ಬೆಂಗಳೂರು: ನನಗೂ ಅಂಗವಿಕಲರ ಸಮಸ್ಯೆ ಮತ್ತು ಸವಾಲುಗಳ ಬಗ್ಗೆ ಅರಿವಿದೆ. ಕಾರಣ ನಾನು ಕೂಡ ಇಬ್ಬರು ಅಂಗವಿಕಲ ಹೆಣ್ಣು ಮಕ್ಕಳ ತಂದೆ. ಹೀಗಾಗಿ ಎಲ್ಲೆಡೆ ಅಂಗವಿಕಲರ ಸ್ನೇಹಿ ವಾತಾವರಣ ಸೃಷ್ಟಿಸುವ ಮೂಲಕ ಅವರನ್ನು ಸಾಮಾನ್ಯರಂತೆ ಕಾಣಬೇಕಿದೆ ಎಂದು ಸುಪ್ರೀಂಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಡಾ. ಡಿ.ವೈ.ಚಂದ್ರಚೂಡ್ ಸಲಹೆ ನೀಡಿದರು.
ರಾಮಯ್ಯ ಕಾನೂನು ಶಾಲೆಯು ದಿ ಅಸೋಸಿಯೇಷನ್ ಆಫ್ ಪೀಪಲ್ ವಿತ್ ಡಿಸೆಬಲಟಿ ಸಂಸ್ಥೆಯ ಸಹಯೋಗದೊಂದಿಗೆ ಖಾಸಗಿ ಕಾಲೇಜಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಅಂಗವಿಕಲರ ಸಮಾವೇಶಕ್ಕೆ ಚಾಲನೆ ನೀಡಿ ಮಾತನಾಡಿದರು.
ನನ್ನ ಇಬ್ಬರು ಹೆಣ್ಣು ಮಕ್ಕಳು ಹುಟ್ಟಿನಿಂದಲೇ ಅಂಗವಿಕಲರು. ವ್ಹೀಲ್ಚೇರ್ ಮೂಲಕವೇ ಎಲ್ಲೆಡೆ ಓಡಾಡುತ್ತಾರೆ. ಒಂದು ದಿನ ಮಗಳು ನನ್ನೊಂದಿಗೆ ಕೋರ್ಟ್ ಆವರಣಕ್ಕೆ ಆಗಮಿಸಿದ್ದಳು. ವ್ಹೀಲ್ಚೇರ್ ಮೂಲಕ ಕೋರ್ಟ್ ಮೆಟ್ಟಿಲೇರಲಾಗದ ಸನ್ನಿವೇಶವು ತುಂಬಾ ನೋವುಂಟು ಮಾಡಿತು.
ಕೋರ್ಟ್ನಲ್ಲಿ ರೋಪ್ ವ್ಯವಸ್ಥೆ ಇಲ್ಲದಿರುವುದನ್ನು ಕಂಡು ಮಗಳು ಬೇಸರ ವ್ಯಕ್ತಪಡಿಸಿದಳು. ಅಂದೇ ಸುರಕ್ಷತಾ ಸಮಿತಿ ರಚನೆ ಮಾಡಿ ವರದಿ ಪಡೆದು ಕೋರ್ಟ್ ಆವರಣವನ್ನು ಅಂಗವಿಕಲರ ಸ್ನೇಹಿಯಾಗಿ ರೂಪಿಸಿದೆ ಎಂದರು.
ಉತ್ತಮ ಶಕ್ತಿ ಇದೆ: ಸಾಮಾನ್ಯರಿಗಿಂತ ಬುದ್ಧಿವಂತರಾಗಿರುವ ಅಂಗವಿಕಲರನ್ನು ವಿಶೇಷಚೇತನ ಮಕ್ಕಳ ಶಾಲೆಗಳಿಗೆ ಕಳುಹಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗುತ್ತಿದೆ. ನನ್ನ ಮಕ್ಕಳಿಗೆ ಯುಪಿಎಸ್ಸಿ ಪರೀಕ್ಷೆ ತೆಗೆದುಕೊಳ್ಳುವಂತೆ ಹಿರಿಯ ಐಎಎಸ್ ಅಧಿಕಾರಿಗಳು ಸಲಹೆ ನೀಡಿದ್ದಾರೆ.
ದೇಶದಲ್ಲಿ ಕೀಮೋಥೆರಪಿಗೆ ಚಿಕಿತ್ಸೆ ನೀಡುವ ಪ್ರಸಿದ್ಧ ವೈದ್ಯರೊಬ್ಬರು ಕೂಡ ಅಂಗವಿಕಲರು. ವ್ಹೀಲ್ಚೇರ್ನಲ್ಲೇ ಬಂದು ಶಸ್ತ್ರಚಿಕಿತ್ಸೆ ಮಾಡುತ್ತಾರೆ. ನಮಲ್ಲಿ ರಾಹುಲ್ ಬಜಾಜ್ ಎಂಬ ದೃಷ್ಟಿ ವಿಶೇಷಚೇತನ ವಕೀಲರಿದ್ದಾರೆ. ಇಂಥ ಹಲವು ಸಾಧಕರು ದೇಶದಲ್ಲಿದ್ದಾರೆ. ಇವರು ಸಾಮಾನ್ಯರಿಗಿಂತ ಉತ್ತಮ ಕೆಲಸ ಮಾಡುವ ಶಕ್ತಿ ಹೊಂದಿದ್ದಾರೆ ಎಂದು ಹೇಳಿದರು.
ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ಮಾತನಾಡಿ, ನಮ್ಮ ಕೋರ್ಟ್ನಲ್ಲಿ 800 ಮಂದಿ ಅಂಗವಿಕಲ ನೌಕರರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರಿಗೆ ಅಗತ್ಯ ತರಬೇತಿ ನೀಡಿದ್ದೇವೆ. ಸಮಾನ ಅವಕಾಶ ಕಲ್ಪಿಸಿಕೊಡಲು ನ್ಯಾಯಾಂಗ ಕೂಡ ಕೆಲಸ ಮಾಡುತ್ತಿದೆ.
ಅಂಗವಿಕಲರ ಬಗ್ಗೆ ಜನರಿಗೆ ಅರಿವು ಮೂಡಿಸಲು ಸಾಕ್ಷ್ಯಚಿತ್ರಗಳು, ಸಿನಿಮಾಗಳು ಕೂಡ ಬಂದಿವೆ. ಇವರಿಗೆ ಸರ್ಕಾರದಿಂದ ಸಿಗಬೇಕಾದ ಸೌಲಭ್ಯಗಳು ಶೇ. 100ರಷ್ಟು ದೊರಕಬೇಕು ಎಂದು ಹೇಳಿದರು.
ನಾವು ಮಗು ಹುಟ್ಟುವಾಗಲೇ ಅಂಗವಿಕಲತೆಯನ್ನು ಪತ್ತೆ ಹಚ್ಚುವ ಕಾರ್ಯ ಮಾಡುತ್ತಿದ್ದೇವೆ. ಅಲ್ಲದೆ, ಅಂಗವಿಕಲ ಮಕ್ಕಳಿಗೆ ಉತ್ತಮ ಚಿಕಿತ್ಸೆ ನೀಡುವ ಉದ್ದೇಶದಿಂದ ನಾರಾಯಣ, ಸ್ಪರ್ಶ್ ಆಸ್ಪತ್ರೆ ಜತೆಗೆ ಒಪ್ಪಂದ ಮಾಡಿಕೊಂಡಿದ್ದೇವೆ. ಇದರಿಂದ ಕಡಿಮೆ ವೆಚ್ಚದಲ್ಲಿ ಗುಣಮಟ್ಟ ಚಿಕಿತ್ಸೆ ನೀಡಲಾಗುತ್ತಿದೆ. ಅಂಗವಿಕಲರಿಗೆ ರಾಜ್ಯ ಸರ್ಕಾರ ಉಚಿತ ಉಪಕರಣಗಳನ್ನು ನೀಡುತ್ತಿದೆ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ತಿಳಿಸಿದರು.
ಸುಪ್ರೀಂಕೋರ್ಟ್ ನ್ಯಾಯಾಧೀಶರಾದ ಬಿ.ವಿ. ನಾಗರತ್ನ, ಕೇಂದ್ರ ಅಂಗವಿಕಲ ಮತ್ತು ಸಬಲೀಕರಣ ಇಲಾಖೆ ಮುಖ್ಯ ಕಾರ್ಯದರ್ಶಿ ರಾಜೇಶ್ ಅಗರ್ವಾಲ್, ಸರಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಯುನೈಟೆಡ್ ನೇಷಸ್ಸ್ ರೆಸಿಡೆಂಟ್ ಶೊಂಬಿ ಶಾರ್ಪ್, ರಾಮಯ್ಯ ಕಾನೂನು ಕಾಲೇಜಿನ ನಿರ್ದೇಶಕ ಎಂ.ಆರ್. ಆನಂದರಾಮ್ ಇತರರು ಇದ್ದರು.