ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ವೇತನವನ್ನು ಶೇ.15ರಷ್ಟು ಹೆಚ್ಚಳ ಮಾಡಿ ನಿನ್ನೆ (ಮಾ.17) ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಆದರೆ ಈ ಆದೇಶ ಏಕಪಕ್ಷೀಯವಾಗಿದ್ದು ಇದನ್ನು ನಾವು ಒಪ್ಪಲು ಸಾಧ್ಯವೇ ಇಲ್ಲ ಎಂದು ಸಾರಿಗೆ ನೌಕರರ ಕಾರ್ಮಿಕ ಜಂಟಿ ಕ್ರಿಯಾ ಸಮಿತಿ ಪದಾಧಿಕಾರಿಗಳು ವಿರೋಧಿಸಿದ್ದು ಮಾ.21ರಿಂದ ಅನಿರ್ದಿಷ್ಟಾವಧಿ ಮುಷ್ಕರ ಮಾಡುವುದು ಖಚಿತ ಎಂದು ತಿಳಿಸಿದ್ದಾರೆ.
ವೇತನ ಸಂಬಂಧ ಜಂಟಿ ಕ್ರಿಯಾ ಸಮಿತಿ ಪದಾಧಿಕಾರಿಗಳೊಂದಿಗೆ ಕಳೆದ ಇದೇ ಮಾ.8ರಿಂದಲೂ ಹಲವಾರು ಸಭೆಗಳನ್ನು ಮಾಡಿದ್ದು, ಭಾರಿ ಚರ್ಚೆಕೂಡ ನಡೆಸಲಾಗಿದೆ. ಆದರೆ, ಈ ಕೆಎಸ್ಆರ್‌ಟಿಸಿ ನಿಗಮಗಳ ವ್ಯವಸ್ಥಾಪಕ ನಿರ್ದೇಶಕರು ಮತ್ತು ಸಾರಿಗೆ ನೌಕರರ ಸಂಘಟನೆಗಳ ಮುಖಂಡರ ನಡುವೆ ಸಚಿವ ಶ್ರೀರಾಮುಲು ನಡೆಸಿದ ಎಲ್ಲ ಸಭೆಗಳು ವಿಫಲವಾಗಿವೆ.
ಹೀಗಾಗಿ ವೇತನ ಹೆಚ್ಚಳದ ಚೆಂಡು ಮುಖ್ಯಮಂತ್ರಿಗಳ ಅಂಗಳ ತಲುಪಿತ್ತು. ಸಿಎಂ ಬಸವರಾಜ ಬೊಮ್ಮಯಿ ಅವರು ಸಾರಿಗೆ ನೌಕರರ ಸಂಘಟನೆಗಳ ಜತೆ ಚರ್ಚಿಸದೆ ಏಕಪಕ್ಷೀಯವಾಗಿ ಶೇ.15ರಷ್ಟು ವೇತನ ಹೆಚ್ಚಳ ಮಾಡಿ ಶುಕ್ರವಾರ ರಾತ್ರಿ 8.30ರಲ್ಲಿ ಆದೇಶ ಹೊರಡಿಸಿದ್ದಾರೆ. ಈ ಆದೇಶ ಏಕಪಕ್ಷೀಯವಾಗಿದ್ದು ಇದನ್ನು ನಾವು ಒಪ್ಪಲ್ಲ, ನಮಗೆ ಮೂಲ ವೇತನಕ್ಕೆ ಬಿಡಿಎ ಮರ್ಜ್ ಮಾಡಿ ಶೇ.20ರಷ್ಟು ವೇತನ ಹೆಚ್ಚಳ ಮಾಡಬೇಕು.
ಮೂಲ ವೇತನಕ್ಕೆ ಬಿಡಿಎ ಮರ್ಜ್ ಮಾಡಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ ಮನಸ್ಸು ಮಾಡಿದರೆ ಯಾವುದನ್ನು ಬೇಕಾದರೂ ತಿದ್ದುಪಡಿ ಮಾಡಬಹುದು. ನಾವು ಮೂಲ ವೇತನಕ್ಕೆ ಬಿಡಿಎ ಮರ್ಜ್ ಮಾಡಿ ಶೇ.20ರಷ್ಟು ವೇತನ ಹೆಚ್ಚಳ ಮಾಡಿ ಎಂದು ಕೇಳುತ್ತಿದ್ದೇವೆ ಒಂದು ವೇಳೆ ಮರ್ಜ್ ಮಾಡಲು ಸಾಧ್ಯವೇ ಇಲ್ಲ ಎಂದಾದರೆ ನಾವು ಶೇ.35ರಿಂದ ಶೇ.40ರಷ್ಟು ವೇತನ ಹೆಚ್ಚಳ ಮಾಡಿ ಎಂದು ಕೇಳುತ್ತಿದ್ದೆವು.
ಈಗಲೂ ಸಹ ನಾವು ಅದನ್ನೇ ಹೇಳುತ್ತಿರುವುದು ಒಂದು ವೇಳೆ ಮೂಲ ವೇತನಕ್ಕೆ ಬಿಡಿಎ ಮರ್ಜ್ ಮಾಡಲು ಸಾಧ್ಯವಿಲ್ಲ ಎಂದಾದರೆ ನೀವು ಶೇ.40ರಷ್ಡು ವೇತನ ಹೆಚ್ಚಳ ಮಾಡಬೇಕು ಎಂದು ಪದಾಧಿಕಾರಿಗಳು ಎಂಡಿ ಅವರ ಸಭೆಯಲ್ಲಿ ಒತ್ತಾಯಿಸಿದ್ದಾರೆ ಎಂಬ ಮಾಹಿತಿಯೂ ಬಲ್ಲ ಮೂಲಗಳಿಂದ ತಿಳಿದು ಬಂದಿದೆ.
ಒಟ್ಟಾರೆ, ಸಾರಿಗೆ ನೌಕರರಿಗೆ ಏನು ಶೇ.15ರಷ್ಟು ವೇತನ ಹೆಚ್ಚಳ ಮಾಡಿ ಸರ್ಕಾರ ಆದೇಶ ಹೊರಡಿಸಿದೆಯೋ ಅದನ್ನು ಯಾವುದೇ ಸಂಘಟನೆಗಳ ಪದಾಧಿಕಾರಿಗಳು ಒಪ್ಪಿಕೊಂಡಿಲ್ಲ. ಹೀಗಾಗಿ ಮಾ.21ರಂದು ಕರೆ ನೀಡಿರುವ ಅನಿರ್ದಿಷ್ಟಾವಧಿ ಮುಷ್ಕರ ಮಾಡುವುದು ಖಚಿತ ಎಂದು ಜಂಟಿ ಕ್ರಿಯಾ ಸಮಿತಿಯ ಪದಾಧಿಕಾರಿಗಳು ತಿಳಿಸಿದ್ದಾರೆ.
ಅಲ್ಲದೆ ಮುಷ್ಕರ ಸಂಬಂಧ ಇಂದು ಮಧ್ಯಾಹ್ನ 3ಗಂಟೆಗೆ ಸುದ್ದಿಗೋಷ್ಠಿಯನ್ನು ಜಂಟಿ ಕ್ರಿಯಾಸಮಿತಿ ಪದಾಧಿಕಾರಿಗಳು ಹಮ್ಮಿಕೊಂಡಿದ್ದು, ಸುದ್ದಿಗೋಷ್ಠಿಯಲ್ಲೇ ನಮ್ಮ ಬೇಡಿಕೆಗಳ ಬಗ್ಗೆ ಸ್ಪಷ್ಟನೆ ನೀಡಲಿದ್ದೇವೆ ಎಂದು ತಿಳಿಸಿದ್ದಾರೆ.