NEWSನಮ್ಮಜಿಲ್ಲೆನಮ್ಮರಾಜ್ಯ

KSRTC EFWA: ಉತ್ತಮ ವಿದ್ಯೆ ಪಡೆದು ಉನ್ನತ ಹುದ್ದೆಗೇರಿ – ಸಾರಿಗೆ ನೌಕರರ ಮಕ್ಕಳ ಸನ್ಮಾನಿಸಿದ ಸಚಿವ ರಾಮಲಿಂಗಾರೆಡ್ಡಿ ಕರೆ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನೌಕರರ ಮಕ್ಕಳ ವಿದ್ಯಾಭ್ಯಾಸವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಎಸ್‌ಎಸ್‌ಎಲ್‌ಸಿ, ಪಿಯುಸಿ, ಪದವಿ, ಸ್ನಾತಕೋತ್ತರ ಪದವಿ, ವೈದ್ಯಕೀಯ, ಇಂಜಿನಿಯರಿಂಗ್‌ ಮಾಡುತ್ತಿರುವ ಮಕ್ಕಳಿಗೆ ಪ್ರತಿ ವರ್ಷ 5ಸಾವಿರದಿಂದ 50 ಸಾವಿರ ರೂ.ಗಳವರೆಗೂ ಪ್ರೋತ್ಸಾಹಧನ ಕೊಡಲಾಗುತ್ತಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.

ಇಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರರ ಕುಟುಂಬ ಕ್ಷೇಮಾಭಿವೃದ್ಧಿ ಸಂಘ ನಗರದ ರವೀಂದ್ರ ಕಲಾಕ್ಷೇತ್ರದ ಪಕ್ಕದಲ್ಲಿರುವ ನಯನ ಸಭಾಂಗಣದಲ್ಲಿ ಆಯೋಜಿಸಿದ್ದ 2023-24ನೇ ಸಾಲಿನ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ 80ಕ್ಕೂ ಅಧಿಕ ಅಂಕಪಡೆದ ನೌಕರರ ಮಕ್ಕಳಿಗೆ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಪ್ರಸ್ತುತ ನಿಗಮದಲ್ಲಿ ನೌಕರರ ಪ್ರತಿಭಾವಂತ ಮಕ್ಕಳಿಗೆ ಕೊಡುವ ವಿದ್ಯಾರ್ಥಿ  ನಿಧಿಯಲ್ಲಿ 1.70 ಕೋಟಿ ರೂಪಾಯಿ ಸಂಗ್ರಹವಾಗಿದೆ. ಈ ನಿಧಿಯನ್ನು ಬಳಸಿಕೊಂಡು ಮಕ್ಕಳು ಉತ್ತಮ ವಿದ್ಯೆ ಪಡೆದು ಉನ್ನತ ಹುದ್ದೆಗೇರಬೇಕು ಎಂದು ಕಿವಿಮಾತು ಹೇಳಿದರು.

ಕಳೆದ ಎರಡು ವರ್ಷದ ಹಿಂದೆ ಉನ್ನತ ವಿದ್ಯಾಭ್ಯಾಸ ಮಾಡುವ ಮಕ್ಕಳಿಗೆ ಅದರಲ್ಲೂ ನೌಕರನ ಒಂದು ಮಗುವಿಗೆ ಮಾತ್ರ ಪ್ರೋತ್ಸಾಹಧನ ಕೊಡಬೇಕು ಎಂಬ ನಿಯಮವಿತ್ತು. ಆದರೆ, ಅದನ್ನು ಬದಲಿಸಿ ನೌಕರನ ಇಬ್ಬರು ಮಕ್ಕಳಿಗೆ ಕೊಡಬೇಕು. ಅದು ಕೂಡ ಪ್ರತಿವರ್ಷವೂ ಕೊಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ಇನ್ನು ನೌಕರರ ಕುಟುಂಬ ಕ್ಷೇಮಾಭಿವೃದ್ಧಿ ಸಂಘ ಕೂಡ ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ಅತೀ ಹೆಚ್ಚು ಅಂಕ ಪಡೆದಿರುವ ಸಂಸ್ಥೆಯ ನೌಕರರ ಮಕ್ಕಳನ್ನು ಗುರುತಿಸಿ ಗೌರವಿಸುತ್ತಿರುವುದು ಹೆಮ್ಮೆಯ ವಿಷಯ ಎಂದು ಶ್ಲಾಘಿಸಿದರು.

ಬಿಎಂಟಿಸಿಯ ಮುಖ್ಯ ಸಂಚಾರ ವ್ಯವಸ್ಥಾಪಕ ಜಿ.ಟಿ.ಪ್ರಭಾಕರ್‌ ರೆಡ್ಡಿ ಮಾತನಾಡಿ, ಪ್ರತಿಯೊಬ್ಬರಲ್ಲೂ ಪ್ರತಿಭೆ ಇದೆ ಅದನ್ನು ಗುರುತಿಸಬೇಕು. ಜತೆಗೆ ವಿದ್ಯಾರ್ಥಿಗಳು ಕೂಡ ಶ್ರಮಪಟ್ಟು ಕಲಿತರೆ ಇಂಥ ಸನ್ಮಾನಗಳು ತಾವಾಗಿಯೇ ಹುಡುಕಿಕೊಂಡು ಬರುತ್ತವೆ. ಹೀಗಾಗಿ ಇಲ್ಲಿ ಸನ್ಮಾನ ಸ್ವೀಕರಿಸಿದ ಮಕ್ಕಳ ಜತೆಗೆ ನೌಕರರ ಪ್ರತಿ ಮಗುವೂ ಕೂಡ ಉನ್ನತಸ್ಥಾನಕ್ಕೆ ಏರುವ ಗುರಿ ಇಟ್ಟುಕೊಂಡು ಓದಿನತ್ತ ಹೆಚ್ಚು ಗಮನ ಹರಿಸಬೇಕು ಎಂದು ಕರೆ ನೀಡಿದರು.

ಇನ್ನು ವಿದ್ಯಾರ್ಥಿ ಜೀವನ ಒಮ್ಮೆ ಹೋದ ಮೇಲೆ ಮರಳಿ ಬರುವುದಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಸಾಧನೆಯತ್ತ ಮುಖಮಾಡಬೇಕು. ವಿದ್ಯೆಗೆ ನೌಕರರ ಮತ್ತು ಅಧಿಕಾರಿಗಳ ಮಕ್ಕಳು ಎಂಬ ಭೇದವಿರುವುದಿಲ್ಲ. ಶ್ರಮಪಟ್ಟವರು ಉನ್ನತ ಸ್ಥಾನ ಪಡೆಯುತ್ತಾರೆ. ಹಾಗೆ ನೋಡುವುದಾದರೆ ಅಧಿಕಾರಿಗಳ ಮಕ್ಕಳಿಗಿಂತ ನೌಕರರ ಮಕ್ಕಳೇ ಹೆಚ್ಚಾಗಿ ಉನ್ನತ ಅಧಿಕಾರಿಗಳಾಗುತ್ತಿದ್ದಾರೆ. ಇದಕ್ಕೆ ನೌಕರರ ಮಕ್ಕಳಿಗೆ ಒಂದೇ ಕಡೆ ಕಲಿಯುವುದಕ್ಕೆ ಸಿಕ್ಕಿರುವ ಅವಕಾಶವೂ ಇರಬಹುದು ಎಂದು ಅಭಿಪ್ರಾಯಪಟ್ಟರು.

ಬಿಎಂಟಿಸಿಯ ಮುಖ್ಯ ಕಾರ್ಮಿಕ ಕಲ್ಯಾಣಾಧಿಕಾರಿ ಎಚ್‌. ದಿವಾಕರ್‌ ಮಾತನಾಡಿ, ಅಧಿಕಾರಿಗಳು ನೌಕರರು ಎಂಬುವುದು ಹುದ್ದೆಯಿಂದ ಬರುತ್ತದೆ. ಆದರೆ, ನಾವೆಲ್ಲರೂ ಸಾರಿಗೆ ಸಂಸ್ಥೆಯಲ್ಲಿದ್ದುಕೊಂಡು ಸಾರ್ವಜನಿಕರ ಸೇವೆ ಮಾಡುವ ಸೇವಕರು ಅಷ್ಟೆ. ಇಲ್ಲಿ ಮೇಲು ಕೀಳೆಂಬುವುದು ಇಲ್ಲ. ಅವರವರ ಕೆಲಸವನ್ನು ಅವರು ಅಚ್ಚುಕಟ್ಟಾಗಿ ಮಾಡಿಕೊಂಡು ಹೋಗಬೇಕಷ್ಟೆ ಎಂದು ಹೇಳಿದರು.

ಇಲ್ಲಿ ಸನ್ಮಾನ ಸ್ವೀಕರಿಸಿರುವ ಮಕ್ಕಳು ಈಗಾಗಲೇ ಉತ್ತಮ ಅಂಕ ಗಳಿಸಿದ್ದೀರ. ಇದನ್ನು ಕಾಪಿಟ್ಟುಕೊಂಡು ಪದವಿ, ಸ್ನಾತಕೋತ್ತರ ಪದವಿ ಇತರ ಪದವಿಗಳಲ್ಲೂ ಇದೇ ಅಥವಾ ಇದಕ್ಕಿಂತ ಹೆಚ್ಚು ಅಂಕ ಗಳಿಸುವ ಮೂಲಕ ಪಾಲಕರಿಗೆ ಕೀರ್ತಿ ತರಬೇಕು. ಕಾರಣ ಇಂದು ಹೆಚ್ಚು ಅಂಕಪಡೆದವರು ಮುಂದೆ ಕಡಿಮೆ ಅಂಕ ಪಡೆದರೆ ಅದರ ನೋವನ್ನು ನಿಮ್ಮ ಜತೆಗೆ ಪಾಲಕರು ಕೂಡ ಅನುಭವಿಸಬೇಕಾಗುತ್ತದೆ. ಹೀಗಾಗಿ ಈ ಮಾತನ್ನು ಎಲ್ಲರು ಮರೆಯಬೇಡಿ ಎಂದು ಕಿವಿಮಾತು ಹೇಳಿದರು.

ಕೆಎಸ್‌ಆರ್‌ಟಿಸಿ ಬೆಂಗಳೂರು ಕೇಂದ್ರೀಯ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಎಸ್‌.ಲಕ್ಷ್ಮಣ್‌ ಮಾತನಾಡಿ, ನಮ್ಮ ನೌಕರರ ಮಕ್ಕಳು ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕಪಡೆದು ಸನ್ಮಾನಕ್ಕೆ ಅರ್ಹರಾಗಿರುವುದು ಹೆಮ್ಮೆಯ ವಿಷಯ. ಇದರ ಜತೆಗೆ ನೀವು ಜೀವನದಲ್ಲಿ ಗುರಿ ಸಾಧನೆಗೆ ಒಂದು ಹೆಜ್ಜೆ ಮುಂದಿಟ್ಟಿದ್ದೀರಿ. ಆ ಗುರಿ ಸಾಧಿಸುವತ್ತ ಹೆಚ್ಚು ಗಮನಕೊಡಬೇಕಿದೆ. ಏಕೆಂದರೆ ಗೌರವ ಸ್ವೀಕರಿಸುವುದು ಸುಲಭ. ಆದರೆ, ಅದನ್ನು ಉಳಿಸಿ ಕಾಪಾಡಿಕೊಂಡು ಹೋಗುವುದಕ್ಕೆ ನಾವು ಹಾಕಬೇಕಿರುವ ಶ್ರಮ ಬಹಳ. ಇದನ್ನು ಯಾರು ಮರೆಯಬಾರದು ಎಂದು ಸಲಹೆ ನೀಡಿದರು.

ಇನ್ನು ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲೇ ಇದೆ. ಹೀಗಾಗಿ ನೀವು ಉನ್ನತ ವಿದ್ಯಾಭ್ಯಾಸ ಮಾಡುವುದಕ್ಕೆ ನಿಮಗೆ ಇಷ್ಟವಾಗುವ ವಿಷಯವನ್ನು ಆಯ್ಕೆ ಮಾಡಿಕೊಳ್ಳಿ ಅದರಿಂದ ಭವಿಷ್ಯವು ಉಜ್ವಲವಾಗುತ್ತದೆ. ಅಲ್ಲದೆ ನಿಮ್ಮ ಅಪ್ಪ ಅಮ್ಮನಿಗೂ ಸಮಾಜದಲ್ಲಿ ಗೌರವ ತಂದುಕೊಟ್ಟಂತಾಗುತ್ತದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಅತೀ ಹೆಚ್ಚು ಅಂಕಪಡೆದ 80ಕ್ಕೂ ಹೆಚ್ಚು ನೌಕರರ ಮಕ್ಕಳನ್ನು ಶಾಲು ಹೊದಿಸಿ, ಪ್ರಶಸ್ತಿ ಫಲಕ, ಪ್ರಶಸ್ತಿ ಪತ್ರದ ಜತೆಗೆ ಪ್ರೋತ್ಸಾಹ ಧನದೊಂದಿಗೆ ಸನ್ಮಾನಿಸಲಾಯಿತು.

ಕೆಎಸ್‌ಆರ್‌ಟಿಸಿ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ.ಟಿ.ಎಸ್‌.ಲತಾ, ಸಂಘದ ರಾಜ್ಯಾಧ್ಯಕ್ಷ ಭೈರೇಗೌಡ (ಭೈರಣ್ಣ), ಗೌರವಾಧ್ಯಕ್ಷ ಗೋವಿಂದರಾಜು, ಉಪಾಧ್ಯಕ್ಷ ಪಿ.ಎಂ.ಪ್ರಕಾಶ್‌, ಕಾರ್ಯಾಧ್ಯಕ್ಷ ವೇಣುಗೋಪಾಲ್‌, ಪ್ರಧಾನ ಕಾರ್ಯದರ್ಶಿ ಪ್ರೇಮ್‌ ಕುಮಾರ್‌, ಖಜಾಂಚಿ ಎ.ಸಿ.ಮಂಜಣ್ಣ, ಸಂಘದ ಬಿಎಂಟಿಸಿ ಅಧ್ಯಕ್ಷ ರುದ್ರೇಶ್ ಎಸ್.ನಾಯಕ, ನಿರ್ದೇಶಕರಾದ ರಾಮಲಕ್ಷ್ಮಮ್ಮ, ವಿ.ಜಿ.ವೆಂಕಟರಾಜು, ಮಹದೇವಸ್ವಾಮಿ, ಆನಂದ ಮೈಗೂರು, ಪಿ.ಎಚ್‌.ತೋಟಯ್ಯ ಹಾಗೂ ಸನ್ಮಾನಿತ ಮಕ್ಕಳ ಪಾಲಕರು ಸೇರಿದಂತೆ ನೂರಾರು ನೌಕರರು ಇದ್ದರು.

Leave a Reply

error: Content is protected !!
LATEST
NWKRTC: ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್‌- ಚಾಲನಾ ಸಿಬ್ಬಂದಿಗಳಿಗೆ ಗಾಯ ನಿರುದ್ಯೋಗಿ ಯುವಕ - ಯುವತಿಯರಿಗೆ ಮಾತ್ರ: PM ಇಂಟರ್ನ್​ಶಿಪ್ಪ್‌ಗೆ ಅರ್ಜಿ ಹಾಕಿ -ಪ್ರತಿ ತಿಂಗಳು ₹5000 ಭತ್ಯೆ ಪಡೆಯಿರ... KSRTC ನೌಕರರು ಈಗಾಗಲೇ ಮುಷ್ಕರಕ್ಕೆ ಸಿದ್ಧ, ನಾವು ದಿನಾಂಕ ಘೋಷಣೆ ಮಾಡುತ್ತೇವೆ -ಸರ್ಕಾರಕ್ಕೆ ಜಂಟಿ ಕ್ರಿಯಾ ಸಮಿತಿ ಎಚ್... KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ KSRTC ಕೋಲಾರ: ನೌಕರರ ಪರ ನಿಲ್ಲಬೇಕಾದ ಕಾರ್ಮಿಕ ಕಲ್ಯಾಣ ಅಧಿಕಾರಿಯೇ ವಿರುದ್ಧ ನಿಂತರೆ ಎಲ್ಲಿ ಸಿಗಲಿದೆ ನ್ಯಾಯ? ಮೈಸೂರು: ಸಾಲದ 1ಕಂತು ಕಟ್ಟಿಲ್ಲದ್ದಕ್ಕೆ ಟ್ರ್ಯಾಕ್ಟರ್ ಜಪ್ತಿ ಮಾರಾಟ - ಕೋಟಕ್ ಮಹೇಂದ್ರ ಬ್ಯಾಂಕ್‌ಗೆ ರೈತರ ಮುತ್ತಿಗೆ ಕೆಟ್ಟು ನಿಂತಿದ್ದ KSRTC ಬಸ್‌ ರಿಪೇರಿ ವೇಳೆ ಕಾರು ಡಿಕ್ಕಿ-ಕಂಡಕ್ಟರ್‌  ಮೃತ BMTC: ಸ್ಕೂಟರ್​​ಗೆ ಸೈಡ್​ ಬಿಡಲಿಲ್ಲ ಎಂದು ಬಸ್‌ ಚಾಲಕನ ಮೇಲೆ ಕಿಡಿಗೇಡಿಯಿಂದ ಹಲ್ಲೆ- ಇದು 9ನೇ ಪ್ರಕರಣ- ಆತಂಕದಲ್ಲಿ ... KSRTC ಬಸ್‌ನಲ್ಲಿ ₹70 ಸಾವಿರ ಮೌಲ್ಯದ ತಂಬಾಕು ಸಾಗಿಸಿದ ಚನ್ನಪಟ್ಟಣ ಘಟಕದ ಕಂಡಕ್ಟರ್‌ ತಮಿಳುನಾಡಿನಲ್ಲಿ ಬಂಧನ KKRTC ಕೊಪ್ಪಳ ಘಟಕಕ್ಕೆ  RTO ಅಧಿಕಾರಿಗಳ ತಂಡ ಭೇಟಿ: ನೌಕರರಿಗೆ ವಾಯುಮಾಲಿನ್ಯ ದುಷ್ಪರಿಣಾಮಗಳ ಬಗ್ಗೆ ಅರಿವು