ರಾಜ್ಯದ ವಿವಿಧೆಡೆ ಭಾರಿ ಮಳೆ: ಧರೆಗುರುಳಿದ ಮನೆ, ಮರಗಳು – ಜನ ಜೀವನ ಅಸ್ತವ್ಯಸ್ತ
ಮೈಸೂರು: ಜಿಲ್ಲೆಯ ಹುಣಸೂರು ತಾಲೂಕಿನಲ್ಲಿ ವರುಣನ ಅಬ್ಬರ ಹೆಚ್ಚಾಗಿದ್ದು ನಾಲ್ಕೈದು ದಿನಗಳಿಂದ ಸುರಿಯುತ್ತಿರುವ ಮಳೆಗೆ ತಾಲೂಕಿನ ಹಲವು ಗ್ರಾಮಗಳಲ್ಲಿ ಅಪಾರ ಪ್ರಮಾಣದ ಹಾನಿಯಾಗಿದೆ.
ಕಾಳೇನಹಳ್ಳಿಯಲ್ಲಿ ಶ್ರೀನಿವಾಸ್ ಎಂಬುವರಿಗೆ ಸೇರಿದ ಮನೆ ಕುಸಿದು ಬಿದ್ದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಆದರೆ ಜೋರಾಗಿ ಸುರಿದ ಮಳೆಗೆ ಮನೆಯಲ್ಲಿದ್ದ ವಸ್ತುಗಳೆಲ್ಲ ನಾಶವಾಗಿವೆ. ಇನ್ನು ಇದ್ದ ಒಂದು ಮನೆಯು ನೆಲಕಚ್ಚಿರುವುದರಿಂದ ವಾಸಕ್ಕೆ ಮನೆಯಿಲ್ಲದ ಸ್ಥಿತಿ ನಿರ್ಮಾಣವಾಗಿ ಕುಟುಂಬಸ್ಥರು ಪರಿಹಾರಕ್ಕಾಗಿ ಮನವಿ ಮಾಡಿದ್ದಾರೆ.
ಇತ್ತ ಹನಗೋಡಿನಲ್ಲಿ ಭಾರಿ ಮಳೆಗೆ ಜನರು ತತ್ತರಿಸಿದ್ದಾರೆ. ಗ್ರಾಮದಲ್ಲಿ ವಾರದಿಂದ ಸುರಿಯುತ್ತಿರುವ ಮಳೆಗೆ ಮನೆ ಅಂಗಡಿಗಳಿಗೆ ನೀರು ನುಗ್ಗಿ ಸಂಪೂರ್ಣ ಜಲಾವೃತಗೊಂಡಿದ್ದು, ಅಲ್ಲದೆ ಬಸ್ ನಿಲ್ದಾಣ ಕೆರೆಯಂತಾಗಿದೆ. ಚರಂಡಿಗಳ ವ್ಯವಸ್ಥೆ ಸರಿಯಿಲ್ಲದೆ ನೀರು ಹೋಗದೆ ನಿಂತಲ್ಲೇ ನಿಂತು ಜನರಿಗೆ ತೊಂದರೆಯಾಗುತ್ತಿದೆ.
ರಸ್ತೆಯಲ್ಲೇ ಎರಡು ಅಡಿ ನೀರು: ಚಿಕ್ಕಮಗಳೂರಿನ ಕೊಪ್ಪ ತಾಲೂಕಿನ ಬಸರೀಕಟ್ಟೆ, ತರೀಕೆರೆಯಲ್ಲೂ ಭಾರೀ ಮಳೆಯಾಗಿದ್ದು ರಸ್ತೆಯಲ್ಲಿ ಎರಡು ಅಡಿ ನೀರು ನಿಂತಿತ್ತು. ತರೀಕೆರೆ ಪಟ್ಟಣದ ಗಣಪತಿ ಪೆಂಡಾಲ್ ಮುಂಭಾಗ ಕಾರು, ಬೈಕ್‌ಗಳು ಅರ್ಧದಷ್ಟು ಮುಳುಗಿತ್ತು. ಎನ್ಆರ್ ಪುರ ತಾಲೂಕಿನ ಬಾಳೆಹೊನ್ನೂರಿನಲ್ಲೂ ಮಳೆಯಾಗಿದೆ.
ಯಾದಗಿರಿಯಲ್ಲಿ ಧರೆಗುರುಳಿದ ಮರಗಳು: ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆಗೆ ಬೃಹತ್ ಮರಗಳು ಧರೆಗುರುಳಿದ್ದವು. ಸತತ ಒಂದು ಗಂಟೆಗೂ ಹೆಚ್ಚು ಕಾಳ ಸುರಿದ ಮಳೆಗೆ ಮರಗಳ ಮೇಲ್ಭಾಗದ ರಂಬೆ, ಕೊಂಬೆಗಳು ಸಂಪೂರ್ಣ ಗಾಳಿಗೆ ಮುರಿದು ಬಿದ್ದವು. ಭಾರಿ ಮಳೆಗೆ ಸುಭಾಷ್ ವೃತ್ತದ ಸಮೀಪದ PWD ಕಚೇರಿ ಆವರಣದೊಳಗೆ ಮಳೆ ನೀರು ನುಗ್ಗಿದ್ದರೆ, ಯಾದಗಿರಿ ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು ಅವರ ಜನಸಂಪರ್ಕದ ಕಚೇರಿ ಆವರಣದಲ್ಲಿ ಮರಗಳು ಧರೆಗುರುಳಿದ್ದವು.
ಯಾದಗಿರಿಯ ಮಾತಾಮಣಿಕೇಶ್ವರಿ ನಗರದಲ್ಲಿ ಮನೆಗೆ ಹಾಕಿದ ಟಿನ್ ಶೆಡ್ ಹಾರಿಹೋಗಿದೆ. ಮಳೆ ಗಾಳಿ ಜೋರಾಗುತ್ತಿದ್ದಂತೆ ಇಡೀ ಕುಟುಂಬ ಮನೆಯಿಂದ ಹೊರಬಂದು ಬಚಾವ್ ಆಗಿದೆ. ಮನೆಯಿಂದ ಹೊರ ಬಂದ ಕೆಲವೇ ಕ್ಷಣದಲ್ಲಿ ಟಿನ್ ಶೆಡ್ ಕುಸಿದು ಬಿದ್ದಿದೆ. ಇತ್ತ ದಿನಸಿ ಸಾಮಾನು ಸೇರಿದಂತೆ ಎಲ್ಲ ವಸ್ತುಗಳು ಹಾಳಾಗಿವೆ.
ಗಾಳಿ ಮಳೆಗೆ ಹಾರಿ ಹೋದ ಶಾಲೆಯ ಶೆಡ್: ಇನ್ನು ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಜುಗೂಳ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಜೋರು ಗಾಳಿ ಮಳೆಗೆ ಶೆಡ್ ಹಾರಿ ಹೋಗಿತ್ತು. ಶಾಲೆಗೆ ರಜೆ ಇದ್ದಿದ್ದರಿಂದ ಭಾರಿ ಅನಾಹುತ ತಪ್ಪಿತ್ತು. ಶಾಲೆಯ ಶೆಡ್ ಹಾರಿ ಅಕ್ಕಪಕ್ಕದ ಮನೆಗಳು ಹಾಗೂ ವಿದ್ಯುತ್ ತಂತಿಗಳು ಮೇಲೆ ಬಿದ್ದು ಹಾನಿಯಾಗಿತ್ತು.
ಧಾರಾವಾಡದಲ್ಲೂ ಧಾರಾಕಾರ ಮಳೆ: ಧಾರವಾಡದಲ್ಲಿ ಗುರುವಾರ ಅರ್ಧ ಗಂಟೆಗೂ ಹೆಚ್ಚು ಸಮಯ ಮಳೆಯಾಗಿತ್ತು. ಎರಡು ದಿನದಿಂದ ಬ್ರೇಕ್ ಕೊಟ್ಟಿದ್ದ ಮಳೆಯು ಗುರುವಾರ ದಿಢೀರ್ ಅಪ್ಪಳಿಸಿತ್ತು. ಪರಿಣಾಮ ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು. ಧಾರವಾಡ ಹೊರವಲಯದ ಕೆಎಂಎಫ್ ಬಳಿ ಧಾರಾಕಾರ ಮಳೆಗೆ ರಸ್ತೆಯಲ್ಲೇ ನೀರು ನಿಂತಿತ್ತು. ಬಿಆರ್‌ಟಿಎಸ್ ಕಾರಿಡಾರ್‌ನಿಂದ ಹರಿದು ಹೋಗದೇ ಇರುವುದೇ ಕಾರಣ ಎಂದು ಸ್ಥಳೀಯರು ಆಕ್ರೋಶಿಸಿದರು.