ಪಿರಿಯಾಪಟ್ಟಣ: ದಂಪತಿಗಳಿಗೆ ಮಕ್ಕಳಾಗದಿರುವಿಕೆಗೆ ಕೇವಲ ಮಹಿಳೆಯರ ನ್ಯೂನ್ಯತೆಗಳು ಕಾರಣವಲ್ಲ ಗಂಡಸರು ಕೂಡ ತಪಾಸಣೆಗೆ ಒಳಗಾಗಿ ತಮ್ಮಲ್ಲಿನ ನ್ಯೂನ್ಯತೆಗಳನ್ನು ಪತ್ತೆ ಹೆಚ್ಚಿಕೊಂಡಾಗ ಮಾತ್ರ ಮಗುವನ್ನು ಪಡೆಯಲು ಸಾಧ್ಯವಾಗುತ್ತದೆ ಎಂದು ಮಾತೃಛಾಯಾ ಎವಿಎಫ್ ಸೆಂಟರ್ನ ಸಂಸ್ಥಾಪಕಿ ಡಾ.ಕೆ.ಚೇತನಾ ತಿಳಿಸಿದರು.
ಪಟ್ಟಣದ ಭಾಗ್ಯ ಆಸ್ಪತ್ರೆಯಲ್ಲಿ ರೋಟರಿ ಮಿಡ್ಟೌನ್ ವತಿಯಿಂದ ಏರ್ಪಡಿಸಲಗಿದ್ದ ಉಚಿತ ಬಂಜೆತನ ನಿವಾರಣೆ ಉಚಿತ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಮದುವೆಯಾಗಿ ಒಂದು ವರ್ಷ ಗಂಡ ಹೆಂಡತಿಯರು ಲೈಂಗಿಕ ಸಂಪರ್ಕ ಹೊಂದಿದರೂ ಮಕ್ಕಳಾಗದಿದ್ದರೆ ಬಂಜೆತನ ಎದುರಾಗುತ್ತದೆ. ಇದಕ್ಕೆ ಕಾರಣ ಮಹಿಳೆಯರಲ್ಲಿನ ಹಾರ್ಮೋನ್ಗಳ ಸಮಸ್ಯೆ, ಮುಟ್ಟು ಸರಿಯಾದ ರೀತಿಯಲ್ಲಿ ಆಗದಿರುವುದು ಹೀಗೆ ಅನೇಕ ಕಾರಣಗಳಿರುತ್ತವೆ.
ಅಂತ್ಯೆಯೇ ಪುರುಷರಲ್ಲಿಯೂ ವೀರ್ಯಾಣು ಸಮಸ್ಯೆ ಸೇರಿದಂತೆ ಮತ್ತಿತರ ದೈಹಿಕ ಮತ್ತು ಮಾನಸಿಕ ಕಾರಣಗಳಿರುತ್ತವೆ. ಆದ್ದರಿಂದ ದಂಪತಿಗಳು ತಮ್ಮ ಅಂಜಿಕೆ ಬಿಟ್ಟು ಇಬ್ಬರು ತಪಾಸಣೆಗೆ ಒಳಗಾದಾಗ ಸೂಕ್ತ ಚಿಕಿತ್ಸೆ ಪಡೆದು. ಇಂದಿನ ವೈದ್ಯಕೀಯ ವಿಜ್ಞಾನದ ಸಹಾಯದಿಂದ ಮಕ್ಕಳನ್ನು ಪಡೆಯಬಹುದಾಗಿದೆ ಎಂದು ಸಲಹೆ ನೀಡಿದರು.
ರೋಟರಿ ಅಧ್ಯಕ್ಷ ತಿರುಮಲಾಪುರ ರಾಜೇಗೌಡ ಮಾತನಾಡಿ, ರೋಟರಿ ಸಂಸ್ಥೆಯು ಅನೇಕ ಆರೋಗ್ಯ ಶಿಬಿರಗಳನ್ನು ಗ್ರಾಮೀಣ ಭಾಗದಲ್ಲಿ ಏರ್ಪಡಿಸುವ ಮೂಲಕ ಆರೋಗ್ಯದ ನಡೆ ಗ್ರಾಮಗಳಕಡೆ ಎಂಬ ಧ್ಯೇಯವಾಕ್ಯವನ್ನು ಪರಿಪಾಲಿಸಿ 100ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಬಂಜೆತನ ತಪಾಸಣೆಯಂತಹ ದಂಪತಿಗಳ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ಸಂಬಂಧ ಈ ಕಾರ್ಯಕ್ರಮ ರೂಪಿಸಲಾಗಿದೆ ಎಂದು ತಿಳಿಸಿದರು.
ರೋಟರಿ ಸಹಾಯಕ ರಾಜ್ಯಪಾಲ ಸತ್ಯನಾರಾಯಣ ಮಾತನಾಡಿ, ರೋಟರಿ ಸಂಸ್ಥೆ ಸೇವಾ ಮನೋಭಾವದವರು ಸೇರಿ ರೂಪಿಸಿರುವ ಸಂಸ್ಥೆಯಾಗಿದ್ದು ಇದರ ಮೂಲಕ ಅನೇಕ ಕಾರ್ಯಕ್ರಮಗಳನ್ನು ವಿಶ್ವದಾದ್ಯಂತ ರೂಪಿಸಲಾಗುತ್ತಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ರೋಟರಿ ಕಾರ್ಯದರ್ಶಿ ಐ.ಕೆ.ಪಿ.ಹೆಗ್ಡೆ, ಭಾವಿ ಅಧ್ಯಕ್ಷ ಎಂ.ಎಂ.ರಾಜೇಗೌಡ, ಖಜಾಂಜಿ ಶ್ರೀಕಾಂತ್, ಸದಸ್ಯರಾದ ವಿನಯ್ಶೇಖರ್, ಹರೀಶ್, ಬಸವೇಗೌಡ, ಸುನಿಲ್, ಭಾಗ್ಯ ಆಸ್ಪತ್ರೆಯ ಡಾ.ರಾಕೇಶ್, ಡಾ.ಭಾಗ್ಯಶ್ರೀ ಸೇರಿದಂತೆ ಮತ್ತಿತರರು ಇದ್ದರು.