ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ (IPL 2024) ಸೀಸನ್-17 ಅನ್ನು ಸೋಲಿನೊಂದಿಗೆ ಆರಂಭಿಸಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ತನ್ನ 2ನೇ ಪಂದ್ಯದಲ್ಲಿ ಗೆಲುವು ದಾಖಲಿಸುವಲ್ಲಿ ಯಶಸ್ವಿಯಾಗಿತ್ತು. ಆದರೆ ಇದರ ಬೆನ್ನಲ್ಲೇ ತವರಿನಲ್ಲಿ ಕೆಕೆಆರ್ ತಂಡದ ವಿರುದ್ಧ ಹೀನಾಯ ಸೋಲನುಭವಿಸಿ ಭಾರೀ ಮುಖಭಂಗಕ್ಕೆ ಒಳಗಾಗಿದೆ.
ಇನ್ನು ಈ ಸೋಲಿನ ಬೆನ್ನಲ್ಲೇ ಆರ್‌ಸಿಬಿ ತಂಡದಲ್ಲಿ ಬದಲಾವಣೆ ಮಾಡಬೇಕಿರುವುದು ಅನಿವಾರ್ಯ ಎಂದಿದ್ದಾರೆ ಮಾಜಿ ಕ್ರಿಕೆಟಿಗ ಕೃಷ್ಣಮಾಚಾರಿ ಶ್ರೀಕಾಂತ್. ಹೌದು! ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ (ಐಪಿಎಲ್ 2024) ಆರ್‌ಸಿಬಿ ಇದುವರೆಗೆ 3 ಪಂದ್ಯಗಳನ್ನಾಡಿದೆ. ಮೊದಲ ಪಂದ್ಯದನಲ್ಲಿ ಸಿಎಸ್ಕೆ ವಿರುದ್ಧ ಸೋತಿದ್ದ ಆರ್‌ಸಿಬಿ ತನ್ನ 2ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಗೆಲುವು ದಾಖಲಿಸಿದೆ.
ಇನ್ನು ಮೂರನೇ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಮುಗ್ಗರಿಸಿದೆ. ಇದೀಗ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯಕ್ಕಾಗಿ ಆರ್‌ಸಿಬಿ ಸಜ್ಜಾಗುತ್ತಿದೆ. ಹೀಗಾಗಿ ಈ ಬಗ್ಗೆ ಮಾತನಾಡಿರುವ ಕೃಷ್ಣಮಾಚಾರಿ ಶ್ರೀಕಾಂತ್, ಆರ್‌ಸಿಬಿ ತಂಡವು ಮೊದಲ ಮಾಡಬೇಕಿರುವುದು ಆರಂಭಿಕ ಜೋಡಿಯ ಬದಲಾವಣೆ. ಇಲ್ಲಿ ವಿರಾಟ್ ಕೊಹ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಆದರೆ ಫಾಫ್ ಡುಪ್ಲೆಸಿಸ್ ಮೂರು ಪಂದ್ಯಗಳಲ್ಲೂ ವಿಫಲರಾಗಿದ್ದಾರೆ. ಹೀಗಾಗಿ ಡುಪ್ಲೆಸಿಸ್ ಅವರನ್ನು ಆರಂಭಿಕನ ಸ್ಥಾನದಿಂದ ಕೈ ಬಿಡಬೇಕು.
ಅಲ್ಲದೆ ಆರಂಭಿಕನಾಗಿ ಸ್ಪೋಟಕ ದಾಂಡಿಗ ವಿಲ್ ಜಾಕ್ಸ್ ಅವರನ್ನು ಆರ್‌ಸಿಬಿ ಕಣಕ್ಕಿಳಿಸಬೇಕು. ಈ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಬಿರುಸಿನ ಆರಂಭವನ್ನು ಪಡೆಯಬಹುದು. ಇನ್ನು ಡುಪ್ಲೆಸಿಸ್ 3ನೇ ಕ್ರಮಾಂಕದಲ್ಲಿ ಆಡುವುದು ಸೂಕ್ತ ಎಂದು ಶ್ರೀಕಾಂತ್ ಅಭಿಪ್ರಾಯಪಟ್ಟಿದ್ದಾರೆ.
ಹಾಗೆಯೇ ತಂಡದ ಪ್ಲೇಯಿಂಗ್ ಇಲೆವೆನ್ನಿಂದ ಅಲ್ಝಾರಿ ಜೋಸೆಫ್ ಹಾಗೂ ರಜತ್ ಪಾಟಿದಾರ್ ಅವರನ್ನು ಕೈ ಬಿಡಬೇಕು. ಈ ಇಬ್ಬರೂ ಮೂರು ಪಂದ್ಯಗಳಲ್ಲೂ ಕಳಪೆ ಪ್ರದರ್ಶನ ನೀಡಿದ್ದಾರೆ. ಹೀಗಾಗಿ ಮತ್ತಷ್ಟು ಅವಕಾಶ ನೀಡುತ್ತಾ ಕೂರುವುದು ಸರಿಯಲ್ಲ. ಹಾಗಾಗಿ ಮುಂದಿನ ಪಂದ್ಯದಿಂದ ಇಬ್ಬರಿಗೂ ಗೇಟ್ ಪಾಸ್ ನೀಡಬೇಕೆಂದು ಹೇಳಿದ್ದಾರೆ.
ಇಲ್ಲಿ ಅಲ್ಝಾರಿ ಜೋಸೆಫ್ ಅವರನ್ನು ಕೈ ಬಿಡುವುದರಿಂದ ವಿಲ್ ಜಾಕ್ಸ್ಗೆ ಚಾನ್ಸ್ ನೀಡಬಹುದು. ಹಾಗೆಯೇ ರಜತ್ ಪಾಟಿದಾರ್ ಸ್ಥಾನದಲ್ಲಿ ಮತ್ತೋರ್ವ ವೇಗಿ ಆಕಾಶ್ ದೀಪ್ಗೆ ಅವಕಾಶ ನೀಡಿ. ಆತ ಪ್ಲೇಯಿಂಗ್ ಇಲೆವೆನ್ನಲ್ಲಿ ಅವಕಾಶ ಪಡೆಯಲು ಅರ್ಹ ಆಟಗಾರ ಎಂದು ಅಭಿಪ್ರಾಯಪಟ್ಟಿದ್ದಾರೆ.
ಈ ನಾಲ್ಕು ಬದಲಾವಣೆಗಳೊಂದಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕಣಕ್ಕಿಳಿದರೆ ಮುಂದಿನ ಪಂದ್ಯದಲ್ಲಿ ಗೆಲ್ಲಲಿದೆ ಎಂದು ಕೃಷ್ಣಮಾಚಾರಿ ಶ್ರೀಕಾಂತ್ ಭವಿಷ್ಯ ನುಡಿದಿದ್ದಾರೆ. ಅದರಂತೆ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ ತನ್ನ ಪ್ಲೇಯಿಂಗ್ ಇಲೆವೆನ್ನಲ್ಲಿ ಮಹತ್ವದ ಬದಲಾವಣೆ ಮಾಡಿಕೊಳ್ಳಲಿದೆಯಾ ಕಾದು ನೋಡಬೇಕಿದೆ.