ಬೆಂಗಳೂರು: ಇದೇ ಜೂನ್ 11ರಿಂದ ರಾಜ್ಯದ ಎಲ್ಲ ನಾಲ್ಕೂ ಸಾರಿಗೆ ನಿಗಮಗಳ ಬಸ್‌ಗಳಲ್ಲಿ ಲಿಂಗತ್ವ ಅಲ್ಪ ಸಂಖ್ಯಾತರಿಗೆ, ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಯಕ್ಕೆ ಅನುವು ಮಾಡಿಕೊಡಲಾಗುತ್ತಿದೆ.
ಇದು ಒಳ್ಳೆಯ ನಿರ್ಧಾರವೇ, ಆದರೆ ಇದರಿಂದ ಎಲ್ಲ ನಿಗಮಗಳ ಬಸ್ ನಿರ್ವಾಹಕರಿಗೆ (Conductors) ಭಾರಿ ತಲೆನೋವು ತಂದೊಡ್ಡುವ ಕೆಲಸಕ್ಕೆ ಅಧಿಕಾರಿಗಳು ಮುಂದಾಗಿದ್ದು, ಇಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ದರದ ಟಿಕೆಟ್ ಕೊಡಬೇಕು ಅದಕ್ಕೂ ಮೊದಲು ಆ ಮಹಿಳೆ ಕರ್ನಾಟಕದವರೇನ ಎಂದು ಖಚಿತಪಡಿಸಿಕೊಳ್ಳಬೇಕು.
ಇಷ್ಟಾದ ಮೇಲೆ ಎಲ್ಲಿಂದ ಎಲ್ಲಿಗೆ ಎಂದು ಟಿಕೆಟ್ ಕೊಡಬೇಕು. ಇಲ್ಲಿಗೆ ಮುಗಿಯಿತು ಎಂದು ಅಂದುಕೊಳ್ಳುವಷ್ಟರಲ್ಲಿ ಸ್ಟೇಜ್ ಬಂದಿರುತ್ತದೆ. ಈ ವೇಳೆ ವೇಬಿಲ್‌ನಲ್ಲಿ ಉಚಿತವಾಗಿ ಎಷ್ಟು ಟಿಕೆಟ್ ಕೊಟ್ಟಿದ್ದೇವೆ ಇನ್ನು ಹಣ ಪಡೆದು ಎಷ್ಟು ಟಿಕೆಟ್ ಕೊಟ್ಟಿದ್ದೇವೆ ಎಂಬುದನ್ನು ನಮೂದಿಸಬೇಕು.
ಇನ್ನು ಮಧ್ಯದಲ್ಲಿ ಟಿಕೆಟ್ ಮಷಿನ್ ಕೈಕೊಟ್ಟರೆ ಮುಗಿದೇ ಹೋಗಿಯಿತು. ಅಂದರೆ, ಮಾರ್ಗ ಮಧ್ಯದಲ್ಲಿ ಇಟಿಎಂ ಯಂತ್ರಗಳು ದುರಸ್ತಿಗೊಂಡಲ್ಲಿ, ಲಗೇಜು ಚೀಟಿ ಮಾದರಿಯಲ್ಲಿ ಪ್ರತ್ಯೇಕ, ಪಿಂಕ್ ಬಣ್ಣದ ಖಾಲಿ ಇರುವ ಚೀಟಿಗಳಲ್ಲಿ ಮಹಿಳಾ ಪ್ರಯಾಣಿಕರು ಎಲ್ಲಿಂದ ಎಲ್ಲಿಗೆ ಪ್ರಯಾಣಿಸಿರುತ್ತಾರೆ ಎಂಬುದನ್ನು ಬರೆದು ಚೀಟಿಗಳನ್ನು ಮಹಿಳಾ ಪ್ರಯಾಣಿಕರಿಗೆ ನೀಡಬೇಕು ಮತ್ತು Carbon Copy ಪ್ರತಿಯನ್ನು ಘಟಕಕ್ಕೆ ಹಿಂದುರಿಗಿಸಬೇಕು. ವಿತರಿಸಿರುವ ಪಿಂಕ್ ಚೀಟಿಗಳ ಸಂಖ್ಯೆಯನ್ನು ವೇಬಿಲ್‌ನಲ್ಲಿ ಪ್ರತ್ಯೇಕವಾಗಿ ನಮೂದಿಸಬೇಕು.
ಇದರ ಜತೆಗೆ ಎಲ್ಲ ಹಂತವಾರು/ ಸರತಿವಾರು ಪ್ರಯಾಣಿಸುವ ಮಹಿಳಾ ಪ್ರಯಾಣಿಕರ ಸಂಖ್ಯೆಯನ್ನು (ಪಿಂಕ್ ಚೀಟಿ ಸೇರಿಸಿ) ವೇಬಿಲ್‌ನಲ್ಲಿ ಪ್ರತ್ಯೇಕವಾಗಿ ನಮೂದಿಸಬೇಕು ಎಂದು ನಿರ್ವಾಹಕರಿಗೆ ಸೂಚನೆ ನೀಡಿಲಿದ್ದಾರಂತೆ ಅಧಿಕಾರಿಗಳು.
ಇನ್ನು ಮಹಿಳೆಯರು ನಾವು ಎಲ್ಲಿಂದ ಎಲ್ಲಿಗೆ ಹೋದರೂ ಫ್ರೀತಾನೆ ಅಂತ ಅವರು ಟಿಕೆಟ್ ಪಡೆದುಕೊಂಡಿದ್ದ ನಿಲ್ದಾಣ ಬಿಟ್ಟು ಮುಂದಿನ ನಿಲ್ದಾಣದ ವರೆಗೆ ಪ್ರಯಾಣ ಬೆಳೆಸಿದರೆ ಮಹಿಳಾ ಪ್ರಯಾಣಿಕರಿಗೆ ಏನು ಮಾಡುವುದಿಲ್ಲ. ಆದರೆ ಅವರನ್ನು ಮುಂದಿನ ನಿಲ್ದಾಣದ ವರೆಗೂ ಪ್ರಯಾಣಕ್ಕೆ ಅನುವು ಮಾಡಿಕೊಡುವ ಮೂಲಕ ಸಂಸ್ಥೆಯ ಆದಾಯ ನಷ್ಟವಾಗುವುದಕ್ಕೆ ಕಾರಣರಾಗಿದ್ದೀರಿ ಎಂದು ಮೆಮೋ ಕೊಟ್ಟು ಅಮಾನತು ಮಾಡುವುದಕ್ಕೆ ಅವಕಾಶವಿದೆಯಂತೆ.
ಈ ಮೊದಲು ನಿರ್ವಾಹಕರು ಪಾಸ್‌ಗಳನ್ನು ಚೆಕ್ ಮಾಡಿ ಉಳಿದಂತೆ ಟಿಕೆಟ್‌ಗಳನ್ನು ವಿತರಣೆ ಮಾಡುತ್ತಿದ್ದರು. ಆದರೆ, ಈಗ ಅದರ ಜತೆಗೆ ಇನ್ನಷ್ಟು ಕೆಲಸದ ಹೊರೆಯನ್ನು ಹೇರುವ ಮೂಲಕ ನಿರ್ವಾಹಕರಿಗೆ ಒತ್ತಡ ಜಾಸ್ತಿ ಮಾಡುವ ನಿಟ್ಟಿನಲ್ಲಿ ಅಧಿಕಾರಿಗಳು ಸಿದ್ಧತೆ ನಡೆಸುತ್ತಿದ್ದಾರೆ.
ಇದರಿಂದ ಸರ್ಕಾರ ಒಂದು ಕಡೆ ಮಹಿಳೆಯರಿಗೆ ಉಚಿತ ಪ್ರಯಾಣ ಎಂದು ಹೇಳಿ ಇಲ್ಲಸಲ್ಲದ ನಿಯಮಗಳನ್ನು ಹಾಕುವ ಮೂಲಕ ನಿರ್ವಾಹಕರಿಗೂ ತಲೆನೋವಾಗಿ ಪರಿಣಮಿಸುವ ರೂಲ್ಸ್‌ಗಳನ್ನು ಹೆರುತ್ತಿದೆ. ಇದು ಹೀಗೆ ಮುಂದುವರಿದರೆ 8 ಸುತ್ತುವಳಿ ಮಾಡುವ ನಿರ್ವಾಹಕರು ಕೇವಲ 4 ಸುತ್ತುವಳಿ ಮಾಡುವುದಕ್ಕೂ ಕಷ್ಟವಾಗುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಲಾಗುತ್ತಿದೆ.
ಇನ್ನು ಒಂದು ಕಡೆ ಚಾಲನಾ ಸಿಬ್ಬಂದಿಯ ಕೊರತೆ ಎದುರಿಸುತ್ತಿರುವ ನಿಗಮಗಳು ಇರುವ ಚಾಲನಾ ಸಿಬ್ಬಂದಿಗಳಿಗೆ ಒತ್ತಡ ಹೆಚ್ಚು ಮಾಡುವ ಕೆಲಸಕ್ಕೆ ಕೈ ಹಾಕಿರುವುದು ಸರಿಯಲ್ಲ ಎಂದು ನೌಕರರು ಅಲವತ್ತುಕೊಳ್ಳುತ್ತಿದ್ದಾರೆ. ಇದಕ್ಕೆ ಸೂಕ್ತ ಪರಿಹಾರವನ್ನು ಅಧಿಕಾರಿಗಳು ಕಂಡುಕೊಂಡು ಉಚಿತ ಪ್ರಯಾಣ ಸುಲಲಿತವಾಗಿ ನಡೆಯುವುದಕ್ಕೆ ಅನುವು ಮಾಡಿಕೊಡಬೇಕಿದೆ ಎಂದು ಮನವಿ ಮಾಡುತ್ತಿದ್ದಾರೆ.