ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ವೇತನ ಕುರಿತು ಚರ್ಚಿಸಲು ಇಂದು (ಮಾ.15) ಸಂಜೆ 5 ಗಂಟೆಯಿಂದ KSRTC ಸರ್ವ ಸಂಘಟನೆಗಳ ಸಭೆಯನ್ನು ವ್ಯವಸ್ಥಾಪಕ ನಿರ್ದೇಶಕರ ಅಧ್ಯಕ್ಷತೆಯಲ್ಲಿ ಕರೆಯಲಾಗಿದೆ.
ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿಯ ಪದಾಧಿಕಾರಿಗಳ ಸಭೆ ಸಂಜೆ 5 ಗಂಟೆಗೆ ನಿಗದಿಯಾಗಿದ್ದರೆ, ಸಂಜೆ 6.30ಕ್ಕೆ ಸಾರಿಗೆ ನೌಕರರ ಸಮಾನ ಮನಸ್ಕರ ವೇದಿಕೆ ಪದಾಧಿಕಾರಿಗಳ ಸಭೆಯು ನಿಗಮದ ಕೇಂದ್ರ ಕಚೇರಿಯ ಸಭಾಂಗಣದಲ್ಲಿ ಆಯೋಜಿಸಿದ್ದು ಪ್ರತಿ ಸಂಘಟನೆಯಿಂದ ಇಬ್ಬರಂತೆ ಹಾಜರಾಗಬೇಕು ಎಂದು ನಿಗಮದ ಮುಖ್ಯ ಕಾರ್ಮಿಕ ಮತ್ತು ಕಲ್ಯಾಣಾಧಿಕಾರಿ ತಿಳಿಸಿದ್ದಾರೆ.
ಸಭೆಗೆ ಪ್ರಮುಖವಾಗಿ ಕೆಎಸ್‌ಆರ್‌ಟಿಸಿ ಸ್ಟಾಫ್ ಆಂಡ್ ವರ್ಕರ್ಸ್ ಫೆಡರೇಶನ್, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ನೌಕರರ ಫೆಡರೇಶನ್, ಕರ್ನಾಟಕ ರಸ್ತೆ ಮಜ್ದೂರ್ ಸಂಘ, ಕರ್ನಾಟಕ ರಾಜ್ಯ ರಸ್ತೆ ನೌಕರರ ಸಂಘದ ಪದಾಧಿಕಾರಿಗಳು 5ಗಂಟೆಯ ಸಭೆಯಲ್ಲಿ ಭಾಗವಹಿಸಲಿದ್ದಾರೆ.
ಸಂಜೆ 6.30ಕ್ಕೆ ನಡೆಯುವ ಸಭೆಯಲ್ಲಿ ಸಮಾನ ಮನಸ್ಕರ ವೇದಿಕೆ, ಅಖಂಡ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಕಾರ್ಮಿಕರ ಮಹಾಮಂಡಳಿ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ.
ಈ ಸಭೆಗಳಲ್ಲಿ ಪ್ರಮುಖವಾಗಿ ನೌಕರರ ಪರ ಸಂಘಟನೆಗಳ ಪದಾಧಿಕಾರಿಗಳಿಂದ ವೇತನ ಪರಿಷ್ಕರಣೆ ಮಾಡುವ ಕುರಿತು ಮಹತ್ವದ ನಿರ್ಣಯ ಕೈಗೊಳ್ಳಲಾಗುವುದು, ಜತೆಗೆ ಮುಷ್ಕರದ ವೇಳೆ ಆಗಿರುವ ಪೊಲೀಸ್ ಪ್ರಕರಣಗಳು ಸೇರಿ ನೌಕರರು ಅನುಭವಿಸುತ್ತಿರುವ ಬಹುತೇಕ ಸಮಸ್ಯೆಗಳ ಪರಿಹಾರಕ್ಕೆ ಅಂತಿಮ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ.
ಇನ್ನು ನೌಕರರ ಪರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೂಡ ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡುವ ವೇಳೆ ತುಂಬ ಕಾಳಜಿ ತೋರಿದ್ದು, ಪ್ರತಿ ನಾಲ್ಕು ವರ್ಷಕೊಮ್ಮೆ ವೇತನ ಪರಿಷ್ಕರಣೆ ವೇಳೆ ಆಗುತ್ತಿರುವ ಹೋರಾಟಕ್ಕೆ ಒಂದು ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲೂ ಹೆಜ್ಜೆ ಇಡಲಿದ್ದಾರೆ ಎಂಬ ವಿಶ್ವಾಸವಿದೆ ಎಂದು ನೌಕರರು ಹೇಳುತ್ತಿದ್ದಾರೆ.