NEWSನಮ್ಮಜಿಲ್ಲೆನಮ್ಮರಾಜ್ಯ

KSRTC: 2024ರ ವೇತನ ಪರಿಷ್ಕರಣೆ ಸುಳಿವು ನೀಡಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ

ವಿಜಯಪಥ ಸಮಗ್ರ ಸುದ್ದಿ
  • ಚುನಾವಣೆ ನೀತಿ ಸಂಹಿತೆ ಮುಗಿದ ಬಳಿಕ ಶೇ.12ರಿಂದ 15ರಷ್ಟು ಮೂಲ ವೇತನ ಹೆಚ್ಚಳ ಮಾಡುವ ಚರ್ಚೆ
  • ಶೇ.15ರಷ್ಟು ವೇತನ ಪರಿಷ್ಕರಣೆಯಾದರೆ ಮುಂದಿನ ಅಗ್ರಿಮೆಂಟ್‌ ವೇಳೆಗೆ ಶೇ.67ರಷ್ಟು ಕಡಿಮೆ ವೇತನ
  • ಚುನಾವಣೆ ಪ್ರಣಾಳಿಕೆಯ ಭರವಸೆ ಈಡೇರಿಸುತ್ತಾ ಇಲ್ಲವಾ ಕಾಂಗ್ರೆಸ್‌ ಸರ್ಕಾರ?

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ಅಧಿಕಾರಿಗಳು ಮತ್ತು ನೌಕರರ ವೇತನ ಪರಿಷ್ಕರಣೆ 2024 ಮುನ್ನೆಲೆಗೆ ಬಂದಿದ್ದು ಶೇ.12 ರಿಂದ 15ರಷ್ಟು ವೇತನ ಪರಿಷ್ಕರಣೆ ಮಾಡುವ ಸುಳಿವನ್ನು ಸಾರಿಗೆ ಸಚಿವರು ನೀಡಿದ್ದಾರೆ.

ಈಗಾಗಲೇ ಕೆಲ ಸಂಘಟನೆಗಳ ಜತೆ ಸಭೆ ನಡೆಸಿರುವ ಸಾರಿಗೆ ಸಚಿವ ರಾಮಲಿಂಗಾರೆಡ್ಡಿಯವರು ಲೋಕಸಭೆ ಚುನಾವಣೆಯ ನೀತಿ ಸಂಹಿತಿ ಮುಗಿಯುತ್ತಿದ್ದಂತೆ ವೇತನ ಪರಿಷ್ಕರಣೆ ಮಾಡುವ ಸುಳಿವನ್ನು ನೀಡಿದ್ದಾರೆ. ಅದರ ಜತೆಗೆ ಎಷ್ಟು ಎಂಬ ಪ್ರಶ್ನೆಗೂ ಮಾಸಾಗಿ ಶೇ.12 ರಿಂದ 15ರಷ್ಟು ವೇತನ ಪರಿಷ್ಕರಣೆ ಮಾಡೋಣ ಎಂಬ ಸುಳಿವನ್ನು ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಇದು ಹೀಗೆ ಮುಂದುವರಿದರೆ ಸಾರಿಗೆ ನೌಕರರು ಸರ್ಕಾರಿ ನೌಕರರಿಗಿಂತ ಈಗಾಗಲೇ ಶೇ.40ರಿಂದ 45ರಷ್ಟು ಕಡಿಮೆ ಪಡೆಯುತ್ತಿದ್ದಾರೆ. ಆದರೆ ಮತ್ತೆ ಇವರು ಶೇ.12 ರಿಂದ 15ರಷ್ಟು ವೇತನ ಪರಿಷ್ಕರಣೆ ಮಾಡಿದರೆ ಸುಮಾರು ಶೇ.55ರಷ್ಟು ಕಡಿಮೆ ವೇತನ ಪಡೆಯುವರು ಎಂದು ನಿಗಮದ ಆರ್ಥಿಕ ವಿಭಾಗದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕಳೆದ 2023ರ ಮಾರ್ಚ್‌ನಲ್ಲಿ ಸರ್ಕಾರಿ ನೌಕರರ ಸಂಘ ಮುಷ್ಕರಕ್ಕೆ ಕರೆ ನೀಡಿ ಗಂಟೆ ಕಳೆಯುವುದರೊಳಗೇ ಸರ್ಕಾರ ಶೇ.17 ಮಧ್ಯಂತರ ವೇತನದ ಆದೇಶ ಹೊರಡಿಸಿತು. ಆದರೆ, ಸಾರಿಗೆ ನೌಕರರು ಕಳೆದ 2020ರಿಂದ 2023ರ ಮಾರ್ಚ್‌ವರೆಗೂ ಅಂದರೆ ಮೂರೂವರೆ ವರ್ಷದಿಂದ ಹೆಚ್ಚೂಬೇಡ ಕಡಿಮೆಯೂ ಬೇಡ ಸರ್ಕಾರಿ ನೌಕರರಿಗೆ ಸರಿ ಸಮಾನ ವೇತನ ಕೊಡಿ ಎಂದು ಕೇಳಿದರೆ ಶೇ.15ರಷ್ಟು ಕೊಟ್ಟು ಅಂದಿನ ಸರ್ಕಾರ ಕೈತೊಳೆದುಕೊಂಡಿತು.

ಆ ಬಳಿಕ ಇವರೆಗೂ 38 ತಿಂಗಳ ವೇತನ ಪರಿಷ್ಕರಣೆಯ ಹಿಂಬಾಕಿಯನ್ನೂ ಕೊಟ್ಟಿಲ್ಲ. ಜತೆಗೆ ಕೆಲ ಡಿಎ ಹಿಂಬಾಕಿಯನ್ನು ಕೊಟ್ಟಿಲ್ಲ. ಈ ಎಲ್ಲದರ ನಡುವೆಯೇ 2023ರ ಮಾ.8ರಂದು ಅಂದಿನ ಬಿಜೆಪಿ ಸರ್ಕಾರದ ಸಚಿವರ ಜತೆಗೆ ನಡೆದ ವಿವಿಧ ಸಂಘಟನೆಗಳ ಸಭೆಯಲ್ಲಿ ಸಚಿವರು ಶೇ.8ರಷ್ಟು ವೇತನ ಪರಿಷ್ಕರಣೆ ಮಾಡುತ್ತೇವೆ ಎಂದು ಹೇಳಿದ್ದರು.

ಆ ಬಳಿಕ ಅದಕ್ಕೆ ಕೋಲೆಬಸವನ ರೀತಿ ತಲೆ ಅಲ್ಲಾಡಿಸಿಕೊಂಡು ಕೆಲ ಸಂಘಟನೆಗಳ ಮುಖಂಡರು ಬಂದಿದ್ದರು. ಆದರೆ ಇನ್ನು ಕೆಲ ಸಂಘಟನೆಗಳ ಮುಖಂಡರು ವಿರೋಧ ವ್ಯಕ್ತಪಡಿಸಿದ್ದರಿಂದ ಅಂತಿಮವಾಗಿ ಶೇ.15ರಷ್ಟು ಮಾಡುವುದಕ್ಕೆ ಒಳಗೊಳಗೆ ಒಪ್ಪಂದ ಆಗಿತ್ತು.

ಇನ್ನು 2024ರ ಜನವರಿ 1ರಿಂದ ಆಗಬೇಕಿರುವ ವೇತನ ಪರಿಷ್ಕರಣೆಗೂ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಕೆಲ ಗ್ಯಾರಂಟಿಗಳನ್ನು ಕೊಟ್ಟಿರುವುದರಿಂದ ಸರ್ಕಾರ ಆರ್ಥಿಕವಾಗಿ ನಷ್ಟದಲ್ಲಿದೆ. ಹಾಗಾಗಿ ಈ ಬಾರಿ ಶೇ.12 ರಷ್ಟು ಮಾತ್ರ ವೇತನ ಹೆಚ್ಚಳ ಮಾಡಲಷ್ಟೆ ಸಾಧ್ಯ ಎಂಬ ನಿಟ್ಟಿನಲ್ಲಿ ಕೆಲ ಸಂಘಟನೆಗಳ ಮುಖಂಡರ ಬಳಿ ಚರ್ಚೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

ನೌಕರರು ಮತ್ತು ಅಧಿಕಾರಿಗಳಲ್ಲಿ ಒಗ್ಗಟ್ಟು ಇಲ್ಲದಿರುವುದರಿಂದ ಕಳೆದ ಬಾರಿ ಕೆಲ ಸಂಘಟನೆಗಳು ಕೈಗಾರಿಕಾ ಒಪ್ಪಂದದ ಹೆಸರಿನಲ್ಲಿ ನೌಕರರ ಮೂತಿಗೆ ತುಪ್ಪ ಸವರಿ ಬಿಟ್ಟಿವೆ. ಈಗ ಮತ್ತೆ ಅದೇ ಕೆಲಸ ಮಾಡಲು ಹೊರಟರೆ ಏನು ಮಾಡುವುದು ಎಂದು ಕೆಲ ನೌಕರರು ಮತ್ತು ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ಇನ್ನು 2020ರ ಜನವರಿಯಲ್ಲಿ ಆಗಬೇಕಿದ್ದ ವೇತನ ಪರಿಷ್ಕರಣೆಗಾಗಿ ಭಾರಿ ಮಟ್ಟದಲ್ಲಿ ಹೋರಾಟ ಮಾಡಿ ಸಾವಿರಾರು ನೌಕರರ ವಜಾ, ವರ್ಗಾವಣೆ, ಅಮಾನತು, ಪೊಲೀಸ್‌ ಪ್ರಕರಣಗಳ ಜತೆಗೆ ದಂಡವನ್ನು ಕಟ್ಟಬೇಕಾಯಿತು. ಇದಕ್ಕೆಲ್ಲ ಕೆಲ ಸಂಘಟನೆಗಳ ಮುಖಂಡರೆ ನೇರವಾಗಿ ಕುತಂತ್ರ ನಡೆಸಿದ್ದು ಈಗ ಗುಟ್ಟಾಗೇನು ಉಳಿದಿಲ್ಲ. ಮತ್ತೆ ಅದನ್ನೇ ನಡೆಸುವುದಕ್ಕೆ ಕೆಲ ಸಂಘಟನೆಗಳ ಮುಖಂಡರು ಹೊರಟಿದ್ದಾರೆ ಎಂದು ನೌಕರರು ಆಕ್ರೋಶ ಹೊರಹಾಕುತ್ತಿದ್ದಾರೆ.

ಮತ್ತೆ ನೌಕರರು ಮೂರು ಕಾಸಿಗೆ ಒಪ್ಪಿಕೊಂಡು ದುಡಿದು ದುಡಿದು ಬಸವಳಿಯುತ್ತಿರುವಂತೆ ಮತ್ತೆ ಮತ್ತೊಂದು ಅಗ್ರಿಮೆಂಟ್‌ ವರ್ಷ ಬಂದೇ ಬಿಟ್ಟಿದ್ದು, ಈಗಾಗಲೇ ಮತ್ತೆ ಅದೇರಾಗ ಅದೇಹಾಡು ಶುರುವಾಗಿದೆ. ಈ ಹಿಂದೆ ಬಿಜೆಪಿ ಸರ್ಕಾರವಿತ್ತು, ಈಗ ಪ್ರಣಾಳಿಕೆಯಲ್ಲಿ ಸರಿ ಸಮಾನ ವೇತನ ಕೊಡುತ್ತೇವೆ ಎಂದು ನೌಕರರನ್ನು ನಂಬಿಸಿ ಗೆದ್ದು ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್‌ ಇದೆ. ಇದು ಕೂಡ ಹಿಂದಿನ ಸರ್ಕಾರದಂತೆಯೇ ನಡೆದುಕೊಳ್ಳಲು ಹೊರಟಂತೆ ಮೇಲ್ನೋಟಕ್ಕೆ ಕಾಣುತ್ತಿದೆ.

ಇನ್ನು ನೌಕರರು ಕಾಂಗ್ರೆಸ್‌ ಸರ್ಕಾರವನ್ನು ನಂಬಿಕೊಂಡಿರುವುದರಿಂದ ಈ ಹಿಂದೆ ಪಡೆಯುತ್ತಿದ್ದ ಸರ್ಕಾರಿ ನೌಕರರಿಗಿಂತ ಹೆಚ್ಚು ವೇತನದಂತೆಯೇ ಪ್ರಸ್ತುತ ಪಡೆಯಬಹುದು ಎಂಬ ಖುಷಿಯಲ್ಲಿದ್ದಾರೆ. ಆದರೆ ಸರ್ಕಾರಿ ನೌಕರರಿಗಿಂತ ಶೇ.27ರಿಂದ ಶೇ.44ರಷ್ಟು ಕಡಿಮೆ ವೇತನವನ್ನು ಪ್ರಸ್ತುತ ಪಡೆಯುತ್ತಿದ್ದು, ಮತ್ತೆ ಅಗ್ರಿಮೆಟ್‌ನಲ್ಲಿ ಶೇ.12 ರಿಂದ 15ರಷ್ಟು ಪರಿಷ್ಕರಣೆಯಾದರೆ ಶೇ.44ರಿಂದ 55ರಷ್ಟು ಕಡಿಮೆ ಪಡೆಯುವ ಮಟ್ಟಕ್ಕೆ ಇಳಿಯುತ್ತಾರೆ.

ಅಂದರೆ 2024ರ ಜನವರಿ 1ರಿಂದ ಅನ್ವಯವಾಗುವ ವೇತನ ಪರಿಷ್ಕರಣೆ ಶೇ.12ರಿಂದ 15ರಷ್ಟು ಆದರೆ, ಮುಂದಿನ ಅಗ್ರಿಮೆಂಟ್‌ ವೇಳೆಗೆ ಶೇ.55ರಿಂದ 67ರಷ್ಟು ವೇತನ ಕಡಿಮೆಯಾಗುತ್ತದೆ. ಹೀಗಾಗಿ ಈ ವೇತನ ಪರಿಷ್ಕರಣೆ ಸಂಬಂಧ ಮಾಡಿಕೊಳ್ಳುವ ಅಗ್ರಿಮೆಂಟ್‌ ಎಂಬ ನೌಕರರ ಕಾಡುವ ಭೂತವನ್ನು ದೂರವಿಟ್ಟು, ವೇತನ ಆಯೋಗ ಮಾದರಿಯಲ್ಲಿ ವೇತನ ಕೊಡುವಂತೆ 2020 ರಿಂದಲೂ ಇಟ್ಟಿರುವ ಬೇಡಿಕೆಯನ್ನು ಈಡೇರಿಸಿಕೊಳ್ಳುವತ್ತ ಸಂಘಟನೆಗಳು ಹೋಗಬೇಕು.

ಅದಕ್ಕೆ ಸಂಘಟನೆಗಳು ಒಪ್ಪದಿದ್ದರೆ ನಿಗಮದ ಅಧಿಕಾರಿಗಳೇ ಮುಂದಾಳತ್ವ ತೆಗೆದುಕೊಂಡು ನೌಕರರನ್ನು ಜತೆಗೆ ಕರೆದುಕೊಂಡುವ ಹೋಗುವ ಕೆಲಸ ಮಾಡಬೇಕು. ಆದರೆ ಇದು ಸಾಧ್ಯವ ಎಂಬುವುದೇ ಪ್ರಸ್ತುತ ಎದ್ದಿರುವ ಪ್ರಶ್ನೆ.

ಇನ್ನು ಈ ಹಿಂದಿನಿಂದಲೂ ನೌಕರರ ಪರ ಇದ್ದೇವೆ ಎಂದು ಹೇಳಿಕೊಂಡು ಬಂದಿರುವ ಕೆಲ ಸಂಘಟನೆಗಳು 4 ದಶಕಗಳಿಂದಲೂ ಸರ್ಕಾರದ ಹಿಂದೆ ಬಿದ್ದು ನೀನು ಕೊಟ್ಟಂಗೆ ಮಾಡು ನಾನು ಒಪ್ಪದಂಗೆ ಮಾಡುತ್ತೇನೆ ಎಂದು ಹೇಳಿ ಬಳಿಕ ಸರ್ಕಾರ ಕೊಟ್ಟ ಮೂರುಕಾಸಿಗೆ ನೌಕರರನ್ನು ಒಪ್ಪಿಸಿ ಅವರ ಜೀವನವನ್ನು ಬೀದಿಗೆ ತಂದು ನಿಲ್ಲಿಸಿದ್ದಾವೆ. ಈ ಸರ್ಕಾರ ಮತ್ತು ಸಂಘಟನೆಗಳ ನಡೆಯನ್ನು ಇಡೀ ನೌಕರರ ಸಮೂಹ ಈ ಹಿಂದಿನಿಂದಲು ನೋಡಿಕೊಂಡು ಬಂದಿದೆ.

ಆದರೆ, ಈಗಲಾದರೂ ಇದನ್ನು ಬಿಟ್ಟು ಕಾಂಗ್ರೆಸ್‌ ಸರ್ಕಾರ ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಕೊಟ್ಟಿರುವ ಭರವಸೆಯಂತೆ ಸರ್ಕಾರಿ ನೌಕರರಿಗೆ ಸರಿ ಸಮಾನವಾದ ವೇತನವನ್ನು ಸಾರಿಗೆ ನೌಕರರಿಗೂ ಕೊಡುವುದಕ್ಕೆ ಮುಂದಾಗಬೇಕಿದೆ. ಈ ನಿಟ್ಟಿನಲ್ಲಿ ಸಂಘಟನೆಗಳು ಕೂಡ ನೌಕರರ ಪರ ನಿಲುವನ್ನು ತಾಳಬೇಕಿದೆ. ಈ ರೀತಿ ನಡೆದುಕೊಂಡರೆ ನಾಲ್ಕೂ ನಿಗಮದ ಅಧಿಕಾರಿಗಳು ಮತ್ತು ನೌಕರರಿಗೆ ಪ್ರತಿ 4 ವರ್ಷಕ್ಕೊಮ್ಮೆ ಎದುರಾಗುತ್ತಿರುವ ಈ ದೊಡ್ಡ ತಲೆನೋವು ತಪ್ಪಿದಂತಾಗುತ್ತದೆ, ಇಲ್ಲದಿದ್ದರೆ ಮತ್ತದೆ ಹೋರಾಟ, ಅಮಾನತು, ವಜಾ, ಪೊಲೀಸ್‌ ಪ್ರಕರಣ ಎಂಬು ಬಲೆಗೆ ಸಿಲುಕಿ ಅಮಾಯಕ ನೌಕರರು ಒದ್ದಾಡಬೇಕಾಗುತ್ತದೆ.

Leave a Reply

error: Content is protected !!
LATEST
KSRTC ಬಸ್‌ ರಿಪೇರಿ ಮಾಡಿದ ಖರ್ಚಿನ ಬಿಲ್‌ನಲ್ಲಿ ಸ್ಕ್ರಾಪ್‌ನ ಹಣ ತೋರಿಸದೆ ಗುಳುಂ: ಕ್ರಮಕ್ಕಾಗಿ ಎಂಡಿಗೆ ದೂರು 160 ಕ್ಯಾಬಿನೆಟ್ ಸೆಕ್ರೆಟರಿಯೇಟ್, ಡೆಪ್ಯೂಟಿ ಫೀಲ್ಡ್ ಆಫೀಸರ್ ಹುದ್ದೆಗಳಿಗೆ ಕೂಡಲೇ ಅರ್ಜಿ ಹಾಕಿ ಮುನಿರತ್ನಗೆ ಜಾಮೀನು ಮಂಜೂರು ಮಾಡಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಹೋರಾಟ ಪಂಜಾಬ್, ಹರಿಯಾಣ ರೈತರದಷ್ಟೇ ಎಂಬಂತೆ ಬಿಂಬಿಸುವ ಸುಪ್ರೀಂ ಆದೇಶ ಪುನರ್ ಪರಿಶೀಲಿಸಿ: ಕುರುಬೂರ್‌ ಶಾಂತಕುಮಾರ್ KSRTC ಅಧಿಕಾರಿಗಳು-ನೌಕರರಲ್ಲಿ, ನೌಕರರು-ನೌಕರರಲ್ಲೇ ಒಗ್ಗಟ್ಟಿಲ್ಲಕ್ಕೆ ಈ ಸ್ಥಿತಿ: NWKRTC ನಿಗಮದ ಅಧ್ಯಕ್ಷ ಭರಮಗೌಡ KSRTC ನೌಕರರ ವೇತನ ಹೆಚ್ಚಳದ 38 ತಿಂಗಳ ಹಿಂಬಾಕಿ ಬೇಗ ಕೊಟ್ಟರೆ ನನಗೂ ಸಮಾಧಾನ: ಸಚಿವ ರಾಮಲಿಂಗಾ ರೆಡ್ಡಿ KSRTC-ನಮ್ಮ ಸರ್ಕಾರ ಸರಿ ಸಮಾನ ವೇತನ ಕೊಡುತ್ತದೆ ನೆಮ್ಮದಿಯಾಗಿರಿ: ಕಾಂಗ್ರೆಸ್‌ ಪ್ರಣಾಳಿಕೆ ಸಮಿತಿ ಉಪಾಧ್ಯಕ್ಷ ರಾಧಾಕೃ... KSRTC: ಅಗ್ರಿಮೆಂಟ್‌ ಎಂಬ ಸೆಟಲ್‌ಮೆಂಟ್‌ ಭೂತವನ್ನು ಬುಡಸಮೇತ ಕಿತ್ತೊಗೆಯಬೇಕು - ವಕೀಲ ನಟರಾಜ ಶರ್ಮಾ ವೇತನ ಸಂಬಂಧ 4ವರ್ಷಕ್ಕೊಮ್ಮೆ ಆಗುವ ಅಗ್ರಿಮೆಂಟ್‌ ಬೇಡ ಕೊಟ್ಟ ಭರವಸೆ ಈಡೇರಿಸಿ: ಸಾರಿಗೆ ಸಚಿವರಿಗೆ ಚಂದ್ರು ಒತ್ತಾಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ 247 ಹುದ್ದೆಗಳಿಗೆ ಅರ್ಜಿ ಆಹ್ವಾನ: 3 ವರ್ಷ ವಯಸ್ಸಿನ ಸಡಿಲಿಕೆ, ಡಿಗ್ರಿ ಅರ್ಹತೆ