ಯೌವನದಲ್ಲಿ ಎಂತಹದ್ದೇ ಪದಾರ್ಥಗಳನ್ನು ತಿಂದರೂ ಅರಗಿಸಿಕೊಳ್ಳುವ ಶಕ್ತಿಯಿರುತ್ತದೆ. ಆದರೆ ವಯಸ್ಸಾಗುತ್ತಿದ್ದಂತೆಯೇ ಎಲ್ಲವನ್ನು ಅರಗಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಹೀಗಾಗಿ ನಮ್ಮ ದೇಹಕ್ಕೆ ಸ್ಪಂದಿಸದ ಆಹಾರಗಳನ್ನು ಸೇವಿಸಿ ತೊಂದರೆ ಪಡುವುದಕ್ಕಿಂತ ಅವುಗಳನ್ನು ದೂರವಿಟ್ಟು, ನಮಗೆ ಆರೋಗ್ಯ ನೀಡುವಂತ ಪದಾರ್ಥಗಳನ್ನು ಸೇವಿಸುವುದನ್ನು ರೂಢಿಸಿಕೊಳ್ಳುವುದು ಒಳ್ಳೆಯದು.
ವಯಸ್ಸಿಗೆ ತಕ್ಕಂತೆ ಆರೋಗ್ಯವಾಗಿರ ಬೇಕಾದರೆ ನಮ್ಮ ಆಹಾರ ಸೇವನೆಯಲ್ಲಿ ಒಂದಷ್ಟು ಮಾರ್ಪಾಡುಗಳನ್ನು ಮಾಡಿಕೊಳ್ಳುವುದು ಅನಿವಾರ್ಯ. ಕೆಲವೊಂದು ಆಹಾರ ನಮಗೆ ಇಷ್ಟವಾದರೂ ಅದು ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಬಾಯಿ ಚಪಲಕ್ಕೆ ಅದನ್ನು ಸೇವಿಸಿ ಮತ್ತೆ ಅನಾರೋಗ್ಯದ ಸಮಸ್ಯೆಯಿಂದ ಬಳಲುವುದಕ್ಕಿಂತ ದೇಹಕ್ಕೆ ಸರಿ ಹೊಂದುವ ಆಹಾರ ಯಾವುದೆಂದು ಗುರುತಿಸಿಕೊಂಡು ಅದನ್ನು ಸೇವಿಸಿ ನೆಮ್ಮದಿಯಾಗಿರುವುದು ಉತ್ತಮ.
ಈಗೀಗ ಆಹಾರದ ಗುಣಮಟ್ಟಕ್ಕಿಂತ ಹೆಚ್ಚಾಗಿ ಬಾಯಿರುಚಿಗೆ ಹೆಚ್ಚು ಒತ್ತುಕೊಡುತ್ತಿರುವುದರಿಂದಾಗಿ ಆರೋಗ್ಯದ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ನಾವು ಉಪಯೋಗಿಸುವ ಆಹಾರ ಪದಾರ್ಥ ನಾಲಿಗೆ ಚಪ್ಪರಿಸಿ ತಿನ್ನುವಂತಹ ರುಚಿಯನ್ನು ಹೊಂದಿರುತ್ತವೆಯಾದರೂ ಅವು ಆರೋಗ್ಯಕ್ಕೆ ಹೊಂದುವುದಿಲ್ಲ. ಹೀಗಾಗಿ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಅದರಲ್ಲೂ ವಯಸ್ಸಾದವರಂತು ತಮ್ಮ ವಯಸ್ಸಿಗೆ ತಕ್ಕಂತೆ ಜೀರ್ಣ ಶಕ್ತಿಯಿರುವಂತಹ ಆಹಾರವನ್ನು ಸೇವಿಸುವುದು ಒಳಿತು.
ಮಾರುಕಟ್ಟೆಯಿಂದ ತರುವ ಬಹುತೇಕ ಪದಾರ್ಥಗಳು ವಯಸ್ಸಾದವರಿಗೆ ಹೇಳಿ ಮಾಡಿಸಿದಲ್ಲ. ಹೀಗಾಗಿ ಹಸಿವು ತಣಿಸುವ ಸಲುವಾಗಿ ಅಥವಾ ಬಾಯಿಗೆ ರುಚಿಯಾಗುತ್ತಿದೆ ಎಂಬ ಕಾರಣಕ್ಕಾಗಿ ಆಹಾರವನ್ನು ಸೇವಿಸುವ ಅಭ್ಯಾಸ ಮಾಡಿಕೊಳ್ಳದೆ ಆರೋಗ್ಯದ ಹಿತ ದೃಷ್ಠಿಯಿಂದ ಉತ್ತಮ ಯಾವುದು ಎಂಬುದನ್ನು ತಿಳಿದುಕೊಂಡು ಅಂತಹ ಪದಾರ್ಥಗಳನ್ನು ಹೆಚ್ಚು, ಹೆಚ್ಚು ಸೇವಿಸುವುದು ಆರೋಗ್ಯಕಾರಿ ಅಭ್ಯಾಸವಾಗಿದೆ.
ವಯಸ್ಸಾದಂತೆಲ್ಲ ಹಸಿವು ಮತ್ತು ಜೀರ್ಣಶಕ್ತಿ ಕಡಿಮೆಯಾಗುವುದರಿಂದ ಪ್ರೊಟೀನ್, ಕೊಬ್ಬು, ಖನಿಜಾಂಶ ಹಾಗೂ ಜೀವಸತ್ವಗಳುಳ್ಳ ಪೌಷ್ಠಿಕ ಆಹಾರವನ್ನು ಸೇವಿಸಬೇಕು. ಈ ಆಹಾರದ ಪ್ರಮಾಣವು ದಿನಕ್ಕೆ 300 ರಿಂದ 330 ಗ್ರಾಂ ಇರುವಂತೆ ನೋಡಿಕೊಳ್ಳಬೇಕು ಇದರಿಂದ ವಯಸ್ಸಾದವರು ತಮ್ಮ ಜೀವಿತದ ಕೊನೆಯ ಕಾಲವನ್ನು ಆರೋಗ್ಯವಾಗಿ, ಖುಷಿಯಿಂದ ಕಳೆಯಲು ಸಾಧ್ಯವಾಗುತ್ತದೆ ಎನ್ನುವುದು ವೈದ್ಯರ ಅಭಿಪ್ರಾಯವಾಗಿದೆ.
ನಿತ್ಯದ ಆಹಾರ ಕ್ರಮದಲ್ಲಿ ಏನೇನು ಅಳವಡಿಸಿಕೊಳ್ಳಬೇಕು? ಎಂತಹ ಆಹಾರವನ್ನು ಸೇವಿಸಬೇಕು? ಎಂಬುದರ ಬಗ್ಗೆ ಒಂದಷ್ಟು ಟಿಪ್ಸ್‌ಗಳನ್ನು ವೈದ್ಯರು ನೀಡುತ್ತಾರೆ ಅದೇನು ಎಂಬುದು ಈ ಕೆಳಗಿನಂತಿದೆ.
ಸಾಮಾನ್ಯವಾಗಿ ದಿನಕ್ಕೆ ಮೂರು ಬಾರಿ ಊಟ ಮಾಡುತ್ತೇವೆ. ಆದರೆ ವಯಸ್ಸಾದವರು ಕಡಿಮೆ ಪ್ರಮಾಣದಲ್ಲಿ ಹಲವು ಬಾರಿ ಊಟ ಮಾಡುವುದು ಒಳ್ಳೆಯದು. ಆಹಾರದಲ್ಲಿ ಅಕ್ಕಿ, ರಾಗಿ, ಗೋಧಿ, ಜೋಳ ಮೊದಲಾದ ಧಾನ್ಯಗಳಿರಲಿ.
ನಿತ್ಯ ಉಪಯೋಗಿಸುವ ಆಹಾರದಲ್ಲಿ ಪ್ರೊಟೀನ್‌ಯುಕ್ತ ಬೇಳೆಕಾಳುಗಳು ಇರುವಂತೆ ನೋಡಿಕೊಳ್ಳಬೇಕು. ಇವುಗಳನ್ನು ಕನಿಷ್ಟ 60ಗ್ರಾಂನಷ್ಟಾದರೂ ಸೇವಿಸಬೇಕು. ಇದರೊಂದಿಗೆ ದಿನಕ್ಕೆ ಕನಿಷ್ಟ 2 ರಿಂದ 3 ಲೋಟದಷ್ಟು ಹಾಲು ಅಥವಾ ಮೊಸರು ಸೇವಿಸಬೇಕು. ಮೊಳಕೆ ಕಾಳುಗಳು, ಮೊಟ್ಟೆಯ ಬಿಳಿಭಾಗ, ಮೀನು, ಜತೆಗೆ ಸೊಪ್ಪು ಸೇರಿದಂತೆ ಗೆಡ್ಡೆಗೆಣಸು ತರಕಾರಿ ಸೇವಿಸುವುದು ಒಳ್ಳೆಯದು.
ಮಲವಿಸರ್ಜನೆ ಸಲೀಸಾಗಿ ನಡೆಯಲು ಅನುಕೂಲವಾಗುವಂತೆ ನಾರಿನ ಅಂಶವಿರುವ ಹಣ್ಣು, ತರಕಾರಿ, ಉಂಡೆಕಾಳುಗಳನ್ನು ಆಹಾರದಲ್ಲಿ ಸೇರಿಸಬೇಕು. ನಾರಿನ ಅಂಶವು ರಕ್ತದ ಕೊಲೆಸ್ಟ್ರಾಲ್‌ನ್ನು ಕಡಿಮೆ ಮಾಡುತ್ತದೆ. ಜತೆಗೆ ದೊಡ್ಡ ಕರುಳಿನ ಕ್ಯಾನ್ಸರನ್ನು ತಡೆಗಟ್ಟುವ ಗುಣವನ್ನು ಹೊಂದಿದೆ.
ಇನ್ನು ಹಲ್ಲುಗಳು ಇಲ್ಲದಿದ್ದಲ್ಲಿ ಮೆದುವಾದ ಮತ್ತು ಚೆನ್ನಾಗಿ ಬೆಂದಿರುವ ಆಹಾರ ಪದಾರ್ಥಗಳನ್ನು ಸೇವಿಸಬೇಕು. ಜತೆಗೆ ಸುಲಭವಾಗಿ ಜೀರ್ಣವಾಗುವಂತಹ ಆಹಾರಪದಾರ್ಥಗಳಿಗೆ ಆದ್ಯತೆ ನೀಡಬೇಕಾಗುತ್ತದೆ.
ವಯಸ್ಸಾದಂತೆ ಮೂಳೆಗಳ ಸವೆತ ಮತ್ತು ದೌರ್ಬಲ್ಯ ಕಾಣಿಸಿಕೊಳ್ಳುತ್ತದೆ. ಇದು ಕ್ಯಾಲ್ಸಿಯಂನಿಂದ ಆಗುವ ತೊಂದರೆಯಾಗಿದ್ದು, ಕ್ಯಾಲ್ಸಿಯಂ ಅಂಶ ಹೆಚ್ಚಾಗಲು ಹಾಲಿನ ಉತ್ಪನ್ನ, ರಾಗಿ, ಮೀನು, ಸೊಪ್ಪುಗಳನ್ನು ಸೇವಿಸುವುದು ಉತ್ತಮ. ನಿಯಮಿತ ಸಮಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ದ್ರವ ಆಹಾರಗಳನ್ನು ಸೇವಿಸಬೇಕು.
ಇನ್ನು ಆರೋಗ್ಯದ ದೃಷ್ಟಿಯಿಂದ ಕೊಬ್ಬು, ಎಣ್ಣೆ ಮತ್ತು ಸಕ್ಕರೆ ಸೇವನೆ ಕಡಿಮೆ ಮಾಡಿ. ನಾರಿನ ಅಂಶವಿಲ್ಲದ ಸಂಸ್ಕರಿಸಿದ ಆಹಾರ ಪದಾರ್ಥ, ಮೈದಾದಿಂದ ತಯಾರಿಸಿದ ಬ್ರೆಡ್, ಬನ್, ನೂಡಲ್ಸ್, ನಾನ್ ಮುಂತಾದ ಆಹಾರಗಳನ್ನು ಸೇವಿಸಬೇಡಿ.
ಮಸಾಲೆ ಪದಾರ್ಥಗಳ ಸೇವನೆ ಕಡಿಮೆಯಿರಲಿ. ಮದ್ಯಪಾನ, ಧೂಮಪಾನವನ್ನು ತ್ಯಜಿಸಿ, ಕೊಲೆಸ್ಟ್ರಾಲ್ ಹೆಚ್ಚಿಸುವ ಬೆಣ್ಣೆ, ತುಪ್ಪ, ವನಸ್ಪತಿ, ಬಜ್ಜಿ, ಬೋಂಡ, ಪೂರಿ, ಹಪ್ಪಳ ಮೊದಲಾದ ಎಣ್ಣೆಯಲ್ಲಿ ಕರಿದ ಪದಾರ್ಥಗಳ ಸೇವನೆಯನ್ನು ಆದಷ್ಟು ಕಡಿಮೆ ಮಾಡಿ. ಅತಿಯಾದ ಕಾಫಿ, ಟೀ ಸೇವನೆ ಒಳ್ಳೆಯದಲ್ಲ. ಆಹಾರ ಸೇವನೆಯಲ್ಲಿ ಉಪ್ಪಿನ ಬಳಕೆಯ ಪ್ರಮಾಣ ಕಡಿಮೆ ಮಾಡಿಕೊಳ್ಳಿ. ಅನಗತ್ಯ ಉಪವಾಸ ಮಾಡುವುದನ್ನು ಬಿಟ್ಟು ಬಿಡಿ. ಜೀರ್ಣಶಕ್ತಿ ಉಂಟಾಗಲು ಕಡಿಮೆ ಆಹಾರವನ್ನು ಹೆಚ್ಚು ಬಾರಿ ಸೇವಿಸುವುದನ್ನು ರೂಢಿಸಿಕೊಳ್ಳಿ.
ಊಟಬಲ್ಲವನಿಗೆ ರೋಗವಿಲ್ಲ ಎಂಬ ಗಾದೆಯ ಮಾತಿನಂತೆ ಊಟದ ವಿಚಾರದಲ್ಲಿ ನಿರ್ಲಕ್ಷ್ಯವಹಿಸದೆ ಶಿಸ್ತುಬದ್ಧತೆ ಬೆಳೆಸಿಕೊಂಡರೆ ಯಾವುದೇ ರೀತಿಯ ಸಮಸ್ಯೆ ಕಾಣಿಸುವುದಿಲ್ಲ. ಜತೆಗೆ ಆಹಾರದಿಂದ ಉಂಟಾಗುವ ಸಮಸ್ಯೆಯಿಂದ ದೂರವಾಗಿ ನೆಮ್ಮದಿ ಮತ್ತು ಆರೋಗ್ಯಯುತ ಸಂಧ್ಯಾಕಾಲವನ್ನು ಕಳೆಯಲು ಇದು ಅನುಕೂಲ ಮಾಡಿಕೊಡುತ್ತದೆ.