ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ಬಸ್ಗಳಲ್ಲಿ ಮಹಿಳೆಯರಿಗೆ ಕಾಂಗ್ರೆಸ್ ಸರಕಾರದ ‘ಶಕ್ತಿ’ ಯೋಜನೆ ಇನ್ನೂ 10 ವರ್ಷಗಳ ಕಾಲ ಇರುತ್ತದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.
ಶಾಂತಿನಗರದ ಬಿಎಂಟಿಸಿ ಕೇಂದ್ರ ಕಚೇರಿಯಲ್ಲಿ ಆಯೋಜಿಸಿದ್ದದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಪಕ್ಷಗಳ ರಾಜಕೀಯ ಅಪಪ್ರಚಾರ ಮೀರಿ ಶಕ್ತಿ ಯೋಜನೆ ಯಶಸ್ಸು ಕಂಡಿದ್ದು, ಈ ಯೋಜನೆ ಇನ್ನೂ 10 ವರ್ಷ ಇರಲಿದೆ. ಏಕೆಂದರೆ ಐದು ವರ್ಷಗಳು ಮುಗಿದ ಮೇಲೆ ಮತ್ತೆ ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದರು.
ಇನ್ನು ಸಾರಿಗೆ ನಿಗಮಗಳ ಬಸ್ಗಳಲ್ಲಿ ಉಚಿತ ಪ್ರಯಾಣದ ಶಕ್ತಿ ಯೋಜನೆಯಲ್ಲಿ ಪ್ರತಿದಿನ ಶೇ. 1ರಷ್ಟು ದುರ್ಬಳಕೆಯಾಗುತ್ತಿದೆ ಎಂದ ಅವರು, ನಿತ್ಯ 1.39 ಕೋಟಿ ಪ್ರಯಾಣಿಕರು ನಾಲ್ಕೂ ಸಾರಿಗೆ ನಿಗಮಗಳ ಬಸ್ಗಳಲ್ಲಿ ಸಂಚಾರ ಮಾಡುತ್ತಿದ್ದಾರೆ. ಇದರಲ್ಲಿ ಶೇ. 50ರಷ್ಟು ಮಹಿಳೆಯರು ಪ್ರಯಾಣ ಮಾಡುತ್ತಿದ್ದಾರೆ. ಆದರೆ, ಇದರಲ್ಲಿ ಶೇ. 1ರಷ್ಟು ದುರ್ಬಳಕೆಯಾಗುತ್ತಿರುವುದು ಗಮನಕ್ಕೆ ಬಂದಿದೆ ಎಂದರು.
ಶಕ್ತಿ ಯೋಜನೆ ಜಾರಿಯಾದಾಗಿನಿಂದ 749.30 ಕೋಟಿ ರೂ. ಮೌಲ್ಯದ ಟಿಕೆಟ್ ನೀಡಲಾಗಿದೆ. ಪ್ರತಿನಿತ್ಯ ಸರಾಸರಿ 59.55 ಲಕ್ಷ ಮಹಿಳಾ ಪ್ರಯಾಣಿಕರು ಓಡಾಡಿದ್ದಾರೆ. ಶಕ್ತಿ ಜಾರಿ ಬಳಿಕ ಪ್ರಯಾಣಿಕರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಯೋಜನೆ ಜಾರಿಗೂ ಮೊದಲು 84.91 ಲಕ್ಷ ಇದ್ದ ಪ್ರಯಾಣಿಕರ ಸಂಖ್ಯೆ ಯೋಜನೆ ಜಾರಿಯಾದ ಬಳಿಕ 109.95 ಲಕ್ಷಕ್ಕೆ ಏರಿಕೆಯಾಗಿದೆ ಎಂದರು.
ಇದೇ ರೀತಿ ಮುಂದುವರಿದರೆ ಈ ವರ್ಷದ ಅಂತ್ಯದಲ್ಲಿ ಸಾರಿಗೆ ನಿಗಮದ ಸಾಲ ತೀರಲಿದೆ ಎಂದ ಅವರು, ಹಣಕಾಸು ಇಲಾಖೆ ಯಾವುದೇ ಇಲಾಖೆ ಕೇಳಿದ ತಕ್ಷಣ ಹಣ ಕೊಡುವುದಿಲ್ಲ. ಅವರು ಒಂದಷ್ಟು ಮಾಹಿತಿ ಕೇಳಿದ್ದಾರೆ. ಅದನ್ನು ಕೊಡಬೇಕಾಗುತ್ತದೆ. ಕೊಟ್ಟ ಕೂಡಲೇ ಎಲ್ಲ ಹಣವನ್ನು ಬಿಡುಗಡೆ ಮಾಡುತ್ತದೆ ಎಂದರು.
ಎಲ್ಲ ನಾಲ್ಕು ಸಾರಿಗೆ ನಿಗಮಗಳಲ್ಲೂ ಸರಿಯಾದ ಸಮಯಕ್ಕೆ ಸಂಬಳ ಆಗುತ್ತಿದೆ. ಸಂಬಳ ಸರಿಯಾಗಿ ಕೊಟ್ಟಿಲ್ಲ ಎಂದು ಬಿಜೆಪಿಯವರು ಆರೋಪಿಸುತ್ತಿದ್ದಾರೆ. ಆದರೆ ಸಂಬಳ ಆಗಲಿದೆ. ಕೆಎಸ್ಆರ್ಟಿಸಿಗೆ ಪ್ರತಿ ತಿಂಗಳ 1ರಂದು, ಬಿಎಂಟಿಸಿಗೆ 7ರಂದು, ಅದರಂತೆ ವಾಯವ್ಯ ಹಾಗೂ ಕಲ್ಯಾಣ ಕರ್ನಾಟಕ ಸಾರಿಗೆ ನಿಗಮದ ಸಿಬ್ಬಂದಿಗೂ 7ರಂದೆ ವೇತನ ಪಾವತಿಯಾಗುತ್ತಿದೆ ಎಂದು ಹೇಳಿದರು.