ಕಾಸರಗೋಡು: ನೆರೆಯ ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಗುರಪುರದ ಅಂಬಲತ್ತರ ಎಂಬಲ್ಲಿನ ಮನೆಯೊಂದರಲ್ಲಿ 2 ಸಾವಿರ ರೂ. ಮುಖಬೆಲೆಯ 7 ಕೋಟಿ ರೂ. ನೋಟುಗಳಿ ಸಿಕ್ಕಿದ್ದು, ಪೊಲೀಸರು ಹಣ ಮತ್ತು ವ್ಯಕ್ತಿಯೊಬ್ಬನನ್ನು ವಶಕ್ಕೆ ಪಡೆದಿದ್ದಾರೆ.
ವಶಕ್ಕೆ ಪಡೆದ ವ್ಯಕ್ತಿಯನ್ನು ಸದ್ಯ ವಿಚಾರಣೆ ಒಳಪಡಿಸಲಾಗಿದೆ. ಖಚಿತ ಮಾಹಿತಿ ಮೇರೆಗೆ ಪೊಲೀಸರು ಗುರುವಾರ ಕಾರ್ಯಾಚರಣೆ ನಡೆಸಿದ್ದರು. 2000 ರೂ. ಮುಖಬೆಲೆಯ ನೋಟುಗಳನ್ನು ಕೇಂದ್ರ ಸರ್ಕಾರ ಕಳೆದ ವರ್ಷದ ಆರಂಭದಲ್ಲಿ ಚಲಾವಣೆಯಿಂದ ಹಿಂಪಡೆದಿತ್ತು.
ಆದರೂ ಆ ನೋಟುಗಳು ಪತ್ತೆಯಾಗಿದ್ದು, ಇವು ಗಲ್ಫ್ ಉದ್ಯೋಗಿ ಕೆ.ಪಿ. ಬಾಬು ರಾಜ್ ಅವರ ಮಾಲೀಕತ್ವದ ಮನೆಯಲ್ಲಿ ಗುರುವಾರ ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಾಬು ರಾಜ್ ಅವರು ಪಾಣತ್ತೂರು ನಿವಾಸಿ ಅಬ್ದುಲ್ ರಜಾಕ್ ಎಂಬುವವರಿಗೆ ಮನೆ ಬಾಡಿಗೆಗೆ ನೀಡಿದ್ದರು. ಕಳೆದ ಮೂರು ದಿನಗಳಿಂದ ಪೊಲೀಸರು ಮನೆಯ ಮೇಲೆ ನಿಗಾ ಇರಿಸಿದ್ದರು. ಬುಧವಾರ ದಾಳಿ ನಡೆಸಿ ಎರಡು ಕೊಠಡಿಗಳಲ್ಲಿ ಸಂಗ್ರಹಿಸಿಟ್ಟಿದ್ದ ನೋಟುಗಳನ್ನು ವಶಕ್ಕೆ ಪಡೆದಿದ್ದಾರೆ.
2000 ರೂ. ನೋಟುಗಳನ್ನು ಥರ್ಮಾಕೋಲ್ ಬಾಕ್ಸ್, ರಟ್ಟಿನ ಬಾಕ್ಸ್ ಮತ್ತು ಗೋಣಿಚೀಲಗಳಲ್ಲಿ ತುಂಬಿದ್ದು ದಾಳಿವೇಳೆ ಪತ್ತೆಯಾಗಿದೆ. ಈ ನೋಟುಗಳನ್ನು ಚಲಾವಣೆಯಿಂದ ಹಿಂಪಡೆದಿದ್ದರೂ ಏಕೆ ಸಂಗ್ರಹಿಸಿಟ್ಟಿದ್ದಾರೆ. ಇದರ ನಿಜವಾದ ಮಾಲೀಕ ಯಾರು ಎಂಬುದರ ಬಗ್ಗೆ ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.