ಲಿಂಗಸಗೂರು: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ರಾಯಚೂರು ವಿಭಾಗದ ಲಿಂಗಸುಗೂರು ಘಟಕದಲ್ಲಿ ಚಾಲಕ ಹಾಗೂ ನಿರ್ವಾಹಕರಿಗೆ ಘಟಕ ವ್ಯವಸ್ಥಾಪಕರು ದಿನನಿತ್ಯ ಒಂದಿಲೊಂದು ರೀತಿಯಲ್ಲಿ ಕಿರುಕುಳು ನೀಡುತ್ತಿದ್ದು ಕೂಡಲೇ ಡಿಸಿ ಹಾಗೂ ಡಿಎಂ ಅವರನ್ನು ಅಮಾನತು ಮಾಡಬೇಕು ಎಂದು ಆಗ್ರಹಿಸಿ ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್. ಬೋಸರಾಜ್ ಅವರಿಗೆ ಕರ್ನಾಟಕ ರಕ್ಷಣಾ ವೇದಿಕೆ ಪದಾಧಿಕಾರಿಗಳು ಮನವಿ ಸಲ್ಲಿಸಿದ್ದಾರೆ.
ಲಿಂಗಸುಗೂರು ಸಾರಿಗೆ ಘಟಕ ವ್ಯವಸ್ಥಾಪಕರು ಸಿಬ್ಬಂದಿಗಳಿಗೆ ಸುಖ ಸುಮ್ಮನೆ ನೋಟಿಸ್ ಕೊಡುವುದು, ಬಳಿಕ ಮೇಲಧಿಕಾರಿಗಳಿಗೆ ನೌಕರರ ವಿರುದ್ದ ವರದಿ ಸಲ್ಲಿಸುವುದು ಬಳಿಕ ಅವರನ್ನು ಅಮಾನತು ಮಾಡಿಸುವುದು ಮಾಡುತ್ತಿದ್ದಾರೆ.
ಮೊನ್ನೆ ಅಂದರೆ ಇದೇ ಡಿ.8ರಂದು ಘಟಕ ವ್ಯವಸ್ಥಾಪಕರು ಕೆಎಂಪಿಎಲ್ ತಂದಿಲ್ಲ ಎಂದು ಹಾಗೂ ರೂಟ್ ಪೂರ್ತಿ ಮಾಡಿಲ್ಲ ಎಂಬ ಕಾರಣನೀಡಿ ಚಾಲಕನಿಗೆ ಹಿಂಸೆ ಕೊಟ್ಟಿದ್ದರು. ಅಲ್ಲದೆ ನನಗೆ ಎದುರುತ್ತರ ಕೊಟ್ಟಿದ್ದಾನೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ವರದಿ ನೀಡಿ ಚಾಲಕ ಅಬ್ದುಲ್ ರಫಿ ಅವರನ್ನು ಕೆಲಸದಿಂದ ಅಮಾನತು ಮಾಡಿಸಿದ್ದಾರೆ ಎಂದು ಆರೋಪಿಸಿ ಚಾಲಕ ಕುಟುಂಬ ಸಮೇತ ಘಟಕಕ್ಕೆ ಬಂದು ಆತ್ಮಹತ್ಯೆಗೆ ಯತ್ನಿಸಿದ್ದರು.
ಡಿಸಿಗೆ ನೌಕರರ ವಿರುದ್ಧ ವರದಿ ನೀಡಿ ಅಮಾನತು ಮಾಡಿಸುವುದು ಬಳಿಕ ಸಿಬ್ಬಂದಿಗಳನ್ನು ಅಲೆದಾಡಿಸಿ ನಂತರ ಪುನಃ ಅವರನ್ನು ಕರ್ತವ್ಯಕ್ಕೆ ನಿಯೋಜಿಸಿಕೊಳ್ಳಲು ಹಣದ ಬೇಡಿಕೆ ಇಡುತ್ತಿದ್ದಾರೆ. ಇದರಿಂದ ಇಲ್ಲಿ ಕಾರ್ಯನಿರ್ವ ಹಿಸುತ್ತಿರುವ ಸಿಬ್ಬಂದಿಗಳು ಡಿಎಂ ಕಿರುಕುಳಕ್ಕೆ ಬೇಸತ್ತು ಹೋಗಿದ್ದಾರೆ.
ನಾನು ಯಾವುದೇ ಅವ್ಯವಹಾರದಲ್ಲಿ ಭಾಗಿಯಾಗಿಲ್ಲ ಎಂದು ಹೇಳಿಕೊಳ್ಳುವ ಈ ಘಟಕ ವ್ಯವಸ್ಥಾಪಕ ಹಿಂಬಾಲಿಗಿಲಿನಿಂದ ಹಣ ಪಡೆಯುವುದಕ್ಕಾಗಿ ಸಿಬ್ಬಂದಿಗಳಿಗೆ ಕಿರುಕುಳ ಹಾಗೂ ಅಮಾನತು ಮಾಡುವ ಕುತಂತ್ರ ಬಳುಸುತ್ತಿದ್ದಾನೆ. ಇಲ್ಲಿಯವರೆಗೆ 25 ಸಿಬ್ಬಂದಿಗಳನ್ನು ಅಮಾನತು ಮಾಡಿಸಿದ್ದಾನೆ. ಅಮಾನತು ರದ್ದು ಗೊಳಿಸಲು ಮೇಲಧಿಕಾರಿಗಳು ಹಣ ಪಡೆದು ಘಟಕ ವ್ಯವಸ್ಥಾಪಕರೊಂದಿಗೆ ಹಂಚಿಕೊಂಡು ತಿನ್ನುತ್ತಿದ್ದಾರೆ. ಇಬ್ಬರು ಶಾಮೀಲಾಗಿ ಸಿಬ್ಬಂದಿಗಳ ಮೇಲೆ ದೌರ್ಜನ್ಯ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಇನ್ನು ಹೀಗೆ ಹಿಂಬಾಗಿಲಿಂದ ಹಣ ಮಾಡುತ್ತಾ ಸಿಬ್ಬಂದಿಗಳಿಗೆ ಕಿರುಕುಳ ನೀಡುತ್ತಿರುವ ಈ ಡಿಸಿ ಹಾಗೂ ಡಿಎಂ ಇಬ್ಬರು ಇಲಾಖೆಯಲ್ಲಿ ಅಂದ ದರ್ಬಾರ್ ನಡೆಸುತ್ತಿದ್ದಾರೆ. ಇದರಿಂದಾಗಿ ಘಟಕದ ಸಿಬ್ಬಂದಿಗಳು ಹೆದರಿಕೆಕೊಂಡೆ ಕೆಲಸಕ್ಕೆ ಬರುವಂತಾಗಿದೆ. ಹೀಗಾಗಿ ಕೂಡಲೇ ಇವರನ್ನು ಅಮಾನತು ಮಾಡಿ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಘಟಕದಲ್ಲಿ ಅತಿಹೆಚ್ಚು ಗುಜರಿ ಬಸ್‌ಗಳನ್ನಿಟ್ಟುಕೊಂಡು ಸಿಬ್ಬಂದಿಗಳಿಗೆ ಕಿ.ಮೀ. ಮತ್ತು ಮೈಲೇಜ್ ಕೊಡಬೇಕೆಂದು ತಾಕೀತು ಮಾಡುತ್ತಾರೆ. ಗುಜರಿ ಬಸ್‌ಗಳಿಂದ ಕಿ.ಮೀ. ಮತ್ತು ಮೈಲೇಜ್ ಕೊಡಲು ಹೇಗೆ ಸಾಧ್ಯ. ಘಟಕದ ಸಿಬ್ಬಂದಿಗಳ ಮೇಲೆ ದೌರ್ಜನ್ಯ ಕಿರುಕುಳು ನೀಡುತ್ತಿರುವ ವ್ಯವಸ್ಥಾಪಕ ಹಾಗೂ ಮೇಲಧಿಕಾರಿಗಳನ್ನು ಕೂಡಲೇ ಅಮಾನತ್ತು ಮಾಡಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟವನ್ನು ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಸಚಿವ ಎನ್.ಎಸ್. ಬೋಸರಾಜ್ ಅವರಿಗೆ ಮನವಿ ಪತ್ರ ನೀಡುವ ಮೂಲಕ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕ ಅಧ್ಯಕ್ಷ ಜಿಲಾನಿ ಪಾಷಾ, ಮುಖಂಡರಾದ ಹನುಮಂತ ನಾಯಕ್, ಅಜೀ ಜ್ ಪಾಷಾ, ರವಿಕುಮಾರ್ ಬರಗುಡಿ, ಖಾಜಾ ಸೇರಿದಂತೆ ಇತರ ರಕ್ಷಣಾ ವೇದಿಕೆ ಕಾರ್ಯಕರ್ತರು ಇದ್ದರು.