ನು ಲೋಕಸಭೆಯಲ್ಲಿ ಎತ್ತಬೇಕು ಆಗ ಮಾತ್ರ ನಮಗೆ ನ್ಯಾಯ ಸಿಗುತ್ತದೆ. ಸಂಸದರಿಗೆ ನಮ್ಮ ಅನ್ಯಾಯ ಪ್ರಸ್ತಾಪಿಸಿ, ಸರಿಪಡಿಸುವ ಶಕ್ತಿ ಬರಲಿ. ಹಿಂದೆಯಿದ್ದ ಬಿಜೆಪಿ ನಮಗೆ ಬರಬೇಕಾದ ತೆರಿಗೆ ಪಾಲು ಕೇಳುವ ಕೆಲಸ ಮಾಡಲಿಲ್ಲ ಎಂದು ಕಿಡಿಕಾರಿದರು.

ಕಾರ್ಯಕ್ರಮದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್, ಸರ್ಕಾರದ ಕಾರ್ಯದರ್ಶಿ ಶಾಲಿನಿ ರಜನೀಶ್, ಶಿಕ್ಷಣ ಸಚಿವ ಮಧುಬಂಗಾರಪ್ಪ ಭಾಗಿಯಾಗಿದ್ದರು.

Leave a Reply

error: Content is protected !!
LATEST
ಪತ್ನಿ ಅಕ್ರಮ ಸಂಬಂಧದಿಂದ ಪತಿ ಆತ್ಮಹತ್ಯೆ ಪ್ರಕರಣ: ಹೆಂಡತಿಗೆ ಶಿಕ್ಷಿಸಲಾಗದು - ಹೈ ಕೋರ್ಟ್ ತೀರ್ಪು ತುಮಕೂರು: ಗೋವಾಗೆ ಹೋಗುತ್ತಿದ್ದ ಬಸ್ ಪಲ್ಟಿ: ಮೂವರು ಮಹಿಳೆಯರು ಮೃತ ಮೈಸೂರು-ಮಂಡ್ಯ: ಮಳೆ ಹೆಚ್ಚಾಗಿರುವ ಹಿನ್ನೆಲೆ ಶಾಲೆಗಳಿಗೆ ರಜೆ- ಡಿಸಿಗಳ ಆದೇಶ ದೆಹಲಿ: ರೈತರು ಉಪವಾಸ ಸತ್ಯಾಗ್ರಹ ಬೆಂಬಲಿಸಿ ಡಿ.6ರಿಂದ ಬೆಂಗಳೂರಿನಲ್ಲೂ ಸತ್ಯಾಗ್ರಹ: ಕುರುಬೂರು ಶಾಂತಕುಮಾರ್ ರಾಜ್ಯದಲ್ಲಿ ವರುಣನ ಅಬ್ಬರ: ಹಲವು ಜಿಲ್ಲೆಗಳ ಶಾಲಾ- ಕಾಲೇಜುಗಳಿಗೆ ನಾಳೆ ರಜೆ ಕನ್ನಡ ಕಿರುತೆರೆಯ ಬ್ರಹ್ಮಗಂಟು ಸೀರಿಯಲ್ ಖ್ಯಾತಿಯ ಶೋಭಿತಾ ಶಿವಣ್ಣ ಆತ್ಮಹತ್ಯೆ KSRTC: 1308 ನೌಕರರ ವರ್ಗಾವಣೆ- ಆಕ್ಷೇಪಣೆ ಸಲ್ಲಿಸಲು ಡಿ.4ರವರೆಗೂ ಅವಕಾಶ ಸಾರಿಗೆ ನೌಕರರ ಬೇಡಿಕೆ ಅರ್ಥ ಮಾಡಿಕೊಳ್ಳಿ: ಜಂಟಿ ಕ್ರಿಯಾ ಸಮಿತಿಗೆ ನೌಕರನ ಒತ್ತಾಯ ಬಿಬಿಎಂಪಿ: 13 ಕೆರೆಗಳ ಒತ್ತುವರಿ ತೆರವು- ₹242.5 ಕೋಟಿ ಮೌಲ್ಯದ 7 ಎಕರೆ ಪ್ರದೇಶ ವಶ -ಪ್ರೀತಿ ಗೆಹ್ಲೋಟ್ ಫೆಂಗಲ್ ಚಂಡಮಾರುತದ ಪರಿಣಾಮ ಎಲ್ಲಾ ಅಧಿಕಾರಿಗಳು ಮುಂಜಾಗ್ರತಾ ಕ್ರಮ ವಹಿಸಲು ಸೂಚನೆ: ತುಷಾರ್ ಗಿರಿನಾಥ್