ಬೆಂಗಳೂರು: 2020 ಜನವರಿ ಒಂದರಿಂದ ಆಗಿರುವ ಶೇ.15ರಷ್ಟು ವೇತನ ಹೆಚ್ಚಳದ 38 ತಿಂಗಳ ಹಿಂಬಾಕಿಯನ್ನು ಕೊಡುವ ಬಗ್ಗೆ ಆರ್ಥಿಕ ಪರಿಸ್ಥಿತಿ ನೋಡಿಕೊಂಡು ಫೆಬ್ರವರಿಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಜಂಟಿ ಕ್ರಿಯಾ ಸಮಿತಿ ಪದಾಧಿಕಾರಿಗಳಿಗೆ ತಿಳಿಸಿದ್ದಾರೆ.
ಜ.6ರಂದು (ಶನಿವಾರ) ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಕೇಂದ್ರ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಸಾರಿಗೆ ಸಚಿವರು ಮಾತನಾಡಿ, ಅಧಿಕಾರಿಗಳು ಮತ್ತು ನೌಕರರಿಗೆ ಕೊಡಬೇಕಿರುವ ಅರಿಯರ್ಸ್ ಸಂಬಂಧ ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿ ಚರ್ಚಿಸಲಾಗಿದೆ.
ಸಿಎಂ ಅವರು ಕೂಡ ನಿವೃತ್ತ ನೌಕರರ ಸಮಸ್ಯೆ ಸೇರಿದಂತೆ ವೇತನ ಹೆಚ್ಚಳದ ಅರಿಯರ್ಸ್ ಹಾಗೂ ಕರ್ತವ್ಯ ನಿರತ ನೌಕರರಿಗೆ ಫೆಬ್ರವರಿ ತಿಂಗಳ ಬಜೆಟ್ ಅಂದರೆ ಕಳೆದ ವರ್ಷದ ಬಜೆಟ್ನಲ್ಲಿ ಉಳ್ಳಿದಿರು ಹಣ ಹಾಗೂ ಬಜೆಟ್ನಲ್ಲಿ ಘೋಷಣೆ ಆಗುವ ಹಣದಿಂದ ಅರಿಯರ್ಸ್ ಕೊಡುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದು ತಿಳಿಸಿದ್ದಾರೆ.
ಹೀಗಾಗಿ ಮುಂದಿನ ತಿಂಗಳಲ್ಲಿ ಅರಿಯರ್ಸ್ ಕೊಡುವ ಬಗ್ಗೆ ಒಂದು ಸ್ಪಷ್ಟತೆಗೆ ಬರಲಾಗುವುದು. ಕಾರಣ 38 ತಿಂಗಳ ಅರಿಯರ್ಸ್ ಬಾಕಿ ಇದ್ದು ಈ ಎಲ್ಲವನ್ನು ಕೊಡುವುದಕ್ಕೆ ಹೇಗೆ ಸಾಧ್ಯವಾಗುತ್ತದೆ ಎಂಬುದರ ಬಗ್ಗೆ ನಾವು ಕೂಡ ಆರ್ಥಿಕ ಪರಿಸ್ಥಿತಿ ನೋಡಿಕೊಂಡು ತೀರ್ಮಾನಿಸಬೇಕಿದೆ ಎಂದು ಸಮಿತಿ ಪದಾಧಿಕಾರಿಗಳಿಗೆ ವಿವರಿಸಿದ್ದಾರೆ.
ಇನ್ನು ಜಂಟಿ ಸಮಿತಿ ಪದಾಧಿಕಾರಿಗಳು ಕೂಡ ನಾವು 2019ರಲ್ಲೇ ವೇತನ ಸಂಬಂಧ ಸಭೆ ಕರೆಯುವಂತೆ ಹಲವು ಬಾರಿ ಒತ್ತಾಯಿಸಿದ್ದೆವು. ಆದರೆ ಅಧಿಕಾರಗಳು ಕರೆಯದೆ ಇದ್ದ ಪರಿಣಾಮ ಇಂದು 38 ತಿಂಗಳ ಅರಿಯರ್ಸ್ ಕೊಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ತಾವು ಈ 38 ತಿಂಗಳ ಅರಿಯರ್ಸ್ಅನ್ನು ಕೊಡಲೇ ಕೊಡಬೇಕು ಎಂದು ಒತ್ತಾಯಿಸಿರುವುದಾಗಿ ಪದಾಧಿಕಾರಿ ಎಚ್.ಎಸ್.ಮಂಜುನಾಥ್ ತಿಳಿಸಿದ್ದಾರೆ.
ಜಂಟಿ ಕ್ರಿಯಾ ಸಮಿತಿಯ ಬೇಡಿಕೆಗಳು ಏನು?: ಹಿಂದಿನ ಸರ್ಕಾರವು 2020 ರಿಂದ ಸಮಸ್ತ ನೌಕರರಿಗೂ ಶೇ.15 ರಷ್ಟು ವೇತನ ಹೆಚ್ಚಳ ಮಾಡಿದೆ. ಆ ವೇತನ ಹೆಚ್ಚಳ ಜಾರಿಯಾಗಿದ್ದರೂ ಕೂಡ (01-0 2020 ರಿಂದ 28-02-2023ರ ವರೆಗಿನ 38 ತಿಂಗಳ ವೇತನ ಹೆಚ್ಚಳದ ಬಾಕಿಯನ್ನು ಕೊಟ್ಟಿಲ್ಲ.
ಅಲ್ಲದೆ ಈ ಅವಧಿಯಲ್ಲಿ ಹಲವಾರು ನೌಕರರು ನಿವೃತ್ತಿ, ಸ್ವಯಂ ನಿವೃತ್ತಿ, ರಾಜೀನಾಮೆ ನೀಡಿದ್ದಾರೆ. ವಜಾಗೊಂಡಿರುವುದು ಸೇರಿ ಇತ್ಯಾದಿ ಕಾರಣಗಳಿಗೆ ಸೇವಾ ವಿಮುಕ್ತಿ ಹೊಂದಿರುವ ನೌಕರರಿಗೆ ದಿನಾಂಕ 17 -3- 2023 ರಂದು ಹೊರಡಿಸಿರುವ ಸುತ್ತೋಲೆಯಲ್ಲಿ ಯಾವುದೇ ಪ್ರಸ್ತಾವನೆಯಿಲ್ಲದ ಕಾರಣ, ಪೇ ಫಿಕ್ಸೆಷನ್ ಮಾಡಿಲ್ಲ, ಇದರಿಂದ ನೌಕರರು ಹೊಸ ವೇತನದ ಹೆಚ್ಚಳ ಮತ್ತು ಇತರೆ ಆರ್ಥಿಕ ಸವಲತ್ತುಗಳಿಂದ ವಂಚಿತರಾಗಿದ್ದಾರೆ.
ಭವಿಷ್ಯನಿಧಿ ವಂತಿಗೆ, ಗ್ರಾಚ್ಯುಟಿ, ರಜಾ ನಗದೀಕರಣ, ತುಟ್ಟಿ ಭತ್ಯೆ, ಸಹಕಾರ ಸಂಘಗಳ ಬಾಕಿ, ಜೀವವಿಮೆ ಪ್ರೀಮಿಯಂ ಇತ್ಯಾದಿಗಳ ಬಾಕಿ 2000 ಕೋಟಿ ರೂಪಾಯಿಗಳನ್ನು ಮೀರುತ್ತದೆ. ಶಕ್ತಿ ಯೋಜನೆಗೆ ನಿಗಮಗಳು ವೆಚ್ಚ ಮಾಡುತ್ತಿರುವ ಹಣವನ್ನು ಕಾಲ ಕಾಲಕ್ಕೆ ಸಂಪೂರ್ಣವಾಗಿ ಕೊಡಬೇಕು. ಈಗ ಬಾಕಿ ಉಳಿದಿರುವ ಹಣವನ್ನು ಕೂಡಲೇ ಬಿಡುಗಡೆ ಮಾಡಬೇಕು.
ಇನ್ನು ಎಲ್ಲ ಸಾರಿಗೆ ನಿಗಮಗಳಲ್ಲಿಯೂ ಕಾರ್ಮಿಕ ಸಂಘಟನೆಗಳೊಂದಿಗೆ ಕಾಲ ಕಾಲಕ್ಕೆ ದ್ವಿಪಕ್ಷೀಯ ಮಾತುಕತೆ ನಡೆಸಿ, ನೌಕರರ ಸಮಸ್ಯೆಗಳನ್ನು ಬಗೆಹರಿಸುವ ವ್ಯವಸ್ಥೆ ಜಾರಿಗೆ ತರಬೇಕು. ಏಪ್ರಿಲ್ 2021 ರ ಮುಷ್ಕರದ ಸಂದರ್ಭದಲ್ಲಿ ವಜಾ ಆಗಿರುವ ನೌಕರರನ್ನು ಮತ್ತು FIR ಆಗಿರುವ ಕಾರ್ಮಿಕರನ್ನೂ ಕೆಲಸಕ್ಕೆ ವಾಪಸ್ ತೆಗೆದುಕೊಳ್ಳಬೇಕು ಎಂಬ ಬೇಡಿಕೆಯನ್ನು ಸಚಿವರ ಮುಂದೆ ಜಂಟಿ ಸಮಿತಿ ಪದಾಧಿಕಾರಿಗಳು ಇಟ್ಟಿದ್ದಾರೆ.