NEWSಸಂಸ್ಕೃತಿ

ಕನ್ನಡ ಸಾಹಿತ್ಯ ಪರಿಷತ್ತು ಚಿರಂಜೀವಿ ಸಂಸ್ಥೆ: ನಾಡೋಜ ಮಹೇಶ್ ಜೋಶಿ

ಬನ್ನೂರು ರಾಜು ಸೇರಿ 49 ಮಂದಿಗೆ ದತ್ತಿ ಪ್ರಶಸ್ತಿ ಪ್ರದಾನ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಏಳು ಕೋಟಿ ಕನ್ನಡಿಗರ ಸ್ವಾಭಿಮಾನದ ಸಂಕೇತವಾಗಿರುವ ನೂರೆಂಟು ವರ್ಷಗಳ ಇತಿಹಾಸವುಳ್ಳ ಕನ್ನಡ ಸಾಹಿತ್ಯ ಪರಿಷತ್ತು ಸೂರ್ಯ ಚಂದ್ರರಾದಿಯಾಗಿ ಕನ್ನಡ ನೆಲ, ಜಲ, ಕನ್ನಡ ಭಾಷೆ ಇರುವ ತನಕವೂ ಇದ್ದೇ ಇರುವ ಜೀವಂತ ಮಾತ್ರವಲ್ಲ, ಚಿರಂಜೀವಿ ಸಂಸ್ಥೆಯೆಂದು ರಾಜ್ಯ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ.ಮಹೇಶ್ ಜೋಶಿ ಹೇಳಿದ್ದಾರೆ.

ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ರಾಜ್ಯ ಕನ್ನಡ ಸಾಹಿತ್ಯ ಪರಿಷತ್ತಿನ ಆವರಣದ ಶ್ರೀ ಕೃಷ್ಣರಾಜ ಪರಿಷನ್ಮಂದಿರದಲ್ಲಿ ಜರುಗಿದ 2021 ನೇ ಸಾಲಿನ ವಿವಿಧ ಸಾಹಿತ್ಯ ಕೃತಿಗಳಿಗೆ ರಾಜ್ಯ ಕನ್ನಡ ಸಾಹಿತ್ಯ ಪರಿಷತ್ತು ಕೊಡ ಮಾಡುವ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅಧ್ಯಕ್ಷತೆಯ ಪೀಠದಿಂದ ಮಾತನಾಡಿದರು.

ಸಮಸ್ತ ಕನ್ನಡಿಗರ ಅಸ್ಮಿತೆಯಾಗಿರುವ ಕನ್ನಡ ಸಾಹಿತ್ಯ ಪರಿಷತ್ತನ್ನು ಮೃತ ಸಂಸ್ಥೆ ಎಂಬಂತೆ ಬಿಂಬಿಸಿ ದೂರದರ್ಶನ ಕೇಂದ್ರದಲ್ಲಿ ತಮ್ಮ ಸಹೋದ್ಯೋಗಿಗಳೊಂದಿಗೆ ಒಂದು ನಿಮಿಷದ ಮೌನಚರಣೆಯನ್ನು ಮಾಡಿ ಪರಿಷತ್ತಿನ ವಿರುದ್ಧ ಅಸಂಬದ್ಧ ಮಾತುಗಳನ್ನಾಡಿದ್ದಾರೆಂದು ದೂರದರ್ಶನ ಕೇಂದ್ರದ ಸಹಾಯಕ ನಿರ್ದೇಶಕಿ ನಿರ್ಮಲಾ ಸಿ.ಯಲಿಗಾರ್ ಅವರ ಪರಿಷತ್ತಿನ ವಿರೋಧಿ ಧೋರಣೆಯ ನಡೆಯನ್ನು ಪ್ರತಿಯೊಬ್ಬ ಕನ್ನಡಿಗರೂ ಖಂಡಿಸಬೇಕೆಂದರು.

ನಡೆವವರು ಎಡವದೇ ನಡೆಯದವರು ಎಡಗುವರೇ? ಹಾಗಂತ ನಡೆಯುವವರೆಲ್ಲಾ ಎಡವ ಬೇಕೆಂದೇನೂ ಇಲ್ಲ. ಕನ್ನಡ ಸಾಹಿತ್ಯ ಪರಿಷತ್ತಿನಂತಹ ಬಹುದೊಡ್ಡ ಸಂಸ್ಥೆಯಲ್ಲಿ ಕುಳಿತು ಸಾಹಿತ್ಯದ ಮೂಲಕ ಕನ್ನಡ ಕಟ್ಟುವ ಕೆಲಸವನ್ನು ಮಾಡುವಾಗ ಸಣ್ಣಪುಟ್ಟ ವ್ಯತ್ಯಾಸಗಳಾಗುವುದು ಸಹಜ. ಆದರೆ ಇದನ್ನು ಸೌಹಾರ್ದಯು ತವಾಗಿ ಹೇಳಿ, ಚರ್ಚಿಸಿ ಕನ್ನಡ ಕಟ್ಟುವ ಕೆಲಸ ಮಾಡುವಲ್ಲಿ ಪ್ರತಿಯೊಬ್ಬರೂ ಪರಿಷತ್ತಿನೊಡನೆ ಸಹಕರಿಸಬೇಕು. ಇದನ್ನು ಬಿಟ್ಟು ಯಾವುದೋ ವೈಯಕ್ತಿಕ ಈರ್ಷೆ ಇಟ್ಟುಕೊಂಡು ನಿರ್ಮಲಾ ಯಲಿಗಾರರಂತೆ ಚಿಕ್ಕಪುಟ್ಟ ವಿಷಯಗಳನ್ನು ದೊಡ್ಡದು ಮಾಡಿಕೊಂಡು ಕನ್ನಡಕ್ಕೆ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಘನತೆಗೆ ಧಕ್ಕೆ ಬರುವಂತೆ ಯಾರೇ ನಡೆದುಕೊಂಡರೂ ಕೂಡ ತಾವು ಸಹಿಸುವುದಿಲ್ಲವೆಂದು ಗುಡುಗಿದರು.

ಜ್ಯೋತಿ ಬೆಳಗುವ ಮೂಲಕ ಸಮಾರಂಭ ಉದ್ಘಾಟಿಸಿ ಮಾತನಾಡಿದ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕುಲಪತಿ ಡಾ. ನಿರಂಜನ ವಾನಳ್ಳಿ, ಕನ್ನಡ ಸಾಹಿತ್ಯ ಪರಂಪರೆ ಬಹುದೊಡ್ಡದು. ಪ್ರತಿ ವರ್ಷ ಉತ್ತಮವಾದ ಸಾವಿರಾರು ಪುಸ್ತಕಗಳು ಪ್ರಕಟವಾಗಿ ಸಾಗರದಂತೆ ಹರಿದು ಬಂದು ಸಾಹಿತ್ಯ ಕ್ಷೇತ್ರವನ್ನು ಮುಟ್ಟುತ್ತಿವೆ. ಇಂತಹ ಕೃತಿಗಳನ್ನು ಓದುಗರಿಗೆ ಮುಟ್ಟಿಸುವ ಕೆಲಸ ವ್ಯವಸ್ಥಿತವಾಗಿ ಆಗಬೇಕಾಗಿದೆ ಎಂದರು.

ಇನ್ನು ಪ್ರತಿ ಮನೆಯಲ್ಲೂ ಒಂದು ಪುಟ್ಟ ಗ್ರಂಥಾಲಯ ಇರುವಂತಾಗಬೇಕು. ಹಾಗೆಯೇ ನಮ್ಮಲ್ಲಿ ಬರೆಯುವವರ ಸಂಖ್ಯೆ ಕೂಡ ಹೆಚ್ಚಿದ್ದು ಅವರನ್ನೂ ಸಹ ಸರಿಯಾಗಿ ಗುರುತಿಸಿ ಗೌರವಿಸುವಂತಹ ಕಾರ್ಯವೂ ಆಗಬೇಕಾಗಿದೆ. ಈ ದಿಸೆಯಲ್ಲಿ ಪುಸ್ತಕಗಳನ್ನು ಮುಟ್ಟಿಸುವ ಮತ್ತು ಅವುಗಳ ಕರ್ತೃಗಳನ್ನು ಗೌರವಿಸುವ ಹಾಗೂ ಪರಿಷತ್ತಿನ ಮೂಲಕ ಕನ್ನಡ ಸೇವೆಯನ್ನು ಪ್ರೀತಿಯಿಂದ ಅಷ್ಟೇ ಪ್ರಾಮಾಣಿಕತೆಯಿಂದ ಮಹೇಶ್ ಜೋಶಿ ಅವರು ಮಾಡುತ್ತಿದ್ದಾರೆಂದು ಶ್ಲಾಘಿಸಿದ ಅವರು, ಇಂದು 49 ಮಂದಿ ಸಾಹಿತಿಗಳು ದತ್ತಿ ಪ್ರಶಸ್ತಿಯ ಗೌರವಕ್ಕೆ ಭಾಜನರಾಗಿದ್ದಾರೆ. ಇದು ಮುಂದಿನ ವರ್ಷ ನೂರು ಆಗಬೇಕೆಂದು ಆಶಿಸಿದರು.

ಮುಖ್ಯಮಂತ್ರಿಗಳ ಕಾರ್ಯದರ್ಶಿ ಹಾಗೂ ಮಂಡ್ಯ ಜಿಲ್ಲೆಯ ಉಸ್ತುವಾರಿ ಕಾರ್ಯದರ್ಶಿಗಳೂ ಆದ ಜಯರಾಮ್ ರಾಯಪೂರ ಅವರು ಸಾಹಿತಿಗಳಾದ ಬನ್ನೂರು ಕೆ. ರಾಜು, ಸೋಮಲಿಂಗ ಬೇಡರ, ಆನಂದ್ ಗೋಪಾಲ್, ಸ್ಮಿತಾ ಅಮೃತ ರಾಜ್ ಸಂಪಾಜೆ, ಶಂಕರ ದೇವರು ಹಿರೇಮಠ ಸೇರಿದಂತೆ ನಲವತ್ತೊಂಬತ್ತು ಮಂದಿ ಸಾಹಿತಿಗಳಿಗೆ ರಾಜ್ಯ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ದತ್ತಿ ಪ್ರಶಸ್ತಿಗಳನ್ನು ನೀಡಿ ಸನ್ಮಾನಿಸಿದರು.

ನಂತರ ಮಾತನಾಡಿದ ಅವರು, ಒಂದನೇ ತರಗತಿಯಿಂದ ಐದರವರೆಗೆ ಕನ್ನಡ ಭಾಷೆಯಲ್ಲಿ ಕಲಿಯುವುದು ಕಡ್ಡಾಯವಾಗಬೇಕು. ಇದಕ್ಕಾಗಿ ಇರುವ ಭಾಷಾ ಮಾಧ್ಯಮದ ಗೊಂದಲವನ್ನು ಇದುವರೆಗೂ ಸರಿಪಡಿಸಲು ಸಾಧ್ಯವಾಗಿಲ್ಲ. ಸರ್ಕಾರಕ್ಕೆ ಈ ಬಗ್ಗೆ ಇಚ್ಛಾಶಕ್ತಿ ಇದೆ. ಆದರೆ ಅದನ್ನು ಕಾನೂನಿನ ಮೂಲಕ ಜಾರಿಗೆ ತರುವಾಗ ತೊಡಕು ಉಂಟಾಗುತ್ತಿದೆ. ಇದಕ್ಕಾಗಿ ನ್ಯಾಯಾಲಯದಿಂದ ಉಂಟಾಗುವ ಅಡ್ಡಿ ನಿವಾರಣೆಗೆ ಸಾಂವಿಧಾನಿಕ ರಕ್ಷಣೆ ಕೊಡಬೇಕು ಎಂದರು.

ಇನ್ನು ಇದು ಕೇವಲ ಕನ್ನಡ ಭಾಷೆಗೆ ಸೀಮಿತವಾಗದೆ ಇತರೆ ಭಾರತೀಯ ಭಾಷೆಗಳಿಗೂ ಈ ಸಮಸ್ಯೆ ಕಗ್ಗಂಟಾಗಿದ್ದು ಅವರಿಗೂ ಇದರ ಅನುಭವ ಆಗಿದೆ. ಆದ್ದರಿಂದ ಇದನ್ನು ಮೆಟ್ಟಿ ನಿಲ್ಲಲು ನಮ್ಮ ಭಾರತೀಯ ಭಾಷೆಗಳಿಗೆ ಸಾಂವಿಧಾನಿಕ ರಕ್ಷಣೆ ಕೊಡಲೇಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ನಮ್ಮ ಕನ್ನಡವೂ ಸೇರಿದಂತೆ ಇತರೆ ಭಾರತೀಯ ಭಾಷೆಗಳಿಗೂ ಬಹಳ ಕಷ್ಟವಾಗುತ್ತದೆ ಎಂದು ಹೇಳಿದರು.

ಮನುಷ್ಯ ಕುಲ ತಾನೊಂದೇ ವಲಂ ಎಂಬ ಮಾನವೀಯ ನೆಲೆಯ ವೈಚಾರಿಕ ಪ್ರಜ್ಞೆಯ ಹಿನ್ನೆಲೆಯಲ್ಲಿ ಮಾತನಾಡಿದ ಪ್ರೊ.ಕಾಳೇಗೌಡ ನಾಗವಾರ, ಸಾಹಿತ್ಯ ಕೃಷಿಯಲ್ಲಿ ತೊಡಗಿದವರಿಗೆ ದಿಟ್ಟತನ ಇರಬೇಕು. ಸಕಲ ಜೀವರಾಶಿಗಳ ಅಭಿವೃದ್ಧಿ ಕುರಿತು ಜ್ಞಾನಾಕ್ಷಿ ಚಿಂತನೆಗಳಿರುವ ಸೃಜನಶೀಲತೆಯ ದಿಟ್ಟತನದ ಸಾಹಿತ್ಯ ರಚನೆಯಾಗಬೇಕು.ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಸ್ಥಾನಮಾನದ ಜೊತೆಗೆ ಸಕಲ ಸವಲತ್ತು ಸಿಗಬೇಕು ಎಂದು ಹೇಳಿ ಕನ್ನಡ, ಕನ್ನಡಿಗ, ಕರ್ನಾಟಕ ಮತ್ತು ಕನ್ನಡ ಸಾಹಿತ್ಯ ಪರಂಪರೆಯ ಬಗ್ಗೆ ಸವಿವರವಾಗಿ ತಿಳಿಸಿಕೊಟ್ಟರು. ಹಾಗೆಯೇ ಬಹಳ ಹಿಂದೆಯೇ ಮಹನೀಯರು ದತ್ತಿ ಪ್ರಶಸ್ತಿ ಗಳನ್ನು ಇಟ್ಟಿರುವುದರಿಂದ ಇವತ್ತಿನ ದಿನಗಳಲ್ಲಿ ಅದರ ಮೊತ್ತ ಬಹಳ ಕಡಿಮೆ ಎನಿಸುತ್ತಿದೆ. ಆದ್ದರಿಂದ ಕನಿಷ್ಠ ಐದಾರು ಸಾವಿರಗಳನ್ನಷ್ಟಾದರೂ ಮಾಡಬೇಕೆಂದು ಪರಿಷತ್ತಿಗೆ ಸಲಹೆ ನೀಡಿದರು.

ದತ್ತಿ ಪ್ರಶಸ್ತಿ ಪುರಸ್ಕೃತರ ಪರವಾಗಿ ಮಾತನಾಡಿದ ಸಾಹಿತಿ ಬನ್ನೂರು ಕೆ.ರಾಜು, ಪ್ರಸ್ತುತ ಪರಿಷತ್ತಿನ ಅಧ್ಯಕ್ಷರಾಗಿರುವ ಮಹೇಶ್ ಜೋಶಿಯವರು ಈ ಹಿಂದೆ ದೂರದರ್ಶನದಲ್ಲಿ ಅತ್ಯುನ್ನತ ಅಧಿಕಾರದಲ್ಲಿದ್ದವರು. ವಿಶೇಷವಾಗಿ ಅಲ್ಲಿ ಕನ್ನಡ ಪರ ಕೆಲಸ ಮಾಡಿದವರು. ಅದನ್ನೇ ಇನ್ನೂ ಹೆಚ್ಚಿನ ರೀತಿಯಲ್ಲಿ ಈಗ ಪರಿಷತ್ತಿನಲ್ಲಿ ಮುಂದುವರೆಸಿದ್ದಾರೆ. ಆದರೆ ಇದನ್ನು ಸಹಿಸದೆ ಈಗ ದೂರದರ್ಶನದಲ್ಲಿ ಸಹಾಯಕ ನಿರ್ದೇಶಕಿಯಾಗಿರುವ ನಿರ್ಮಲಾ ಯಲಿಗಾರ್ ಅವರು, ಇಲ್ಲಸಲ್ಲದ ಆರೋಪಗಳನ್ನು ಕೆಲ ಮಾಧ್ಯಮಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಮಾಡುತ್ತಾ ಕನ್ನಡ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ಘನತೆಗೆ ಕುಂದುಂಟು ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇನ್ನು ಯಲಿಗಾರ್ ಅವರ ಪರಿಷತ್ತಿನ ಆಜೀವ ಸದಸ್ಯತ್ವವನ್ನು ತಕ್ಷಣವೇ ಶಾಶ್ವತವಾಗಿ ರದ್ದುಗೊಳಿಸಿ ಅವರನ್ನು ಕಪ್ಪು ಪಟ್ಟಿಗೆ ಸೇರಿಸಬೇಕೆಂದು ಹೇಳಿದರು. ಸ್ವಾಭಿಮಾನವುಳ್ಳ ಪ್ರತಿಯೊಬ್ಬ ಕನ್ನಡಿಗ, ಕನ್ನಡತಿಯೂ ನಿರ್ಮಲಾ ಯಲಿಗಾರ್ ರಂತಹ ಕನ್ನಡ ವಿರೋಧಿ ಅಧಿಕಾರಿಯ ಅವಿವೇಕತನವನ್ನು, ಉದ್ಧಂಡ ವಾದವನ್ನು ಉಗ್ರವಾಗಿ ಖಂಡಿಸಬೇಕೆಂದರು.

ಗೌರವ ಕಾರ್ಯದರ್ಶಿಗಳಾದ ನೇ.ಭ.ರಾಮಲಿಂಗ ಶೆಟ್ಟಿ , ಡಾ.ಪದ್ಮಿನಿ ನಾಗರಾಜು, ಗೌರವ ಕೋಶಾಧ್ಯಕ್ಷ ಬಿ.ಎಂ. ಪಟೇಲ್ ಪಾಂಡು, ಪತ್ರಕರ್ತ ಹಾಗೂ ಸಾಹಿತಿ ಎನ್.ಎಸ್. ಶ್ರೀಧರಮೂರ್ತಿ, ಮೈಸೂರು ಕನ್ನಡ ವೇದಿಕೆಯ ಅಧ್ಯಕ್ಷ ಎಸ್. ಬಾಲಕೃಷ್ಣ, ಭಾರತ ಜ್ಞಾನಾಭಿವೃದ್ಧಿ ಟ್ರಸ್ಟ್‌ನ ಅಧ್ಯಕ್ಷ ಡಾ.ತಲಕಾಡು ಚಿಕ್ಕರಂಗೇಗೌಡ ಮುಂತಾದವರಿದ್ದರು.

Leave a Reply

error: Content is protected !!
LATEST
ರೈಲ್ವೆ ನೌಕರರಿಗೆ ದಸರಾ ಹಬ್ಬದ ಬಂಪರ್: 78 ದಿನಗಳ ಸಂಬಳಕ್ಕೆ ಸಮನಾದ ಬೋನಸ್ ಘೋಷಣೆ ಅ.6ರಂದು ನಿವೃತ್ತ ನೌಕರರ ಸಭೆ: BMTC & KSRTC ನಿವೃತ್ತ ನೌಕರರ ಸಂಘದ ಕಾರ್ಯಧ್ಯಕ್ಷ ನಂಜುಂಡೇಗೌಡ KSRTC ತುಮಕೂರು: ಖಾಸಗಿ ಚಾಲಕರಿಗೆ ಮಣೆ ಹಾಕುವ ಡಿಸಿ, ಡಿಎಂಇ 20-30ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಚಾಲಕರ ಕಡೆಗಣನೆ... ಕರ್ನಾಟಕ - ಆಂಧ್ರ ಗಡಿಯಲ್ಲಿ ಕೆಎಸ್‌ಆರ್‌ಟಿಸಿ ಬಸ್‌ ಸೇವೆ ಹೆಚ್ಚಿಸಿ: ಎರಡೂ ನಿಗಮಗಳ ಎಂಡಿಗಳಿಗೆ ಪ್ರಯಾಣಿಕರ ಒತ್ತಾಯ ಹೆಚ್ಚುವರಿ ಪಿಂಚಣಿಗೆ ಆಗ್ರಹಿಸಿ ಇಪಿಎಸ್ ಪಿಂಚಣಿದಾರರ ಬೃಹತ್ ಪ್ರತಿಭಟನೆ KSRTC ನಿವೃತ್ತ ನೌಕರರಿಗೆ ಹೆಚ್ಚಿನ ಪಿಂಚಣಿ ಅನುಷ್ಠಾನ ಶೀಘ್ರ ಜಾರಿಗೊಳಿಸಿ: ಕೇಂದ್ರದ ರಾಜ್ಯ ಕಾರ್ಮಿಕ ಸಚಿವರಿಗೆ ಸಂಸದ... ಬಿಸ್ಮಿಲ್ಲ ನಗರದ ಸಮುದಾಯ ಭವನ ಕಾಮಗಾರಿ ಪೂರ್ಣಗೊಳಿಸಲು ಎಎಪಿ ಆಗ್ರಹ KSRTC ಹೊಳೆನರಸೀಪುರ ಘಟಕದ ನೌಕರರಿಗೆ ಕಿರುಕುಳ ಕೊಡುತ್ತಿರುವ DME- ದೂರು ನೀಡಿ 5 ತಿಂಗಳಾದರೂ ಸ್ಪಂದಿಸದ ಎಂಡಿ! BMTC ಚಾಲನಾ ಸಿಬ್ಬಂದಿಗಳಿಗೆ ಗನ್ ಲೈಸನ್ಸ್ ಪಡೆಯಲು ಅನುಮತಿ ನೀಡಬೇಕು: ಲಿಖಿತವಾಗಿ ಎಂಡಿಗೆ ಮನವಿ ಸಲ್ಲಿಸಿದ ನೌಕರ ಅರ್ಕಾವತಿ ಡಿನೋಟಿಫಿಕೇಷನ್ ಪ್ರಕರಣ ಕುರಿತ ಕೆಂಪಣ್ಣ ಆಯೋಗದ ವರದಿ ತಕ್ಷಣ ಬಹಿರಂಗ ಪಡಿಸಿ, ಸದನದಲ್ಲಿ ಮಂಡಿಸಿ: ಎಎಪಿ ಒತ್...