ಜಮ್ಮು & ಕಾಶ್ಮೀರ: ವರುಣನ ಆರ್ಭಟಕ್ಕೆ ಎಂಟರಿಂದ ಹತ್ತು ಮನೆಗಳು ಕುಸಿದು ಬಿದ್ದಿರುವ ಘಟನೆ ಜಮ್ಮು & ಕಾಶ್ಮೀರದ ಪೂಂಚ್ ಮಂಡಿ ಪ್ರದೇಶದಲ್ಲಿ ಸಂಭವಿಸಿದೆ.
ಭಾರೀ ಮಳೆಯಿಂದಾಗಿ 336 ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿದ್ದು, ಅವರ ರಕ್ಷಣೆಗಾಗಿ ರಕ್ಷಣಾ ತಂಡ ಹರಸಾಹಸ ಪಡುತ್ತಿದೆ.
ಇನ್ನು ನಿರಂತರ ಮಳೆಗೆ ರಸ್ತೆಗಳೆಲ್ಲವೂ ನದಿಗಳಂತಾಗಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಇತ್ತ ಹಠಾತ್ ಮಳೆಯಿಂದಾಗಿ ಕುಪ್ವಾರ ಪ್ರದೇಶದಲ್ಲೂ ಕೂಡ ಹಲವು ರಸ್ತೆಗಳು ಕೊಚ್ಚಿಹೋಗಿದ್ದು ಕಟ್ಟಡಗಳು ನೆಲಕ್ಕುರುಳಿ ಬಿದ್ದಿವೆ.
ಈ ಪ್ರದೇಶಗಳಲ್ಲಿ ನಿತ್ಯ ವರುಣ ಆರ್ಭಟಿಸುತ್ತಿದ್ದು, ಇನ್ನೂ ಹಲವು ಮನೆಗಳು ಶಿಥಿಲಾವಸ್ಥೆಯ ಹಂಚಿನಲ್ಲಿವೆ ಎಂದು ರಕ್ಷಣಪಡೆಯ ಅಧಿಕಾರಿಗಳು ತಿಳಿಸಿದ್ದಾರೆ.
ಜಮ್ಮು ಹಾಗೂ ಶ್ರೀನಗರ ರಾಷ್ಟ್ರೀಯ ಹೆದ್ದಾರಿಯುದ್ದಕ್ಕೂ ಅನೇಕ ಸ್ಥಳಗಳಲ್ಲಿ ಭೂಕುಸಿತ ಉಂಟಾಗಿದೆ. ನಿರಂತರ ಮಳೆ ಮತ್ತು ಹಿಮಪಾತದಿಂದಾಗಿ ಹಲವಾರು ಪ್ರದೇಶಗಳಲ್ಲಿ ಭೂಕುಸಿತ ಮತ್ತು ಹಠಾತ್ ಪ್ರವಾಹ ಉಂಟಾಗಿದೆ.
ಇನ್ನೂ ಹೆದ್ದಾರಿಯುದ್ದಕ್ಕೂ ಈ ಭೂಕುಸಿತವಾಗಿರುವುದರಿಂದ ಹಲವು ವಾಹನಗಳು ಮಧ್ಯೆ ಸಿಲುಕಿಕೊಂಡಿದ್ದು ವಾಹನಗಳ ಮಾಲೀಕರು ಪರದಾಡುವಂತಾಗಿದೆ.
ಬಂಡೆಗಳು ಮತ್ತು ಮಣ್ಣಿನ ರಾಶಿ ಪರ್ವತದ ಮೇಲಿಂದ ಜಾರಿ ಹೆದ್ದಾರಿಗೆ ಬಿದ್ದಿದೆ. ಕಾಶ್ಮೀರವನ್ನು ದೇಶದ ಇತರ ಭಾಗಗಳೊಂದಿಗೆ ಸಂಪರ್ಕಿಸುವ ಏಕೈಕ ಹೆದ್ದಾರಿ ಇದರಿಂದ ಬಂದ್ ಆಗಿದೆ. ಇಲ್ಲಿ ಉಂಟಾಗಿರುವ ಭೂ ಕುಸಿತದಿಂದ ಹೆದ್ದಾರಿ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.