Search By Date & Category

NEWS

ಬೈಕ್‌ನಲ್ಲಿ ಧಾರ್ಮಿಕ ಕ್ಷೇತ್ರಗಳಿಗೆ ಪ್ರವಾಸ ಹೋಗಿದ್ದ ನವದಂಪತಿ: ಅಪಘಾತದಲ್ಲಿ ಪತಿ ಸಾವು, ಪತ್ನಿಗೆ ತೀವ್ರಗಾಯ

ವಿಜಯಪಥ ಸಮಗ್ರ ಸುದ್ದಿ

ದಾವಣಗೆರೆ: ನಿಂತಿದ್ದ ಟ್ರ್ಯಾಕ್ಟರ್‌ಗೆ ಬೈಕ್‌ ಡಿಕ್ಕಿ ಹೊಡೆದ ಪರಿಣಾಮ ಬೈಕ್‌ ಸವಾರ ಮೃತಪಟ್ಟಿದ್ದು, ಹಿಂಬದಿ ಕುಳಿತಿದ್ದ ಪತ್ನಿ ತೀವ್ರಗಾಯಗೊಂಡಿರುವ ಘಟನೆ ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲೂಕಿನ ಕೋಡದ ಬಳಿ ನಡೆದಿದೆ.

ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಜಿಗಳಿ ಗ್ರಾಮದ ಮಠದವರಾದ ಸಂಜಯ್‌ (28) ಮೃತರು. ಇವರ ಪತ್ನಿ ಪ್ರೀತಿ ತೀವ್ರಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸಂಜಯ್‌ ಕಳೆದ ನ. 28ರಂದು ಬೈಲಹೊಂಗಲದ ಪ್ರೀತಿ ಎಂಬವರನ್ನು ರಾಜನಹಳ್ಳಿಯ ವಾಲ್ಮೀಕಿ ಗುರುಪೀಠದ ಸಮುದಾಯ ಭವನದಲ್ಲಿ ಶಾಸ್ತ್ರೋಕ್ತವಾಗಿ ಮದುವೆಯಾಗಿದ್ದರು. ಇವರಿಬ್ಬರು ಕೂಡ ಸಾಫ್ಟ್‌ವೇರ್‌ ಇಂಜಿನಿಯರ್‌ ಆಗಿದ್ದು, ಈ ನವ ದಂಪತಿ ಬೈಕ್‌ನಲ್ಲೇ ಡಿ. 10ರಂದು ಹರಿಹರದ ಜಿಗಳಿಯಿಂದ ಧಾರ್ಮಿಕ ಕ್ಷೇತ್ರಗಳಿಗೆ ಎರಡು ದಿನಗಳ ಪ್ರವಾಸ ಕೈಗೊಂಡಿದ್ದರು.

ಈ ವೇಳೆ ಮೊದಲು ಸಾಗರ ತಾಲೂಕಿನ ಸಿಂಗಧೂರು ದೇವಿ ದರ್ಶನ ಪಡೆದಿದ್ದಾರೆ. ಬಳಿಕ ಮುರುಡೇಶ್ವರಕ್ಕೆ ಹೋಗಿ ರಾತ್ರಿ ತಂಗಿದ್ದಾರೆ. ಡಿಸೆಂಬರ್ 11ಕ್ಕೆ ಶಿರಸಿಗೆ ಬಂದು ಅಲ್ಲಿ ಮಾರಿಕಾಂಬಾ ದೇವಿ ದರ್ಶನ ಪಡೆದು ವಾಪಸ್‌ ಜಿಗಳಿಗೆ ಬರುತ್ತಿದ್ದಾಗ ಈ ಅವಘಡ ಸಂಭವಿಸಿದೆ.

ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲೂಕಿನ ಕೋಡದ ಬಳಿ ರಸ್ತೆ ಪಕ್ಕದಲ್ಲಿ ನಿಂತಿದ್ದ ಕಬ್ಬಿನ ಟ್ರ್ಯಾಕ್ಟರ್‌ಗೆ ವೇಗವಾಗಿ ಬಂದ ಬೈಕ್‌ ಡಿಕ್ಕಿ ಹೊಡೆದಿದೆ. ಪರಿಣಾಮ ಬೈಕ್‌ ಸವಾರ ಸಂಜಯ್‌ ತಲೆಗೆ ತೀವ್ರ ಪೆಟ್ಟಾಗಿದ್ದು, ಎರಡೂ ಕಿವಿಯಲ್ಲಿ ರಕ್ತಸ್ರಾವವಾಗಿದೆ. ಜೊತೆಗೆ ಬೈಕ್‌ನಲ್ಲಿದ್ದ ಪ್ರೀತಿಗೂ ಗಂಭೀರ ಗಾಯಗಳಾಗಿದೆ.

ಘಟನೆ ತಿಳಿದ ಕೂಡಲೇ ಸ್ಥಳಕ್ಕಾಗಮಿಸಿದ ಹಂಸಬಾವಿ ಪೊಲೀಸರು ಗಾಯಗೊಂಡ ನವದಂಪತಿಯನ್ನು ರಾಣೆಬೆನ್ನೂರು ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ಕೊಡಿಸಿದ್ದಾರೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ, ದಾವಣಗೆರೆ ಬಾಪೂಜಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದ ವೇಳೆ ದಾರಿ ಮಧ್ಯೆ ಸಂಜಯ್ ಮೃತಪಟ್ಟಿದ್ದಾರೆ. ಪತ್ನಿ ಪ್ರೀತಿಯ ಎರಡು ಕೈ, ತಲೆಗೆ ಮತ್ತು ಸೊಂಟಕ್ಕೆ ತೀವ್ರ ಪೆಟ್ಟಾಗಿದ್ದು, ಸದ್ಯ ದಾವಣಗೆರೆ ಬಾಪೂಜಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ‌.

ಇನ್ನು ಸಂಜಯ್ ಶವ ಪರೀಕ್ಷೆ ನಂತರ ತನ್ನ ಸಂಜಯ್ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆಯಲು ಪ್ರೀತಿ ಸ್ಟ್ರೆಚರ್​​ನಲ್ಲೇ ಶವಾಗಾರಕ್ಕೆ ಬಂದಿದ್ದರು. ಈ ವೇಳೆ ಸ್ಟ್ರೆಚರ್ ನಲ್ಲಿದ್ದುಕೊಂಡೇ ತನ್ನ ಗಂಡನ ಮುಖ ಸವರಿ ದುಃಖಿತರಾದರು. ಆ ಕ್ಷಣ ನೆರೆದಿದ್ದವರ ಮನಕಲಕುವಂತಿತ್ತು.

Leave a Reply

error: Content is protected !!