KSRTC: ರಾಜಹಂಸ ಈಗ ಡಕೋಟಾ ಎಕ್ಸ್ಪ್ರೆಸ್ – ದುಬಾರಿ ಪ್ರಯಾಣ ಆದರೂ ತಪ್ಪದ ಪಿರಿಪಿರಿ
ಮೈಸೂರು: ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ಮೇಲೆ ನಾರಿಯರ ಉಚಿತ ಪ್ರಯಾಣಕ್ಕಾಗಿ ಶಕ್ತಿ ಯೋಜನೆ ಜಾರಿಗೆ ಬಂದಿತು. ಇದರಿಂದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳು ಇನ್ನು ಮುಂದೆ ಲಾಭದತ್ತ ಸಾಗುತ್ತವೆ ಎಂದು ಅಧಿಕಾರಿಗಳು ಮತ್ತು ಸಾರಿಗೆ ನೌಕರರ ಸಂಘಟನೆಗಳ ಮುಖಂಡರು ಭಾವಿಸಿದ್ದರು.
ಈಗ ಸಾರಿಗೆ ಸಂಸ್ಥೆಗಳೇನೋ ಲಾಭದಲ್ಲೇ ಸಾಗುತ್ತಿವೆ. ಅಷ್ಟರ ಮಟ್ಟಿಗೆ ಶಕ್ತಿ ಯೋಜನೆ ಯಶಸ್ಸು ಕೂಡ ಕಂಡಿದೆ. ಆದರೆ, ಏನು ಮಾಡೋದು ಕಾಲ ಉರುಳಿದಂತೆ ನಾಲ್ಕೂ ನಿಗಮಗಳ ಬಸ್ಗಳಲ್ಲಿ ಸಚರಿಸುವ ನಾರಿಯರ ಟಿಕೆಟ್ ಮೌಲ್ಯದ ಹಣ ಕೊಡುವುದಕ್ಕೆ ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲವಲ್ಲ. ಇದರಿಂದ ದುರಸ್ತಿಗೊಳಗಾಗುತ್ತಿರುವ ಬಸ್ಗಳ ರಿಪೇರಿಗೂ ನಿಗಮಗಳು ಹಣ ಹೊಂದಿಸಲಾಗದೆ ಪರದಾಡುತ್ತಿವೆಯಲ್ಲ.
ಇನ್ನು ಇದರ ಪರಿಣಾಮ ಎಲ್ಲಿ ಬೀರುತ್ತಿದೆ ಅಂದರೆ ಸಾರಿಗೆಯ ಐಷಾರಾಮಿ (Luxury) ಬಸ್ಗಳ ಮೇಲೆ ಬೀರುತ್ತಿದೆ. ಹೌದು! ಹಣ ಹೆಚ್ಚಾಗಿ ಕೊಟ್ಟು ಅರಾಮದಾಯಕ ಪ್ರಯಾಣ ಮಾಡಬಹುದು ಎಂದು ಸಾರಿಗೆಯ ಐಷಾರಾಮಿ ಬಸ್ ಟಿಕೆಟ್ ಬುಕ್ ಮಾಡಿಕೊಂಡು ಹೋದರೆ ಅವು ಫಿಟ್ನೆಸ್ ಇಲ್ಲದೆ ಡಗಡಗ.. ಗಡಗಡ ಎಂದು ಭಾರಿ ಸೌಂಡ್ ಮಾಡುತ್ತಿವೆ. ಇದರಿಂದ ಸುಖಕರ ಪ್ರಯಾಣ ಮಾಡಬಹುದು ಎಂದು ದುಬಾರಿ ಹಣಕೊಟ್ಟ ಪ್ರಯಾಣಿಕರು ಸಾರಿಗೆ ನಿಗಮಕ್ಕೆ ಹಿಡಿ ಶಾಪ ಹಾಕುವಂತಾಗಿದೆ.
ಹೌದು! ಗ್ಯಾರಂಟಿ ಯೋಜನೆ ಬಳಿಕ ಯಾವುದೇ ಅಭಿವೃದ್ಧಿ ಕೆಲಸ ಮಾಡವುದಕ್ಕೂ ಸರ್ಕಾರದ ಖಜಾನೆ ಹಣವಿಲ್ಲದೆ ಖಾಲಿಯಾಗಿದೆ ಎಂದು ಆರೋಪಿಸುತ್ತಿರುವ ವಿಪಕ್ಷಗಳ ಆರೋಪನೆ ಸತ್ಯ ಎಂಬಂತೆ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆ ಜಾರಿ ಬಳಿಕ ಮಹಿಳಾ ಪ್ರಯಾಣಿಕರ ನೂಕುನುಗ್ಗಲಿನಿಂದ ಅದೆಷ್ಟೋ ಬಸ್ಗಳ ಬಾಗಿಲು ಮುರಿದು ಹೋಗಿವೆ. ಇನ್ನು ಕಿಟಕಿ ಗಾಜು ಪುಡಿಪುಡಿಯಾಗಿವೆ. ಆದರೆ ಅವೆಲ್ಲವನ್ನು ಸರಿಪಡಿಸಲು ನಿಗಮಗಳಲ್ಲಿ ದುಡ್ಡೇ ಇಲ್ಲ!?
ಪ್ರಯಾಣಿಕರ ಪರಿಸ್ಥಿತಿ ಹೇಗಾಗಿದೆಯೆಂದರೆ ಹೆಚ್ಚು ದುಡ್ಡು ಕೊಟ್ಟು ರಾಜಹಂಸ ಬಸ್ನಲ್ಲಿ ಸುಖಕರ ಪ್ರಯಾಣ ಮಾಡೋಣ ಅಂತ ಹತ್ತಿದರೂ ಒಳಗಡೆ ಇನ್ನುಲ್ಲದ ಹಿಂಸೆ ಅನುಭವಿಸಬೇಕಾದ ಸ್ಥಿತಿ. ನೋಡಿ ಕೆಎಸ್ಆರ್ಟಿಸಿ ಬಸ್ಗಳು ಬಹುತೇಕ ಫಿಟ್ ಇಲ್ಲ. ಯಾವಾಗ ಬಾಗಿಲು ಮುರಿದುಬಿಳುವುದೋ, ಇಲ್ಲ ಚಕ್ರ ಕಳಚಿಕೊಳ್ಳುವುದೋ ಎಂಬ ಆತಂಕದಲ್ಲೇ ಇತ್ತೀಚೆಗೆ ಪ್ರಯಾಣಿಕರು ಜೀವ ಕೈಯಲ್ಲಿ ಹಿಡಿದುಕೊಂಡು ಪ್ರಯಾಣ ಮಾಡುವಂತ ಸ್ಥಿತಿ ನಿರ್ಮಾಣವಾಗಿದೆ.
ಇನ್ನು ರಾಜಹಂಸ ಬಸ್ನಲ್ಲಿ ರಾಜನಂತೆ ಪ್ರಯಾಣ ಮಾಡಬಹುದು ಎಂದು ಬರೋ ಪ್ರಯಾಣಿಕರಿಗೆ ಈಗ ಶಾಕ್. ಒಳಗೆ ಕಿತ್ತುಹೋಗಿದ್ದು, ಯಾಮಾರಿ ನೋಡದೆ ಕಾಲು ಇಟ್ರೆ ನೀವು ರಸ್ತೆಯಲ್ಲಿ ಬಿದ್ದಿರುತ್ತೀರಿ ಜೋಪಾನಾ!
ಮೈಸೂರು ಬೆಂಗಳೂರು ನಡುವೆ ಸಂಚರಿಸುವ ರಾಜಹಂಸ ( ಈಗ ಡಕೋಟ ರಾಜಹಂಸ ಎಂದು ಕರೆಯಬಹುದು) ಬಗ್ಗೆ ಈಗ ಪ್ರಯಾಣಿಕರು ಆಕ್ರೋಶಗೊಂಡಿದ್ದಾರೆ. ರಾಜಹಂಸ ಬಸ್ (KA-09-F4905)ನಲ್ಲಿ ಕುಳಿತರಿಗೆ ಪರಮಹಿಂಸೆ. ಬಸ್ ಒಳಭಾಗದ ಸೀಟ್ ಪಕ್ಕದಲ್ಲಿ ಓಪನ್ ಆದ ಫ್ಲೋರ್ ಬೋರ್ಡ್, ಬಸ್ ಚಲಿಸುತ್ತಿದಂತೆ ನಾಟ್ಯ ಮಾಡುವ ಫ್ಲೋರ್ ಬೋರ್ಡ್, ಇನ್ನು ಈ ಓಪನ್ ಆಗಿರುವುದನ್ನು ನೋಡದೆ ಅದರ ಮೇಲೆ ಕಾಲಿಟ್ಟರೆ ಯಮನಪಾದ ಪಾಸಕ್ಕೆ ಸಿಲುಕೋದು ಪಕ್ಕ.
ಬಸ್ ಸಂಚರಿಸುವ ವೇಗಕ್ಕೆ ಈ ಫ್ಲೋರ್ ಬೋರ್ಡ್ ಕಿತ್ತು ಬಂದಿದೆ. ಆದರೂ ಇದನ್ನು ಸರಿಪಡಿಸದೇ ಪ್ರಯಾಣಿಕರ ಸಂಚಾರಕ್ಕೆ ಅನುವು ಮಾಡಿಕೊಟ್ಟಿರೋ ಸಾರಿಗೆ ನಿಗಮದ ಅಧಿಕಾರಿಗಳ ಬೇಜವಾಬ್ದಾರಿಯನ್ನು ಇದು ಎತ್ತಿತೋರಿಸುತ್ತದೆ. ಶಕ್ತಿ ಯೋಜನೆಗೆ ಒಳಪಡದ ಈ ಬಸ್ ಪರಿಸ್ಥಿತಿಯೇ ಹೀಗಾದರೆ ಇನ್ನು ಶಕ್ತಿ ಯೋಜನೆಯ ಬಸ್ಗಳ ಕತೆ ಹೇಗಿರುತ್ತದೆ ಎಂಬುದನ್ನು ನೀವೆ ಊಹಿಸಿಕೊಳ್ಳಿ.
ಒಟ್ಟಾರೆ, ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಸಾರಿಗೆ ನೌಕರರಿಗೆ ಮತ್ತು ನಿಗಮಗಳಿಗೆ ಒಳ್ಳೆ ಪ್ಯಾಕೆಜ್ ಸಿಗುತ್ತದೆ ಎಂಬ ನಿರೀಕ್ಷೆಯಲ್ಲಿದ್ದವರಿಗೆ ಈಗ ಶಾಕ್!!! ಮತ್ತೊಂದೆಡೆ ಪ್ರಯಾಣಿಕರಿಗೂ ಯಮಯಾತನೆ. ಹೀಗಿದ್ದರೂ ಸಾರಿಗೆ ಸಚಿವರು ನಾವು ಬಂದಮೇಲೆ ಇದು ಮಾಡಿದ್ದೇವೆ, ಅದು ಮಾಡಿದ್ದೇವೆ ಎಂದು ಕೊಚ್ಚಿಕೊಳ್ಳುವುದೇ ಆಯಿತು. ಆದರೆ, ಯಾವುದು ಕೂಡ ಈವರೆಗೂ ಸಮರ್ಪಕವಾಗಿ ಆಗಿಯೇ ಇಲ್ಲ.