ರಾಯಚೂರು: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾದ ಪರಿಣಾಮ ಚಾಲಕ ಮೃತಪಟ್ಟಿರುವ ಘಟನೆ ಇಂದು ಮುಂಜಾನೆ ಸಿಂಧನೂರು ಪಟ್ಟಣದಲ್ಲಿ ಸಂಭವಿಸಿದೆ.
ರಾಯಚೂರು ಜಿಲ್ಲೆಯ ರಾಯಚೂರು ಸಾರಿಗೆ ಘಟಕ -3ರ ಸ್ಲೀಪರ್ ಕೋಚ್ ಬಸ್ ಭೀಕರ ಅಪಘಾತಕ್ಕೀಡಾಗಿರುವುದು. ಅಪಘಾತದಲ್ಲಿ ಬಸ್ ಚಾಲಕ ಕಮ್ ನಿರ್ವಾಹಕ ರಾಚಪ್ಪ (51) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ನಸುಕಿನ ಜಾವ ಅಪಘಾತಕ್ಕೀಡಾದ ಸ್ಲೀಪರ್ ಬಸ್ಸಿನಡಿ ಸಿಲುಕಿದ ಚಾಲಕ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಇದಕ್ಕೆ ಅಧಿಕಾರಿಗಳ ಬೇಜವಾಬ್ದಾರಿಯೇ ಕಾರಣ ಎಂದು ನೌಕರರು ಕಿಡಿಕಾರಿದ್ದಾರೆ. ಕಾರಣ ಇಬ್ಬರು ನೌಕರರು ಇರಬೇಕಾಗಿದ್ದು, ಒಬ್ಬರನ್ನೇ ಕರ್ತವ್ಯದ ಮೇಲೆ ಕಳುಹಿಸುತ್ತಿರುವುದರಿಂದ ಲಾಂಗ್ ಟ್ರಿಪ್ನಲ್ಲಿ ಚಾಲಕರು ವಿಶ್ರಾಂತಿ ರಹಿತವಾಗಿ ಕೆಲಸ ಮಾಡುತ್ತಿರುವುರಿಂದ ಈ ರೀತಿ ಅವಘಡಗಳು ನಡೆಯುತ್ತಿರುವುದು ಎಂದು ನೌಕರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು ಬಸ್ ಹುಬ್ಬಳ್ಳಿಯಿಂದ – ರಾಯಚೂರಿನತ್ತ ಹೋಗುತ್ತಿತ್ತು. ಬಸ್ನಲ್ಲಿ 9 ಮಂದಿ ಪ್ರಯಾಣಿಕರಿದ್ದರು. ಅವರಲ್ಲಿ ಒಬ್ಬರಿಗೆ ಗಾಯವಾಗಿದೆ. ಅಪಘಾತವಾದ ರಭಸಕ್ಕೆ ಬಸ್ ಪಲ್ಟಿ ಹೊಡೆದಿದ್ದು, ಬಸ್ನ ಮುಂಭಾಗ ಪುಡಿಪುಡಿಯಾಗಿದೆ. ಸಿಂಧನೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತಕ್ಕೆ ಅಧಿಕಾರಿಗಳೇ ಕಾರಣ: ರಾಯಚೂರು – ಧಾರವಾಡ ನಡುವೆ ಮಾರ್ಗಾಚರಣೆ ಮಾಡಲು ಈ ಹಿಂದೆ ಒಬ್ಬ ಚಾಲಕ, ಒಬ್ಬ ನಿರ್ವಾಹಕರನ್ನು ಕೊಡುತ್ತಿದ್ದರು. ಆದರೆ, ಈಗ ಒಬ್ಬರನ್ನೇ ಅಂದರೆ ಚಾಲಕ ಕಂ ನಿರ್ವಾಹಕರನ್ನು ಕಳಿಸುತ್ತಿದ್ದಾರೆ. ಈ ಕಾರಣ ಇಬ್ಬರೂ ಮಾಡುವ ಡ್ಯೂಟಿ ಒಬ್ಬರೇ ಮಾಡುವಂತೆ ಮಾಡಿದ್ದಾರೆ. ಪರಿಣಾಮ ಇಂಥ ಅನಾಹುತಗಳು ಸಂಭವಿಸುತ್ತಿವೆ ಎಂದು ನೌಕರರು ಆರೋಪಿಸಿದ್ದಾರೆ.
ಈ ಹಿಂದೆ ವಿಜಯಪಥ ಕೂಡ ರಾಯಚೂರು ವಿಭಾಗದ ದೇವದುರ್ಗ ಘಟಕದಲ್ಲಿ ಆಗಿದ್ದ ಅನಾಹುತದ ಬಗ್ಗೆ ವರದಿ ಮಾಡಿತ್ತು. ಆದರೂ ಕೂಡ ಅಧಿಕಾರಿಗಳು ಗಂಭೀರವಾಗಿ ತೆಗೆದುಕೊಂಡಿಲ್ಲ. ಬದಲಿಗೆ ಈಗಲೂ ಕೂಡ ಇಬ್ಬರನ್ನೇ ಬೆಂಗಳೂರಿಗೆ ಹೋಗಿ ಬರಲು ಹಾಗೂ ಒಬ್ಬರನ್ನು ಧಾರವಾಡ ಹುಬ್ಬಳ್ಳಿಗೆ ಹೋಗಿ ಬರಲು ಚಾಲಕರಿಗೆ ಆದೇಶ ಮಾಡುತ್ತಿದ್ದಾರೆ. ಇದರಿಂದ ನೌಕರರ ಅಮೂಲ್ಯ ಜೀವಗಳು ಹೋಗುತ್ತಿವೆ ಎಂದು ನೌಕರರು ಆತಂಕ ವ್ಯಕ್ತಪಡಿಸಿದ್ದಾರೆ.
ಮೇ 28ರಂದೆ ವಿಜಯಪಥ ವರದಿ ಮಾಡಿತ್ತು: KSRTC ಬಸ್ ಚಾಲಕರಿಗೆ ಡಬಲ್ ಡ್ಯೂಟಿ ಹೊರೆಯಿಂದ ಮುಕ್ತಿ ಸಿಕ್ಕಿದೆ. ಈ ಕುರಿತಂತೆ ಸಂಸ್ಥೆ ಆದೇಶ ಹೊರಡಿಸಿದ್ದು, ಕಡ್ಡಾಯವಾಗಿ ನಿಯಮಗಳನ್ನು ಪಾಲಿಸಬೇಕು ಎಂದು ಹೇಳಿದೆ. ಆದರೆ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಚಾಲಕರಿಗೆ ಡಬಲ್ ಡ್ಯೂಟಿ ಹೊರೆಯಿಂದ ಇನ್ನೂ ಮುಕ್ತಿ ಸಿಕ್ಕಿಲ್ಲ!!
ಹೌದು! ಕೆಎಸ್ಆರ್ಟಿಸಿ ಬಸ್ಗಳನ್ನು ರಾತ್ರಿ ಮತ್ತು ದೂರದ ಪ್ರಯಾಣಕ್ಕೆ ಓಡಿಸುವ ಚಾಲಕರು ಪ್ರಯಾಣದ ಬಳಿಕ ವಿಶ್ರಾಂತಿ ಪಡೆಯುವುದನ್ನು ಕಡ್ಡಾಯಗೊಳಿಸಲಾಗಿದೆ. ಅಲ್ಲದೆ, ಸತತ ಎಂಟು ಗಂಟೆಗಳಿಗಿಂತ ಹೆಚ್ಚು ಕಾಲ ಡ್ಯೂಟಿ ಮಾಡಿಸುವಂತಿಲ್ಲ. 8 ಗಂಟೆಗಳಿಗಿಂತ ಅಧಿಕ ಮತ್ತು ರಾತ್ರಿ ಪಾಳಿಯಲ್ಲಿ ಹೆಚ್ಚುವರಿ ಡ್ಯೂಟಿ ಮಾಡಿದರೆ ನಾಲ್ಕರಿಂದ ಐದು ಗಂಟೆಗಳ ಕಾಲ ವಿಶ್ರಾಂತಿಗೆ ಅವಕಾಶ ನೀಡಬೇಕು. ವಾರದ ಕೆಲಸದ ಅವಧಿ 48 ಗಂಟೆ ದಾಟುವಂತಿಲ್ಲ ಎಂದು ಸೂಚನೆ ನೀಡಿದೆ.
ಕೆಎಸ್ಆರ್ಟಿಸಿ ಬಸ್ಗಳಿಂದ ಅಪಘಾತ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ಇದಕ್ಕೆ ಕಾರಣ ಏನೆಂಬುದನ್ನು ಪತ್ತೆಹಚ್ಚಲು ಸಮಿತಿ ರಚನೆ ಮಾಡಲಾಗಿತ್ತು. ಅದರಂತೆ ಡಬಲ್ ಡ್ಯೂಟಿ ಮತ್ತು ರಾತ್ರಿ ವೇಳೆ ವಿಶ್ರಾಂತಿ ನೀಡದಿರುವುದರಿಂದ ನಿದ್ದೆಗೆಟ್ಟು ಬಸ್ ಚಲಾಯಿಸಲು ಸಾಧ್ಯವಾಗದೆ ಅಪಘಾತಗಳು ಸಂಭವಿಸುತ್ತಿವೆ ಎಂದು ತಿಳಿದುಬಂದಿದೆ. ಈ ಸಂಬಂಧ ಸಮಿತಿಯು ಕೆಎಸ್ಆರ್ಟಿಸಿಗೆ ವರದಿ ಸಲ್ಲಿಸಿತ್ತು.
ಆದರೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ರಾಯಚೂರು ವಿಭಾಗದ ದೇವದುರ್ಗ ಘಟಕದಲ್ಲಿ ಚಾಲಕರಿಗೆ ಡಬಲ್ ಡ್ಯೂಟಿ ಹೊರೆಯಿಂದ ಮುಕ್ತಿ ಸಿಕ್ಕಿಲ್ಲ. ಈ ಬಗ್ಗೆ ಹಲವು ಬಾರಿ ಮನವಿ ಮಾಡಿದರು ಕೂಡ ರಾತ್ರಿ ಪಾಳೆಯಲ್ಲಿ ಕನಿಷ್ಠ 1050 ಕಿಮೀಗಿಂತಲೂ ಹೆಚ್ಚು ಕಿಲೋಮಿಟರ್ ಇರುತ್ತದೆ.
ಇನ್ನು ಕೆಲವು ವೇಳೆ 1100 ಕಿಮೀ ಇರುತ್ತದೆ. ಈ ಮೊದಲು ರಾತ್ರಿ ಪಾಳೆಯಲ್ಲಿ ಇಬ್ಬರು ಚಾಲಕರು ಒಬ್ಬರು ನಿರ್ವಾಹಕರನ್ನು ಕೊಡುತ್ತಿದ್ದರು. ಈಗ ಅಂದರೆ ಸುಮಾರು ಒಂದು ವರ್ಷದಿಂದಲೂ ಒಬ್ಬ ಚಾಲಕ ಒಬ್ಬ ಚಾಲಕ ಕಂ ನಿರ್ವಾಹಕರನ್ನು ರೊಟ್ ರೊಟೇಶನ್ನಲ್ಲಿ ಕೊಡುತ್ತಿದ್ದಾರೆ.
ಎರಡು ಮೂರು ಸಲ ರಾತ್ರಿ ಪಾಳೆಯಲ್ಲಿ ಅನಾಹುತ ಆದರೂ ಕೂಡ ಅಧಿಕಾರಿಗಳ ನಿರ್ಲಕ್ಷತನದಿಂದ ದೇವದುರ್ಗ ಘಟಕದಲ್ಲಿ ರಾತ್ರಿ ಪಾಳೆಯಲ್ಲಿ ಒಬ್ಬ ಚಾಲಕ, ಒಬ್ಬ ಚಾಲಕ ಕಂ ನಿರ್ವಾಹಕರನ್ನು ನೇಮಿಸುತ್ತಿದ್ದಾರೆ. ಈ ಬಗ್ಗೆ ಹಲವಾರು ಸಂಘಟನೆಗಳ ಗಮನಕ್ಕೆ ತಂದರು ಕೂಡ ಯಾವುದೇ ಪ್ರಯೋಜನವಾಗಿಲ್ಲ.
ಈ ಪದ್ಧತಿಯನ್ನು ದೇವದುರ್ಗ ಘಟಕದ ವ್ಯವಸ್ಥಾಪಕರು ಮುಂದುವರಿಸುತ್ತಿದ್ದಾರೆ. ರಾಯಚೂರು ವಿಭಾಗದಿಂದ ರಾಯಚೂರು ಟು ಬೆಂಗಳೂರು ಹಾಗೂ ದೇವದುರ್ಗ ಟು ಬೆಂಗಳೂರು ಹಾಗೂ ದೇವದುರ್ಗ ಟು ಪುನಾ ಎಲ್ಲ ರಾತ್ರಿ ಪಾಳೆಯನ್ನು ಇದೇ ವ್ಯವಸ್ಥೆಯಡಿಯಲ್ಲೇ ನಡೆಯುತ್ತಿದೆ.
ಹೀಗಾಗಿ ಇದರ ಬಗ್ಗೆ ಅಧಿಕಾರಿಗಳು ಸೂಕ್ತ ಗಮನ ಹರಿಸಿ ಈ ಮೊದಲು ಇದಂತೆ ಇಬ್ಬರು ಚಾಲಕರು ಒಬ್ಬ ನಿರ್ವಾಹಕರನ್ನು ನಿಯೋಜಿಸಬೇಕು ಎಂದು ಘಟಕದ ನೊಂದ ಚಾಲನಾ ಸಿಬ್ಬಂದಿ ಮನವಿ ಮಾಡಿದ್ದಾರೆ ಎಂದು ವರದಿ ಮಾಡಲಾಗಿತ್ತು. ಆದರೂ ಅಧಿಕಾರಿಗಳು ಎಚ್ಚೆತ್ತುಕೊಳ್ಳದೆ ನಿರ್ಕ್ಷ್ಯವಹಿಸುತ್ತಿರುವ ಪರಿಣಾಮ ಚಾಲಕರು ಜೀವ ಕಳೆದುಕೊಳ್ಳುತ್ತಿದ್ದಾರೆ.
ಇನ್ನು ಸಾರಿಗೆಯ ಮೇಲಧಿಕಾರಿಗಳು ಚಾಲನಾ ಸಿಬ್ಬಂದಿಯ ಜೀವಕ್ಕೆ ಬೆಲೆಯಿಲ್ಲ ಎಂಬಂತೆ ನಡೆದುಕೊಳ್ಳುತ್ತಿದ್ದು, ಈ ಬಗ್ಗೆ ಕೇಳಬೇಕಾದ ಸಾರಿಗೆ ಸಚಿವರ ಮತ್ತು ಎಂಡಿ ಕಂಡು ಕಾಣದಂತೆ ವರಿಸುತ್ತಿದ್ದಾರೆ. ಇನ್ನಾದರೂ ಚಾಲನಾ ಸಿಬ್ಬಂದಿಗಳ ಜೀವವನ್ನು ಉಳಿಸುವ ನಿಟ್ಟಿನಲ್ಲಿ ಕ್ರಮವಹಿಸಿ ಎಂಬುವುದು ನೌಕರರ ಮನವಿಯಾಗಿದೆ.