KSRTC: ಶಸ್ತ್ರಚಿಕಿತ್ಸೆ ಗೊಳಗಾದ ಚಾಲಕನಿಗೆ ರಜೆ ಕೊಡದೆ ಗೈರು ಹಾಜರಿಹಾಕಿ 4 ತಿಂಗಳ ವೇತನ ತಡೆಹಿಡಿದ ಅಧಿಕಾರಿಗಳು
- ಅನಾರೋಗ್ಯದ ನಡುವೆಯೂ ಕಚೇರಿಯಿಂದ ಡಿಪೋಗೆ – ಡಿಪೋನಿಂದ ಕಚೇರಿಗೆ ಅಲೆಯುತ್ತಿರು ಚಾಲಕ
- ವೇತನಕ್ಕಾಗಿ ಚಾಲಕನ ಅಲೆದಾಟ, ಪರದಾಟ
- ಆರ್ಥಿಕ ಸಂಕಷ್ಟದಲ್ಲಿ ಕುಟುಂಬ-ಆದರೂ ಕರಗದ ಅಧಿಕಾರಿಗಳ ಮನಸ್ಸು
ದೊಡ್ಡಬಳ್ಳಾಪುರ: ಮೂತ್ರಕೋಶದ ಶಸ್ತ್ರಚಿಕಿತ್ಸೆಗೊಳಗಾದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (KSRTC) ಚಾಲಕ ವೈದ್ಯರ ಸಲಹೆಯಂತೆ 3 ತಿಂಗಳು ವಿಶ್ರಾಂತಿ ತೆಗೆದುಕೊಳ್ಳಲು ಅನಾರೋಗ್ಯದ ರಜೆಯನ್ನು ನೀಡದ ಅಧಿಕಾರಿಗಳು ಆತನ 4 ತಿಂಗಳ ವೇತನವನ್ನು ತಡೆಹಿಡಿದಿದ್ದು ಕಚೇರಿಯಿಂದ ಡಿಪೋಗೆ ಡಿಪೋನಿಂದ ಕಚೇರಿಗೆ ಅಲೆಸುತ್ತಿದ್ದಾರೆ.
ಇತ್ತ ಅನಾರೋಗ್ಯದ ನಡುವೆಯೂ ಚಾಲಕ ತನ್ನ 4 ತಿಂಗಳ ವೇತನಕ್ಕಾಗಿ ತಬರನಂತೆ ಕಚೇರಿಯಿಂದ ಡಿಪೋಗೆ ಡಿಪೋನಿಂದ ಕಚೇರಿಗೆ ಅಲೆಯುತ್ತಿದ್ದಾರೆ. ಆದರೂ ಸಂಬಂಧಪಟ್ಟ ಅಧಿಕಾರಿಗಳ ಮನಸ್ಸು ಮಾತ್ರ ಕಲ್ಲಾಗಿದ್ದು ಕರಗಿಲ್ಲವಾದ್ದರಿಂದ 4 ತಿಂಗಳ ಸಂಬಳ ವಿಲ್ಲದೆ ಚಾಲಕನ ಕುಟುಂಬ ಕಣ್ಣೀರು ಹಾಕುತ್ತಿದೆ.
ಹೌದು! ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ತೂಬಗೆರೆ ಹೋಬಳಿ ಹಾಡೋನಹಳ್ಳಿ ಗ್ರಾಮದ ನಿವಾಸಿ ಹಾಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ದೊಡ್ಡಬಳ್ಳಾಪುರ KSRTC ಡಿಪೋ ಚಾಲಕರಾಗಿರುವ ಎಚ್.ಸಿ.ಮಂಜುನಾಥ ಎಂಬುವರೆ ಈ ಅಧಿಕಾರಿಗಳ ಸುಳಿಯಲ್ಲಿ ಸಿಲುಕಿ ವೇತನಕ್ಕಾಗಿ ಒದ್ದಾಡುತ್ತಿರುವ ಚಾಲಕ.
ಮೂತ್ರಕೋಶದ ಶಸ್ತ್ರಚಿಕಿತ್ಸೆ ಗೊಳಗಾದ ಚಾಲಕ ಮಂಜುನಾಥ ಅವರು ವೈದ್ಯರ ಸಲಹೆಯಂತೆ 3 ತಿಂಗಳು ವಿಶ್ರಾಂತಿ ತೆಗೆದುಕೊಂಡರು. ಆದರೆ, ಇತ್ತ ಅನಾರೋಗ್ಯದ ರಜೆಯನ್ನು ನೀಡದ ಅಧಿಕಾರಿಗಳು ಆತನ 4 ತಿಂಗಳ ವೇತನವನ್ನು ತಡೆ ಹಿಡಿದಿದ್ದಾರೆ, ಇದರಿಂದ ಚಾಲಕ ತನ್ನ 4 ತಿಂಗಳ ಸಂಬಳಕ್ಕಾಗಿ ದಿನನಿತ್ಯ ಕಚೇರಿಯಿಂದ ಕಚೇರಿಗೆ ಅಲೆಯುತ್ತಿದ್ದಾರೆ. ಅಲ್ಲದೆ 4 ತಿಂಗಳ ವೇತನವಿಲ್ಲದೆ ಆತನ ಕುಟುಂಬ ಕಣ್ಣೀರಿನಲ್ಲಿ ಕೈತೊಳೆಯುತ್ತಿದೆ.
ನಮಗಿರುವ ಚಿಕ್ಕಮಕ್ಕಳು ಹಾಗೂ ವಯಸ್ಸಾ ಅಪ್ಪ ಅಮ್ಮನನ್ನೂ ನೋಡಿಕೊಳ್ಳಲಾದ ಸ್ಥಿತಿ ಬಂತಲ್ಲ ಎಂದು ಚಾಲಕ ಮಂಜುನಾಥ ಕಣ್ಣೀರು ಹಾಕುತ್ತ ತನ್ನ ನೋವನ್ನು ತೋಡಿಕೊಂಡಿದ್ದಾರೆ. ಇಷ್ಟೆಲ್ಲ ನೋವನ್ನು ತೋಡಿಕೊಂಡರು ಸಂಬಂಧಪಟ್ಟ ಅಧಿಕಾರಿಗಳ ಮನಸ್ಸು ಮಾತ್ರ ಕಲ್ಲಾಗೆ ಇದೆ.
ಚಾಲಕ ಮಂಜುನಾಥ ಕಳೆದ 18 ವರ್ಷಗಳಿಂದ ಸಂಸ್ಥೆಯಲ್ಲಿ ಡ್ಯೂಟಿ ಮಾಡುತ್ತಿದ್ದಾರೆ. ಈ ನಡುವೆ ಮೂತ್ರಕೋಶ ಮತ್ತು ಶಿಶ್ನ ಬೀಜದ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಕಳೆದ 2024ರ ಜುಲೈ ತಿಂಗಳಲ್ಲಿ ಬೆಂಗಳೂರಿನ ಬೋರಿಂಗ್ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾದರು. ಶಸ್ತ್ರಚಿಕಿತ್ಸೆಯ ನಂತರ ಮೂರು ತಿಂಗಳ ವಿಶ್ರಾಂತಿ ಕಡ್ಡಾಯವಾಗಿ ತೆಗೆದುಕೊಳ್ಳಬೇಕು, ಇಲ್ಲದಿದ್ದರೆ ಜೀವಕ್ಕೆ ತೊಂದರೆ ಎಂದು ವೈದ್ಯರು ಸಲಹೆ ನೀಡಿದ್ದರು, ವೈದ್ಯರ ಸಲಹೆಯಂತೆ ಮಂಜುನಾಥ್ ವಿಶ್ರಾಂತಿ ಪಡೆದರು.
ಈ ಬಗ್ಗೆ ಸಂಸ್ಥೆಯ ಅಧಿಕಾರಿಗಳ ಗಮನಕ್ಕೆ ಮಂಜುನಾಥ್ ತಂದಿದ್ದರೂ ಕೂಡ ಅವರಿಗೆ ಅನಾರೋಗ್ಯ ರಜೆ ನೀಡದೆ ಗೈರು ಹಾಜರಿ ಹಾಕಿ ಸಂಬಳವನ್ನು ತಡೆ ಹಿಡಿದಿದ್ದಾರೆ. ಕಳೆದ ನಾಲ್ಕು ತಿಂಗಳ ಸಂಬಳ ವಿಲ್ಲದೆ ಮಂಜುನಾಥ್ ಕುಟುಂಬ ಆರ್ಥಿಕವಾಗಿ ಕುಗ್ಗಿಹೋಗಿದೆ.
ಈ ಸಂಬಂಧ ಮಾಧ್ಯಮದೊಂದಿಗೆ ಮಾತನಾಡಿದ ಮಂಜುನಾಥ್ ಅವರ ಪತ್ನಿ ರೇಖಾ ಮಣಿ, ನಮ್ಮ ಗಂಡನ ಸಂಬಳ ನಂಬಿಕೊಂಡು ಇಬ್ಬರು ಮಕ್ಕಳು ಹಾಗೂ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿರುವ ಅತ್ತೆ, ಮಾವ ಇದ್ದಾರೆ. ಆದರೆ ಅಧಿಕಾರಿಗಳು ಮತ್ತು ಅಲ್ಲಿನ ಸಿಬ್ಬಂದಿಗಳು ವೇತನ ನೀಡದೆ ಕಿರುಕುಳ ಕೊಡುತ್ತಿದ್ದಾರೆ. ಇದರಿಂದ ಬೇಸತ್ತು ಗಂಡ ಸಾವಿಗೆ ಶರಣಾಗುವ ಮಾತನಾಡುತ್ತಿದ್ದಾರೆ, ದಯಾ ಮಾಡಿ 4 ತಿಂಗಳ ಕೊಡಿ ಎಂದು ಮನವಿ ಮಾಡಿದ್ದಾರೆ.