ಬೆಂಗಳೂರು: 01/01/2020 ರಿಂದ ಅನ್ವಯವಾಗುವಂತೆ ನಾಲ್ಕು ಸಾರಿಗೆ ನಿಗಮಗಳ ನೌಕರರಿಗೆ ಒಂದೇ ಕಂತಿನಲ್ಲಿ ವೇತನದ ಪರಿಷ್ಕರಣೆಯ ಹಿಂಬಾಕಿ ಪಾವತಿಸಬೇಕು ಎಂದು ಸಾರಿಗೆ ಸಂಸ್ಥೆಗಳ ಆರ್ಥಿಕ ಸ್ವಾವಲಂಬನೆ ಮತ್ತು ಸಂಪನ್ಮೂಲ ಕ್ರೋಢೀಕರಣ ಅಧ್ಯಯನ ಸಮಿತಿಗೆ ಸಾರಿಗೆ ನೌಕರರ ಸಮಾನ ಮನಸ್ಕರ ವೇದಿಕೆ ಒತ್ತಾಯಿಸಿದೆ.
ನಿನ್ನೆ ಗುರುವಾರ ಸಾರಿಗೆ ಕೇಂದ್ರ ಕಚೇರಿಯಲ್ಲಿ ನಿವೃತ್ತ ಐಎಎಸ್ ಅಧಿಕಾರಿ ಎಂ.ಆರ್.ಶ್ರೀನಿವಾಸಮೂರ್ತಿ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಸಾರಿಗೆ ನೌಕರರ ಹಿಂಬಾಕಿ ವೇತನ ಸಂಬಂಧದ ಚರ್ಚೆಯಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟ, ಕೆ.ಬಿ.ಎನ್.ಎನ್, ವಾಕರಸಾ ಫೇಡರೇಷನ್, ಕ.ರಾ.ರ.ಸಾ.ಸಂಸ್ಥೆ ಎಸ್ಸಿ/ಎಸ್ಟಿ ಅಧಿಕಾರಿಗಳ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘ, ಕ.ರಾ.ರ.ಸಾ.ಸಂಸ್ಥೆ ಎಸ್ಸಿ/ಎಸ್ಟಿ ಅಧಿಕಾರಿಗಳ ಮತ್ತು ನೌಕರರ ಸಮನ್ವಯ ಸಮಿತಿ ಪದಾಧಿಕಾರಿಗಳು ಭಾಗವಹಿಸಿದ್ದರು.
ಈ ವೇಳೆ ಈ ಎಲ್ಲ ಸಂಘಟನೆಗಳ ಪದಾಧಿಕಾರಿಗಳು ಮಾತನಾಡಿದ್ದು, ನಾಲ್ಕು ಸಾರಿಗೆ ನಿಗಮಗಳಲ್ಲಿ ಮುಷ್ಕರದ ಕಾರಣದಿಂದ ವಜಾ ಮಾಡಿರುವ ನೌಕರರನ್ನು ಕರ್ತವ್ಯಕ್ಕೆ ಪುನರ್ ನೇಮಕ ಮಾಡಿಕೊಳ್ಳಬೇಕು (ಎಫ್.ಐ.ಆರ್ ಪ್ರಕರಣಗಳನ್ನು ಒಳಗೊಂಡತೆ) ಎಂದು ಮನವಿ ಮಾಡಿದರು.
ಇನ್ನು ವೇತನ ಸಂಬಂಧವಾಗಿ ಹಲವು ವರ್ಷಗಳಿಂದ ವೇತನ ಪರಿಷ್ಕರಣೆಯಾಗುತ್ತಿದೆಯೇ ಹೊರತು 2012ರ ನಂತರ ಅವಶ್ಯಕ ಬೇಡಿಕೆಗಳು, ಬಾಟಾ-ಭತ್ಯೆಗಳ ಪರಿಷ್ಕರಣೆಯಾಗುತ್ತಿಲ್ಲ. ಆದ್ದರಿಂದ ಇಂದಿನ ಬೆಲೆ ಏರಿಕೆಗೆ ಅನುಗುಣವಾಗಿ ಎಲ್ಲ ಸೌಲಭ್ಯಗಳನ್ನು ಪರಿಷ್ಕರಣೆ ಮಾಡಬೇಕು ಎಂದು ಆಗ್ರಹಿಸಿದರು.
ಇದಿಷ್ಟೇ ಅಲ್ಲದೆ, ಎಚ್.ಆರ್.ಎಂ.ಎಸ್. ಪದ್ಧತಿ ಕೆ.ಎಸ್.ಆರ್.ಟಿ.ಸಿ ಯಲ್ಲಿ ಜಾರಿಗೆ ತಂದಿರುವುದು ಸಂತೋಷದ ವಿಚಾರ. ಎಚ್.ಆರ್.ಎಂ.ಎಸ್ ಪದ್ದತಿಯನ್ನು ಉಳಿದ ಮೂರು ಸಾರಿಗೆ ಸಂಸ್ಥೆಗಲ್ಲಿ ಕೂಡಲೇ ಜಾರಿಗೆ ತರುವುದು. ಇದರಿಂದ ಮಾನವನ ಲೋಪದೋಷಗಳಿಂದ ಸಂಸ್ಥೆಗೆ ಹಾಗೂ ನೌಕರರಿಗೆ ಆಗುವ ನಷ್ಟಗಳನ್ನು ಸಂಪೂರ್ಣವಾಗಿ ತಡೆಯಬಹುದು.
ಮಿತಿಮೀರಿದ ಅಧಿಕಾರಿಗಳ ಭ್ರಷ್ಟಾಚಾರ : ಸಾರಿಗೆ ಸಂಸ್ಥೆಯಲ್ಲಿ ಕೆಲವು ಅಧಿಕಾರಿಗಳ ಭ್ರಷ್ಟಾಚಾರ ಮಿತಿಮೀರಿದ್ದು ಕೋಟಿ ಕೋಟಿ ರೂ.ಗಳನ್ನು ಲೂಟಿ ಮಾಡುತ್ತಿದ್ದಾರೆ. ಇಂತಹ ಅಧಿಕಾರಿಗಳ ವಿರುದ್ಧ ಎಫ್.ಐ.ಆರ್ ದಾಖಲಿಸಿ ಅವರನ್ನು ಅಮಾನತು ಅಥವಾ ವರ್ಗಾವಣೆ ಮಾಡುವುದರಿಂದ ಈ ಭ್ರಷ್ಟಾಚಾರ ತಡೆಯಲು ಸಾಧ್ಯವಿಲ್ಲ. ಆದ್ದರಿಂದ ಭ್ರಷ್ಟ ಅಧಿಕಾರಿಗಳನ್ನು ಕೆಲಸದಿಂದ ವಜಾ ಮಾಡಬೇಕು ಹಾಗೂ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು.
ಸಾರಿಗೆ ಸಂಸ್ಥೆಯಲ್ಲಿ ಕೆಲವು ಅಧಿಕಾರಿಗಳ ಭ್ರಷ್ಟಾಚಾರ ಮಿತಿಮೀರಿದ್ದು ಸದಾ ಒತ್ತಡದಲ್ಲಿ ಕರ್ತವ್ಯ ನಿರ್ವಹಿಸುವ ನೌಕರರ ಮೇಲೆ ದಬ್ಬಾಳಿಕೆ ಮಾಡಿ ಹಣ ವಸೂಲಿ ಮಾಡುತ್ತಿದ್ದಾರೆ. ಇದರಿಂದ ನೌಕರರ ಆತ್ಮಸ್ಥೈರ್ಯ ಕುಗ್ಗುತ್ತಿದ್ದು. ನೌಕರರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಪ್ರಕರಣಗಳು ಸಂಸ್ಥೆಯಲ್ಲಿ ಹೆಚ್ಚುತ್ತಿದೆ. ಇದರಿಂದ ಸಂಸ್ಥೆಗೂ ಆರ್ಥಿಕ ಹೊರೆ ಮತ್ತು ಸಾರ್ವಜನಿಕರ ಮಧ್ಯದಲ್ಲಿ ಸಾರಿಗೆ ಸಂಸ್ಥೆಗೆ ಮುಜುಗರ. ನೌಕರರ ಕುಟುಂಬಗಳು ಬೀದಿ ಪಾಲಾಗುತ್ತಿವೆ.
ಉಚಿತ ಆರೋಗ್ಯ ಭಾಗ್ಯ ಯೋಜನೆ ಜಾರಿಗೆ ತನ್ನಿ: ಸದಾ ಒತ್ತಡದಲ್ಲಿ ಹಾಗೂ ಒಂದು ದಿನದಲ್ಲಿ ಬೇರೆಬೇರೆ ಸ್ಥಳಗಳಲ್ಲಿ ಊಟ, ನೀರು ಸೇವಿಸಿ ವಿಭಿನ್ನ ವಾತಾವರಣಗಳಲ್ಲಿ ಕೆಲಸ ನಿರ್ವಹಿಸಬೇಕಾದ ಅನಿವಾರ್ಯತೆಯಿಂದ ಸಾರಿಗೆ ನೌಕರರು ಅತಿ ಬೇಗ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದು. ಕೆಲವು ನೌಕರರು ಕರ್ತವ್ಯ ನಿರ್ವಹಿಸಲು ಸಾಧ್ಯವಿಲ್ಲದಂತೆ ಆಗುವುದರಿಂದ ನೌಕರರ ಕುಟುಂಬಕ್ಕೂ ಮತ್ತು ಸಾರಿಗೆ ಸಂಸ್ಥೆಯ ಮೇಲೆ ಆರ್ಥಿಕ ಹೊರೆ ಉಂಟಾಗುತ್ತಿದೆ. ಆದ್ದರಿಂದ ಸಾರಿಗೆ ನೌಕರರಿಗೆ ಮತ್ತು ಅವರ ಕುಟುಂಬದ ಸದಸ್ಯರಿಗೆ ಉಚಿತ ಆರೋಗ್ಯ ಭಾಗ್ಯ ಯೋಜನೆ ಶೀಘ್ರವಾಗಿ ಜಾರಿಗೆ ತರುವುದು.
ಶಕ್ತಿ ಯೋಜನೆಯಿಂದ ಸಾರಿಗೆ ಸಂಸ್ಥೆಗಳು ಆರ್ಥಿಕವಾಗಿ ಸದೃಢವಾಗುತ್ತಿರುವುದು ಸಂತೋಷದ ವಿಷಯ. ಆದರೆ ಈ ಯೋಜನೆಯಿಂದ ಚಾಲನಾ ಸಿಬ್ಬಂದಿಗಳಿಗೆ ಕೆಲವು ಸಮಸ್ಯೆಗಳು ಆಗುತ್ತಿರುವ ಕಾರಣ 08/06/2023 ರಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟದ ವತಿಯಿಂದ ನೀಡಿದ ಮನವಿ ಪತ್ರಕ್ಕೆ ಸೂಕ್ತ ಕ್ರಮ ಕೈಗೊಳ್ಳುವುದು. ಶಕ್ತಿ ಯೋಜನೆಯಡಿ ಸರ್ಕಾರದಿಂದ ಬರಬೇಕಿರುವ ಮೊತ್ತವನ್ನು ಸಕಾಲದಲ್ಲಿ ನಾಲ್ಕು ನಿಗಮಗಳಿಗೂ ಪಾವತಿಸುವಂತೆ ಕ್ರಮಕೈಗೊಳ್ಳಬೇಕು.
ಎಲ್.ಎಂ.ಎಸ್ ರಜೆ ನೀಡುವ ಯೋಜನೆ ಇಲ್ಲ: ಕಲ್ಯಾಣ ಕರ್ನಾಟಕ ಸಾರಿಗೆ ನಿಗಮಗಳಲ್ಲಿ ನೌಕರರಿಗೆ ಎಲ್.ಎಂ.ಎಸ್ ರಜೆ ನೀಡುವ ಯೋಜನೆ ಇಲ್ಲದಿರುವುದರಿಂದ ಕೆಲವು ಆಧಿಕಾರಿಗಳು ಇದನ್ನೇ ಬಂಡವಾಳ ಮಾಡಿಕೊಂಡು ನೌಕರರಿಂದ ಹಣ ವಸೂಲಿ ಮಾಡುತ್ತಿದ್ದಾರೆ. ಆದ್ದರಿಂದ ಕೂಡಲೆ ಕಲ್ಯಾಣ ಕರ್ನಾಟಕ ಸಾರಿಗೆ ನಿಗಮದಲ್ಲಿ ನೌಕರರು ಎಲ್.ಎಂ.ಎಸ್ ರಜೆ ಪಡೆಯುವ ಸೌಲಭ್ಯ ಕಲ್ಪಸಬೇಕು. ನಾಲ್ಕು ಸಾರಿಗೆ ನಿಗಮಗಳಲ್ಲಿ ತಿಂಗಳ ಒಂದನೇ ತಾರೀಖು ವೇತನ ಪಾವತಿಸುವ ಪದ್ಧತಿ ಜಾರಿಗೆ ತರಬೇಕು.
ಪ್ರಣಾಳಿಕೆ ಘೋಷಣೆ ಈಡೇರಿಸಲು ಕ್ರಮ ವಹಿಸಿ: ಈ ಹಿಂದೆ ಆಂಧ್ರಪ್ರದೇಶ ಸಾರಿಗೆ ನೌಕರರನ್ನು ಸರ್ಕಾರಿ ನೌಕರರೆಂದು ಘೋಷಣೆ ಮಾಡಿದ್ದು. ಇತ್ತೀಚೆಗೆ ತೆಲಂಗಾಣ ರಾಜ್ಯವು ಸಹ ಸಾರಿಗೆ ನೌಕರರನ್ನು ಸರ್ಕಾರಿ ನೌಕರರೆಂದು ಘೋಷಣೆ ಮಾಡಿದ್ದಾರೆ. ಆದರೆ ಈ ಎರಡು ರಾಜ್ಯಗಳ ಪೂರ್ವದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕು ನಿಗಮಗಳ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸಬೇಕೆಂದು ಸರ್ಕಾರಕ್ಕೆ ಒತ್ತಾಯ ಹಾಗೂ ಹೋರಾಟ ಮಾಡಿದ್ದು, ನಮ್ಮ ಬೇಡಿಕೆಯನ್ನು ಪರಿಗಣಿಸುವ ಯಾವುದೇ ಪ್ರಕ್ರಿಯೆ ಹಿಂದಿನ ಸರ್ಕಾರ ಮಾಡಿಲ್ಲ. ಇತ್ತೀಚಿಗೆ ಕಾಂಗ್ರೆಸ್ ಪಕ್ಷ ಸಾರಿಗೆ ನೌಕರರಿಗೆ ಸರ್ಕಾರಿ ನೌಕರರ ಹುದ್ದೆಗಳ ಸರಿಸಮಾನ ವೇತನ ಮತ್ತು ಸರಿಸಮಾನ ಸೌಲಭ್ಯಗಳನ್ನು ನೀಡುತ್ತೇವೆಂದು ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿರುವುದರಿಂದ. ಸರ್ಕಾರದ ಪ್ರಣಾಳಿಕೆ ಘೋಷಣೆಯನ್ನು ಈಡೇರಿಸಲು ಕ್ರಮ ಕೈಗೊಳ್ಳುವುದು.
ಸರ್ಕಾರವೇ ವಿದ್ಯುತ್ ಚಾಲಿತ ಬಸ್ಸುಗಳ ಖರೀದಿ ಮಾಡಲಿ: ಸಂಸ್ಥೆಯಲ್ಲಿ ವಿದ್ಯುತ್ ಚಾಲಿತ ಬಸ್ಸುಗಳ ಕಾರ್ಯಾಚರಣೆಯಿಂದ ಸಂಸ್ಥೆಯನ್ನು ಖಾಸಗೀಕರಣ ಮಾಡುವ ಪ್ರಕ್ರಿಯೆ ಶುರುವಾಗಿದೆ. ಇದರಿಂದ ಸಾವಿರಾರು ನಿರುದ್ಯೋಗಿಗಳಿಗೆ ಉದ್ಯೋಗ ನಷ್ಟವಾಗುತ್ತಿದೆ. ಆದ್ದರಿಂದ ಕೂಡಲೆ ಗುತ್ತಿಗೆ ಆಧಾರದಲ್ಲಿ ವಿದ್ಯುತ್ ಚಾಲಿತ ಬಸ್ಸುಗಳನ್ನು, ಚಾಲಕ ಮತ್ತು ತಾಂತ್ರಿಕ ಸಿಬ್ಬಂದಿಗಳನ್ನು ಪಡೆಯುವ ಬದಲು. ಸರ್ಕಾರವೇ ವಿದ್ಯುತ್ ಚಾಲಿತ ಬಸ್ಸುಗಳನ್ನು ಖರೀದಿ ಮಾಡಿ ಸಂಸ್ಥೆಗೆ ನೀಡಬೇಕು ಹಾಗೂ ಕೂಡಲೆ ಎಲ್ಲ ರೀತಿಯ ಸಿಬ್ಬಂದಿಗಳ ನೇಮಕಾತಿ ಮಾಡಬೇಕು. ಸಿಬ್ಬಂದಿಗಳ ನೇಮಕಾತಿ ಸಂದರ್ಭದಲ್ಲಿ ಹಲವಾರು ವರ್ಷಗಳಿಂದ ಚಾತಕ ಪಕ್ಷಿಯಂತೆ ಕಾಯುತ್ತಿರುವ ನಮ್ಮ ಸಂಸ್ಥೆಯಲ್ಲಿ ಕರ್ತವ್ಯದಲ್ಲಿ ಮೃತಪಟ್ಟಿರುವ ನೌಕರರ ಅವಲಂಬಿತರಿಗೆ ಮೊದಲು ಅನುಕಂಪದ ಆಧಾರದ ನೇಮಕಾತಿ ಮಾಡಿಕೊಳ್ಳಬೇಕು.
ಮಾಸ್ಟರ್ ಪೇ ಸ್ಕೇಲ್ ಪದ್ಧತಿ ಜಾರಿಯಾಗಲಿ: ಸಾರಿಗೆ ಸಂಸ್ಥೆಯಲ್ಲಿ ಸಮಾನ ತಪ್ಪಿಗೆ, ಸಮಾನ ಶಿಕ್ಷೆ ಪದ್ಧತಿಯನ್ನು ಜಾರಿಗೆ ತಂದು ಪ್ರಕರಣಗಳನ್ನು ಕಾಲಮಿತಿಯಲ್ಲಿ ಇತ್ಯರ್ಥಪಡಿಸುವ ನಿಯಮ ಜಾರಿಗೆ ತರಬೇಕು. ಇದರಿಂದ ಭ್ರಷ್ಟಾಚಾರ ತಡೆಯುವ ಜತೆಗೆ ವಿಚಾರಣೆ ನೆಪದಲ್ಲಿ ಸಿಬ್ಬಂದಿಗಳಿಗೆ ಅನಾವಶ್ಯಕ ವೇತನ ಪಾವತಿಸುವುದನ್ನು ತಡೆಯುವ ಜತೆಗೆ ಸಮಯವನ್ನು ಉಳಿಸಬಹುದು. ಸಾರಿಗೆ ಸಂಸ್ಥೆಯಲ್ಲಿ ನೌಕರರ ವೇತನ ಪಾವತಿಗೆ ಮಾಸ್ಟರ್ ಪೇ ಸ್ಕೇಲ್ ಪದ್ದತಿ ಜಾರಿಗೆ ತರುವುದು.
ಕಾರ್ಮಿಕ ಸಂಘಗಳ ಚುನಾವಣೆ ನಡೆಸಿ: ಸಾರಿಗೆ ಸಂಸ್ಥೆಯಲ್ಲಿ ನೌಕರರು ಮತ್ತು ಆಡಳಿತ ಮಂಡಳಿ ನಡುವೆ ಉತ್ತಮ ಬಾಂಧವ್ಯ ಏರ್ಪಡಲು ಅವಶ್ಯಕ ಸಂದರ್ಭದಲ್ಲಿ ತುರ್ತು ಕ್ರಮಗಳನ್ನು ತೆಗೆದುಕೊಳ್ಳಲು, ಅನಾವಶ್ಯಕ ವೆಚ್ಚ ಮತ್ತು ಸಮಯ ಉಳಿವಿಗಾಗಿ ಕಾರ್ಮಿಕ ಸಂಘಟನೆಗಳ ಚುನಾವಣೆ ಅನಿವಾರ್ಯವಾಗಿದ್ದು. ಕೂಡಲೆ ಕಾರ್ಮಿಕ ಸಂಘಗಳ ಚುನಾವಣೆ ನಡೆಸುವುದು.
ಇನ್ನು ನಾಲ್ಕು ಸಾರಿಗೆ ನಿಗಮಗಳನ್ನು ಒಟ್ಟುಗೂಡಿಸಿ ಒಂದೇ ಸಾರಿಗೆ ನಿಗಮ ಸ್ಥಾಪಿಸುವುದರ ಮೂಲಕ ಆಡಳಿತದ ವೆಚ್ಚ ಮತ್ತು ಅನಾವಶ್ಯಕವಾಗಿ ಕೆಲಸಗಳನ್ನು, ಸಮಯವನ್ನು ಉಳಿಸಲು ಕ್ರಮ ತೆಗೆದುಕೊಳ್ಳಬೇಕು ಎಂಬುವುದು ಸೇರಿದಂತೆ ಒಟ್ಟು 17 ಬೇಡಿಕೆಗಳನ್ನು ಈಡೇರಿಸುವತ್ತಾ ಕ್ರಮ ತೆಗೆದುಕೊಳ್ಳಬೇಕು ಎಂದು ಸಮಾನ ಮನಸ್ಕರ ವೇದಿಕೆಯ ಸಂಘಟನೆಗಳ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ.