ಬೆಳ್ಳಂಬೆಳಗ್ಗೆ ತಂಪೆರೆದ ಮಳೆರಾಯ: ಸಂಜೆ ವೇಳೆಗೆ ಇನ್ನಷ್ಟು ಖುಷಿ ನೀಡುವ ಸಾಧ್ಯತೆ
ಬೆಂಗಳೂರು: ಬಿಸಿಲಿನಿಂದ ಬೆಂದ್ದದ್ದಿ ರಾಜಧಾನಿಗೆ ಕಳೆದ ಕೆಲ ದಿನಗಳಿಂದ ಮಳೆ ಆಗಾಗ ಬಂದು ತಂಪೆರೆಯುತ್ತಿದೆ. ಇಂದು ಬೆಳಗಿನಜಾವ ಕೂಡ ನಗರದ ಹಲವೆಡೆ ತುಂತುರು ಮಳೆಯಾಗಿದೆ.
ಉದ್ಯಾನನಗರಿಯ ವಾಸಿಗಳು ಇನ್ನೂ ಬೆಡ್ ಮೇಲೆಯೇ ಇದ್ದು ಕಣ್ಣು ಬಿಟ್ಟಿರಲಿಲ್ಲ. ಆವಾಗಲೇ ವರುಣ ನರದ ಹಲವೆಡೆ ಆಗಮಿಸಿದ್ದನು. ಅಂತಹ ಜೋರಾಗಿ ಬಾರದೇ ತುಂತುರು ಮಳೆಯಾಗಿದೆ.
ಬೆಳಗಿನ ಜಾವದಲ್ಲೇ ಹಾಲು, ತರಕಾರಿ ತರಲು ಹಾಗೂ ಕೆಲಸದ ನಿಮಿತ್ತ ಹೊರಗೆ ಬಂದವರಿಗೆ ತುಂತುರು ಮಳೆ ಹಾಯ್ ಹೇಳಿದೆ. ಬೆಳಗಿನ ಮಳೆ ಹನಿ ಮಸ್ತ್ ಮಜಾ ನೀಡಿದೆ. ನಗರದಲ್ಲಿ ಮೋಡ ಮುಸುಕಿದ ವಾತಾವರಣ ಇರುವುದರಿಂದ ಸಂಜೆ ವೇಳೆಗೆ ಇನ್ನಷ್ಟು ಮಳೆ ಆಗಬಹುದು ಎಂದು ಹೇಳಲಾಗಿದೆ.
ಕುಮಾರಸ್ವಾಮಿ ಬಡಾವಣೆ, ಸುಧಾಮನಗರ, ಟೌನ್ ಹಾಲ್, ಎಸ್.ಪಿ ರೋಡ್, ಸುಬ್ಬಯ್ಯ ಸರ್ಲ್, ಕಾರ್ಪೋರೆಷನ್, ಮೆಜೆಸ್ಟಿಕ್, ಜೆ.ಸಿ ನಗರ, ರೇಸ್ಕೋರ್ಸ್ ಸುತ್ತಮುತ್ತ ಸೇರಿದಂತೆ ಹಲವೆಡೆ ಮಳೆಯಾಗಿದೆ. ಮಳೆ ಜತೆ ಜತೆಗೆ ತಂಪಾದ ಗಾಳಿ ಬೀಸುತ್ತಿದ್ದರಿಂದ ವೆದರ್ ಎಲ್ಲ ಕೂಲ್ ಕೂಲ್ ಆಗಿತ್ತು.
ಅದೇರೀತಿ ರಾಜ್ಯದಲ್ಲಿ ನಾಲ್ಕೈದು ದಿನಗಳಿಂದ ವರುಣ ತನ್ನ ಆರ್ಭಟ ತೋರುತ್ತಿದ್ದು, ಇತ್ತ ಕೊಂಡ ತಾಪಮಾನದ ಬಿಸಿಯನ್ನು ತಣಿಸಿದ್ದಾನೆ. ಹೌದು! ನೆತ್ತಿ ಸುಡೋ ಬಿಸಿಲಿಗೆ ಹೈರಾಣಾಗಿದ್ದ ಜನರಿಗೆ ಮಳೆರಾಯ ತಂಪೆರೆದಿದ್ದಾನೆ.
ಕರುನಾಡಿನ ಜತೆಗೆ ನೆರೆಯ ರಾಜ್ಯಗಳಲ್ಲೂ ಮಳೆರಾಯನ ಸಿಂಚನವಾಗಿದೆ. ಕೆಲ ದಿನಗಳಿಂದ ರಾಜ್ಯದಲ್ಲಿ ಭರ್ಜರಿ ಮಳೆಯಾಗುತ್ತಿದೆ. ನಾಲ್ಕೈದು ದಿನಗಳಿಂದ ರಾಜ್ಯದ ನಾನಾ ಕಡೆ ಭರ್ಜರಿ ಮಳೆಯಾಗಿದೆ. ಬಿರುಬಿಸಿಲಿನ ಶಾಖಕ್ಕೆ ಹೈರಾಣಾಗಿದ್ದ ಜನ ಇದರಿಂದ ಕೊಂಚ ನಿಟ್ಟುಸಿರು ಬಿಟ್ಟಿದ್ದಾರೆ.
ಇನ್ನು ಬಿಸಿಲ ಬೇಗೆಯಿಂದ ಕಂಗೆಟ್ಟು ಹೋಗಿದ್ದ ಕಾಫಿನಾಡಿನಲ್ಲಿ ಕೊನೆಗೂ ಮಳೆಯ ಸಿಂಚನವಾಗಿದೆ. ಕಾದ ಕಾವಲಿಯಂತಾಗಿದ್ದ ಕಾಫಿನಾಡಿಗೆ ವರುಣ ದೇವ ಕೊನೆಗೂ ಕರುಣೆ ತೋರಿದ್ದಾನೆ. ಜಿಲ್ಲೆಯ ವಿವಿಧೆಡೆ ಮಂಗಳವಾರ ಮಧ್ಯಾಹ್ನ ಗುಡುಗು ಸಹಿತ ಭಾರೀ ಮಳೆಯಾಗಿದೆ. ಹೀಗೆ ಸುರಿದ ಮಳೆಗೆ ಜನರು ಫುಲ್ ಖುಷ್ ಆಗಿದ್ದಾರೆ.
ಕಲ್ಪತರು ನಾಡು ತುಮಕೂರಿನಲ್ಲಿ ಈ ವರ್ಷದ ವರ್ಷಧಾರೆಯಾಗಿದೆ. ತಿಪಟೂರು ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ವರುಣ ಅಬ್ಬರಿಸಿದ್ದಾನೆ, ಕಸಬಾ ಹಾಗೂ ಹೋನ್ನವಳ್ಳಿ ಹೋಬಳಿಯ ಗ್ರಾಮಗಳಲ್ಲಿ ಆಲಿಕಲ್ಲು ಸಹಿತ ಧಾರಾಕಾರ ಮಳೆಯಾಗಿದೆ. ಬರದ ಛಾಯೆಯಲ್ಲಿದ್ದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.
ಇತ್ತ ಹಾಸನ ಜಿಲ್ಲೆಯ ನಾನಾ ಭಾಗದಲ್ಲಿ ಭರ್ಜರಿ ಮಳೆಯಾಗಿದೆ. ಹಾಸನ, ಹೊಳೆನರಸೀಪುರ, ಅರಸೀಕೆರೆ ತಾಲೂಕಿನಲ್ಲಿ ವರುಣ ಅಬ್ಬರಿಸಿದ್ದಾನೆ, ಬಿಸಿಲಿನಿಂದ ಕೆಂಗೆಟ್ಟಿದ್ದ ಜನರಿಗೆ ಮಳೆರಾಯ ತಂಪೆರೆದಿದ್ದು, ಆಲಿಕಲ್ಲು ಸಹಿತ ಸುರಿದ ಮಳೆಗೆ ಜನರು ಸಂತಸಗೊಂಡಿದ್ದಾರೆ.
ಇನ್ನು, ನೆರೆಯ ರಾಜ್ಯಗಳಾದ ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲಿ ವರುಣ ಆರ್ಭಟಿಸಿದ್ದಾನೆ. ದಾಖಲೆಯ ತಾಪಮಾನದಿಂದ ಕಂಗೆಟ್ಟಿದ್ದ ಆಂಧ್ರದಲ್ಲಿ ಭರ್ಜರಿಯಾಗಿ ಮಳೆ ಬಿದ್ದಿದೆ. ಸತತ ಎರಡು ಗಂಟೆಗಳು ಸುರಿದ ಮಳೆಗೆ ರಸ್ತೆ ಇಕ್ಕೆಲಗಳು ತುಂಬಿ ಹರಿದಿದ್ದು, ಜಲಾವೃತವಾಗಿದ್ದವು.
ಒಟ್ಟಿನಲ್ಲಿ ಕಾದ ಕೆಂಡದಂತಾಗಿದ್ದ ವಾತವರಣ ವರುಣನ ಕೃಪೆಯಿಂದ ಕೊಂಚ ತಣಿದಿದೆ. ಹೀಗಾಗಿ ಕೆಲವೊಮ್ಮೆ ಚಳಿಯ ಅನುಭವಕೂಡ ಆಗುತ್ತಿದ್ದು, ತಾಪಮಾನವೂ ಇಳಿಕೆಯಾಗಿದೆ.