Search By Date & Category

NEWSನಮ್ಮಜಿಲ್ಲೆನಮ್ಮರಾಜ್ಯ

ಮಾ.21ರ ಸಾರಿಗೆ ನೌಕರರ ಮುಷ್ಕರ ಕಾನೂನು ಬಾಹಿರವಲ್ಲವೇ? ಜವಾಬ್ದಾರಿ ಮರೆಯಿತೆ ಜಂಟಿ ಕ್ರಿಯಾಸಮಿತಿ

ವಿಜಯಪಥ ಸಮಗ್ರ ಸುದ್ದಿ

ಮಾ.24ರಿಂದ ಆರಂಭವಾಗುವ ಮುಷ್ಕರವೇಕೆ ಬೆಂಬಲಿಸಬಾರದು ಒಂದೊಂದುದಿನ ಮುಷ್ಕರ ಏಕೆ? ನೀವು ನೌಕರರ ಪರವಾಗಿದ್ದರೆ ಒಗ್ಗಟ್ಟಾಗಿ ಮುಷ್ಕರ ಮಾಡಬಹುದಲ್ಲ?

ಬೆಂಗಳೂರು: ವೇತನ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಲ್ಲಿ ಸರ್ಕಾರ ಮೀನಮೇಷ ಎಣಿಸುತ್ತಿದೆ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕಾರ್ಮಿಕ ಜಂಟಿ ಕ್ರಿಯಾ ಸಮಿತಿ ಸಂಘಟನೆಗಳ ಪದಾಧಿಕಾರಿಗಳು ಇದೇ ಮಾರ್ಚ್‌ 21ರಿಂದ ಮುಷ್ಕರಕ್ಕೆ ಕರೆ ನೀಡಿದ್ದಾರೆ.

ಆದರೆ, ಜಂಟಿ ಕ್ರಿಯಾ ಸಮಿತಿ ಮುಷ್ಕರಕ್ಕೆ ಕರೆ ನೀಡುವ ಮುನ್ನ ಕಾರ್ಮಿಕ ಇಲಾಖೆಗೆ 15ದಿನಗಳ ಮುಂಚಿತವಾಗಿ ತಮ್ಮ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸುತ್ತಿಲ್ಲ. ಹೀಗಾಗಿ ನಾವು ರಾಜ್ಯಾದ್ಯಂತ ಮುಷ್ಕರ ಮಾಡುತ್ತೇವೆ ಎಂದು ಮನವಿ ಸಲ್ಲಿಸಬೇಕು. ಇದನ್ನು ಮಾಡದೆ ಇದೇ ಮಾ.13ರಂದು ಸಭೆ ಸೇರಿ ನಾವು ಮುಷ್ಕರ ಮಾಡುವ ಬಗ್ಗೆ ತೀರ್ಮಾನಿಸಿದ್ದೇವೆ ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.

ಈ ಹಿಂದೆ ಅಂದರೆ, 2021ರ ಏಪ್ರಿಲ್‌ನಲ್ಲಿ ನೌಕರರು 15 ದಿನ ಮುಂಚಿತವಾಗಿಯೇ ಮುಷ್ಕರ ಮಾಡುವ ಸಂಬಂಧ ಕಾರ್ಮಿಕ ಇಲಾಖೆಯ ಆಯುಕ್ತರಿಗೆ ಮನವಿ ಸಲ್ಲಿಸಿದ್ದರು. ಆದರೂ ಕೂಡ ಮುಷ್ಕರ ನಿರತ ನೂರಾರು ನೌಕರರ ವಿರುದ್ಧ ಪೊಲೀಸ್‌ ಕೇಸ್‌, ವಜಾ, ವರ್ಗಾವಣೆ, ಅಮಾನತು ಜತೆಗೆ 4ಸಾವಿರದಿಂದ 15ಸಾವಿರ ರೂ.ಗಳ ವರೆಗೂ ದಂಡ ಹಾಕಿ ಅದನ್ನು ಎಲ್ಲ ನಿಗಮಗಳು ನೌಕರರ ವೇತನದಲ್ಲಿ ಮುರಿದುಕೊಂಡಿವೆ.

ಕಾನೂನಾತ್ಮಕವಾಗಿಯೇ ಮುಷ್ಕರಕ್ಕೆ ಕರೆ ಕೊಟ್ಟರು ಈ ರೀತಿಯ ಕಾನೂನು ಬಾಹಿರವಾಗಿ ಅಂದು ನಡೆದು ಕೊಂಡ ಸಾರಿಗೆ ನಿಗಮಗಳ ಅಧಿಕಾರಿಗಳು ದರ್ಪ ಮೆರೆದಿದ್ದಾರೆ. ಅಂದರೆ ಇದನ್ನು ಗಮನಿಸಿದರೆ, ಈಗ ಯಾವುದೇ ಮನವಿ ಕೊಡದೆ ಏಕಾಏಕಿ ದಿಢೀರ್‌ ಎಂದು ಮುಷ್ಕರಕ್ಕೆ ಕರೆ ನೀಡಿದರೆ ಈ ಅಧಿಕಾರಿಗಳು ಮುಷ್ಕರಕ್ಕೆ ಕೈ ಜೋಡಿಸುವ ನೌಕರರ ವಿರುದ್ಧ ಕ್ರಮ ಕೈಗೊಳ್ಳದೆ ಬಿಡತ್ತಾರೆಯೇ?

ಹೀಗಾಗಿ ಈಗಾಗಲೇ ಸಾರಿಗೆ ನೌಕರರ ಸಮಾನ ಮನಸ್ಕರ ವೇದಿಕೆ ಇದೇ ಮಾ.24ರಿಂದ ಕರೆ ನೀಡಿರುವ ಮುಷ್ಕರಕ್ಕೆ ಕೈ ಜೋಡಿಸಿ. ಅದರ ಬದಲು ಈ ರೀತಿ ಕಾನೂನು ಬಾಹಿರವಾಗಿ ದಿಢೀರ್‌ ಎಂದು ಮುಷ್ಕರಕ್ಕೆ ಕರೆ ನೀಡಿರುವುದು ಏತಕ್ಕಾಗಿ?

ಇದೇ ಮಾ.22ರಂದು ಯುಗಾದಿ ಹಬ್ಬವಿದೆ, ಈ ಹಬ್ಬಕ್ಕೆ ದೂರದೂರಿನಿಂದ ಸಾರ್ವಜನಿಕರು ತಮ್ಮ ತಮ್ಮ ಸ್ವಂತ ಊರುಗಳಿಗೆ ಹೋಗಿ ಹಬ್ಬ ಆಚರಣೆ ಮಾಡಲಿದ್ದಾರೆ. ಅವರಿಗೆ ತೊಂದರೆ ಕೊಡುವ ಉದ್ದೇಶದಿಂದ ಈ ಮುಷ್ಕರಕ್ಕೆ ಕರೆ ನೀಡಿದ್ದಾರೋ? ಜನರಿಗೆ ತೊಂದರೆ ಕೊಡುವ ಹುನ್ನಾರವಾಗಿ ಈ ಮುಷ್ಕರ ಮಾಡುವುದರಿಂದ ಸರ್ಕಾರಕ್ಕೆ ಕೆಟ್ಟ ಹೆಸರು ತರುವ ಉದ್ದೇಸವಿದೆಯೇ? ಇಲ್ಲ ನೌಕರರ ಬಲಿಪಶು ಮಾಡುವ ಹುನ್ನಾರವೋ ಗೊತ್ತಿಲ್ಲ.

ಆದರೆ, ಸರ್ಕಾರಕ್ಕೆ ಮತ್ತು ಕಾರ್ಮಿಕ ಇಲಾಖೆಯ ಆಯುಕ್ತರಿಗೆ ಮುಷ್ಕರ ಸಂಬಂಧ ಯಾವುದೇ ಮನವಿ ಕೊಡದೆ ಈ ರೀತಿ ಕರೆ ನೀಡಿರುವ ಕ್ರಮ ಸರಿಯಲ್ಲ. ಬದಲಿಗೆ ಮಾ.24ರಿಂದಲೇ ಮುಷ್ಕರ ಮಾಡುತ್ತಿರುವ ಸಮಾನ ಮನಸ್ಕರ ವೇದಿಕೆಗೆ ಸಾಥ್‌ ನೀಡಬಹುದಲ್ಲ.

ಅಂದರೆ, ಇಲ್ಲಿ ಸಾರಿಗೆ ನೌಕರರ ಹಿತಕ್ಕಿಂತ ಜಂಟಿ ಕ್ರಿಯಾ ಸಮಿತಿಯ ಒಣಪ್ರತಿಷ್ಟೆಯೇ ಹೆಚ್ಚಾಯಿತು ಎಂದು ಕಾಣಿಸುತ್ತಿದೆ. ಕಳೆದ ಇದೇ ಮಾ.8ರಂದೆ ಸಮಾನ ಮನಸ್ಕರ ವೇದಿಕೆ ಮುಷ್ಕರಕ್ಕೆ ಕರೆ ನೀಡಿ ಕೌಂಟ್‌ಡೌನ್‌ ಮಾಡುತ್ತಿದೆ. ಈ ಮಧ್ಯೆ ಅದರ ಜತೆ ಸೇರುವುದನ್ನು ಬಿಟ್ಟು ಈ ದಿಢೀರ್‌ ನಿರ್ಧಾರ ಏಕೆ ಮಾಡಬೇಕಿತ್ತು?

ಇಲ್ಲಿ ಮತ್ತೆ ನೌಕರರನ್ನು ಬಲಿಪಶು ಮಾಡಿ, ಜನರ ದೃಷ್ಟಿಯಲ್ಲೂ ಸಾರಿಗೆ ನೌಕರರ ಬಗ್ಗೆ ಕೆಟ್ಟ ಭಾವನೆ ಮೂಡುವಂತೆ ಮಾಡುವ ಹುನ್ನಾರ ಅಡಗಿದೆಯೇ? ಇದನ್ನು ಬಿಟ್ಟು ಯುಗಾದಿ ಹಬ್ಬ ಮುಗಿದ ಬಳಿಕ ಅಂದರೆ ಮಾ.24ರಿಂದ ಕರೆ ನೀಡಿರುವ ಮುಷ್ಕರದ ಜತೆ ಕೈ ಜೋಡಿಸುವ ಮೂಲಕ ನಾವು ಯಾವುದೇ ಸಂಘಟನೆಯ ಪರವಲ್ಲ ನೌಕರರ ಪರ ಎಂಬುದನ್ನು ಸಾಬೀತು ಪಡಿಸುವ ಜವಾಬ್ದಾರಿ ಜಂಟಿ ಕ್ರಿಯಾ ಸಮಿತಿಯ ಪದಾಧಿಕಾರಗಳ ಮೇಲಿದೆ.

ಇದರ ಹೊರತಾಗಿ ಮಾ.21ರಿಂದಲೇ ಮುಷ್ಕರ ಆರಂಭವಾದರೆ ಅದರ ಪರಿಣಾಮವನ್ನು ಎದುರಿಸಲು ಕೂಡ ಜಂಟಿ ಕ್ರಿಯಾ ಸಮಿತಿ ಸಿದ್ಧವಾಗಬೇಕಿದೆ.

ಈ ಹಿಂದೆ ಅಂದರೆ 2008 ಮತ್ತು 2012ರಲ್ಲೂ ಇದೇ ರೀತಿ ಸಂಘಟನೆಯೊಂದು ಮುಷ್ಕರಕ್ಕೆ ಕರೆ ನೀಡಿದ್ದಾಗ ಅದನ್ನು ಹತ್ತಿಕ್ಕುವ ಸಲುವಾಗಿ ಮತ್ತೊಂದು ದಿನ ಮುಷ್ಕರ ಮಾಡುವ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಆಗಲು ಕೂಡ ನೌಕರರ ದಾರಿ ತಪ್ಪಿಸಲಾಗಿತ್ತು. ಅದರ ಪರಿಣಾಮ ಶೇ.10 ಮತ್ತು ಶೇ.12ರಷ್ಟು ವೇತನ ಪರಿಷ್ಕರಣೆ ಮಾಡಿಸಿಕೊಂಡು ಬಳಿಕ ನಮ್ಮ ಬೇಡಿಕೆಗೆ ಸರ್ಕಾರ ಸರಿಯಾಗಿ ಈ ಬಾರಿ ಸ್ಪಂದಿಸಿಲ್ಲ ಮುಂದಿನ ಬಾರಿಗೆ ವೇತನ ಹೆಚ್ಚಳ ಮಾಡುವ ಭರವಸೆ ನೀಡಿದೆ ಎಲ್ಲರೂ ಡ್ಯೂಟಿಗೆ ಹೋಗಿ ಎಂದು ಮೂರುಕಾಸಿನ ವೇತನ ಪರಿಷ್ಕರಣೆ ಮಾಡಿಸಿ ನೌಕರರ ಬಲಿ ಹಾಕಿದರು.

ಈಗ ಮತ್ತೆ ಸಮಾನ ಮನಸ್ಕರ ವೇದಿಕೆ ಪದಾಧಿಕಾರಿಗಳು ಕರೆ ನೀಡಿರುವ ಮಾ.24ರ ಮುಷ್ಕರವನ್ನು ಹತ್ತಿಕ್ಕುವ ಹುನ್ನಾರದಿಂದ ಈ ರೀತಿ ಕಾನೂನು ಬಾಹಿರವಾದ ಮುಷ್ಕರಕ್ಕೆ ಕರೆ ನೀಡಿ ಜಂಟಿ ಕ್ರಿಯಾ ಸಮಿತಿ ಪದಾಧಿಕಾರಿಗಳು ನೌಕರರ ದಾರಿ ತಪ್ಪಿಸಲು ಹೊರಟಿರುವುದು ಅವರಿಗೆ ಸರಿ ಎನಿಸುತ್ತದೆಯೇ? ಈ ಬಗ್ಗೆ ಯೋಚಿಸಿ ಇನ್ನು ಕಾಲ ಮಿಂಚಿಲ್ಲ. ನೌಕರರ ಹಿತವೇ ನಿಮಗೆ ಮುಖ್ಯವಾಗಿದ್ದರೆ ಮಾ.24ರಿಂದ ಕರೆ ನೀಡಿರುವ ಕಾನೂನಾತ್ಮಕ ಮುಷ್ಕರಕ್ಕೆ ಸಾಥ್‌ ನೀಡಿಬೇಕಿದೆ.

Leave a Reply

error: Content is protected !!