ವಿದ್ಯಾರ್ಥಿಗಳು ಏಕಾಗ್ರತೆಯಿಂದ ವ್ಯಾಸಂಗ ಮಾಡಿದರೆ ಗುರಿ ಸಾಧನೆ: ಡಾಲು ರವಿ
ಕೆ.ಆರ್.ಪೇಟೆ: ಯುವಜನರು ಹಾಗೂ ವಿದ್ಯಾರ್ಥಿಗಳು ಶ್ರದ್ಧಾ ಭಕ್ತಿ ಮತ್ತು ಏಕಾಗ್ರತೆಯಿಂದ ವ್ಯಾಸಂಗ ಮಾಡಿ ಗುರಿ ಸಾಧನೆ ಮಾಡಬೇಕು ಎಂದು ಮಂಡ್ಯ ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕ ಡಾಲು ರವಿ ಕರೆ ನೀಡಿದ್ದಾರೆ.
ಅವರು ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಜರ್ಷಿ ನಾಲ್ವಡಿ ಶ್ರೀಕೃಷ್ಣರಾಜ ಒಡೆಯರ್ ಅವರ ಜನ್ಮ ದಿನಾಚರಣೆಯ ಅಂಗವಾಗಿ ರಾಜ್ಯಶಾಸ್ತ್ರ ವಿಭಾಗದ ವತಿಯಿಂದ ಆಯೋಜಿಸಿದ್ದ ರಸಪ್ರಶ್ನೆ, ಚರ್ಚಾಸ್ಪರ್ಧೆ ಮತ್ತು ವಿಚಾರ ಸಂಕಿರಣವನ್ನು ನಾಲ್ವಡಿ ಅವರ ಭಾವ ಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಟ್ರೋಫಿ ಮತ್ತು ಪ್ರಶಸ್ತಿ ಪತ್ರ ವಿತರಿಸಿ ಮಾತನಾಡಿದರು.
ವಿದ್ಯಾರ್ಥಿಗಳು ತಮ್ಮಲ್ಲಿ ಸುಪ್ತವಾಗಿರುವ ಪ್ರತಿಭೆಯನ್ನು ಹೊರ ಚೆಲ್ಲಿ ಸಾಧನೆ ಮಾಡಲು ಇಂತಹ ಸ್ಪರ್ಧಾ ಕಾರ್ಯಕ್ರಮಗಳು ನೆರವಾಗುತ್ತವೆ. ಆದ್ದರಿಂದ ವಿದ್ಯಾರ್ಥಿಗಳು ಮೊಬೈಲ್ ಫೋನಿನಲ್ಲಿ ವ್ಯರ್ಥವಾಗಿ ಚಾಟಿಂಗ್ ಮಾಡಿ, ಫೇಸ್ ಬುಕ್ ನೋಡಿ, ಮೊಬೈಲ್ ಗೇಮ್ ಆಡಿಕೊಂಡು ತಮ್ಮ ಅಮೂಲ್ಯವಾದ ಸಮಯವನ್ನು ವ್ಯರ್ಥ ಮಾಡಿಕೊಳ್ಳದೇ ತಲೆ ಬಗ್ಗಿಸಿಕೊಂಡು ಪುಸ್ತಕವನ್ನು ಓದಿದರೆ ಜ್ಞಾನವು ವೃದ್ಧಿಯಾಗುವುದು. ಜತೆಗೆ ನಮ್ಮಲ್ಲಿನ ಕೀಳರಿಮೆಯು ದೂರಾಗಿ ಸಾಧಿಸುವ ಛಲವು ಮೂಡುತ್ತದೆ ಎಂದರು.
ಇಂದಿನ ಸೋಲೆ ನಾಳಿನ ಗೆಲುವಾಗುವುದರಿಂದ ಸೋಲಿಗೆ ಹೆದರಿ ಪಲಾಯನವಾದ ಮಾಡದೆ ಸೋಲನ್ನೇ ಗೆಲುವಿನ ಮೆಟ್ಟಿಲನ್ನಾಗಿಸಿಕೊಂಡು ಸಾಧನೆ ಮಾಡಬೇಕು ಎಂದು ಕಿವಿ ಮಾತು ಹೇಳಿದ ಡಾಲು ರವಿ ಮನಸ್ಸಿದ್ದರೆ ಮಾರ್ಗವಿದೆ ಎಂಬ ಹಿರಿಯರ ಮಾತಿನಂತೆ ಸಾಧನೆ ಮಾಡಿ ತೋರಿಸಬೇಕು ಎಂದು ಸಲಹೆ ನೀಡಿದರು.
ಕೀರ್ತಿ ಎನ್ನುವುದು ನಮ್ಮನ್ನು ಸುಮ್ಮನೆ ಹಿಂಬಾಲಿಸುವುದಿಲ್ಲ ಎಂಬ ಸತ್ಯವನ್ನು ಅರಿತು ಕಷ್ಟಪಟ್ಟು ಅಧ್ಯಯನ ಮಾಡಿ ಸಾಧಕರಾಗಿ ಹೊರಹೊಮ್ಮವ ಮೂಲಕ ತಮ್ಮ ತಂದೆ ತಾಯಿಗಳು, ಗುರು ಹಿರಿಯರು ಹಾಗೂ ಕಾಲೇಜಿಗೆ ಕೀರ್ತಿ ತರಬೇಕು ಎಂದು ಕಿವಿಮಾತು ಹೇಳಿದರು.
ಕಾಲೇಜಿನ ಪ್ರಾಂಶುಪಾಲೆ ಹೇಮಲತಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ರವಿ ಅವರು ಗ್ರಾಮೀಣ ಪ್ರದೇಶದ ಬಡ ವಿದ್ಯಾರ್ಥಿಗಳ ಶೈಕ್ಷಣಿಕ ವಿಕಾಸಕ್ಕೆ ಅನುಕೂಲ ವಾಗುವಂತೆ ಕಾಲೇಜಿನ ಅಭಿವೃದ್ಧಿಗೆ ನೀಡುತ್ತಿರುವ ಸಹಕಾರವನ್ನು ಸದಾ ಸ್ಮರಿಸುವುದಾಗಿ ಹೇಳಿದರು.
ರಾಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ರಮೇಶ್, ವಿದ್ಯಾರ್ಥಿ ನಾಯಕ ಸುಹಾಸ್ ಮತ್ತಿತರರು ಕಾರ್ಯಕ್ರಮದಲ್ಲಿ ಇದ್ದರು.